🌺ಅವಿಮಾರಕದ ಒಂದು ಶ್ಲೋಕ :🌺

 *ಅಸಿತಜಲವೃಂದೈರ್ಮಿಶ್ರಸಂದಿಗ್ಧಶೃಂಗೋ ಗಗನಚರಕುಲಾನಾಂ ವಿಶ್ರಮಸ್ಥಾನಭೂತ: / ಸುಕವಿಮತಿವಿಚಿತ್ರೋ   ಮಿತ್ರಸಂಯೋಗಹೃದ್ಯೋ ನರಪತಿರಿವನೀಚೋ ದೃಶ್ಯತೇ ನಿಷ್ಫಲಾಢ್ಯ: //*


        _ಅವಿಮಾರಕನು ಪ್ರಿಯಳ ವಿರಹ ತಾಳಲಾರದೆ ಅಗ್ನಿಗೆ ಹಾರುವನು.ಅಗ್ನಿಸಂಜಾತನೇ ಆದದ್ದರಿಂದ ಅವನನ್ನು ಬೆಂಕಿ ಸುಡುವುದಿಲ್ಲ. ಬೇಸರದಿಂದ ಪರ್ವತದಿಂದ ಕೆಳಗೆ ಹಾರಲು ಯೋಚಿಸುತ್ತಾನೆ. ಆಗ ಪರ್ವತವನ್ನು ಕುರಿತ ಅವನ ಅನಿಸಿಕೆ. ಕಪ್ಪಾದ ಮೋಡಗಳು ಎಲ್ಲೆಡೆ ಸುತ್ತುವರಿದು ಪರ್ವತಕ್ಕೆ ಕೋಡುಗಳಿವೆಯೇನೋ ಎಂಬಂತೆ ತೋರುತ್ತಿದೆ. ಅಥವಾ ಕೊಬ್ಬಿದ ಗೂಳಿಯಂತೆ ಪರ್ವತ ಶೋಭಿಸುತ್ತಿದೆ. ಆಕಾಶದಲ್ಲಿ ಸಂಚರಿಸುವ ಯಕ್ಷ ಕಿನ್ನರ ಗಂಧರ್ವ ವಿದ್ಯಾಧರ ರಿಗೆ ಮಧ್ಯದ ವಿಶ್ರಾಂತಿ ತಾಣವಾಗಿದೆ ಈ ಗಿರಿ. ಕವಿಗಳ ಬುದ್ಧಿಯಂತೆ ಈ ಪರ್ವತವೂ ವಿಚಿತ್ರವಾಗಿದೆ. ಕವಿಗಳು ಹೇಗೆ ವಿಭಿನ್ನವಾಗಿ ಆಲೋಚಿಸಿ ಮೆರೆಯುತ್ತಾರೋ ಹಾಗೆಯೇ ಈ ಶೈಲವೂ ನಾನಾಘಟನೆಗಳ ಸಾಕ್ಷಿಭೂತವಾಗಿ ತನ್ನ ಮನದಿಂಗಿತವನ್ನು ಬಿಟ್ಟುಕೊಡದೆ ವಿರಾಜಿಸುತ್ತಿದೆ. ಮಿತ್ರರ ಸಂಪರ್ಕವು ಕವಿಗಳಿಗೆ ಆನಂದ ಜನಕವಾದಂತೆ ಇದೂ ಮಂದಾನಿಲದ ಸಂಪರ್ಕದಿಂದ ಆನಂದಿತವಾಗಿದೆ. ಆದರೆ ಹೀಗೆಲ್ಲ ಇದ್ದು ಎಲ್ಲ ರೀತಿಯ ಸೌಲಭ್ಯವಿದ್ದು ಈ ಪರ್ವತದಿಂದ ಊರ ಜನಕ್ಕೆ ಆಗುವ ಪ್ರಯೋಜನವಾದರೂ ಏನು? ಶೂನ್ಯವೇ ಸರಿ. ಹೇಗೆಂದರೆ ಸಂಪತ್ತು ತುಂಬಿತುಳುಕುತ್ತಿರುವ ರಾಜನಿಗೆ ದಾನಬುದ್ಧಿ ಇಲ್ಲದಿದ್ದರೆ ಅವನಲ್ಲಿರುವ ಸಂಪತ್ತು ಹೇಗೆ ನಿಷ್ಪ್ರಯೋಜಕವೋ ಹಾಗೆ ಈ ಪರ್ವತದ ಸಂಪತ್ತು ಯಾರಿಗೂ ಪ್ರಯೋಜನವಿಲ್ಲ. ನನ್ನಂತಹ ಪ್ರಾಣತ್ಯಾಗಿಗಳಿಗೆ ಮಾತ್ರ ಪ್ರಯೋಜನವಾದೀತು. ಸಂಪತ್ತು ವಿದ್ಯೆ ಮುಂತಾದವು ಯಾರಿಗೂ ಕೊಡದೆ ನಮ್ಮಲ್ಲಿ ಇದ್ದರೆಷ್ಟು ಬಿಟ್ಟರೆಷ್ಟು ಅದು ವ್ಯರ್ಥ. ಚಿಕ್ಕ ಆಹಾರವನ್ನೂ ಹಂಚಿ ತಿನ್ನುವ ಕಾಗೆಯ ಗುಣ ನಮಗೆ ಮಾದರಿಯಾಗಬೇಕು. ಇದೇ ಕವಿಯ ಭಾವ._              


📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩