📖📝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೯೬🏝📖_ *गुप्तं कुशिकपुत्रेण ज्वलनेनामृतं यथा।। एष विग्रहवान्धर्म एष वीर्यवतां वरः। एष बुद्ध्याधिको लोके तपसश्च परायणम्।।* _ದಶರಥನಿಗೆ ಮನದಟ್ಟು ಮಾಡಿಸುವ ಮಾತುಗಳನ್ನು ವಸಿಷ್ಠರು ಆಡುತ್ತಿದ್ದಾರೆ. ಅಯ್ಯಾ ರಾಜನೇ, ವಿಶ್ವಾಮಿತ್ರರ ರಕ್ಷೆಯಲ್ಲಿ ಹೊರಟ ಇವರನ್ನು ಯಾರೂ ಏನೂ ಮಾಡಲಾರರು, ಸುತ್ತಲೂ ಬೆಂಕಿಯಿರುವಾಗ ಮಧ್ಯದ ಅಮೃತಕ್ಕಾಗಿ ಆಸೆಪಟ್ಟರೆ ಹೇಗೆ ಸುಟ್ಟು ಬೂದಿಯಾಗುವರೋ ಈ ಮಹರ್ಷಿಯೆಂಬ ಬೆಂಕಿಯಿರುವಾಗ ಯಾರೂ ಬಾಲರನ್ನು ಮುಟ್ಟಲಾರರು. ಇವನೇನು ಸಾಮಾನ್ಯನನಲ್ಲ ಧರ್ಮದ ಸಾಕಾರಮೂರ್ತಿ, ಪರಾಕ್ರಮ ದಲ್ಲಿ ಅಸದೃಶ, ಬುದ್ಧಿವಂತಿಕೆಯಲ್ಲೂ ಇವನ ಸಮೀಪ ಯಾರೂ ಬರಲಾರರು, ಈ ಮೂರಕ್ಕೂ ತಿಲಕವಿಟ್ಟಂತೆ ತಪಸ್ಸು ಇವನಲ್ಲಿ ಮಡುಗಟ್ಟಿದೆ. ಇವನಿಗೆ ತಿಳಿಯದ ಅಸ್ತ್ರಗಳಿಲ್ಲ, ಉಳಿದವರಿಗೆ ತಿಳಿಯದ ಅಸ್ತ್ರಗಳೂ ಇವನಿಗೆ ತಿಳಿದಿವೆ, ದೇವ-ಗಂಧರ್ವ-ಋಷಿ-ಅಸುರ-ರಾಕ್ಷಸ-ಉರಗ-ಕಿನ್ನರ ಇವರಾರೂ ಅಸ್ತ್ರವಿದ್ಯೆಯಲ್ಲಿ ಇವನಿಗೆ ಸಮರಲ್ಲ. ಇಲ್ಲಿ ವಸಿಷ್ಠರ ಹೃದಯ ವೈಶಾಲ್ಯವನ್ನೂ ವಿಶ್ವಾಮಿತ್ರರ ಮೇರು ವ್ಯಕ್ತಿತ್ವವನ್ನೂ ಎರಡನ್ನೂ ನಾವು ಗಮನಿಸಬಹುದು. ವಾಲ್ಮೀಕಿಗಳು ಮುಂದೆ ರಾಮನಿಗೆ ಈ ವಿಶೇಷಣ ಬಳಸಿದ್ದಾರೆ *ರಾಮೋ ವಿಗ್ರಹವಾನ್ಧರ್ಮ* ಎಂದು. ಇಲ್ಲಿ ವಸಿಷ್ಠರ ಬಾಯಲ್ಲಿ ವಿಶ್ವಾಮಿತ್ರರ ಧರ್ಮನಿಷ್ಠೆಯನ್ನು ಲೋಕಕ್ಕೆ ಸಾರಿದ್ದಾರೆ. ತನ್ನೊಂದಿಗೆ ಒಂದು ಕಾಲದಲ್ಲಿ ಸ್ಪರ್ಧೆಗಿಳಿದ ತರ...