ಪೋಸ್ಟ್‌ಗಳು

ಫೆಬ್ರವರಿ, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
💐 ಪ್ರತಿಮಾನಾಟಕದ ಒಂದು ಸುಮ 💐 *द्रुमा धावन्तीव द्रुतरथगतिक्षीणविषया नदीवोद्वृत्ताम्बुर्निपतति मही नेमिविवरे । अरव्यक्तिर्नष्टा स्थितमिव जवाच्चक्रवलयं रजश्चाश्वोद्भूतं पतति पुरतो नानुपतति ।।* ಡಾ.ಕೃಷ್ಣಮೂರ್ತಿಯವರ ಕನ್ನಡಾನುವಾದ- *ತರುಗಳ್ ಮೇಣೋಡುವಂತಿರ್ಪುವು ರಥಜವದಿಂ ಕ್ಷೀಣರೂಪಗಂಳಿಂದಂ ತೊರೆವೋಲ್ ಮೇಲೇಳ್ವ ನೀರಿಂ ಪೊಡವಿಯುರುಳ್ವುದೀ ಗಾಲಿಬಾಯೋಳ್ ಸವೇಗಂ ಅರೆಗಳ್ ಬೇರ್ವೇರೆ ನೋಡಲ್ ನೆರೆಯವು ಜವದಿಂ ನಿಂದವೋಲ್ ಗಾಲಿ ತೋರ್ಕುಂ ತುರಗೋದ್ಧೂತಂ ರಜಂ ಮುಂದೆಸೆಯೊಳೆ ನಿಲೆ ಪಿಂತೆಂತು ಮಿಲ್ಲಾಯ್ತು ಮತ್ತಂ* _ಭಾಸನ ಸಹಜತೆಗೆ ಕೈಗನ್ನಡಿ ಈ ಪದ್ಯ. ಪದ್ಯವನ್ನು ಓದಿದಂತೆ ಚಿತ್ರವು ಕಣ್ಣಮುಂದೆ ಬರುವ ಕಾರಣ ಚಿತ್ರಕಾವ್ಯವೆಂದೂ ಕರೆಯಬಹುದು.( ಅವಧಾನದಲ್ಲಿ ಛಂದಸ್ಸಿನ ಅನುಸಾರ ಚಿತ್ರಕಾವ್ಯ ರಚನೆ) ಊರಿನಿಂದ ಕರೆ ಬಂದಿದೆ ಭರತನಿಗೆ. ರಥದಲ್ಲಿ ವೇಗವಾಗಿ ಹಿಂತಿರುಗುತ್ತಿದ್ದಾನೆ. ನೃಪಸೂನುವಿನ ಆಣತಿಯಂತೆ ಸಾರಥಿ ವೇಗ ಹೆಚ್ಚಿಸಿದ್ದಾನೆ. ರಥವನ್ನು ಅದರ ವೇಗವನ್ನು ನೋಡಿದ ಭರತನಾಡುವ ಮಾತು. ಎಷ್ಟೊಂದು ವೇಗದಿಂದ ಹೋಗುತ್ತಿದೆಯಂದರೆ ರಥದೊಡನೆ ಮರಗಳೂ ಓಡುವಂತಿವೆ. ಶೀಘ್ರವಾಗಿ ಚಲಿಸುತ್ತಿರುವ ರಥದ ಚಲನೆಯಿಂದ ಬಲು ಚಿಕ್ಕದಾಗಿ ದೂರದಲ್ಲೆಲ್ಲೋ ಕಾಣಿಸುತ್ತಿರುವ ಮರಗಳು ರಥದೊಡನೆ ಬರುತ್ತಿವೆಯೇನೋ ಎಂಬ ಸಂಶಯ ಹುಟ್ಟುತ್ತಿದೆ. (ಚಿಕ್ಕವರಾಗಿದ್ದಾಗ ನಾವು ಬಸ್ಸು ಅಥವಾ ರೈಲಿನೊಡನೆ ಮರಗಳೂ ಬರುತ್ತಿವೆ ಎಂದ...
ವೇದ-ಧರ್ಮ ಭಾಗ-೯ 📙 *ಅಥರ್ವ ವೇದದ ಸಂಹಿತೆ* _ಮೂರು ವೇದಗಳು ಸ್ವರ್ಗ ಮೋಕ್ಷ ವಿಷ್ಣು- ಬ್ರಹ್ಮಾದಿ ಲೋಕಗಳು ಮುಂತಾದ ಆಮುಷ್ಮಿಕ ಅಂದರೆ ಕಣ್ಣಿಗೆ ಕಾಣದ ಬದುಕಿನ ನಂತರ ದೊರೆಯಬಹುದಾದ ಫಲಗಳ ಬಗೆಗೆ ವಿಮರ್ಶಿಸಿದರೆ ಅಥರ್ವ ವೇದವು ಐಹಿಕ ಫಲಗಳ ಬಗ್ಗೆ ಹೆಚ್ಚು ವಿವರ ನೀಡಿದೆ. ಹಾಗಂತ ಬ್ರಹ್ಮ ಜ್ಞಾನದ ಮಹಿಮೆಯನ್ನು ಪಡೆಯುವ ಬಗೆಯನ್ನೂ ಹೇಳಿಲ್ಲವೆಂದಲ್ಲ. ಅದರೆಡೆಗೆ ಹೆಚ್ಚು ಗಮನವಿಲ್ಲ. ನಮ್ಮ ಜೀವನದ ಸುಖದು:ಖ ಅನುಭವಗಳು, ಅವುಗಳ ಸಾಧನಗಳು , ಅದರ ಅನುಷ್ಠಾನ ಇವನ್ನೆಲ್ಲಾ ಇಲ್ಲಿ ಹೇಳಲಾಗಿದೆ. *ಥರ್ವ* ಎಂದರೆ ಕುಟಿಲತೆ, ಹಿಂಸೆ, ಅನ್ಯಾಯ ಇತ್ಯಾದಿಗಳು. ಅದಿಲ್ಲದೆಯೇ ಹೇಗೆ ಸುಖ ಪಡೆಯುವುದು ಎಂಬ ಸಾಮಾನ್ಯರ ಪ್ರಶ್ನೆಗೆ ಈ ಸಂಹಿತೆ ಉತ್ತರ ನೀಡುವುದು. ಎಲ್ಲರ ಪ್ರಶ್ನೆ ಅದೇ ಆಗಿದೆ- ಸ್ವಲ್ಪವೂ ಅಪ್ರಾಮಾಣಿಕರಾಗದೇ, ಅನ್ಯಾಯ ಮಾಡದೇ, ಸಾಕ್ಷಿಯನ್ನು ತ್ಯಜಿಸದೇ, ಧರ್ಮ ಬಿಡದೇ ಸುಖ ಸಿಗುವುದೇ ಎಂದರೆ ಅದಕ್ಕೆ ಅಥರ್ವ ವೇದದ ಉತ್ತರ ಸಿಗುವುದು. ಥರ್ವದ ನಿಷೇಧವೇ ಅಥರ್ವ. ಅದಕ್ಕಾಗಿ ಈ ವೇದ ಬೇರೆ ಬೇರೆ ಉಪಾಯಗಳನ್ನು ಹೇಳುತ್ತದೆ. ವಂಚನೆಯ ಕಡೆಗೆ ಕೊಂಚವೂ ಯೋಚಿಸದಂತೆ, ಹಿಂಸೆಯನ್ನು ಸಹಿಸದಂತೆ ಮನಕ್ಕೆ ಪ್ರೇರಣೆ ಕೊಡುವ ಉದಾತ್ತ ಉದ್ದೇಶ ಅಲ್ಲಲ್ಲಿ ಪ್ರತಿಪಾದಿಸಲ್ಪಟ್ಟಿದೆ. ಮಹಾಭಾಷ್ಯದ ವಾಕ್ಯದಂತೆ ಈ ವೇದದ ಶಾಖೆಗಳು ಒಂಭತ್ತಿದ್ದರೂ ಈಗ ಕೇವಲ ಶೌನಕ ಹಾಗೂ ಪಿಪ್ಪಲಾದ ಎಂಬ ಎರಡು ಸಿಗುತ್ತವೆ. ಈ ಸಂಹಿತೆಯಲ್ಲಿ ೨೦ ಕಾಂಡಗಳೂ, ೭೩೧ ಸೂಕ್ತಗಳೂ, ೫೯...
🌹 ಮೇಘದೂತದ ಒಂದು ಹನಿ🌹 *आपृच्छस्व प्रियसखममुं तुङ्गमालिङ्यशैलं वन्द्यै: पुंसां रघुपतिपदैरङ्कितं मेखलासु । काले काले भवति भवतो यस्य संयोगमेत्य स्नेहव्यक्तिश्चिरविरहजं मुञ्चतो बाष्पमुष्णम् ।।* _ಯಕ್ಷನು ಮುಂದುವರೆಸುತ್ತಿದ್ದಾನೆ ತನ್ನ ಮಾತುಗಳನ್ನು, ಎಲೈ ಮೇಘವೇ, ನೀನು ಹೋಗುವ ದಾರಿಯಲ್ಲಿ ನಿನ್ನ ಪ್ರಿಯಮಿತ್ರನಾದ ಉನ್ನತವಾದ ತಪ್ಪಲು ಪ್ರದೇಶಗಳುಳ್ಳ, ಅಷ್ಟಲ್ಲದೇ ಜೀವಿಗಳಿಗೆ ಪವಿತ್ರವೆನಿಸಿ ಅವರಿಂದ ಆರಾಧಿಸಲ್ಪಡುವ ಅಥವಾ ಗೌರವಿಸಲ್ಪಡುವ ಶ್ರೀರಾಮನ ಹೆಜ್ಜೆ ಗುರುತುಗಳನ್ನು ಈ ತಪ್ಪಲು ಪ್ರದೇಶದಲ್ಲಿ ಹೊಂದಿರುವ ಈ ಚಿತ್ರಕೂಟ ಪರ್ವತವನ್ನು ಮನಸಾರೆ ಅಪ್ಪಿಕೊಂಡು ಮಧುರ ಮಾತುಗಳಿಂದ ಅವನ ಒಪ್ಪಿಗೆ ಪಡೆದು ಮುಂದುವರೆ. ಬಹುಕಾಲದ ನಂತರದ ಮಿತ್ರನ ಸಂಪರ್ಕವು ಅವನಲ್ಲಿ ಆನಂದ ಬಾಷ್ಪವನ್ನು ಹೊರಸೂಸುವಂತೆ ಮಾಡುವುದು. ಪ್ರತಿ ಮಳೆಗಾಲದಲ್ಲಿ ಈ ಮೋಡ ಬರುವುದೆಂಬ ನಿಶ್ಚಯವಿದ್ದರೂ ಅಷ್ಟು ದಿನ ಕಾಪಿಟ್ಟುಕೊಂಡ ಸ್ನೇಹದ ಭಾವವನ್ನು ನೆನೆದು ಮತ್ತೆ ಯಾವಾಗ ಈ ಸಮಾಗಮವು ನಡೆಯುವುದೆಂದು ಚಿಂತಿಸುತ್ತಾ ಬಿಸಿ ಕಣ್ಣೀರನ್ನು ಸುರಿಸುತ್ತಾ ನಿಟ್ಟುಸಿರು ಬಿಡುವುದರ ಮೂಲಕ ನಿನ್ನ ಮೇಲಿನ ಪ್ರೇಮಾತಿಶಯವನ್ನು ಸಾರುವನು ಆ ಪರ್ವತಶ್ರೇಷ್ಠ. ಮೊದಲ ಮಳೆಗೆ ಭೂಮಿ ತೋಯ್ದು ಒಳಗಿದ್ದ ಉಷ್ಣವೆಲ್ಲ ಹೊರಬರುತ್ತದೆ ಹೊಗೆಯ ಮೂಲಕ. ಜಲ್ಲಿಕಲ್ಲುಗಳ ಮೇಲೆ ಮಳೆ ಹನಿ ಬಿದ್ದಾಗ ಹೊರಹೊಮ್ಮುವ ಹೊಗೆಯನ್ನು ಗಮನಿಸಬಹುದು. ಇದು ಮೊದಲೇ ...
💐ಪ್ರತಿಮಾ ನಾಟಕದ ಒಂದು ಪುಷ್ಪ💐 *अयममरपते: सखा दिलीपो, रघुरयमत्रभवानज: पिता मे । किमभिगमनकारणं भवद्भि: सह वसने समयो ममापि तत्र ।।* _ದಶರಥ ಆಚಮನ ಮಾಡಿ ಪಿತೃಗಳನ್ನು ಸ್ಮರಿಸುತ್ತಿದ್ದಾನೆ. ರಾಮನ ವಿರಹದಿಂದ ಬೆಂದ ದಶರಥನನ್ನು ಸಾಂತ್ವನ ಮಾಡಲು ಅವನ ಪೂರ್ವಜರು ಪ್ರತ್ಯಕ್ಷರಾಗಿದ್ದಾರೆ. ಪಿತೃಗಳ ದರ್ಶನ ಕಾಲದಲ್ಲಿ ಶುದ್ಧಿಗಾಗಿ ಆಚಮನ ಮಾಡಿ ಅವರನ್ನೇ ಈಕ್ಷಿಸುತ್ತಿದ್ದಾನೆ. ಓ , ಇವರು, ಇಂದ್ರನ ಗೆಳೆಯ ದಿಲೀಪಮಹಾರಾಜರು, ( ಇಂದ್ರನಿಗೆ ಅಸುರರ ಜೊತೆಗಿನ ಯುದ್ಧದಲ್ಲಿ ಸಹಾಯ ಮಾಡಿ ಗೆಳೆತನವನ್ನು ಸಂಪಾದಿಸಿದವನು) ಇವರು ರಘು ಮಹಾರಾಜರು ನಮ್ಮ ಪಿತಾಮಹರು, ಇವರು ನಮ್ಮ ತಂದೆ ಪೂಜ್ಯರಾದ ಅಜ ಮಹಾರಾಜರು, ಅಲ್ಲ, ನಿಮ್ಮ ಆಗಮನಕ್ಕೆ ಕಾರಣವಾದರೂ ಏನಿರಬಹುದು, ಕೇವಲ ನನ್ನ ನೊಂದ ಮನಕ್ಕೆ ಸಾಂತ್ವನ ಹೇಳುವುದಷ್ಟೇ ಉದ್ದೇಶವೇ! ಹಾಗೇನೂ ಇರಲಾರದು. ನಿಮ್ಮ ಜೊತೆಗೆ ವಾಸ ಮಾಡಲು ಬೇಗ ಬರಬೇಕೆಂಬ ಕಾರಣದಿಂದಲೇ ನೀವು ಬಂದದ್ದೇನೋ! ನನ್ನ ಅಂತ್ಯ ಸಮೀಪಿಸಿದೆ. ಇನ್ನೇನಿದ್ದರೂ ಪಿತೃಲೊಕದಲ್ಲಿ ವಾಸವೇ ಹೊರತು ಇಲ್ಲಲ್ಲ ಎನ್ನುವುದನ್ನು ನೆನಪು ಮಾಡಲೆಂದೇ ಬಂದಿರುವರೋ ಏನೋ ಈ ನನ್ನ ಅಜ್ಜಯ್ಯಂದಿರು. ಶೀಘ್ರದಲ್ಲೇ ಈ ಶರೀರವನ್ನು ತ್ಯಾಗಮಾಡುವವನಿದ್ದೇನೆ. ನಿಮ್ಮ ಜೊತೆಯ ವಾಸವನ್ನು ನೆನಪಿಸಿಕೊಡಲೆಂದೇ ನೀವು ಬಂದಂತಿದೆ. ರಾಮನಿಲ್ಲದೇ ದಶರಥನ ಆತ್ಮ ಈ ದೇಹದಲ್ಲೇ ಇರಲು ಒಪ್ಪುತ್ತಿಲ್ಲ. ತನ್ನ ಸಾವು ಸಮೀಪಿಸಿತೆಂಬುದನ್ನು ಅವನು ಪಿತೃಗಳ ಆ...
🌹ಮೇಘದೂತದ ಒಂದು ಮಧು ಬಿಂದು 🌹 *तां चावश्यं दिवसगणनातत्परामेकपत्नीं अव्यापन्नामविहतगतिर्द्रक्ष्यसि भ्रातृजायाम् । आशाबन्ध: कुसुमसदृशं प्रायशो ह्यङ्गनानां सद्य: पाति प्रणयिहृदयं विप्रयोगे रुणद्धि ।।* _ಯಕ್ಷನು ಮೇಘಕ್ಕೆ ನುಡಿಯುವ ಮಾತು. ನೀನು ನನ್ನ ಸಹೋದರನಿದ್ದಂತೆ. ಅತಿಶೀಘ್ರವಾಗಿ ನನ್ನ ಊರನ್ನು ತಲುಪಿದ ನಿನ್ನನ್ನು ಪತಿಯ ಅಗಲುವೆಕೆಯಿಂದ ದು:ಖಿತಳಾದ, ಶಾಪ ಮುಗಿದೊಡನೆ ಪತಿ ಬಂದೇ ಬರುವನೆಂಬ ಆಸೆಯಿಂದ ದಿವಸಗಳನ್ನು ಎಣಿಸುತ್ತಿರುವ ಆ ನನ್ನ ಮನದರಸಿ ಪ್ರಾಣವನ್ನು ಹಿಡಿದಿಟ್ಟುಕೊಂಡು ಸ್ವಾಗತಿಸುವಳು. ಪತಿಯ ಆಗಮನ ಇಷ್ಟು ದಿನಗಳಾದ ಮೇಲೆ ಖಂಡಿತ ಆಗುವುದೆಂಬ ಭರವಸೆಯಿಂದ ಪ್ರಾಣವನ್ನು ಕಳೆದುಕೊಳ್ಳದೆ ನನ್ನ ಸಂದೇಶವನ್ನು ನಿನ್ನ ಮೂಲಕ ನಿರೀಕ್ಷಿಸುತ್ತಿರುವಳು. ಅವಳು ನನ್ನ ಏಕೈಕ ಪತ್ನಿ. ಹಾಗಾಗಿ ಪ್ರೀತಿಯ ಬೆಸುಗೆ ಹೆಚ್ಚು. ಎಲ್ಲೂ ನಿಲ್ಲದೆ ಆಗಸದ ದಾರಿಯಲ್ಲಿ ವೇಗವಾಗಿ ಸಾಗಿಬಂದ ನಿನ್ನನ್ನು ನೋಡಿ ಸಂತೋಷಪಡುವಳು. ನೀನು ನನ್ನ ಸಹೋದರನಾದ್ದರಿಂದ ಅತ್ತಿಗೆಯನ್ನು ನೋಡುವುದರಲ್ಲಿ ಯಾವ ಸಂಕೋಚವೂ ಬೇಡ ನಿನಗೆ. ಅವಳು ಅಷ್ಟು ಕಾಲ ಪ್ರಾಣ ಹಿಡಿದಿಟ್ಟುಕೊಳ್ಳಲು ಕಾರಣ ಪತಿಯು ಬಂದೇ ಬರುವನೆಂಬ ಆಸೆಯ ಬಂಧ. ಕವಿ ಸುಂದರವಾಗಿ ಇದನ್ನು ನಿರೂಪಿಸಿದ್ದಾನೆ. ಹೂವು ತೊಟ್ಟಿನಿಂದ ಕಳಚಿಬೀಳಲು ಸಾಕಷ್ಟು ಸಮಯವೇನೂ ಬೇಡ. ಸ್ವಲ್ಪ ಒಣಗುತ್ತಿದ್ದಂತೆ ಆಧಾರ ಕಳಚಿ ಬೀಳುವುದು. ಇಲ್ಲೂ ಆ ಮಾನಿನಯ ಪ್ರಾಣವೆಂಬ ಹೂವ...
📙 ವೇದ-ಧರ್ಮ ಭಾಗ-೮ *ಕೃಷ್ಣ ಯಜುರ್ವೇದ ಸಂಹಿತೆ* _ಇದರಲ್ಲಿ ೭ ಕಾಂಡಗಳು, ೪೪ ಪ್ರಪಾಠಕಗಳು, ೬೩೧ ಅನುವಾಕಗಳು ಇವೆ. ಹೆಸರಿಗೆ ತಕ್ಕಂತೆ ಕೆಲವೆಡೆ ಗದ್ಯ ಕೆಲವೆಡೆ ಪದ್ಯ.( ಕೃಷ್ಣ=ಮಿಶ್ರಿತ) ವೈಶಂಪಾಯನರು ತಮ್ಮ ಶಿಷ್ಯರಿಗೆ ಯಾಜ್ಞವಲ್ಕ್ಯರು ವಮನ ಮಾಡಿದ್ದನ್ನು ತಿತ್ತಿರಿ ರೂಪದಲ್ಲಿ ಭಕ್ಷಿಸುವಂತೆ ಆದೇಶಿಸಿದ ರು. ಹಾಗಾಗಿ ಇದು ತೈತ್ತಿರೀಯ ಸಂಹಿತೆ.ಇದು ಒಂದು  ಕಥೆ ಸಂಕೇತರೂಪದ್ದು.  ಅಧ್ಯಯನಕ್ಕೆ ಯೋಗ್ಯತೆ ಪಡೆಯುವುದು ಮನಸ್ಸನ್ನು ಹಕ್ಕಿಯಂತೆ ಏಕಾಗ್ರತೆಯಿಂದ ಹಾರುವುದನ್ನು ಕಲಿತಾಗ ಮಾತ್ರ. ಏಕಾಗ್ರತೆ ಹೆಚ್ಚಿದಷ್ಟು ಬಹುಕಾಲ ಹಾರಾಟ ಬಹುದೂರ ಹಾರಾಟ ಸಾಧ್ಯ._ _ಮೈತ್ರಾಯಣೀ ಸಂಹಿತೆಯಲ್ಲಿ ೪ ಕಾಂಡಗಳು, ೫೪ ಪ್ರಪಾಠಕಗಳು, ೨೧೪೪ ಮಂತ್ರಗಳು ಇವೆ. ಮಿತ್ರಾಯಣ ಋಷಿಗಳ ಪರಂಪರೆಯಿಂದ, ಅಥವಾ ಆ ಗೋತ್ರದವರಿಂದ ಸಾಕ್ಷಾತ್ಕರಿಸಲ್ಪಟ್ಟ ಮಂತ್ರಗಳ ಗುಂಪು ಎಂದಿರಬಹುದೇನೋ ಆ ಹೆಸರು. ಕೃಷ್ಣ ಹಾಗೂ ಶುಕ್ಲ ಯಜುರ್ವೇದ ಸಂಹಿತೆಗಳು ವಿಷಯನಿರೂಪಣೆಯಲ್ಲಿ ಭಾಗಶ: ಏಕತೆಯನ್ನು ಹೊಂದಿವೆ. ಯಜುರ್ವೇದದ ೮೫ ಶಾಖೆಗಳಲ್ಲಿ ಈಗ ಕೇವಲ ೪ ಕಾಣಸಿಗುತ್ತವೆ. ಕಠ ಸಂಹಿತೆಯಲ್ಲಿ ೫ ಕಾಂಡಗಳು, ೪೦ ಸ್ಥಾನಕಗಳು, ೧೩ ಅನುವಾಚನಗಳೂ, ೮೪೩ ಅನುವಾಕಗಳೂ, ೩೦೯೧ ಮಂತ್ರಗಳೂ ಇವೆ. ಇನ್ನೊಂದು ಸಂಹಿತೆ ಕಪಿಷ್ಠಲ. ಅದು ಭಾಗಶ: ಲಭ್ಯವಿದೆಯಷ್ಟೇ._ *ಸಾಮವೇದ ಸಂಹಿತೆ* _ಸಾಮಸಂಹಿತೆಯಲ್ಲಿ ಸೋಮಲತೆಯ ವರ್ಣನೆ ವರ್ಣನೆ ಹೆಚ್ಚಿದೆ‌. ಸೋಮದಿಂದ ರಸವನ್ನು ತೆಗೆಯುವ ...
💐 ಪ್ರತಿಮಾನಾಟಕದ ಒಂದು ಕುಸುಮ 💐 *राज्ये त्वामभिषिच्य सन्नरपतेर्लाभात् कृतार्था: प्रजा: कृत्वा तत्सहजान् समानविभवान् कुर्वात्मन: सन्ततम् । इत्यादिश्य च ते तपोवनमितो गन्तव्यमित्येतया कैकेय्या हि तदन्यथा कृतमहो नि:शेषमेकक्षणे ।।* _*ಡಾ.ಕೃಷ್ಣಮೂರ್ತಿಯವರ ಅನುವಾದ- ನಿನ್ನಂ ರಾಜ್ಯದಿ ಪಟ್ಟಗಟ್ಟಿ ಜನರಂ ಸದ್ಭೂಪಸಂತುಷ್ಟರಂ ಗೈಯುತ್ತುಂ ನಿಜಸೋದರರ್ಗವಿರತಂ ನಿನ್ನಂತೆವೋಲ್ ವೈಭವಂ ಬರ್ಪನ್ನಂ ನಡೆ ನೋಳ್ಪುದೆಂದು ನಿನಗಂ ಪೇಳ್ದೈದುವೆಂ ಕಾಡಿಗೆಂ ದಿರ್ದೆಂ ಕೈಕೆಯಿನೆಲ್ಲಮೊಂದೆ ಚಣದೊಳ್ ನಿಶ್ಶೇಷಮಾಯ್ತಕ್ಕಟಾ* _ದಶರಥನ ದು:ಖದ ಮಾತು. ನನ್ನ ಎಣಿಕೆಯೇ ಬೇರೆಯಾಗಿತ್ತು. ನಿನ್ನನ್ನು ರಾಜ್ಯದ ಅಧಿಕಾರದಲ್ಲಿ ಕುಳ್ಳಿರಿಸಿ, ಸದ್ಗುಣಪೂರ್ಣನಾದ ನಿನ್ನಂತಹವನು ರಾಜನಾದುದರ ಕಾರಣ ಪ್ರಜೆಗಳನ್ನು ಕೃತಕೃತ್ಯರನ್ನಾಗಿ ಮಾಡಿ,ಅಥವಾ ಅವರ ಮನದಿಷ್ಟವನ್ನು ನೆರವೇರಿಸಿ, ನಿನ್ನ ಜೊತೆಗೆ ಜನಿಸಿದ ಸಹಜರನ್ನು ಭರತಾದಿಗಳನ್ನು ನಿನ್ನ ಭೋಗಭಾಗ್ಯಗಳಲ್ಲೂ ಪಾಲುದಾರರನ್ನಾಗಿಸು ಎಂದು ನಿನಗೆ ಆದೇಶಿಸಿ ಈ ಅಯೋಧ್ಯೆಯಿಂದ ವನಕ್ಕೆ ತೆರಳಬೇಕೆಂಬ ನನ್ನ ಸಂಕಲ್ಪವೇನಿತ್ತೋ ಅದನ್ನೆಲ್ಲವನ್ನೂ ಸಂಪೂರ್ಣವಾಗಿ ಒಂದೇ ಒಂದು ಕ್ಷಣದಲ್ಲಿ ಆ ಕೈಕೇಯಿಯು ಹಾಳುಮಾಡಿದಳು. ತಾನೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವ ಮಾತಿನಂತೆ ದಶರಥನ ಎಣಿಕೆಯೆಲ್ಲವೂ ಅವನಿಗೇ ಎಟುಕದಾಯಿತು. ಸನ್ನಡತೆಯ ಮಗನನ್ನು ರಾಜನಾಗಿ ನೇಮಿಸಿದರೆ ಪ್ರಜೆಗಳಲ್...
🌹ಮೇಘದೂತದ ಒಂದು ಬಿಂದು 🌹 *मन्दं मन्दं नुदति पवनश्चानुकूलो यथा त्वां वामश्चायं नदति मधुरं चातकस्ते सगन्ध: । गर्भाधानक्षणपरिचयान्नूनमाबद्धमाला: सेविष्यन्ते नयनसुभगं खे भवन्तं बलाका: ।।* _ಓ ಮನಮೋಹಕ ಮೇಘನೇ, ಮೆಲ್ಲ ಮೆಲ್ಲನೆ ಬೀಸುವ ಗಾಳಿಯು ನಿನ್ನನ್ನು ನಿಧಾನಕ್ಕೆ ಕರೆದೊಯ್ಯುತ್ತದೆ. ನೀನು ಹೊರಡುವ ಘಳಿಗೆಯೂ ಶುಭವಾಗಿದೆ ಎಂಬುದನ್ನು ಕವಿ ಪ್ರತಿಪಾದಿಸುತ್ತಿದ್ದಾನೆ. ಬಿರುಗಾಳಿಗೆ ಮೋಡ ಎಲ್ಲೆಲ್ಲೊ ದಾರಿ ತಪ್ಪಿ ಹೋಗಬಹುದು. ಆದರೆ ಈಗ ಬೀಸುತ್ತಿರುವ ಗಾಳಿಯು ಮೋಡಕ್ಕೆ ಅದರದ್ದೇ ಆದ ಈ ಯಕ್ಚನ ನಿರ್ದೇಶನದ ದಾರಿಯಲ್ಲಿ ಸಾಗಲು ಅನುಕೂಲವಾಗಿದೆ. ಅಷ್ಟಲ್ಲದೇ ಎಡಭಾಗದಲ್ಲಿ ನಿನ್ನ ಸಂಬಂಧಿಯಾದ ಚಾತಕ ಪಕ್ಷಿಯು ಮಧುರವಾಗಿ ಉಲಿಯುತ್ತಿದೆ. ಚಾತಕ ಪಕ್ಷಿಗಳು ಮಳೆ ಬರುವುದನ್ನೇ ಕಾಯುತ್ತಾ ಕುಳಿತಿರುತ್ತವೆ ಎಂಬುದೊಂದು ನಂಬಿಕೆ. ಹಾಗಾಗಿ ಅವುಗಳು ಮೋಡಕ್ಕೆ ಮಳೆಸುರಿಸುವ ಕಾರಣದಿಂದ ಆತ್ಮೀಯರು, ಸಂಬಂಧಿಗಳು. ಇಲ್ಲಿ ಅವುಗಳ ಪ್ರೀತಿಯೆ ಸಂಬಂಧ. ಅವುಗಳ ಮಧುರ ನಾದವು ನಿನ್ನ ಗಮನಕ್ಕೆ ಉತ್ಸಾಹವನ್ನು ತಂದುಕೊಡುತ್ತದೆ. ಇನ್ನು ಹೆಣ್ಣು ಕೊಕ್ಕರೆಗಳಿಗಂತೂ ನಿನ್ನ ಮೇಲೆ ಬಲು ಅಕ್ಕರೆ. ಮಳೆಗಾಲ ಬಂತೆಂದರೆ ತಮ್ಮನ್ನು ಪ್ರಿಯಕರರು ಸೇರಿ ಗರ್ಭವನ್ನು ಧರಿಸುವೆಂಬ ಭಾವಿ ಆನಂದವನ್ನು ಕಲ್ಪಿಸಿಕೊಂಡು ನಿನ್ನ ಸುತ್ತಲೂ ಮಾಲೆಯಾಕಾರದಲ್ಲಿ ನೆರೆದು ನಿನ್ನನ್ನು ಸಂತೋಷಪಡಿಸುತ್ತವೆ. ಅಂಗನೆಯರ ಹಿಂಡು ಸುತ್ತಲೂ ನೆರೆದಾಗ ...
💐 ಪ್ರತಿಮಾ ನಾಟಕದ ಒಂದು ಸುಮ 💐 *सकृत् पश्यामि वा रामं,  सकृत् पश्यामि वा पुन: । गतायुरमृतेनेव जीवामीति मतिर्मम ।।* _ಡಾ.ಕೃಷ್ಣಮೂರ್ತಿಯವರ ಕನ್ನಡಾನುವಾದ- *ನೆಟ್ಟನೆ ರಾಮನನೊರ್ಮೆಯೆ ಮುಟ್ಟಲೊಡಂ ಮಗುಳ್ದುಮೊರ್ಮೆಯುಂ ಕಾಣಲೊಡಂ ತೊಟ್ಟನೆ ಸುಧೆಯಿಂ ಹರಣಂ ಬಿಟ್ಟನುಮೆಂತಂತೆ ಜೀವಿಪೆಂ ವಲಮಾನುಂ* _ದಶರಥ ಕಂಬನಿ ಮಿಡಿಯುತ್ತಿದ್ದಾನೆ. ಹಾ ರಾಮ, ಸೀತೆ, ಲಕ್ಷ್ಮಣ ಮಕ್ಕಳೇ ನನ್ನನ್ನೊಮ್ಮೆ ಅಪ್ಪಿಕೊಳ್ಳಿ, ಅಯ್ಯೋ, ಎಲ್ಲಿ ಹೋದರಿವರು, ರಾಮನನ್ನು ಒಂದು ಸಲ ನಾನು ಸ್ಪರ್ಶಿಸಲೇ, ಅಥವಾ ಒಂದೇ ಒಂದು ಸಲ ರಾಮನನ್ನು ನೋಡಿ ಕಣ್ತುಂಬಿಕೊಳ್ಳಲೇ, ನನ್ನ ಬದುಕಿಗೆ ಅಷ್ಟೇ ಸಾಕು. ಈಗಲೋ ಆಗಲೋ ಸಾಯುವ ವ್ಯಕ್ತಿಗೆ ಅಮೃತ ದೊರೆತರೆ ಹೇಗೆ ಸಂತೋಷವಾಗುವುದೋ ಹಾಗೇ ನನಗೊಮ್ಮೆ ರಾಮನ ದರ್ಶನ ಹಾಗೂ ಸ್ಪರ್ಶ ಎರಡೂ ಆದರೆ ನನ್ನನ್ನು ಬಿಟ್ಟು ಹೋಗುತ್ತಿರುವ ಈ ಅಲ್ಪಕಾಲದ ಜೀವ ಇನ್ನಷ್ಟು ದಿನ ಬಾಳಬಲ್ಲದು. ಮರುಭೂಮಿಯಲ್ಲಿ ಬಾಯಾರಿಕೆಯಿಂದ ಅಲೆಯುವವನಿಗೆ ನೀರಿನ ಒರತೆ ಕಂಡಂತೆ ನನ್ನ ಬದುಕಿನಲ್ಲಿ ರಾಮ ಒಂದು ಬಾರಿಯಾದರೂ ಕಾಣಿಸಿಯಾನೇ! ಅಯ್ಯೋ ಹೊರಟು ಹೋದಿರಲ್ಲ, ಈ ವೃದ್ಧನನ್ನು ನಡು ನೀರಿನಲ್ಲಿ ಕೈ ಬಿಟ್ಟು, ಇದು ನಿಮಗುಚಿತವೇ! ನಮ್ಮ ಬದುಕು ಹೆಚ್ಚು ಕಾಲ ಇರಲಾರದು. ಆ ಸಮಯದಿ ದಶರಥನಂತೆ ರಾಮನ ಸ್ಮರಣೆ ಅವನನ್ನು ಪಡೆಯುವ ಬಗೆ ಹೇಗೆ ಎನ್ನುವುದ ಮನಗಂಡಾಗ ಜೀವ ಜವನಿಗೆ ಸೇರದೇ ಯವ ತಿನ್ನುವ ಭವದಲ್ಲಿ ಇರುವ ಭಾಗ್ಯ ದೊರಕೀತು.ಉಪಮಾ ಅಲಂಕಾರ...
🌹ಮೇಘದೂತದ ಒಂದು ತಂಪು ಹನಿ 🌹 *त्वामारूढं पवनपदवीमुद्गृहीतालकान्ता: प्रेक्षिष्यन्ते पथिकवनिता: प्रत्ययादाश्वसन्त्य: । क: सन्नद्धे विरहविधुरां त्वय्युपेक्षेत जायां न स्यादन्योsप्यहमिव जनो य: पराधीनवृत्ति: ।।* _ಓ ಗೆಳೆಯನೇ, ನನಗಾಗಿ ಹೊರಟ ನಿನ್ನನ್ನು ಅಂಗನೆಯರು ಸ್ವಾಗತಿಸುವರು. ಆಕಾಶ ಮಾರ್ಗದಲ್ಲಿ ಮೆಲ್ಲಮೆಲ್ಲನೆ ಸಾಗುತ್ತಿರುವ ನಿನ್ನನ್ನು ತುಂಬು ಜವ್ವನೆಯರು ಉಪ್ಪರಿಗೆಗಳ ಮೇಲೆ ನಿಂತು ಗಾಳಿಗೆ ಓಡುತ್ತಿರುವತಮ್ಮ ಉದ್ದನೆಯ ಕೂದಲುಗಳನ್ನು ಹಿಂದಕ್ಕೆ ಸರಿಸುತ್ತಾ ಅಥವಾ ಮುಂಗುರುಗಳನ್ನು ಹಿಂದಕ್ಕೆ ತಳ್ಳುತ್ತಾ ತುಂಬಿದ ಬಯಕೆಯಿಂದ ನಿನ್ನನ್ನೇ ದಿಟ್ಟಿಸುವರು. ದೂರದಲ್ಲೆಲ್ಲೋ ಕಾರ್ಯ ಮಗ್ನರಾಗಿರುವ ತಮ್ಮ ಪತಿ ಹಿಂದಿರುಗಿ ಬರಬಹುದು ಮಳೆಗಾಲ ಬಂತೆಂಬ ಕಾರಣದಿಂದ ಎಂಬುದೇ ಅವರ ಆಸೆಯ ಹೇತು.ನೀನು ಹೊರಟೆಯಂದರೆ ಅವರಿಗೆ ಸಮಾಧಾನ ಹಾಗೂ ನಿನ್ನ ಮೇಲೆ ಅಪಾರ ನಂಬಿಕೆ. ನಿನ್ನನ್ನು ಕಂಡ ಮೇಲೂ ವಿರಹದಿಂದ ಕಾತರಳಾದ ಮಡದಿಯನ್ನು ಯಾವ ಪುರುಷ ತಾನೇ ಉಪೇಕ್ಷಿಸಿಯಾನು! ನನ್ನಂತೆ ಪರರ ಅಧೀನದಲ್ಲಿ ಯಾರೂ ಇರಲಾರರು. ನಾನಾದರೋ ಶಾಪಾಧೀನನಾಗಿ ಮಡದಿಯನ್ನು ಬಿಟ್ಟು ಇಲ್ಲಿ ದು:ಖಿಸುತ್ತಿದ್ದೇನೆ. ಆದರೆ ಸಾಮಾನ್ಯ ಜನರಾರೂ ಬಹುಕಾಲದ ವಿರಹದಿಂದ ಮತ್ತಷ್ಟು ಹೆಚ್ಚಾದ ಪ್ರೀತಿಯುಳ್ಳ ಮಡದಿಯ ಮೊಗವನ್ನು ನೋಡದೆ ಇರಲಾರರು. ಎಷ್ಟು ಕಾರ್ಯಮಗ್ನರಾಗಿದ್ದರೂ ನಿನ್ನನ್ನು ಕಂಡಾಗಲೇ ತಮ್ಮ ಗೃಹ ಗಮನವನ್ನು ನಿಶ್ಚಯಿಸುವರು. ...
🌺 ಪ್ರತಿಮಾನಾಟಕದ ಒಂದು ಕುಸುಮ 🌺 *धन्या: खलु वने वातास्तटाकपरिवर्तिन: । विचरन्तं वने रामं ये स्पृशन्ति यथासुखम् ।।* _ದಶರಥನ ಮಾತು. ಕಾಡಿನ ಸರೋವರಗಳ ಎಡೆಯಲ್ಲಿ ಸುಳಿವ ಗಾಳಿ ನಿಜಕ್ಕೂ ಧನ್ಯ. ಅಥವಾ ವನದ ಗಿಡ- ಮರಗಳು ಲತೆಗಳು, ವನೌಕಸಗಳು ನಿಜಕ್ಕೂ ಧನ್ಯ. ಏಕೆಂದರೆ ವನದಲ್ಲಿ  ಸಂಚರಿಸುವ ರಾಮನನ್ನು ಬೇಕಾದಷ್ಟು ಸ್ಪರ್ಶಿಸುತ್ತಿರುವ ಈ ವಾಯು ನಿಜಕ್ಕೂ ಧನ್ಯ. ರಾಮನ ಸ್ಪರ್ಶದಿಂದಲೇ ಪುನೀತಳಾದವಳು ಅಹಲ್ಯೆ. ಅವನ ಸ್ಪರ್ಶ ಕಲ್ಲಿಗೂ ನವಚೈತನ್ಯ ಕೊಡುವಂತಹದ್ದು. ಅಂತಹ ಸ್ಪರ್ಶ ಸವಿಯುವ ಭಾಗ್ಯ ಈ ಇಳಿವಯಸ್ಸಿನಲ್ಲಿ ಅವನ ತಂದೆಯಾದ ನನಗಿಲ್ಲ  ಅಥವಾ ನಾನೇ ದೂರ ಮಾಡಿ ಕಳೆದುಕೊಂಡೆ. ರಾಮನ ದೇಹಸ್ಪರ್ಶವು ವಾತವನ್ನೂ ಶುದ್ಧೀಕರಿಸುತ್ತದೆ. ತಂದೆ ತಾಯಂದಿರಿಗೆ ಬೇರೆಲ್ಲದಕ್ಕಿಂತ ಮಕ್ಕಳ ದೇಹದ ಸ್ಪರ್ಶ ಅತ್ಯಂತ ಆನಂದದಾಯಕ. ರಘುವಂಶದಲ್ಲಿ ಕಾಳಿದಾಸನ ಒಂದು ಶ್ಲೋಕದಲ್ಲೂ ಇದೇ ತರಹದ ಮಾತಿದೆ. *ಜ್ಞಾತೌ ಸುತಸ್ಪರ್ಶಸುಖೋಪಲಂಭಾತ್* ಕೌಸಲ್ಯೆ ಸುಮಿತ್ರೆಯರು ಮಕ್ಕಳನ್ನು ನೋಡಲು ಆನಂದಾಶ್ರು ಬಿಡಲಿಲ್ಲ. ಆದರೆ ಸುತಸ್ಪರ್ಶದ ಸುಖವು ಅವರೇ ಎಂಬುದನ್ನು ಗುರುತಿಸಿತು. ಅಂತಹ ಮಗನ ಸ್ಪರ್ಶ ನನಗೆ ದೊರಕುತ್ತಿಲ್ಲ. ವನವಾಯು ಪಡೆದು ಧನ್ಯವಾಯಿತು ಎಂಬ ಭಾವ ದಶರಥನ ಮಾತಿನಲ್ಲಿ ಕಾಣುವುದು._ 📜 ಸಂಗ್ರಹ ಶ್ರೀನಿಧಿ ಅಭ್ಯಂಕರ್.