ಪ್ರತಿಮಾ ನಾಟಕ

🌺 ಪ್ರತಿಮಾ ನಾಟಕದ ಒಂದು ಸುಮ🌺

*कुत: क्रोधो विनीतानां लज्जा वा कृतचेतसाम् | मया दृष्टं तु तच्छून्यं तैर्विहीनं तपोवनम् ||*

_ಭರತ ಹಾಗೂ ಸುಮಂತ್ರರು ರಾಮನನ್ನು ಹುಡುಕುತ್ತಾ ಕಾಡಿನಲ್ಲಿ ಅಲೆಯುತ್ತಿದ್ದಾರೆ. ಸುಮಂತ್ರನೂ ಭರತನೂ ಸಾಕಷ್ಟು ಬಳಲಿದ್ದಾರೆ. ಭರತ ಆಗ ರಾಜ್ಯ ಕೈ ತಪ್ಪಿದ ಕೋಪದಿಂದಲೋ ಅಥವಾ ವನವಾಸ ಅನುಭವಿಸಬೇಕಾಗಿ ಬಂದದ್ದರಿಂದ ನಾಚಿಕೆಯಿಂದ ಈ ಅಗ್ರಜರು ಕಾಣಿಸಿಕೊಳ್ಳದೆ ಇರುವರೇನೋ ಎಂದು ಸಂಶಯ ಪಟ್ಟಾಗ ಸುಮಂತ್ರ ಹೇಳುವ ಮಧುರ ಮಾತು. ಕುಮಾರ, ವಿನಯವೇ ಜೀವನರಾದವರಿಗೆ ಕೋಪವಾದರೂ ಹೇಗೆ ಬಂದೀತು? ರಾಮ ವಿನಯವೇ ಧರೆಗಿಳಿದು ಬಂದಂತಿರುವನು, ಅವನಿಗೆ ಯಾರ ಮೇಲಾದರೂ ಕೋಪಗೊಳ್ಳಲು ಅವನ ವಿನಯವೇ ಅಡ್ಡಿಯಾಗಿದೆ. ಅದರಲ್ಲೂ ಯಾವ ರೀತಿಯಲ್ಲೂ ಕೇಡು ಬಗೆಯದ ಕನಸಲ್ಲೂ ಹಾಗೆ ಯೋಚಿಸದ ನಿನ್ನ ಬಗೆಗೆ ಅವನೇಕೆ ಹಾಗೆ ಎಣಿಸಿಯಾನು? ಸಾಧ್ಯವೇ ಇಲ್ಲ. ಇನ್ನು ನಿರ್ಮಲ ಮನಸ್ಸಿನ ವ್ಯಕ್ತಿಗಳಿಗೆ ಲಜ್ಜೆಯಾದರೂ ಯಾಕೆ ಹುಟ್ಟೀತು? ಮನದಲ್ಲಿ ಮಲ ಅಥವಾ ಕೆಟ್ಟ ಯೋಚನೆ- ಯೋಜನೆಗಳಿದ್ದಾಗ ತನ್ನ ಕೃತ್ಯಕ್ಕಾಗಿ ನಾಚಿಕೊಳ್ಳಬೇಕಾಗುವುದು. ಆದರೆ ರಾಮನ ಮನ ಕೊಳದ ನೀರಿನಂತೆ ನಿರ್ಮಲ. ಅದು ಎಂದೂ ಕೆಡದು. ಹಾಗಿರುವಾಗ ಅವನು ನಾಚಿಕೊಂಡು ಮರೆಮಾಚಿ ಬದುಕಲು ಸಾಧ್ಯವೇ? ಅವನೆಂದೂ ಹಾಗೆ ಮಾಡಲಾರ. ನನಗೆ ಅವರು ಬೇರೆಡೆಗೆ ಹೋಗಿರುವರೇನೋ ಎಂದೆನಿಸುತ್ತಿದೆ. ಅವರಿಲ್ಲದ ಈ ವನವು ಎಲ್ಲಾ ಗಿಡಮರ ಪ್ರಾಣಿ ಪಕ್ಷಿಗಳಿದ್ದೂ ಶೂನ್ಯವಾಗಿ ತೋರುತ್ತಿದೆ. ರಾಮನಿಲ್ಲದ ಪ್ರದೇಶದಲ್ಲಿ ಆರಾಮ ಹೇಗೆ ಇರುತ್ತಾರೆ! ಕವಿಯ ಮಾತು ಎಷ್ಟು ಸತ್ಯ. ನಮ್ಮಲ್ಲಿ ವಿನಯ ಧಾರಾಳವಾಗಿದ್ದಾಗ ನಾವು ಅವಿನೀತರಾಗಿ ಕೋಪಗೊಳ್ಳುವ ಸನ್ನಿವೇಶ ಉಂಟಾಗದು. ವಿನಯ ಹೋಗಿ ವಿಜಯದ ಆಕಾಂಕ್ಷೆ ಅಥವಾ ಒಬ್ಬರನ್ನು ಬಗ್ಗಿಸುವ ಬಯಕೆ ಹುಟ್ಟಿದಾಗ ಅಥವಾ ತನ್ನದೇ ಸರಿಯೆಂದು ಹೊರಟಾಗ ಕೋಪ ನಿಧಾನಕ್ಕೆ ಹೆಡೆ ಎತ್ತುತ್ತದೆ. ರಾಮ ವಿನಯಾಭಿರಾಮ. ಅವನು ಭರತನಂತಹ ಗುಣಶಾಲಿ ತಮ್ಮನ ಮೇಲೆ ಏಕೆ ಕೋಪ ಮಾಡಿಯಾನು! ಇನ್ನು ನಮ್ಮ ಮನಸ್ಸು ಯಾವ ಕೆಟ್ಟ ಭಾವನೆಯನ್ನು ಹೊಂದಿಲ್ಲದೆ ಸ್ವಚ್ಛವಾಗಿದ್ದರೆ ನಾಚಿಕೊಳ್ಳುವ ಪ್ರಮೇಯವೇ ಬರುವುದಿಲ್ಲ. ತಪ್ಪು ಮಾಡಿ ಅದು ತಿಳಿದಾಗ ಅಥವಾ ಅದರ ಬಗೆಗೆ ವಿವೇಕ ಮೂಡಿದಾಗ ನಾಚಿಕೆ ಸಹಜ. ತಪ್ಪಿಗೆ ಕಾರಣವಾಗುವುದು ಮನದ ಕಲ್ಮಷ. ಸ್ವಚ್ಛವಾದ ಮನ ಹೊಂದಿರುವಾಗ ತಪ್ಪೂ ನಡೆಯದೇ ನಾಚಿಕೊಳ್ಳುವ ಪ್ರಮೇಯವೇ ಇಲ್ಲ. ರಾಮ ಅಪ್ಪನ ಆಣತಿಯಂತೆ ವನಕ್ಕೆ ಬಂದವನು. ಅವನಿಗೆ ತಾನು ಮಾಡುತ್ತಿರುವ ಕಾರ್ಯ ಸರಿಯಾದುದೆಂಬ ಭಾವನೆ ಇರುವಾಗ ನಾಚಿಕೊಂಡು ತಲೆ ಮರೆಸಿ ಬದುಕುವ ಅವಶ್ಯಕತೆ ಇಲ್ಲವೇ ಇಲ್ಲ. ನಾವೂ ರಾಮನಂತೆ ವಿನೀತರಾಗಿ ನಿರ್ಮಲರಾಗಿ ಬದುಕೋಣವೇ!_

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಸಂಸ್ಕೃತ ವಿಶೇಷ ಶ್ಲೋಕಗಳು ೩