ಕಿರಾತಾರ್ಜುನೀಯ ಪರಿಚಯ

🌸 ಕಿರಾತಾರ್ಜುನೀಯದ ಕಿರು ಪರಿಚಯ 🌸

_ಸಂಸ್ಕೃತ ಕಾವ್ಯಗಳಲ್ಲಿ ಬೃಹತ್ತ್ರಯೀ ಹಾಗೂ ಪಂಚಮಹಾಕಾವ್ಯಗಳಲ್ಲಿ ಸ್ಥಾನ ಪಡೆದ ಸುಂದರ ಕಾವ್ಯ. ಭಾರವಿ ಇದರ ಕರ್ತೃ. ವಿದ್ವತ್ತಿನ ಭಾರವೂ ರಸಭಾರವೂ ಹರಿದು ಮಧುರ ರವವನ್ನು ಉಂಟುಮಾಡಿದ ಕವಿ ಇವನು. ಬರೆದದ್ದು ಒಂದೇ ಕಾವ್ಯವಾದರೂ ಪ್ರಸಿದ್ಧಿಗೆ ಕೊರತೆ ಕಾಣದ ಮಹಿಮ. ಅರ್ಜುನ ಇಂದ್ರಕೀಲಪರ್ವತಕ್ಕೆ ತೆರಳಿ ತಪವನ್ನು ಆಚರಿಸಿ ಪಾಶುಪತಾಸ್ತ್ರ ಪಡೆಯುವ ಮಹಾಭಾರತದ ವನಪರ್ವದ ಸಣ್ಣ ಕಥೆಯನ್ನು ಆಧರಿಸಿ ಇಂತಹ ಮಹಾಕಾವ್ಯವನ್ನು ರಚಿಸಿದ್ದಾನೆ. *ಭಾರವೇರರ್ಥಗೌರವಮ್* ಎಂಬ ಮಾತಿನಂತೆ ಸಣ್ಣ ಸಣ್ಣ ಪದಗಳೂ ವಿಶಾಲ ಅರ್ಥ ಕೊಡುವ ಸಂದರ್ಭೋಚಿತ ಪ್ರಯೋಗ ಇವನ ವಿಶೇಷತೆ. ಕಾಲಿದಾಸನಷ್ಟು ಮಾಧುರ್ಯ ಕಂಡುಬರದಿದ್ದರೂ ರಸ-ಭಾವ-ಧ್ವನಿ-ಅಲಂಕಾರಗಳು ಬಲು ಸೊಗಸಾಗಿ ಪ್ರಯೋಗಿಸಲ್ಪಟ್ಟಿವೆ. ಗಂಭೀರವಾದ ಇವನ ಪ್ರಯೋಗಗಳು ನಾರಿಕೇಲದಂತೆ. ಮೇಲ್ಮೈ ಗಟ್ಟಿ ಎಂದು ತ್ಯಜಿಸಿದರೆ ಒಳಗಿನ ಸ್ವಾದ ನಮಗೆ ಸಿಗದು. ಸಿಪ್ಪೆ ಸುಲಿದು ಒಡೆದು ನೊಡಿದಾಗ ಮಾತ್ರ ಸವಿ ಸಿಗುವಂತೆ ಭಾರವಿಯ ಕಾವ್ಯ ಬಹುಕಾಲದ ಅಧ್ಯಯನದಿಂದ ಮನವನ್ನು ಆಕರ್ಷಿಸುತ್ತದೆ. ಐಹೊಳೆಯ ಶಿಲಾಶಾಸನವು ಭಾರವಿಯನ್ನು ಸ್ತುತಿಸಿರುವುದು ಕನ್ನಡಿಗರಿಗೊಂದು ಹೆಮ್ಮೆ. *ಏಕಶ್ಚಂದ್ರಸ್ತಮೋ ಹಂತಿ ನಚ ತಾರಾಗಣೋ ಪಿ ಚ* ಎಂಬ ಮಾತಿನಂತೆ ಭಾರವಿಯ ಒಂದೇ ಕಾವ್ಯ ಸಂಸ್ಕೃತದ ಅಜ್ಞಾನವನ್ನೆಲ್ಲ ಕಳೆದು ಬೆಳಕು ಮೂಡಿಸುತ್ತದೆ.ನಕ್ಷತ್ರಗಳು ಕೋಟಿಗಟ್ಟಲೆ ಇದ್ದರೂ ಚಂದ್ರನಿಗೆ ಸಾಟಿ ಆಗಲಾರವು. ಅದರಂತೆ ಭಾರವಿಯ ಕಾವ್ಯವೊಂದೇ ಅವನ ಕೀರ್ತಿಯನ್ನು ಅಮರವಾಗಿಸಿದೆ. ಇವನು ತನ್ನ ಕಾವ್ಯದ ಪ್ರತಿಯೊಂದು ಸರ್ಗದ ಕೊನೆಯಲ್ಲೂ ಶ್ರೀ ಎಂಬ ಪ್ರಯೋಗ ಮಾಡಿದ್ದಾನೆ. ಇದನ್ನನುಸರಿಸಿ ಮುಂದಿನ ಮಾಘನು ಲಕ್ಷ್ಮೀ ಶಬ್ದವನ್ನು, ಶ್ರೀಹರ್ಷನು ಆನಂದ ಶಬ್ದವನ್ನು ಪ್ರಯೋಗಿಸಿದ್ದಾರೆ. ಚಿತ್ರಕಾವ್ಯದಲ್ಲಿ ಇವನ ನೈಪುಣ್ಯ ಅಸಾಧಾರಣ. ಅವಧಾನಗಳಲ್ಲಿ ಸಾಮಾನ್ಯವಾಗಿರುವ ಚಿತ್ರಕಾವ್ಯ ರಚನೆ ಭಾರವಿಯ ಕಾವ್ಯದಲ್ಲಿ ದಂಡಿಯಾಗಿ ಹರಿದಿದೆ. ಭಾರವಿಯ ನಡೆಯನ್ನು ಅನುಸರಿಸಿ ಮುಂದೆ ಮಾಘನು ಕಾವ್ಯ ರಚಿಸಿ ಪ್ರಸಿದ್ಧಿಯನ್ನು ಹೊಂದಿದನು. ರತ್ನಾಕರನೆಂಬ ಇನ್ನೊಬ್ಬ ಕವಿಯೂ ಇವನ ಶೈಲಿಯನ್ನೇ ಅನುಸರಿಸಿದ್ದಾನೆ. ಹೀಗೆ ಕವಿಗಳಿಗೆ ಭಾರವಿ ದೊಡ್ಡ ಸ್ಫೂರ್ತಿ. ಕಿರಾತಾರ್ಜುನೀಯಕ್ಕೆ ಸುಮಾರು ಹತ್ತೊಂಭತ್ತು ವ್ಯಾಖ್ಯಾನಗಳಿರುವುದು ಇದರ ಮಹತ್ವವನ್ನು ಸಾರುತ್ತದೆ. ಇದರಲ್ಲಿ ಮಲ್ಲಿನಾಥನ ಘಂಟಾಪಥವೆಂಬ ವ್ಯಾಖ್ಯಾನ ಮನೋಹರವಾಗಿದೆ. ಇವನ ಕಾವ್ಯದಲ್ಲಿ ಸಾಕಷ್ಟು ಸೂಕ್ತಿಗಳು ಕಂಡುಬರುತ್ತವೆ. ಸುಭಾಷಿತ ಸಂಗ್ರಹಕಾರರಿಗೆ ಭಾರವಿಯ ಈ ಕಾವ್ಯ ಅಚ್ಚುಮೆಚ್ಚು. ಇವನ ದೇಶ ಕಾಲಗಳ ಬಗ್ಗೆ ನಿಖರತೆ ಇಲ್ಲ. ಕಾಳಿದಾಸನ ನಂತರದ ಕಾಲದವನು ಎಂದು ಹೇಳಬಹುದಷ್ಟೇ. ಶಾಕುಂತಲ, ಮೇಘದೂತಗಳ ನಂತರ ಈ ಕಾವ್ಯದ ಆಯ್ದ ಅಥವಾ ನಾನು ಮೆಚ್ಚಿದ ಕೆಲವು ಶ್ಲೋಕಗಳ ಭಾವವನ್ನು ಅರಿಯುವ ಸಣ್ಣದೊಂದು ಪ್ರಯತ್ನ. ನಿಮ್ಮೆಲ್ಲರ ಮಾರ್ಗದರ್ಶನ ಮುಂದೆಯೂ ನಿರಂತರವಾಗಿರಲಿ. ತಪ್ಪಿದ್ದಲ್ಲಿ ಸಂಕೋಚವಿಲ್ಲದೆ ತಿಳಿಹೇಳಿ. ಅಭಿಪ್ರಾಯ ಭೇದವಿದ್ದಲ್ಲಿ ವೈಯಕ್ತಿಕವಾಗಿಯೂ ತಿಳಿಸಬಹುದು. ಭಾರವಿಯ ಆಶೀರ್ವಾದ ಬೇಡುತ್ತಾ ಇಂದಿನಿಂದ ಈ ಮಾಲಿಕೆ._

✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩