ಪೋಸ್ಟ್‌ಗಳು

ನವೆಂಬರ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಧರ್ಮಾಚರಣೆ ೧೧೬

ಧರ್ಮಾಚರಣೆ-೧೧೬ ವಿದ್ಯಾಕರ್ಮವಯೋಬಂಧುವಿತ್ತೈರ್ಮಾನ್ಯಾ ಯಥಾಕ್ರಮಮ್ | ಏತೈಃ ಪ್ರಭೂತೈಃ ಶೂದ್ರೋಪಿ ವಾರ್ಧಕೇ ಮಾನಮರ್ಹತಿ || ಯಾಜ್ಞವಲ್ಕ್ಯ ಸ್ಮೃತಿ|| ಅಪಾರ ವಿದ್ಯೆ, ಸತ್ಕರ್ಮಾಚರಣೆ ಅಂದರೆ ಶಾಸ್ತ್ರ ಒಪ್ಪಿರುವ ಉತ್ತಮ ಕೆಲಸಗಳನ್ನು ಮಾಡುವುದು, ವಯಸ್ಸಿನಲ್ಲಿ ಹಿರಿಯರು, ಶ್ರೀಮಂತರನ್ನು ಕ್ರಮವಾಗಿ ವಂದಿಸಬೇಕು. ಮೊದಲು ವಿದ್ಯಾವಂತರನ್ನು ಅನಂತರ ಕರ್ಮಠರನ್ನೂ ಅನಂತರ ಹಿರಿಯರನ್ನೂ ಕೊನೆಯದಾಗಿ ಧನಿಕರನ್ನು ಗೌರವಿಸಬೇಕು. ಈ ಗುಣಗಳಿಂದ ಕೂಡಿದ ಶೂದ್ರನಾದರೂ ಸಹಿತ ಹಿರಿಯನಾಗಿದ್ದರೆ ಸನ್ಮಾನಕ್ಕೆ ಅರ್ಹನೇ ಸರಿ. ಗೌರವ ನೀಡುವುದು ಜಾತಿ-ಮತ-ಲಿಂಗಗಳನ್ನು ನೋಡಿ ಅಲ್ಲ. ಅವನೇನು ಶೂದ್ರ, ಅವನೇನು ಪುಳಿಚಾರು ಎಂದು ಯಾರನ್ನೂ ಕಡೆಗಣಿಸದೆ ಅವರ ವಿದ್ಯೆ ಮೊದಲಾದವನ್ನು ನೋಡಿಯೇ ಗೌರವ ನೀಡುವ ಪದ್ಧತಿಯನ್ನು ಘಂಟಾಘೋಷವಾಗಿ ಸಾರಿದೆ ನಮ್ಮ ಸನಾತನ ಸಂಸ್ಕೃತಿ. ಹಾಗಾಗಿಯೇ ಕೌಶಿಕನು ಬ್ರಾಹ್ಮಣನಾದರೂ ಧರ್ಮವ್ಯಾಧನಂತಹ ಯೋಗ್ಯನನ್ನು  ಗೌರವಿಸಿದ್ದು. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೧೫

ಧರ್ಮಾಚರಣೆ-೧೧೫ ಅತಿಥಿಂ ಶ್ರೋತ್ರಿಯಂ ತೃಪ್ತಮಾಸೀಮಾಂತಮನುವ್ರಜೇತ್ | ಅಹಃಶೇಷಂ ಸಮಾಸೀತ ಶಿಷ್ಟೈರಿಷ್ಟೈಶ್ಚ ಬಂಧುಭಿಃ ||  ಮನೆಗೆ ಇಂದು ಬರುವನೆಂದು ಹೇಳದೇ ಆಕಸ್ಮಿಕವಾಗಿ ಬರುವವರು ಅತಿಥಿ. ಅಂತಹ ಅತಿಥಿಯನ್ನು ಭೋಜನಾದಿಗಳಿಂದ ತೃಪ್ತಿಪಡಿಸಿ ಸೀಮೆಯ ಕೊನೆ ತನಕ ಬಿಟ್ಟುಬರಬೇಕು. ಮನೆಗೆ ಬಂದ ಅತಿಥಿಯ ಯೋಗ್ಯತೆಗನುಸಾರ ಮನೆಯ ಗಡಿ, ಗ್ರಾಮದ ಗಡಿ, ಊರಿನ ಗಡಿಯವರೆಗೆ ಬಿಟ್ಟು ಬರುವುದು ಕೇವಲ ಸಂಪ್ರದಾಯವಾಗಿರದೇ ಧರ್ಮಶಾಸ್ತ್ರಕ್ಕನುಸಾರವಾದ ಕರ್ಮವಾಗಿದೆ. ನಮ್ಮ ಸನಾತನ ಸಂಸ್ಕೃತಿಯಲ್ಲಿ ಸ್ವಲ್ಪ ದೂರದ ತನಕ ಹೋಗಿ ಕಳುಹಿಸಿಕೊಡುವುದಿದೆ. ಜೈನರಲ್ಲಿ ಯತಿಗಳನ್ನು ಊರಿನ ಹೊರಭಾಗದ ತನಕ ಬಿಟ್ಟು ಬರುವುದಿದೆ. ಮನೆಗೆ ಬಂದ ಅತಿಥಿಯು ಸಾಕ್ಷಾತ್ ದೇವರೆಂದೇ ಭಾವಿಸಿ ಬೀಳ್ಕೊಡುವುದು ಅತ್ಯಂತ ಯೋಗ್ಯ ಪದ್ಧತಿ. ಅನಂತರ ಸಜ್ಜನರು-ಮಿತ್ರರು-ಬಂಧುಗಳೊಡನೆ ಭಗವಚ್ಚಿಂತನೆಯಲ್ಲಿ ಕಳೆಯಬೇಕು. ಅತಿಥಿ ಹೋದ ತಕ್ಷಣ ನಿದ್ರಿಸುವುದೋ, ನಿಂದಿಸುವುದೋ, ನಿಷಿದ್ಧ ಕಾರ್ಯ ಎಸಗುವುದೋ ಎಂದಿಗೂ ಸಲ್ಲದು.   ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೧೪

ಧರ್ಮಾಚರಣೆ-೧೧೪ ಅಧ್ವನೀನೋತಿಥಿರ್ಜ್ಞೇಯಃ ಶ್ರೋತ್ರಿಯೋ ವೇದಪಾರಗಃ | ಮಾನ್ಯಾವೇತೌ ಗೃಹಸ್ಥಸ್ಯ ಬ್ರಹ್ಮಲೋಕಮಭೀಪ್ಸತಃ || ಯಾಜ್ಞವಲ್ಕ್ಯ ಸ್ಮೃತಿ|| ದಾರಹೋಕರು ಯಾರೇ ಇರಲಿ ಅವರ ಬಳಲಿಕೆಯನ್ನು ನೀಗಿಸಲು ಗೃಹಸ್ಥನು ಪ್ರಯತ್ನಿಸಬೇಕು. ವೇದ-ಶಾಸ್ತ್ರ ಎರಡನ್ನೂ ಕಲಿತ ಶ್ರೋತ್ರಿಯನು ಮನೆಗೆ ಬಂದರೆ ಚ್ಯುತಿ ಬರದಂತೆ ಯಥಾವತ್ತಾಗಿ ಸತ್ಕರಿಸಬೇಕು. ತನ್ನ ಶಾಖೆಯ ವೇದ ಅಧ್ಯಯನ ಮಾಡಿದ ವೇದಪಾರಗನು ಮನೆಗೆ ಬಂದರೂ ಸತ್ಕರಿಸಬೇಕು. ಬ್ರಹ್ಮಲೋಕ ಬಯಸುವ ಅಥವಾ ಬ್ರಹ್ಮ ಚಿಂತನೆಯಲ್ಲಿ ತೊಡಗುವ ಗೃಹಸ್ಥನು ಈ ಮೂವರನ್ನು ತಪ್ಪದೆ ಆದರಿಸಬೇಕು. ಇವರು ಸತ್ಕಾರ ಪಡೆಯಲು ಅಥವಾ ಉಪಚರಿಸಲು ಅತ್ಯಂತ ಯೋಗ್ಯರು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೧೩

ಧರ್ಮಾಚರಣೆ-೧೧೩ ಪರಪಾಕರುಚಿರ್ನಸ್ಯಾದನಿಂದ್ಯಾಮಂತ್ರಣಾದೃತೇ | ವಾಕ್ಪಾಣಿಪಾದಚಾಪಲ್ಯಂ ವರ್ಜಯೇಚ್ಚಾತಿಭೋಜನಮ್ || ಯಾಜ್ಞವಲ್ಕ್ಯ ಸ್ಮೃತಿ||  ಇನ್ನೊಬ್ಬರ ಮನೆಯಲ್ಲಿ ಅಥವಾ ಕಾರ್ಯಕ್ರಮದಲ್ಲಿ ಭೋಜನ ಮಾಡುವುದಕ್ಕೆ ಭಕ್ಷ್ಯಗಳಿಗಾಗಿ ಆಸೆಪಡಬಾರದು. ಆದರೆ ಅನಿಂದ್ಯನ ಅಂದರೆ ಸದಾಚಾರ-ಸದ್ವಿಚಾರಗಳಿಂದ ಕೂಡಿದವನ ಆಮಂತ್ರಣ ಬಂದರೆ ಸ್ವೀಕರಿಸಬೇಕು. ಊಟದ  ಸಮಯದಲ್ಲಿ ಮಾತಿನ ಚಾಪಲ್ಯ ಅಂದರೆ ಅಸತ್ಯ ಹಾಗೂ ಅಸಭ್ಯ ಭಾಷಣ ಇವುಗಳನ್ನು ತ್ಯಜಿಸಬೇಕು. ಹಸ್ತಚಾಪಲ್ಯ ಅಂದರೆ ಕೈ ತೋರಿಸುವುದು, ಹೊಡೆಯುವುದು, ಮಂಡಿಗಳ ಮೇಲೆ ಹೊಡೆಯುವುದು ಮೊದಲಾದವನ್ನು ಬಿಡಬೇಕು. ಪಾದಚಾಪಲ್ಯ ಅಂದರೆ ಕಾಲು ಕುಣಿಸುವುದು, ಹಿರಿಯರ ಎದುರು ಚಾಚುವುದು, ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು ಇತ್ಯಾದಿ ತ್ಯಜಿಸಬೇಕು. ಕಷ್ಟವಾದರೂ ಒಂದೊಂದಾಗಿ ರೂಢಿಸಿಕೊಂಡರೆ ಶ್ರೇಯಸ್ಸಂಪಾದನೆ ಉಂಟಾಗುತ್ತದೆ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೧೨

ಧರ್ಮಾಚರಣೆ-೧೧೨ ಅತಿಥಿತ್ವೇ ತು ವರ್ಣಾನಾಂ ದೇಯಂ ಶಕ್ತ್ಯಾನುಪೂರ್ವಶಃ | ಅಪ್ರಣೋಡ್ಯೋತಿಥಿಃ ಸಾಯಮಪಿ ವಾಕ್ಸೂನೃತೋದಕೈಃ || ಯಾಜ್ಞವಲ್ಕ್ಯ ಸ್ಮೃತಿ|| ಮನೆಗೆ ಯಾವುದೇ ವರ್ಣದ ಅತಿಥಿ ಬಂದರೂ ಅವರರವರ ಕ್ರಮಕ್ಕನುಸಾರವಾಗಿ ಆದರಿಸಬೇಕು. ಅನ್ನಾದಿಗಳನ್ನು ನೀಡಬೇಕು. ನಮ್ಮ ಸನಾತನ ಪರಂಪರೆಯ ಉದಾರತೆಯನ್ನು ಇಲ್ಲಿ ಗಮನಿಸಬಹುದು. ಯಾವ ಜಾತಿ, ಮತ ಇದ್ದರೂ ಅದನ್ನು ನೋಡದೇ ಅತಿಥಿಯನ್ನು ದೇವರಂತೆ ಕಂಡು ಅವರ ಪದ್ಧತಿಗನುಸಾರ ಉಪಚರಿಸಬೇಕು. ಸಾಯಂಕಾಲ ಉಳಿಯಲು ಬಂದರೂ ಅವರಿಗೂ ಅನ್ನ ನೀಡಬೇಕು. ಒಂದು ವೇಳೆ ಉಪಚರಿಸಲು ಸಾಕಷ್ಟು ದ್ರವ್ಯ ಇಲ್ಲದಿದ್ದರೆ ಅಂತಹ ಸಮಯದಲ್ಲಿ ಸತ್ಯವೂ ಪ್ರಿಯವೂ ಆದ ಮಾತು, ಕುಳಿತುಕೊಳ್ಳಲು ಸ್ಥಳ, ನೀರು ಇಷ್ಟು ನೀಡಿಯಾದರೂ ಅತಿಥಿಯ ಪೂಜೆ ಮಾಡಬೇಕು. ಮನೆಗೆ ಬಂದವನನ್ನು ಖಾಲಿ ಕೈಯಲ್ಲಿ ಎಂದಿಗೂ ಕಳಿಸಬಾರದು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com  

ಧರ್ಮಾಚರಣೆ ೧೧೧

ಧರ್ಮಾಚರಣೆ-೧೧೧ ಆಪೋಶನೇನೋಪರಿಷ್ಟಾದಧಸ್ತಾದಶ್ನತಾ ತಥಾ | ಅನಗ್ನಮಮೃತಂ ಚೈವ ಕಾರ್ಯಮನ್ನಂ ದ್ವಿಜನ್ಮನಾ || ಯಾಜ್ಞವಲ್ಕ್ಯ ಸ್ಮೃತಿ|| ಭೋಜನದ ಪ್ರಾರಂಭದಲ್ಲಿ ಹಾಗೂ ಕೊನೆಯಲ್ಲಿ ಅಮೃತದ ಬಾಗಿಲನ್ನು ತೆರೆಯುತ್ತೇನೆ ಹಾಗೂ ಮುಚ್ಚುತ್ತೇನೆಂದು ಆಪೋಶನ ತೆಗೆದುಕೊಳ್ಳಬೇಕು. ಮೊದಲು ತೆಗೆದುಕೊಳ್ಳುವ ನೀರು ಅನ್ನವನ್ನು ಅನಗ್ನ ಅಂದರೆ ಸಂಸ್ಕಾರರಹಿತ ದೋಷವನ್ನು ನಿವಾರಿಸಿ, ಅನಂತರ ತೆಗೆದುಕೊಳ್ಳುವ ನೀರು ಅನ್ನವನ್ನು ಅಮೃತಸಮ ಮಾಡುತ್ತದೆ. ಹಾಗಾಗಿ ಉಪನೀತನಾದ ಪ್ರತಿಯೊಬ್ಬರೂ ಉಣ್ಣುವ ಮೊದಲು ಹಾಗೂ ನಂತರ ಎಲ್ಲಿದ್ದರೂ ಈ ನಿಯಮ ಪಾಲಿಸುವುದು ಆರೋಗ್ಯದ ಹಾಗೂ ಧರ್ಮದ ಆಚರಣೆಯ ದೃಷ್ಟಿಯಿಂದ ಉತ್ತಮ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೧೦

ಧರ್ಮಾಚರಣೆ-೧೧೦ ಬಾಲಸ್ವವಾಸಿನೀ ವೃದ್ಧ ಗರ್ಭಿಣ್ಯಾತುರ ಕನ್ಯಕಾಃ | ಸುಭೋಜ್ಯಾತಿಥಿ ಭೃತ್ಯಾಂಶ್ಚ ದಂಪತ್ಯೋಃ ಶೇಷಭೋಜನಮ್ || ಯಾಜ್ಞವಲ್ಕ್ಯ ಸ್ಮೃತಿ||  ಮನೆಯಲ್ಲಿ ಮೊದಲು ಸಣ್ಣ ಮಕ್ಕಳಿಗೆ ಅನಂತರ ಕನ್ಯೆ ವಿವಾಹಾನಂತರ ತಂದೆ ಮನೆಯಲ್ಲೇ ಉಳಿದಿದ್ದರೆ ಅವಳಿಗೆ, ಹಿರಿಯರಿಗೆ, ಗರ್ಭಿಣಿಯರಿಗೆ, ರೋಗಪೀಡಿತರಿಗೆ, ಸಣ್ಣ ಕುಮಾರಿಯರಿಗೆ, ಅತಿಥಿ ಬರುವನೆಂದು ಕ್ಷಣಕಾಲ ಕಾದು ಬಂದರೆ ಅವರಿಗೆ, ಸೇವಕರಿಗೆ ಉಣಬಡಿಸಿ ನಂತರ ಉಳಿದರೆ ಎಲ್ಲರ ತೃಪ್ತಿಯ ನಂತರ ತನ್ನ ಹಾಗೂ ಮಡದಿಯ ಹಸಿವನ್ನು ನೀಗಿಸಿಕೊಳ್ಳಬೇಕು. ಪುರಾಣದ, ಮಹಾಮಹಿಮರ ಅನೇಕ ದೃಷ್ಟಾಂತಗಳನ್ನು ನೋಡಿದಾಗ ಇದರ ಅರಿವಾಗುತ್ತದೆ. ಮೊದಲು ಜಗಕೆ ಉಣಿಸಿ ಅನಂತರ ತಾನುಣ್ಣುವುದು‌. ನಿತ್ಯವೂ ಈ ಕ್ರಮ ಅವಶ್ಯ ಮಾಡಬೇಕಾದುದು. ವಿಶೇಷ ಸಂದರ್ಭಗಳಲ್ಲಿ ವಿಹಿತವಾದುದು. ತನಗೆಂದು ಸವಿತಿನಿಸು ತೆಗೆದಿಟ್ಟು ಉಳಿದವರಿಗೆ ಸಾಮಾನ್ಯ ಅಡುಗೆಯ ವಿತರಣೆಯೂ ಸಲ್ಲದು. ಎಲ್ಲರೊಳಗೊಂದಾಗಿ ಎಲ್ಲರಲ್ಲೂ ಭಗವಂತನನ್ನು ಕಂಡವನೇ ಪಂಡಿತನೆನಿಸುವನು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೦೯

ಧರ್ಮಾಚರಣೆ=೧೦೯ ದೇವೇಭ್ಯಶ್ಚ ಹುತಾದನ್ನಾಚ್ಛೇಷಾದ್ಭೂತಬಲಿಂ ಹರೇತ್ | ಅನ್ನಂ ಭೂಮೌ ಶ್ವಚಾಂಡಾಲವಾಯಸೇಭ್ಯಶ್ಚ ನಿಕ್ಷಿಪೇತ್ || ಯಾಜ್ಞವಲ್ಕ್ಯ ಸ್ಮೃತಿ||  ಎರಡೂ ಹೊತ್ತು ಅಶಕ್ತನಾದರೆ ಗೃಹಸ್ಥನು ಒಂದು ಹೊತ್ತಾದರೂ  ವೈಶ್ವದೇವ ಮಾಡಬೇಕು. ಯಾವ ಬೆಂಕಿಯಲ್ಲಿ ಅನ್ನವನ್ನು ಬೇಯಿಸುವೆವೋ ಅದೇ ಅಗ್ನಿಯಲ್ಲಿ ವೈಶ್ವದೇವ ಮಾಡಬೇಕು. ಒಲೆ ಅಥವಾ ಅಗ್ಗಿಷ್ಟಿಕೆಯಲ್ಲಿ ಅನ್ನ ಮಾಡಿದರೆ ಮಾತ್ರ ಇದು ಆಗುವಂತಹದು. ವೈಶ್ವದೇವಕ್ಕೆಂದು ತೆಗೆದು ಅನಂತರ ಅನ್ನವನ್ನು ಮತ್ತೆ ಮೂರು ಪಾಲು ಮಾಡಿ ಒಂದು  ಪಾಲು ಭೂತಗಳಿಗೆ ಬಲಿಯೆಂದೂ, ಎರಡನೇ ಪಾಲನ್ನು ಶ್ವಾನ ಮೊದಲಾದವುಗಳಿಗೆ ಬಲಿಯೆಂದೂ, ಮತ್ತೊಂದು ಪಾಲನ್ನೂ ಪಿತೃಪ್ರೀತ್ಯರ್ಥ ನೀಡಿ ಅತಿಥಿ ಬರುವರೆಂದು ಕ್ಷಣಕಾಲ ಕಾದು ಅನಂತರ ಭುಂಜಿಸಬೇಕು. ಹೀಗೆ ಮಾಡಿದರೆ ಅದೇ ಯಜ್ಞವಾಗುವುದು. ಅಶ್ವಮೇಧಾದಿ ಮಹಾಯಜ್ಞಗಳ ಫಲವನ್ನೂ ಕೊಡುತ್ತದೆ. ವರ್ಷಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ನಮ್ಮ ಜಿಹ್ವಾಚಾಪಲ್ಯ ತೀರಿಸುವಂತೆ ಇವುಗಳನ್ನೂ ಮಾಡುವುದು ಶ್ರೇಯಸ್ಕರ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೦೮

ಧರ್ಮಾಚರಣೆ-೧೦೮ ಬಲಿಕರ್ಮಸ್ವಧಾಹೋಮ ಸ್ವಾಧ್ಯಾಯಾತಿಥಿಸತ್ಕ್ರಿಯಾಃ | ಭೂತಪಿತೃಮರಬ್ರಹ್ಮಮನುಷ್ಯಾಣಾಂ ಮಹಾಮಖಾಃ || ಯಾಜ್ಞವಲ್ಕ್ಯ ಸ್ಮೃತಿ||  ಯಜುರ್ವೇದದ ಆರಣ್ಯಕದಲ್ಲಿ ಹೇಳಿದಂತೆ ಗೃಹಸ್ಥನು ದಿನವೂ ಭೂತಯಜ್ಞ= ಬಲಿದಾನ, ಪಿತೃಯಜ್ಞ= ಷಣ್ಣವತಿ ಶ್ರಾದ್ಧ ಹಾಗೂ ನಿತ್ಯತರ್ಪಣಾದಿಗಳು, ದೇವಯಜ್ಞ= ಔಪಾಸನೆ, ಅಗ್ನಿಹೋತ್ರ, ವೈಶ್ವದೇವ ರೂಪದ ನಿತ್ಯಾಗ್ನಿ ಅರ್ಚನೆ, ಬ್ರಹ್ಮಯಜ್ಞ= ನಾವು ಓದಿದ್ದನ್ನು ಮರೆಯದಿರುವಂತೆ ಅಭ್ಯಾಸ ಹಾಗೂ ಹೊಸ ಓದಿನಿಂದ ಜ್ಞಾನ ಸಂಪಾದನೆ, ಮನುಷ್ಯಯಜ್ಞ = ಆಹಾರ ಸ್ವೀಕರಿಸುವ ಮುನ್ನ ಹಸಿದವರಿಗೆ ಉಣಬಡಿಸುವುದು ಅಥವಾ ಹಸಿದವನನ್ನು ಕಂಡಾಗ ಆಹಾರ ನೀಡುವುದು ಇವುಗಳನ್ನು ಅವಶ್ಯವಾಗಿ ಮಾಡಬೇಕು. ಇವುಗಳನ್ನು ಆಚರಿಸಿದಾಗ ನಿತ್ಯದ ಪಂಚಪಾಪಗಳಿಂದ ಬಿಡುಗಡೆ ಹೊಂದುವನು. ಇದು ಮಾಡದೇ ವರ್ಷಕ್ಕೊಮ್ಮೆ ಅಥವಾ ಎರಡು ಬಾರಿ ಅಥವಾ ಕ್ಷೇತ್ರಗಳಲ್ಲಿ ಲಕ್ಷಗಟ್ಟಲೆ ಧನವ್ಯಯ ಮಾಡಿ ವಿಜೃಂಭಣೆಯ ಹೋಮ- ಹವನ ಮಾಡಿದರೆಷ್ಟು, ಬಿಟ್ಟರೆಷ್ಟು. ಅವೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತೆ ಆಗುವುದು. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೦೭

ಧರ್ಮಾಚರಣೆ-೧೦೭ ಹುತ್ವಾಗ್ನೀನ್ಸೂರ್ಯದೈವತ್ಯಾನ್ ಜಪೇನ್ಮಂತ್ರಾನ್ಸಮಾಹಿತಃ | ವೇದಾರ್ಥಾನಧಿಗಚ್ಛೇಚ್ಚ ಶಾಸ್ತ್ರಾಣಿ ವಿವಿಧಾನಿ ಚ || ಯಾಜ್ಞವಲ್ಕ್ಯ ಸ್ಮೃತಿ||  ವಿಪ್ರನು ದಿನವೂ ಸಂಧ್ಯಾದಿಗಳನ್ನು ಮುಗಿಸಿ ಆಹವನೀಯ ಅಥವಾ ಸ್ಮಾರ್ತ ಅಗ್ನಿಯಲ್ಲಿ ಆಹುತಿ ನೀಡಬೇಕು. ಅನಂತರ ಸೂರ್ಯಸಂಬಂಧಿ ಉದುತ್ಯಂ, ಉದ್ವಯಂ, ಗಾಯತ್ರೀ ಮೊದಲಾದ ಮಂತ್ರಗಳನ್ನು ಪಠಿಸಬೇಕು‌- ಜಪಿಸಬೇಕು. ಅನಂತರ ಶಾಸ್ತ್ರಗಳನ್ನು ಓದುತ್ತಾ ವೇದಾರ್ಥವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಹಾಗೆ ಮಾಡದೆ ಸುಮ್ಮನೆ ಪಠಿಸಿದರೆ ಭಾರಹೊತ್ತ ಎತ್ತಿನ ಸ್ಥಿತಿ ಅಂತಹ ವಿಪ್ರನದಾಗುತ್ತದೆ. ಅರ್ಥ ಅರಿತು ಮಾಡುವ ಕ್ರಿಯೆಯು ಸಫಲವೂ- ಪರಿಣಾಮಕಾರಿಯೂ ಆಗುವುದು. ಇಲ್ಲದಿದ್ದರೆ ಯಂತ್ರವು ಏನು ಮಾಡುವುದೆಂದು ಗೊತ್ತಿಲ್ಲದಿದ್ದರೂ ಸುಮ್ಮನೆ ಗುಂಡಿ ಒತ್ತಲು ಕುಳಿತವನ ಪರಿಸ್ಥಿತಿ ಬರುತ್ತದೆ. ವಿಪ್ರನೆಂದು ಕರೆಸಿಕೊಳ್ಳುವಲ್ಲಿ ಅಗ್ನಿ-ಸೂರ್ಯರ ಆರಾಧನೆ ಮಹತ್ವದ್ದಾಗಿದೆ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೦೬

ಧರ್ಮಾಚರಣೆ-೧೦೬ ಜಾತ್ಯುತ್ಕರ್ಷೋ ಯುಗೇ ಜ್ಞೇಯಃ ಪಂಚಮೇ ಸಪ್ತಮೇ ಪಿ ವಾ | ವ್ಯತ್ಯಯೇ ಕರ್ಮಣಾಂ ಸಾಮ್ಯಂ ಪೂರ್ವವಚ್ಚಾಧರೋತ್ತರಮ್ || ಯಾಜ್ಞವಲ್ಕ್ಯ ಸ್ಮೃತಿ|| ಸನಾತನ ಧರ್ಮದಲ್ಲಿ ಹಿಂದೆಯೂ ವರ್ಣಗಳ ವ್ಯತ್ಯಾಸದ ಕಾರಣದಿಂದ ಬೇರೆ ಬೇರೆ ಜಾತಿಗಳು ಉಂಟಾಗುತ್ತಿದ್ದವು. ಅಂತಹ ಜಾತಿಯ ಎಲ್ಲರಿಗೂ ಉಚ್ಚ ಜಾತಿಯನ್ನು ಪಡೆಯಲೂ ಅವಕಾಶ ಇತ್ತು. ಸಾಂಕರ್ಯದಿಂದ ಹುಟ್ಟಿದ ಮಗುವನ್ನು ಉಚ್ಚ ವರ್ಣದ  ಪುರುಷರು ಏಳು ತಲೆಗಳ ತನಕ,ಅಥವಾ ಐದು ತಲೆಗಳ ತನಕ, ಅಥವಾ ಆರು ತಲೆಗಳ ತನಕ  ವರಿಸಿದರೆ ಅವರೂ ಅದೇ ವರ್ಣದವರಾಗುತ್ತಿದ್ದರು.ಒಂದು ವೇಳೆ ಬೇರೆ ಸಂಸ್ಕಾರ ಪಡೆದಿದ್ದರೂ ಕಾಲಾನುಕ್ರಮದಲ್ಲಿ ಅದೇ ವರ್ಣದ ಸಂಸ್ಕಾರ ನೆಲೆನಿಂತು ವ್ಯವಹಾರಕ್ಕೆ ಸುಲಭವಾಗುತ್ತಿತ್ತು. ವೃತ್ತಿಯಲ್ಲೂ ಇದೇ ನೀತಿ ಅನ್ವಯ. ಜೀವನ ಸಾಗದಿದ್ದಾಗ ಯಾವ ವೃತ್ತಿ ಆಶ್ರಯಿಸಿದರೂ ದೋಷವಿಲ್ಲ. ಸುಖವಾಗಿದ್ದಾಗಲೂ   ಮುಂದುವರಿಸಿದರೆ ಆಯಾ ವರ್ಣಕ್ಕೆ ಕ್ರಮವಾಗಿ ಏಳು-ಆರು-ಐದು ತಲೆಯ ನಂತರ ಪರಿವರ್ತನೆ ಹೊಂದುವರು. ಹೀಗೆ ವ್ಯತ್ಯಾಸ ಎನ್ನುವುದು ನಾಲ್ಕು ವರ್ಣದವರಿಗೂ ಸರ್ವಸಾಮಾನ್ಯ ಸಂಗತಿ ಆಗಿತ್ತು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೦೫

ಧರ್ಮಾಚರಣೆ-೧೦೫ ಯಥಾಕಾಮೀ ಭವೇದ್ವಾಪಿ ಸ್ತ್ರೀಣಾಂ ವರಮನುಸ್ಮರನ್ | ಸ್ವದಾರನಿರತಶ್ಚೈವ ಸ್ತ್ರಿಯೋ ರಕ್ಷ್ಯಾ ಯತಃ ಸ್ಮೃತಾಃ || ಯಾಜ್ಞವಲ್ಕ್ಯ ಸ್ಮೃತಿ||  ಸ್ತ್ರೀಯರ‌ ಕಾಮನೆಯನ್ನು ಹಾಳು ಮಾಡುವವನು ಪಾತಕಿಯಾಗುವನು ಎಂದು ಇಂದ್ರನ ವರವಿದೆ‌. ಹಾಗಾಗಿ ಗೃಹಸ್ಥನು ಋತುಕಾಲದಲ್ಲಿ ( ೬-೮-೧೦-೧೨-೧೪-೧೬)  ಅಷ್ಟಮಿ-ಹುಣ್ಣಿಮೆ-ಅಮಾವಾಸ್ಯೆ- ಚತುರ್ದಶಿ, ಮಖಾ-ಮೂಲಾ ನಕ್ಷತ್ರ ಮೊದಲಾದ ನಿಷಿದ್ಧ ಕಾಲಗಳನ್ನು ಬಿಟ್ಟು ಸ್ತ್ರೀಯರ ಬಯಕೆಯನ್ನು ತಣಿಸಬೇಕು‌. ಹಾಗೆ ಮಾಡದೆ ಬ್ರಹ್ಮಚರ್ಯ ಆಚರಿಸಿಯೂ ಪಾತಕಿಯಾಗುವನು‌‌. ತನಗೆ ಅಗತ್ಯವಾದ ವಿಷಯಗಳಿಗೆ ಮಾತ್ರ ಸ್ತ್ರೀಯರ ಬಳಕೆ ಸಲ್ಲದು, ಅವರ ಅಗತ್ಯಗಳಿಗೂ ಸ್ಪಂದಿಸುವವನು ಪುಣ್ಯ ಸಂಪಾದಿಸುವನು ಎನ್ನುತ್ತದೆ ಸ್ಮೃತಿ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೦೪

ಧರ್ಮಾಚರಣೆ -೧೦೪ ಲೋಕಾನಂತಜನ್ಯ ದಿವಃ ಪ್ರಾಪ್ತಿಃ ಪುತ್ರಪೌತ್ರಪ್ರಪೌತ್ರಕೈಃ | ಯಸ್ಮಾತ್ತಸ್ಮಾತ್ ಸ್ತ್ರಿಯಃ ಸೇವ್ಯಾಃ ಕರ್ತವ್ಯಾಶ್ಚ ಸಂರಕ್ಷಿತಾಃ || ಯಾಜ್ಞವಲ್ಕ್ಯ ಸ್ಮೃತಿ || ಸತ್ಸಂತಾನದ ಯೋಗ ಹಾಗೂ ಅಗ್ನಿರಕ್ಷಣೆಯ ಯೋಗದಿಂದ ಪುಣ್ಯಲೋಕಗಳ ಪ್ರಾಪ್ತಿ ಮರಣಾನಂತರ ಉಂಟಾಗುವುದು. ಇವೆರಡೂ ಸ್ತ್ರೀಯನ್ನು ಅವಲಂಬಿಸಿವೆ. ಸಂತತಿಗಾಗಿ ವಿವಾಹ ಅನಂತರ ಅಗ್ನ್ಯಾರಾಧನೆ.  ಇವೆರಡು ಕಾರಣಗಳಿಂದ ಸ್ತ್ರೀಯ ಉಪಭೋಗ ಹಾಗೂ ರಕ್ಷಣೆ ಎರಡನ್ನೂ ಜಾಗರೂಕತೆಯಿಂದ ನಡೆಸಬೇಕು. ಧರ್ಮಕಾರ್ಯಗಳಲ್ಲಿ ಸಹಭಾಗಿತ್ವಕ್ಕೆ ರಕ್ಷಣೆ ಮಾಡಬೇಕಾದುದು ಪತಿಯ ಕರ್ತವ್ಯ. ಸನಾತನ ಧರ್ಮ ಕೇವಲ ಭೋಗಕ್ಕಾಗಿ ವಿವಾಹವನ್ನು ಅಥವಾ ಹೆಣ್ಣನ್ನು ವಿನಿಯೋಗಿಸಿಲ್ಲ. ಇದನ್ನು ಮೀರಿದ ಧಾರ್ಮಿಕ ಸಹಭಾಗಿತ್ವವು ಅವಶ್ಯವಾಗಿ ಹೇಳಲ್ಪಟ್ಟಿದೆ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೦೩

ಧರ್ಮಾಚರಣೆ- ೧೦೩ ಸೋಮಃ ಶೌಚಂ ದದೌ ಸ್ತ್ರೀಣಾಂ ಗಂಧರ್ವಶ್ಚ ಶುಭಾಂ ಗಿರಮ್ | ಪಾವಕಃ ಸರ್ವಮೇಧ್ಯತ್ವಂ ಮೇಧ್ಯಾ ವೈ ಯೋಷಿತೋ ಹ್ಯತಃ || ಯಾಜ್ಞವಲ್ಕ್ಯ ಸ್ಮೃತಿ|| ಸ್ತ್ರೀಯರಿಗೆ ಸೋಮನು ವಿವಾಹ ಪೂರ್ವದಲ್ಲಿ ಶುಚಿತ್ವ ನೀಡುವನು. ಗಂಧರ್ವರು ಮಾತಿನಲ್ಲಿ ಮಾಧುರ್ಯವನ್ನು ನೀಡುವನು. ಅಗ್ನಿಯು ಪಾವಿತ್ರ್ಯವನ್ನು ನೀಡುತ್ತಾನೆ. ಋತುಕಾಲದಲ್ಲಿ ಮಾತ್ರ ಇವರಿಂದಲೇ ದೋಷ ಬರುತ್ತದೆ. ಹಾಗಾಗಿ ಸ್ತ್ರೀಯರು ಸ್ಪರ್ಶ- ಭಾಷಣ- ಆಲಿಂಗನ ಮೊದಲಾದ ಪ್ರಸಂಗಗಳಲ್ಲಿ ಸದಾ ಶುಚಿಗಳಾಗಿರುತ್ತಾರೆ. ಕೆಲವು ಧರ್ಮಗಳಲ್ಲಿ ಕೆಲವು ದೇಶಗಳಲ್ಲಿ ಸ್ತ್ರೀಯರ ಪಾವಿತ್ರ್ಯ ಪರೀಕ್ಷಿಸಿ ಮದುವೆ ಮಾಡುವ ಕೆಟ್ಟ ಪದ್ಧತಿ ಇದೆ. ನಮ್ಮ ಸನಾತನ ಧರ್ಮದಲ್ಲಿ ವಿವಾಹ ಪೂರ್ವದಲ್ಲಿ ಅವರು ಸದಾಶುಚಿ. ಹಾಗಾಗಿ ಅಂತಹ ಅನಾಗರಿಕತೆಯ ಆಚರಣೆಗಳಿಗೆ ಆಸ್ಪದವಿಲ್ಲ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೦೨

ಧರ್ಮಾಚರಣೆ-೧೦೨ ಪಿತಾ ಪಿತಾಮಹೋ ಭ್ರಾತಾ ಸಕುಲ್ಯೋ ಜನನೀ ತಥಾ | ಕನ್ಯಾಪ್ರದಃ ಪೂರ್ವನಾಶೇ ಪ್ರಕೃತಿಸ್ಥಃ ಪರಃ ಪರಃ || ಯಾಜ್ಞವಲ್ಕ್ಯ ಸ್ಮೃತಿ||  ಕನ್ಯಾದಾನ ಮಾಡಲು ಕ್ರಮವಾಗಿ ತಂದೆ- ಅಜ್ಜ-ಅಣ್ಣ ತಮ್ಮ-ದೊಡ್ಡಪ್ಪ ಚಿಕ್ಕಪ್ಪ ಮೊದಲಾದ ತಂದೆಯ ಕುಲದವರು-ತಾಯಿ ಇಷ್ಟುಜನರಿಗೆ ಮಾಡಲು ಶಾಸ್ತ್ರೀಯ ಅನುಮತಿ ಇದೆ. ಇವರಲ್ಲಿ ಮೊದಲಿನವರು ಇಲ್ಲದಿದ್ದಾಗ ಮುಂದಿನವರು ಹೀಗೆ ಯಾರಾದರೂ ಕನ್ಯಾದಾನ ಮಾಡಬಹುದು. ನಮ್ಮ ಸಂಸ್ಕೃತಿಯಲ್ಲಿ ಸ್ತ್ರೀಗೂ ಕನ್ಯಾದಾನ ಮಾಡಲು ಅಧಿಕಾರ ಕೊಟ್ಟಿರುವುದು ಸ್ತ್ರೀ ಸ್ವಾತಂತ್ರ್ಯದ ಉತ್ತಮ ನಿದರ್ಶನ. ಸಕೃತ್ಪ್ರದೀಯತೇ ಕನ್ಯಾ ಎಂಬಂತೆ ಒಮ್ಮೆ ಮಾತ್ರ ಕನ್ಯೆಯನ್ನು ದಾನ ಮಾಡುವುದು. ಒಂದು ವೇಳೆ ಪುನರ್ವಿವಾಹ ಮೊದಲಾದ ಸಂದರ್ಭ ಒದಗಿದರೆ ಆಗ ಲೋಕರೂಢಿಯೆಂದು ಮಾಂಗಲ್ಯ ಮಾತ್ರ ಸಾಕು. ಬೇರೆ ಯಾವ ರೂಢಿಯೂ ಶಾಸ್ತ್ರ ಸಮ್ಮತವಲ್ಲ. ಒಂದು ವೇಳೆ ಇವರಾರೂ ಲಭ್ಯವಿಲ್ಲದಿದ್ದಾಗ ಕನ್ಯೆ ಸ್ವತಃ ಸ್ವಯಂವರ ಮಾಡಿಕೊಳ್ಳಲು ಧರ್ಮಶಾಸ್ತ್ರ ಅನುಮತಿ ಕೊಟ್ಟಿದೆ. ಇದೇ ಸಮಾನತೆಗೆ ನಿದರ್ಶನ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೦೧

ಧರ್ಮಾಚರಣೆ-೧೦೧ ಇತ್ಯುಕ್ತ್ವಾ ಚರತಾಂ ಧರ್ಮ ಸಹ ಯಾ ದೀಯತೇರ್ಥಿನೇ | ಸ ಕಾಯಃ ಪಾವಯೇತ್ತಜ್ಜಃ ಷಟ್ ಷಟ್ ವಂಶಾನ್ಸಹಾತ್ಮನಾ || ಆಸುರೋ ದ್ರವಿಣಾದಾನಾದ್ಗಂಧರ್ವಃ ಸಮಯನ್ಮಿಥಃ ||ಯಾಜ್ಞವಲ್ಕ್ಯ ಸ್ಮೃತಿ|| ಇಬ್ಬರೂ ಪರಸ್ಪರ ಪ್ರೀತಿಸಿದಾಗ ಕನ್ಯೆಯನ್ನು ವರನಿಗೆ ನೀಡಿ ಇನ್ನು ಮುಂದೆ ಇಬ್ಬರೂ ಧರ್ಮಗಳಲ್ಲಿ ಸಹಭಾಗಿಗಳಾಗಿ ಎಂದು ವಿವಾಹ  ಮಾಡಿಕೊಡುವುದು ಪ್ರಾಜಾಪತ್ಯ. ಈ ವಿವಾಹದ ಫಲವು ಹದಿನಾರು ವ್ಯಕ್ತಿಗಳನ್ನು ಉದ್ಧರಿಸುವುದು. ಬ್ರಾಹ್ಮ ಇಪ್ಪತ್ತೊಂದಾದರೆ ಇಲ್ಲಿ ಹದಿನಾರು. ಈಗಿನ ಪ್ರೇಮವಿವಾಹಗಳಿಗೆ ಪೋಷಕರ ಸಮ್ಮತಿ ಇದ್ದರೆ ಅವುಗಳು ಪ್ರಾಜಾಪತ್ಯ ವಿವಾಹ ಎಂದು ಕರೆಸಿಕೊಳ್ಳುತ್ತವೆ. ಇನ್ನು ವರದಕ್ಷಿಣೆ ಅಥವಾ ವಧುದಕ್ಷಿಣೆ ತೆಗೆದುಕೊಂಡು ಮಾಡಿಕೊಂಡ ವಿವಾಹ ಆಸುರ. ಮುಂದುವರಿದ ಅಥವಾ ಶಿಕ್ಷಿತ ಅಥವಾ ಶ್ರೀಮಂತ ಕುಟುಂಬಗಳಲ್ಲಿ ಬಹುತೇಕ ಇಂತಹ ಆಸುರ ವಿವಾಹಗಳೇ ನಡೆಯುತ್ತಿವೆ. ಇನ್ನು ಬಹಳ ದಿನ ಒಟ್ಟಿಗಿದ್ದು ಕೊನೆಗೊಮ್ಮೆ ಮದುವೆಯಾದರೆ ಅಥವಾ ಗರ್ಭಿಣಿಯಾದಳೆಂದು ಕಟ್ಟಿಕೊಂಡರೆ ಅದು ಗಾಂಧರ್ವ ವಿವಾಹ. ಆಸುರ ಹಾಗೂ ಗಾಂಧರ್ವಕ್ಕೆ ಪ್ರಾಶಸ್ತ್ಯ ಇಲ್ಲ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೦೦

ಧರ್ಮಾಚರಣೆ-೧೦೦ ಬ್ರಾಹ್ಮೋ ವಿವಾಹ ಆಹೂಯ ದೀಯತೇ ಶಕ್ಯ್ತಲಂಕೃತಾ | ತಜ್ಜಃ  ಪುನಾತ್ಯುಭಯತಃ ಪುರುಷಾನೇಕವಿಂಶತಿಮ್ || ಯಾಜ್ಞವಲ್ಕ್ಯ ಸ್ಮೃತಿ||  ಈಗ ಭಾರತದಲ್ಲಿ ಹೆಚ್ಚಾಗಿ ಚಾಲ್ತಿಯಲ್ಲಿರುವುದು ಬ್ರಾಹ್ಮ ವಿವಾಹ. ಬ್ರಾಹ್ಮವೆಂದರೆ ಬ್ರಾಹ್ಮಣರದ್ದು ಎಂದಲ್ಲ, ಬ್ರಹ್ಮ ಹೇಳಿದ್ದು ಅಥವಾ ಬ್ರಹ್ಮನಿಗೆ ಸಂಬಂಧಿಸಿದ್ದು ಎಂದು ಅರ್ಥ. ಕುಲ-ಶೀಲ-ರೂಪ-ಗುಣ-ವಯಸ್ಸುಗಳಿಂದ  ಯೋಗ್ಯನಾದ ವರನನ್ನು ಆಹ್ವಾನಿಸಿ ಅವನಿಗೆ ತನ್ನ ಕೈಲಾದಷ್ಟು  ಸತ್ಕಾರ ಮಾಡಿ ಹೆಣ್ಣನ್ನು ಕೊಟ್ಟು ಮದುವೆ ಮಾಡುವುದು ಬ್ರಾಹ್ಮ ವಿವಾಹದ ಪದ್ಧತಿ. ಇಲ್ಲಿ ವರದಕ್ಷಿಣೆಗೆ ಮಹತ್ವ ಇಲ್ಲ, ವರನನ್ನು ಉಪಚರಿಸುವುದು ಅಥವಾ ಗೌರವಿಸುವುದು ಮಹತ್ವ ಪಡೆದಿದೆ. ಕನ್ಯೆಯನ್ನು ಅಲಂಕರಿಸಿ ಗೌರವಯುತವಾಗಿಯೇ ಕಳಿಸಿಕೊಡುವುದು ಇಲ್ಲಿನ ವಿಶೇಷ. ವರನ ಯೋಗ್ಯತೆ ನೋಡಿಯೇ ಈ ವಿವಾಹ ನಿರ್ಣಯಿಸಬೇಕೆಂದು ಧರ್ಮಶಾಸ್ತ್ರ ಸ್ಪಷ್ಟವಾಗಿ ಹೇಳಿದೆ. ಶೀಲ-ಗುಣಗಳ ವಿಷಯದಲ್ಲಂತೂ ತುಂಬಾ ಮಹತ್ವ ಕೊಟ್ಟಿದೆ. ಇವರ ಸಂಯೋಗದಿಂದ ಜನಿಸಿದ ಮಕ್ಕಳು  ಉಭಯಕುಲದ ಇಪ್ಪತ್ತೊಂದು ಜನರಉದ್ಧಾರಕ್ಕೆ ಕಾರಣರಾಗುವರು. ಈ ವಿವಾಹದ ಉದ್ದೇಶ ಕುಲಗಳ ಉದ್ಧಾರ ಹೊರತು ದೈಹಿಕ ಸುಖವೊಂದೇ ಅಲ್ಲ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೯೯

ಧರ್ಮಾಚರಣೆ-೯೯ ಅವಿಪ್ಲುತ ಬ್ರಹ್ಮಚರ್ಯೋ ಲಕ್ಷಣ್ಯಾಂ ಸ್ತ್ರಿಯಮುದ್ವಹೇತ್ | ಅನನ್ಯಪೂರ್ವಿಕಾಂ ಕಾಂತಾಮಸಪಿಂಡಾಂ ಯವೀಯಸೀಮ್ || ಅರೋಗಿಣೀಂ ಭ್ರಾತೃಮತೀಂ ಅಸಮಾನಾರ್ಷಗೋತ್ರಜಾಮ್ | ಪಂಚಮಾತ್ಸಪ್ತಮಾದೂರ್ಧ್ವಂ ಮಾತೃತಃ ಪಿತೃತಸ್ತಥಾ|| ಯಾಜ್ಞವಲ್ಕ್ಯ ಸ್ಮೃತಿ|| ಬ್ರಹ್ಮಚರ್ಯವನ್ನು ನಿಯಮಿತವಾಗಿ ಪಾಲಿಸಿದ ವ್ಯಕ್ತಿಯು ಅನಂತರ ಬಾಹ್ಯ-ಆಂತರ್ಯ ಲಕ್ಷಣ ಉಳ್ಳ , ಬೇರೊಬ್ಬರನ್ನು ಚಿಂತಿಸದ, ಕುಟುಂಬಕ್ಕೆ ಸೇರದ, ವಯಸ್ಸಿನಲ್ಲೂ- ಆಕಾರದಲ್ಲೂ ತನಗಿಂತ ಸಣ್ಣವಳನ್ನು, ರೋಗರಹಿತಳನ್ನು, ಅಣ್ಣ-ತಮ್ಮಂದಿರನ್ನು ಹೊಂದಿದವಳನ್ನು, ತನ್ನ ಗೋತ್ರ-ಪ್ರವರಕ್ಕೆ ಸೇರದವಳನ್ನು, ತಾಯಿಯಿಂದ ಐದು ತಲೆ ದಾಟಿದ, ತಂದೆಯಿಂದ ಏಳು ತಲೆ ದಾಟಿದ ಕನ್ಯೆಯನ್ನು ವರಿಸಬೇಕು. ಸನಾತನ ಧರ್ಮದ ವಿವಾಹಯೋಗ್ಯತೆ ಸ್ತ್ರೀ ಪುರುಷರಿಗೆ ಸಮಾನವಾಗಿದೆ. ತಾನು ಸ್ವತಃ ಆರೋಗ್ಯದಿಂದ- ನೈಷ್ಠಿಕ ಬ್ರಹ್ಮಚರ್ಯದಿಂದ ಇದ್ದು- ಉತ್ತಮ ವಿದ್ಯೆಯನ್ನು ಸಂಪಾದಿಸಿ ಸಮಾಜಕ್ಕೆ ಹೊರೆಯಾಗದಂತೆ ಬದುಕುವ ಜವಾಬ್ದಾರಿ ಹೊಂದಿ ತನಗೆ ಈ ಲಕ್ಷಣಗಳಿಂದ ಯೋಗ್ಯಳೆನಿಸಿದ ಕನ್ಯೆಯನ್ನು ಕೈ ಹಿಡಿಯಬೇಕು. ಸಗೋತ್ರ ಅಥವಾ ಸಪ್ರವರ ಆದರೆ ಮೂಲ ಪುರುಷರು ಒಂದೇ ಆದ ಕಾರಣ ವಂಶವಾಹಿಯ ಕಾರಣದಿಂದ ಮುಂದಿನ ಪೀಳಿಗೆಗೆ ನ್ಯೂನತೆ ಬಂದೀತೆಂಬ ಜಾಗೃತೆ, ಸಂಬಂಧವೇ ಆದರೂ  ಅಷ್ಟು ಪೀಳಿಗೆ ದಾಟಿದಾಗ ಬಂಧ ಮಾತ್ರ ಉಳಿದೀತು ಎಂಬ ಯೋಚನೆಯಿಂದ  ಐದು- ಏಳು ತಲೆಮಾರುಗಳ ಅಂತರ ವಿಹಿತವಾದದ್ದು. ವಿವಾಹವೆಂದರೆ ಸುಮ್ಮನೆ ತಾಳಿ ಕಟ್ಟು...

ಧರ್ಮಾಚರಣೆ ೯೮

ಧರ್ಮಾಚರಣೆ-೯೮ ತೇತೃಪ್ತಾಸ್ತರ್ಪಯಂತ್ಯೇನಂ ಸರ್ವಕಾಮಫಲೈಃ ಶುಭೈಃ| ಯಂ ಯಂ ಕ್ರತುಮಧೀತೇಸೌ ತಸ್ಯ ತಸ್ಯಾಪ್ನುಯಾತ್ಫಲಮ್ || ಯಾಜ್ಞವಲ್ಕ್ಯ ಸ್ಮೃತಿ || ನಿತ್ಯವೂ ವೇದಾಧ್ಯಯನ ಮಾಡುವ  ವ್ಯಕ್ತಿಗೆ ಇಚ್ಛಿಸಿದ ಫಲವನ್ನು ದೇವತೆಗಳು ಕೊಡುತ್ತಾರೆ. ಅಂತೆಯೇ ಅಶ್ವಮೇಧ, ರಾಜಸೂಯ, ಇಷ್ಟಿಗಳು ಮೊದಲಾದ ಯಜ್ಞಗಳಿಗೆ ಸಂಬಂಧಿಸಿದ ಮಂತ್ರಗಳನ್ನು ಪಾರಾಯಣ ಮಾಡಿದರೆ ಆಯಾ ಯಜ್ಞಗಳ ಫಲವನ್ನು ಭಗವಂತನು ಕರುಣಿಸುತ್ತಾನೆ. ಇದೇ ಕಾರಣದಿಂದ ಕೆಲವು ಶ್ರದ್ಧಾಳುಗಳು ವೇದವಿದರ ಬಳಿಯಲ್ಲಿ ಇಂತಹ ಮಂತ್ರ ಪಾರಾಯಣ ಮಾಡಿಸುತ್ತಾರೆ. ಸನಾತನ ಧರ್ಮ ಎಷ್ಟು ಕರ್ಮಠತೆಯನ್ನು ಪ್ರತಿಪಾದಿಸುತ್ತದೋ ಅಷ್ಟೇ ನಮ್ಯತೆಯನ್ನೂ ಹೊಂದಿದೆ. ಯಜ್ಞ ಮಾಡಿದರೂ ಫಲ, ಮಾಡದೇ ಮಂತ್ರ ಹೇಳಿದರೂ ಫಲ. ಪೂಜೆ ಮಾಡಿದರೂ ಫಲ- ಧ್ಯಾನಿಸಿದರೂ ಫಲ. ಭಗವತ್ಪ್ರೀತ್ಯರ್ಥಕವಾಗಿ ಮಾಡುವ ನಮ್ಮ ಪ್ರತಿಯೊಂದು ಕರ್ಮಕ್ಕೂ ಫಲ. ಅವರವರ ಭಾವನೆಗೆ ಬೇಕಾದಂತೆ ಸಾಕಷ್ಟು ಅವಕಾಶವನ್ನು ಆರಾಧನೆಗೆ ಒದಗಿಸಿದ ವಿಶ್ವಕುಟುಂಬಿ ಧರ್ಮವೆನ್ನುವ ಹೆಮ್ಮೆ ನಮ್ಮೆಲ್ಲರದು. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೯೭

ಧರ್ಮಾಚರಣೆ-೯೭ ವಾಕೋವಾಕ್ಯಂ ಚ ನಾರಾ ಶಂಸೀಂಶ್ಚ ಗಾಥಿಕಾಃ | ಇತಿಹಾಸಾಂಸ್ತಥಾ ವಿದ್ಯಾಃ ಶಕ್ತ್ಯಾಧೀತೇಹಿಯೋನ್ವಹಮ್ || ಮಾಂಸಕ್ಷೀರೌದನಮಧು ತರ್ಪಣಂ ಸದಿವೌಕಸಾಮ್ | ಕರೋತಿ ತೃಪ್ತಿಂ ಕುರ್ಯಾಚ್ಚ ಪಿತೃಣಾಂ ಮಧು ಸರ್ಪಿಷಾ || ಯಾಜ್ಞವಲ್ಕ್ಯ ಸ್ಮೃತಿ|| ವೇದದಲ್ಲಿ ಬರುವ ಪ್ರಶ್ನೋತ್ತರರೂಪದ ವಾಕ್ಯಗಳು, ಬ್ರಹ್ಮ-ಸ್ಕಂದ-ವಿಷ್ಣು ಮೊದಲಾದ ಪುರಾಣಗಳು, ಮನು-ಪರಾಶರ-ಯಾಜ್ಞವಲ್ಕ್ಯ ಮೊದಲಾದ ಸ್ಮೃತಿಗಳು, ರುದ್ರ-ಚಮಕ, ಯಜ್ಞದಲ್ಲಿ ಬಳಸುವ ಸೂಕ್ತಗಳು, ಮಹಾಭಾರತ-ರಾಮಾಯಣ ಮೊದಲಾದ ಇತಿಹಾಸ, ಮಧುವಾತಾ-ಹಿರಣ್ಯಶೃಂಗಂ ಮೊದಲಾದ ಮಂತ್ರಗಳನ್ನು ಪಠಿಸುವನೋ ಅವನು‌ ಮಾಂಸ-ಪರಮಾನ್ನ-ಜೇನುಗಳನ್ನು ದೇವರಿಗೆ ಅರ್ಪಿಸಿ ತೃಪ್ತಿಪಡಿಸಿದ ಪುಣ್ಯವನ್ನೂ, ಪಿತೃಗಳಿಗೆ ತುಪ್ಪ-ಜೇನುತುಪ್ಪ ಅರ್ಪಿಸಿ ತೃಪ್ತಿಪಡಿಸಿದ ಪುಣ್ಯವನ್ನೂ ಸಂಪಾದಿಸುತ್ತಾನೆ. ಹಾಗಾಗಿ ದಿನವೂ ಒಂದಷ್ಟು ಪಾರಾಯಣ- ಪುಸ್ತಕಗಳ ಅವಲೋಕನ ಇಹಪರ ಕ್ಷೇಮದಾಯಕ. ಹೇಗೆ ನಾವು ಸಾಮಾಜಿಕ ಜಾಲತಾಣಗಳನ್ನು, ದೂರದರ್ಶನವನ್ನು, ಸಂಗೀತ ಮೊದಲಾದವನ್ನು ನೋಡಿ- ಕೇಳುವೆವೋ ಅದರಂತೆ ಇದಕ್ಕೂ ಪ್ರಾಶಸ್ತ್ಯ ಕೊಟ್ಟಾಗ ಮೋಕ್ಷದ ದಾರಿ ತೆರೆದುಕೊಳ್ಳುತ್ತದೆ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೯೬

ಧರ್ಮಾಚರಣೆ-೯೬ ಮೇದಸಾ ತರ್ಪಯದ್ದೇವಾನಥರ್ವಾಂಗಿರಸಃ ಪಠನ್ | ಪಿತೃಂಶ್ಚ ಮಧುಸರ್ಪಿಭ್ಯಾಮನ್ವಹಂ ಶಕ್ತಿತೋ ದ್ವಿಜಃ || ಯಾಜ್ಞವಲ್ಕ್ಯ ಸ್ಮೃತಿ|| ಅಂಗಿರಸಮಹರ್ಷಿ ಕಂಡುಕೊಂಡ ಅಥರ್ವವೇದದ ಮಂತ್ರಗಳನ್ನು ಯಾರು ಪಠಿಸುವನೋ ಅವನು ಪಶುಗಳ ಮೇದಸ್ಸನ್ನು ದೇವತೆಗಳಿಗೆ ಅರ್ಪಿಸಿದ ಪುಣ್ಯವನ್ನೂ, ಪಿತೃಗಳಿಗೆ ಜೇನು ಮತ್ತು ತುಪ್ಪಗಳನ್ನು ಅರ್ಪಿಸಿದ ಪುಣ್ಯಕ್ಕೆ ಪಾತ್ರನಾಗುತ್ತಾನೆ. ನಮ್ಮ ಶ್ರುತಿ-ಸ್ಮೃತಿಗಳು ಹಿಂಸೆಯನ್ನು ಎಂದಿಗೂ ಪ್ರಚೋದಿಸಿಲ್ಲ. ಬರಿದೆ ವೇದದ ದಿನಂಪ್ರತಿ ಪಾರಾಯಣವು ಪಶುಬಲಿ ನೀಡಿದ ಪುಣ್ಯವನ್ನು ತಂದುಕೊಡುವ ಕಾರಣ ಪಶುವನ್ನು ಕೊಲ್ಲುವ ಪಶುಯಾಗ ಮಾಡುವ ಅವಶ್ಯಕತೆ ಇಲ್ಲವೆಂದು ಸ್ಪಷ್ಟವಾಗಿ ಸಾರಿದೆ. ಅಹಿಂಸೆಯನ್ನು ಸನಾತನ ಗ್ರಂಥಗಳು ಪ್ರತಿಪಾದಿಸಿದಷ್ಟು ಬಹುಶಃ ಬುದ್ಧನೂ ಪ್ರತಿಪಾದಿಸಿಲ್ಲ‌.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೯೫

ಧರ್ಮಾಚರಣೆ-೯೫ ಸ ತು ಸೋಮಘೃತೈರ್ದೇವಾಂಸ್ತರ್ಪಯೇದ್ಯೋನ್ವಹಂ ಪಠೇತ್ | ಸಾಮಾನಿ ತೃಪ್ತಿಂ ಕುರ್ಯಾಚ್ಚ ಪಿತೃಣಾಂ ಮಧುಸರ್ಪಿಷಾ ||ಯಾಜ್ಞವಲ್ಕ್ಯ ಸ್ಮೃತಿ|| ನಿತ್ಯವೂ ಸಾಮವೇದದ ಕೆಲವು ಸಾಮಗಳ‌ನ್ನಾದರೂ ಹಾಡಿದರೆ ಅವರು ದೇವತೆಗಳನ್ನು ಸೋಮರಸ-ತುಪ್ಪದಿಂದ ತೃಪ್ತಿಪಡಿಸಿದ ಪುಣ್ಯವನ್ನೂ, ಪಿತೃಗಳನ್ನು ಜೇನು ಹಾಗೂ ತುಪ್ಪದಿಂದ ತೃಪ್ತಿಪಡಿಸಿದ ಪುಣ್ಯಭಾಜನರಾಗುತ್ತಾರೆ. ವೇದಾನಾಂ ಸಾಮವೇದೋಸ್ಮಿ ಎಂದ ಕೃಷ್ಣನ ಮಾತಿನಂತೆ ಸಾಮಗಾನವು ದೇವತೆಗಳಿಗೆ ಅತ್ಯಂತ ಪ್ರಿಯ. ಅದು ಉಳಿದ ಮಂತ್ರಗಳಿಗಿಂತ ಹೆಚ್ಚಿನ ಫಲದಾಯಕ. 

ಧರ್ಮಾಚರಣೆ ೯೪

ಧರ್ಮಾಚರಣೆ-೯೪ ಯಜೂಂಷಿ ಶಕ್ತಿತೋಧೀತೇ ಯೋನ್ವಹಂ ಸ ಘೃತಾಮೃತೈಃ | ಪ್ರೀಣಾತಿ ದೇವಾನಾಜ್ಯೇನ ಮಧುನಾ ಚ ಪಿತೃಂಸ್ತಥಾ ||  ಯಾರು ದಿನವೂ ಯಜುರ್ವೇದದ ಒಂದಷ್ಟು ವರ್ಗ/ಹನಸು ಗಳನ್ನು ಪಠಿಸುವನೋ ಅವನು ತುಪ್ಪ- ಅಮೃತಗಳಿಂದ ದೇವತೆಗಳನ್ನು ತೃಪ್ತಿ ಪಡಿಸಿದ ಪುಣ್ಯಕ್ಕೂ, ತುಪ್ಪ- ಜೇನುಗಳಿಂದ ಪಿತೃಗಳನ್ನು ತೃಪ್ತಿಪಡಿಸಿದ ಪುಣ್ಯಭಾಜನನಾಗುವನು. ಹಾಗಾಗಿ ವೇದಪಾರಾಯಣವು ದಿನಂಪ್ರತಿ ದೇವ-ಪಿತೃ ಆರಾಧಕವೆನಿಸಿ ಪುಣ್ಯ ತಂದುಕೊಡುತ್ತದೆ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೯೩

ಧರ್ಮಾಚರಣೆ-೯೩ ಮಧುನಾ ಪಯಸಾ ಚೈವ ಸದೇವಾಂಸ್ತರ್ಪಯೇದ್ವಿಜಃ | ಪಿತೃನ್ಮಧುಘೃತಾಭ್ಯಾಂ ಚ ಋಚೋಧೀತೇ ಚ ಯೋನ್ವಹಮ್ || ಯಾಜ್ಞವಲ್ಕ್ಯ ಸ್ಮೃತಿ|| ನಿತ್ಯವೂ ಋಗ್ವೇದದ ಕೆಲವು ಸೂಕ್ತಗಳನ್ನಾದರೂ ಯಾರು ನಿಯಮಿತವಾಗಿ ಸ್ವರಯುಕ್ತವಾಗಿ ಪಠಿಸುವನೋ ಅವನು ಜೇನು- ಹಾಲುಗಳನ್ನು ದೇವತೆಗಳಿಗೆ ಸಮರ್ಪಿಸಿದ ಪುಣ್ಯವನ್ನೂ,ಪಿತೃಗಳಿಗೆ ಜೇನು- ತುಪ್ಪಗಳನ್ನು ಸಮರ್ಪಿಸಿದ ಪುಣ್ಯವನ್ನು ಪಡೆಯುತ್ತಾನೆ. ಹಾಗಾಗಿ ದಿನವೂ ಸಮಯ ಸಿಕ್ಕಾಗಲೆಲ್ಲ ವೇದಮಂತ್ರಗಳ- ಸೂಕ್ತಗಳ ಪಠಣ ಅಭ್ಯಾಸಕ್ಕೂ - ಪುಣ್ಯಕ್ಕೂ ಹೀಗೆ ಇಹ-ಪರ ಫಲದಾಯಕ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com