🌾ಕೃಪನ ಜನ್ಮ ವೃತ್ತಾಂತ🖋

*ಹಿಂದೆ ಗೌತಮಮುನಿಗೆ ಶರದ್ವಂತನೆಂಬ ಮಗನಿದ್ದನು.ಅವನು ಜನಿಸುವಾಗಲೇ ಬಾಣಗಳ ಜೊತೆಗೆ ಜನಿಸಿದನು.ಅವನಿಗೆ ವೇದಗಳ ಅಧ್ಯಯನಕ್ಕಿಂತ ಧನುರ್ವಿದ್ಯೆಯಲ್ಲಿ ಆಸಕ್ತಿ ಹೆಚ್ಚಿತ್ತು. ತಪಸ್ಸಿನಿಂದ ಎಲ್ಲ ಅಸ್ತ್ರಗಳನ್ನು ಅವನು ಸಂಪಾದಿಸಿದನು. ಆ ಶರದ್ವಂತನು ತನ್ನ ತಪಸ್ಸಿನಿಂದ ಹಾಗೂ ಧನುರ್ವಿದ್ಯೆಯಲ್ಲಿ ಇದ್ದ ಪ್ರಾವೀಣ್ಯದಿಂದ ಇಂದ್ರನಿಗೂ ಹೆದರಿಕೆ ಹುಟ್ಟಿಸಿದನು.ಅವನ ತಪಕ್ಕೆ ವಿಘ್ನ ಉಂಟುಮಾಡುವ ಸಲುವಾಗಿ ಇಂದ್ರನು ಜಾಲಪದಿಯೆಂಬ ಕನ್ಯೆಯನ್ನು ಕಳುಹಿದನು.ಆ ಕನ್ಯೆ ಮುನಿಯನ್ನು ಮೋಹಗೊಳಿಸಿದಳು.ಏಕ ವಸ್ತ್ರಧಾರಿ ಆ ಸುಂದರಿಯನ್ನು ನೋಡಿದ ಶರದ್ವಂತನ ಮೈಯಲ್ಲಿ ನಡುಕ ಉಂಟಾಗಿ ಜ್ಞಾನಿಯಾದ ಅವನಿಗೆ ತಿಳಿಯದೇ ಆಕಸ್ಮಿಕವಾಗಿ ರೇತಸ್ಸು ಸ್ಖಲಿತವಾಯಿತು.ಆಮೇಲೆ ಬೇಸರಗೊಂಡ ಆ ಮುನಿ ಆ ಪ್ರದೇಶದ ಬಿಟ್ಟು ತೆರಳಿದನು. ಅವನ ವೀರ್ಯ ಒಂದು ಜೊಂಡುಹುಲ್ಲಿನಲ್ಲಿ ಬೆಳೆದು ಎರಡು ಭಾಗವಾಗಿ ಅವಳಿ ಮಕ್ಕಳು ಜನಿಸಿದರು. ವನ್ಯಗಳೊಡನೆ ಹಾಗೆಯೇ ಬೆಳೆಯುತ್ತಿರುವಾಗ ಬೇಟೆಗೆಂದು ಬಂದಿದ್ದ ಶಂತನು ಬಿಲ್ಲು ಕೃಷ್ಣಾಜಿನ ಸಮೇತರಾದ ಈ ಮಕ್ಕಳನ್ನು ನೋಡಿ ಧನುರ್ವಿದ್ಯೆಯಲ್ಲಿ ಪಾರಂಗತನಾದ ಬ್ರಾಹ್ಮಣರ ಮಕ್ಕಳಿರಬೇಕೆಂದು ನಿಶ್ಚಯಿಸಿ ಸೈನಿಕರು ತೋರಿಸಿದ ಆ ಮಕ್ಕಳನ್ನು ಎತ್ತಿಕೊಂಡು ಕೃಪೆಯಿಂದ ಇವರು ನನ್ನ ಮಕ್ಕಳೇ ಎಂದು ಹೇಳಿ ಅರಮನೆಗೆ ಕರೆದುಕೊಂಡು ಹೋದನು. ಆಮೇಲೆ ಯಥೋಚಿತ ಸಂಸ್ಕಾರ ಕೊಟ್ಟು ಬೆಳೆಸಿದನು. ಹೀಗೆ ಕೃಪೆಯಿಂದ ಬೆಳೆಸಿದ್ದರಿಂದ ಆ ಮಕ್ಕಳಿಗೆ ಕೃಪ ಮತ್ತು ಕೃಪಿ ಎಂಬ ಹೆಸರುಂಟಾಯಿತು.ಶರದ್ವಂತನು ಮುಂದೊಂದು ದಿನ ಹಿಂತಿರುಗಿ ಮಕ್ಕಳ ಗೋತ್ರಾದಿಗಳನ್ನು ತಿಳಿಸಿದನು.ಹಾಗೆಯೇ ಮಗನಿಗೆ ನಾಲ್ಕು ವೇದಗಳನ್ನೂ ನಾನಾ ಅಸ್ತ್ರಗಳನ್ನು, ಅವುಗಳ ರಹಸ್ಯವನ್ನು ಸಂಪೂರ್ಣವಾಗಿ ಹೇಳಿಕೊಟ್ಟನು. ಅನಂತರ ಅನೇಕ ಮಹಾರಥಿಕರೂ ಮಹಾಬಲಶಾಲಿಗಳೂ ಆದ ಧೃತರಾಷ್ಟ್ರ ಪುತ್ರರೂ ಪಾಂಡವರೂ ವೃಷ್ಣಿಗಳೂ ಬೇರೆ ಬೇರೆ ದೇಶದ ಇತರ ರಾಜಕುಮಾರರೂ ಕೃಪನ ಬಳಿ ಧನುರ್ವೇದವನ್ನು ಅಭ್ಯಸಿಸಿದರು.*

📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩