ಪೋಸ್ಟ್‌ಗಳು

ಆಗಸ್ಟ್, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
🌹ಅವಿಮಾರಕದ ಒಂದು ಸುಮ🌹 *रोगादकाला गुरुचन्दनार्द्रा विमुक्तभूषा गतहावभावा | विभाति निर्व्याजमनोहराङ्गी वेदश्रुतिर्हेतुविवर्जितेव ||* _ಅವಿಮಾರಕನು ಪ್ರಿಯತಮೆಯ ಅವಸ್ಥೆಯನ್ನು ವರ್ಣಿಸುತ್ತಿರುವನು. ಮನಸ್ಸಿಗೆ ಕವಿದ ವಿರಹದು:ಖವೆಂಬ ರೋಗವು ಅವಳಿಗೆ ಯಾವುದೇ ಅಲಂಕಾರ ಮಾಡಿಕೊಳ್ಳದಿರುವಂತೆ ಮಾಡಿದೆ. ದಿನವೂ ದೇಹಕ್ಕೆ ಲೇಪಿಸುತ್ತಿದ್ದ ಕಾಲಾಗುರು ಮತ್ತು ಚಂದನದ ಮಿಶ್ರಣ ಇಂದು ಕಾಣುತ್ತಿಲ್ಲ. ಹಾಗಾಗಿ ದೇಹ ಒಣಗಿದಂತೆ ಕಾಣುತ್ತಿದೆ. ಬಗೆಬಗೆಯ ಆಭರಣಗಳನ್ನು ಇಂದು ನಿರಾಕರಿಸಿರುವಳು ಕುರಂಗಿ.( ರಾಜಕುಮಾರಿಯ ಹೆಸರು) ಅವಳ ನಡೆನುಡಿಯಲ್ಲಿದ್ದ ಒನಪು ವಯ್ಯಾರ ಲಾಲಿತ್ಯ ಇಂದೇಕೋ ಮರೆಯಾಗಿದೆ.ಅಷ್ಟಾಗಿಯೂ ನನ್ನ ಪಾಲಿಗೆ ಅವಳ ಅಂಗಾಂಗಗಳೆಲ್ಲವೂ ಅವಳ ಶರೀರ ಪೂರ್ಣವಾಗಿ ಮನದ ಆಕರ್ಷಣೆಯ ಮೆಟ್ಟಿಲು.ಅದೇ ನನ್ನ ಪ್ರೀತಿ ಹುಟ್ಟಿದ ತೊಟ್ಟಿಲು.ನಿರಾಭರಣ ಸುಂದರಿ ಆಕೆ. ಇಲ್ಲೊಂದು ಸುಂದರ ಉಪಮೆ ಕವಿಯದ್ದು. ತರ್ಕವಿದ್ಯೆಯಿಂದ ರಹಿತವಾದ ವೇದಗಳು ಹೇಗೆ ಶೋಭಿಸುತ್ತವೆಯೊ ಹಾಗೆ ಈ ನನ್ನ ಸುಂದರಿ. ತರ್ಕವಿದ್ಯೆ ವೇದದಲ್ಲಿ ನಾನಾ ಪ್ರಶ್ನೆಗಳುಂಟಾದಾಗ ಗೊಂದಲವೇರ್ಪಟ್ಟಾಗ ಹೀಗೆ ಎಂದು ಸಾರಲು ವಾದದಿಂದ ಪ್ರಾಮಾಣ್ಯ ಸಾಧಿಸಲು ಅವಶ್ಯಕ. ಹಾಗೆಯೇ ರಾಜಕುಮಾರಿ ಎಂದು ತೋರಿಸಿಕೊಳ್ಳಲು ಸಹಜ ಆಕಾಂಕ್ಷೆ ತಣಿಸಲು ಪ್ರಸಾಧನಗಳು ಬೇಕು. ಆದರೆ ಅದಿಲ್ಲದೆಯೂ ಮಂತ್ರಘೋಷವು ಮನವನ್ನು ಎಲ್ಲೋ ಕರೆದುಕೊಂಡು ಹೋಗುವಂತೆ ಅಥವಾ ವೇದಾರ್ಥ ಚಿಂತನೆಯು ಹೊಸ ಹೊ...
🌹ಅವಿಮಾರಕದ ಸುಂದರ ಕುಸುಮ🌹 *ಗೋಷ್ಠೀಷು ಹಾಸ್ಯ: ಸಮರೇಷು ಯೋಧ: ಶೋಕೇ ಗುರು: ಸಾಹಸಿಕ: ಪರೇಷು | ಮಹೋತ್ಸವೋ ಮೇ ಹೃದಿ ಕಿಂ ಪ್ರಲಾಪೈ: ದ್ವಿಧಾ ವಿಭಕ್ತಂ ಖಲು ಮೇ ಶರೀರಮ್ ||* _ಅವಿಮಾರಕನು ತನ್ನ ಮಿತ್ರನನ್ನು ನೆನೆದು ಅವನ ಬಗೆಗೆ ಹೇಳಿಕೊಳ್ಳುವ ಪರಿ. ಸಭೆಯಲ್ಲಿ ಸದಾ ಹಾಸ್ಯದಿಂದ ನನ್ನನ್ನು ನಗಿಸುತ್ತಿದ್ದ,ಯುದ್ಧದಲ್ಲಿ ಯೋಧನಾಗಿ ಜೊತೆಗೆ ಕಾದಾಡುತ್ತಿದ್ದ, ನಾನು ದು:ಖದಲ್ಲಿದ್ದಾಗ ಉಪದೇಶಗಳಿಂದ ಸಾಂತ್ವನ ಹೇಳಿ ಗುರುವಿನ ಕಾರ್ಯ ಮಾಡುತ್ತಿದ್ದ,ಶತ್ರುಗಳು ಇದಿರಾದಾಗ ಸಾಹಸ ಮೆರೆಯುತ್ತಿದ್ದ, ನನ್ನ ಪಾಲಿಗೆ ಮಹೋತ್ಸವದಂತಿದ್ದ ,ಹೆಚ್ಚೇನು ಹೇಳಲಿ ನನ್ನ ಇನ್ನೊಂದು ಶರೀರದಂತಿರುವ ಅಥವಾ ಈ ಶರೀರದ ಇನ್ನೊಂದು ಭಾಗದಂತಿರುವ ಈ ವಿದೂಷಕ ಈಗ ಎಲ್ಲಿರುವನೋ ಕಾಣೆ! ಇಲ್ಲಿ ವಿದೂಷಕನಿಗೂ ರಾಜಪುತ್ರನಿಗೂ ಇರುವ ಆತ್ಮೀಯತೆ ತೋರುತ್ತದೆ. ರಾಜನ ಜೊತೆಗೆ ಎಲ್ಲಾ ಸಂದರ್ಭಗಳಲ್ಲಿ ಭಾಗಿಯಾಗಿದ್ದ ಅವನಿಗೆ ಆಪ್ತ ಮಿತ್ರನಾಗಿದ್ದ ವಿದೂಷಕ ಕಾಣದಾದಾಗ ರಾಜ ಚಡಪಡಿಸಿದ ರೀತಿ. ಸಭೆ ನಡೆಯುತ್ತಿದ್ದಾಗ ತನ್ನ ತೀಕ್ಷ್ಣ ಹಾಗೂ ಮೊನಚಾದ ಮಾತುಗಳಿಂದ ಹಾಸ್ಯ ಮಾಡುತ್ತಾ ಸಭ್ಯರನ್ನು ಎಚ್ಚರಿಸುತ್ತಿದ್ದ,ರಾಜನು ಯುದ್ಧಕ್ಕೆ ಹೊರಟರೆ ಜಾತಿಯಿಂದ ಬ್ರಾಹ್ಮಣನಾದರೂ ಹೋರಾಡುತ್ತಿದ್ದ, ರಾಜನು ಶೋಕದಲ್ಲಿದ್ದಾಗ ಸಾಂತ್ವನ ಹೇಳಿ ಗುರುವಿನಂತೆಯೇ ಸಂತೈಸುತ್ತಿದ್ದ,ಆಕಸ್ಮಿಕವಾಗಿ ಶತ್ರುಗಳು ಎದುರಾದಾಗ ರಾಜನ ಜೊತೆಗೂಡಿ ಸಾಹಸ ಪ್ರದರ್ಶಿಸುತ್ತಿದ್ದ,ರಾಜನ ಪಾಲಿಗೆ ಸದಾ ಒಂದು ಆನಂ...
🌺ಅವಿಮಾರಕದ ಒಂದು ಸುಮ🌺 *ಪ್ರಚ್ಛನ್ನರೂಪಸ್ತ್ವಶನಿ: ಕಥಂಚಿತ್ ಖಡ್ಗೀಕೃತ: ಸ್ಯಾತ್ತು ತಡಿತ್ಕಲಾಪ: | ನಿರ್ಭರ್ತ್ಸಯನ್ ಸೂರ್ಯಕೃತಾಂ ಪ್ರದೀಪ್ತಿಂ ವನಂ ದವಾಗ್ನಿ: ಸಹಸಾಭ್ಯುಪೈತಿ ||* _ಭಾಸನಂತಹ ಕವಿಗಳಿಗೆ ಒಂದೊಂದು ವಸ್ತುವಿನಲ್ಲಿಯೂ ಸಾಕಷ್ಟು ಮಹತ್ವ ಕಾಣುತ್ತದೆ. ಅದಕ್ಕೆ ನಿದರ್ಶನ ಈ ಶ್ಲೋಕ. ವಿದ್ಯಾಧರನನ್ನು ಭೇಟಿ ಮಾಡಿದ ಅವಿಮಾರಕನು ಅವನ ಕೋರಿಕೆಯಂತೆ ಆತ್ಮಹತ್ಯೆಯ ಪ್ರಯತ್ನ ಕೈ ಬಿಡುತ್ತಾನೆ. ಅವನಿಂದ ಮಾಯಾಶಕ್ತಿಯ ಉಂಗುರವನ್ನು ಪಡೆಯುತ್ತಾನೆ. ಹಾಗೆಯೇ ಅದರ ಪ್ರಭಾವವನ್ನು ಪರೀಕ್ಷಿಸುತ್ತೇನೆಂದು ಹೇಳಿದಾಗ ವಿದ್ಯಾಧರನು ತನ್ನ ಖಡ್ಗವನ್ನು ಹಿಡಿದುಕೊಳ್ಳಲು ಹೇಳುತ್ತಾನೆ. ಆಗ ನಾಯಕ ನುಡಿಯುವ ಸಾಲು. ಇದು ಸಾಮಾನ್ಯವಲ್ಲ. ಈ ಖಡ್ಗವು ಅಡಗಿರುವ ಅಥವಾ ವೇಷಾಂತರ ತಾಳಿರುವ ಇಂದ್ರನ ವಜ್ರಾಯುಧವೇ ಆಗಿದೆ. ಅಷ್ಟು ಬಲಿಷ್ಠವಾಗಿದೆ.ಅಥವಾ ಮಿಂಚನ್ನೆಲ್ಲಾ ಕಲೆಹಾಕಿ ಕಡೆದ ಪರಿಣಾಮ ಈ ಖಡ್ಗ ಹುಟ್ಟಿದೆಯೇನೋ! ಮಿಂಚಿನಂತೆ ಹೊಳೆಯುತ್ತಿದೆ.ಈ ಖಡ್ಗವು ಎಷ್ಟು ಹೊಳಪಿಂದ ಕೂಡಿದೆಯೆಂದರೆ ಸೂರ್ಯನ ಬೆಳಕನ್ನೂ ಮರೆಮಾಚುವ ಹೊತ್ತು ಉರಿಯುತ್ತಿರುವ ಕಾಡ್ಗಿಚ್ಚಿನಂತೆ ತೋರುತ್ತಿದೆ. ಬರಿಯ ಆಯುಧವಾಗದೇ ತುಂಬಾ ಪ್ರಭಾವಶಾಲಿಯಾಗಿಯೂ ಈ ಖಡ್ಗವು ನನ್ನನ್ನು ಆಕರ್ಷಿಸಿದೆ. ಹೀಗೆ ಸಾಮಾನ್ಯ ಖಡ್ಗವನ್ನೂ ಅಸಾಮಾನ್ಯವೆಂಬಂತೆ ವರ್ಣಿಸುವ ಭಾಸನ ಗುಣ ನಮಗೆ ಮಾದರಿ. ನಾವು ಗುಣವಂತರ ಗುಣವನ್ನೂ ಗುರುತಿಸದೆ ಕಣ್ಣಿದ್ದೂ ಕುರುಡರಾಗಿದ್ದೇವೆ. ಪ್ರತಿ ವ್ಯಕ್ತಿಯ ಉತ್ತ...
🌾ಕೃಪನ ಜನ್ಮ ವೃತ್ತಾಂತ🖋 *ಹಿಂದೆ ಗೌತಮಮುನಿಗೆ ಶರದ್ವಂತನೆಂಬ ಮಗನಿದ್ದನು.ಅವನು ಜನಿಸುವಾಗಲೇ ಬಾಣಗಳ ಜೊತೆಗೆ ಜನಿಸಿದನು.ಅವನಿಗೆ ವೇದಗಳ ಅಧ್ಯಯನಕ್ಕಿಂತ ಧನುರ್ವಿದ್ಯೆಯಲ್ಲಿ ಆಸಕ್ತಿ ಹೆಚ್ಚಿತ್ತು. ತಪಸ್ಸಿನಿಂದ ಎಲ್ಲ ಅಸ್ತ್ರಗಳನ್ನು ಅವನು ಸಂಪಾದಿಸಿದನು. ಆ ಶರದ್ವಂತನು ತನ್ನ ತಪಸ್ಸಿನಿಂದ ಹಾಗೂ ಧನುರ್ವಿದ್ಯೆಯಲ್ಲಿ ಇದ್ದ ಪ್ರಾವೀಣ್ಯದಿಂದ ಇಂದ್ರನಿಗೂ ಹೆದರಿಕೆ ಹುಟ್ಟಿಸಿದನು.ಅವನ ತಪಕ್ಕೆ ವಿಘ್ನ ಉಂಟುಮಾಡುವ ಸಲುವಾಗಿ ಇಂದ್ರನು ಜಾಲಪದಿಯೆಂಬ ಕನ್ಯೆಯನ್ನು ಕಳುಹಿದನು.ಆ ಕನ್ಯೆ ಮುನಿಯನ್ನು ಮೋಹಗೊಳಿಸಿದಳು.ಏಕ ವಸ್ತ್ರಧಾರಿ ಆ ಸುಂದರಿಯನ್ನು ನೋಡಿದ ಶರದ್ವಂತನ ಮೈಯಲ್ಲಿ ನಡುಕ ಉಂಟಾಗಿ ಜ್ಞಾನಿಯಾದ ಅವನಿಗೆ ತಿಳಿಯದೇ ಆಕಸ್ಮಿಕವಾಗಿ ರೇತಸ್ಸು ಸ್ಖಲಿತವಾಯಿತು.ಆಮೇಲೆ ಬೇಸರಗೊಂಡ ಆ ಮುನಿ ಆ ಪ್ರದೇಶದ ಬಿಟ್ಟು ತೆರಳಿದನು. ಅವನ ವೀರ್ಯ ಒಂದು ಜೊಂಡುಹುಲ್ಲಿನಲ್ಲಿ ಬೆಳೆದು ಎರಡು ಭಾಗವಾಗಿ ಅವಳಿ ಮಕ್ಕಳು ಜನಿಸಿದರು. ವನ್ಯಗಳೊಡನೆ ಹಾಗೆಯೇ ಬೆಳೆಯುತ್ತಿರುವಾಗ ಬೇಟೆಗೆಂದು ಬಂದಿದ್ದ ಶಂತನು ಬಿಲ್ಲು ಕೃಷ್ಣಾಜಿನ ಸಮೇತರಾದ ಈ ಮಕ್ಕಳನ್ನು ನೋಡಿ ಧನುರ್ವಿದ್ಯೆಯಲ್ಲಿ ಪಾರಂಗತನಾದ ಬ್ರಾಹ್ಮಣರ ಮಕ್ಕಳಿರಬೇಕೆಂದು ನಿಶ್ಚಯಿಸಿ ಸೈನಿಕರು ತೋರಿಸಿದ ಆ ಮಕ್ಕಳನ್ನು ಎತ್ತಿಕೊಂಡು ಕೃಪೆಯಿಂದ ಇವರು ನನ್ನ ಮಕ್ಕಳೇ ಎಂದು ಹೇಳಿ ಅರಮನೆಗೆ ಕರೆದುಕೊಂಡು ಹೋದನು. ಆಮೇಲೆ ಯಥೋಚಿತ ಸಂಸ್ಕಾರ ಕೊಟ್ಟು ಬೆಳೆಸಿದನು. ಹೀಗೆ ಕೃಪೆಯಿಂದ ಬೆಳೆಸಿದ್ದರಿಂದ ಆ ಮಕ್ಕಳಿಗ...
🌹ಶಾಕುಂತಲದ ಒಂದು ಸುಮ🌹 *ತವ ಕುಸುಮಶರತ್ವಂ ಶೀತರಶ್ಮಿತ್ವಮಿಂದೋ: ದ್ವಯಮಿದಮಯತಾರ್ಥಂ ದೃಶ್ಯತೇ ಮದ್ವಿಧೇಷು | ವಿಸೃಜತಿ ಹಿಮಗರ್ಭೈರಗ್ನಿಮಿಂದುರ್ಮಯೂಖೈ: ತ್ವಮಪಿ ಕುಸುಮಬಾಣಾನ್ ವಜ್ರಸಾರೀಕರೋಷಿ ||* *_ಶಕುಂತಲೆಯನ್ನು ನೆನೆಯುತ್ತಾ ರಾಜ ದುಷ್ಯಂತ ನಿಟ್ಟುಸಿರು ಬಿಡುತ್ತಿದ್ದಾನೆ.ಮನ್ಮಥನ ಪೀಡೆಗೊಳಗಾಗಿ ಅವನನ್ನು ಪ್ರಶ್ನಿಸುತ್ತಿರುವನು ಈ ಶ್ಲೋಕದಲ್ಲಿ. ನೀನು ಮತ್ತು ಚಂದ್ರರಿಬ್ಬರೂ ವಿಶ್ವಾಸಿಗಳೆಂದು ನಾನು ನಂಬಿದರೆ ನನ್ನಂತಹ ಕಾಮಿಜನರನ್ನು ನೀನು ಮೋಸಗೊಳಿಸುತ್ತಿರುವೆ. ಹೂವು ನಿನ್ನ ಬಾಣ.( ಅರವಿಂದ, ಅಶೋಕ,ಮಾವು,ಮಲ್ಲಿಗೆ,  ನೀಲೋತ್ಪಲ ಅಥವಾ ನೈದಿಲೆ ಮನ್ಮಥನ ಐದು ಕುಸುಮಶರಗಳು) ಚಂದ್ರನ ಕಿರಣ ಎಂದಿಗೂ ತಂಪು. ಇವೆರಡೂ ನನ್ನ ವಿಷಯದಲ್ಲಿ ಸುಳ್ಳಾಗಿದೆ. ರಾತ್ರಿ ಆದ ಹಾಗೆ ಉಂಟಾಗುವ ಚಂದ್ರನ ಬೆಳದಿಂಗಳನ್ನು ನೋಡುತ್ತಾ ನನ್ನ ಪ್ರಿಯೆಯ ನೆನಪು ಒತ್ತರಿಸಿ ಬರುತ್ತಿದೆ.ಆ ವಿರಹದಿಂದ ಚಂದ್ರನ ಕಿರಣಗಳು ಬೆಂಕಿಯನ್ನು ಸುರಿಸುತ್ತಿವೆಯೇನೋ ಎಂಬಂತೆ ಕಾಮಾಗ್ನಿ ಮೈಯೆಲ್ಲ ಆವರಿಸಿ ಸುಡುತ್ತಿದೆ. ಹಾಗಾಗಿ ಚಂದ್ರನ ಬೆಳದಿಂಗಳು ನನ್ನ ಪಾಲಿಗೆ ಬೆಂಕಿಯಂತಿದೆ. ಇನ್ನು ಪುಷ್ಪಗಳನ್ನು ನೋಡುತ್ತಾ ಅಥವಾ ನಿನ್ನ ಪ್ರಭಾವದಿಂದ ನೋಡಿ ಮತ್ತೆ ಆ ನನ್ನ ಮನದನ್ನೆಯ ಕೋಮಲ ಅಂಗಾಂಗಗಳ ಹಾಗೂ ಸುಂದರ ಮುಖದ ಸ್ಮರಣೆ ಬಂದು ನನ್ನ ವಿರಹ ವೇದನೆ ಹೆಚ್ಚುವುದೇ ಹೊರತು ಕಡಿಮೆಯಾಗುತ್ತಿಲ್ಲ. ಹೀಗಾಗಿ ಆ ನಿನ್ನ ಹೂವಿನ ಬಾಣಗಳು ನನ್ನ ಪಾಲಿಗೆ ವಜ್ರಾಯುಧದಂತೆ ಕಠ...
🌺ಅವಿಮಾರಕದ ಸುಂದರ ಶ್ಲೋಕ :   🌺                            *ನ ತಥಾ ರತ್ನಮಾಸಾದ್ಯ ಸುಜನ: ಪರಿತುಷ್ಯತಿ| ಯಶಾ ತತ್ ತದ್ಗತಾಕಾಂಕ್ಷೇ ಪಾತ್ರೇ ದತ್ವಾ ಪ್ರಹೃಷ್ಯತಿ||*  _ವಿದ್ಯಾಧರನು ನಾಯಕನಿಗೆ ಮಾಯಾ ಉಂಗುರವನ್ನು ನೀಡುತ್ತಾನೆ. ಸ್ವೀಕರಿಸಿದ ಅವಿಮಾರಕನು ಅನುಗೃಹೀತನಾದೆ ಎನ್ನುತ್ತಾನೆ. ಆಗ ವಿದ್ಯಾಧರನು ನಾನೇ ನಿನ್ನಿಂದ ಅನುಗ್ರಹಿಸಲ್ಪಟ್ಟೆ ಎನ್ನುತ್ತಾ ಈ ಸಾಲನ್ನು ನುಡಿಯುವನು. ಸಜ್ಜನರು ರತ್ನವನ್ನು ಪಡೆದರೂ ಅಷ್ಟು ಸಂತೋಷಪಡುವುದಿಲ್ಲ. ಎಷ್ಟೆಂದರೆ ಆ ರತ್ನದ ಮೇಲೆ ಆಸೆ ಇಲ್ಲದೆ ಅವಶ್ಯಕತೆ ಇರುವ ವ್ಯಕ್ತಿಗೆ ಕೊಟ್ಟಾಗ ಖುಷಿಪಡುವಷ್ಟು. ತಾವು ಪಡೆದು ಆನಂದಿಸುವುದಕ್ಕಿಂತಲೂ ಯೋಗ್ಯವ್ಯಕ್ತಿಗೆ ಅಥವಾ ಅವಶ್ಯಕತೆ ಇದ್ದವರನ್ನು ಇದು ಸೇರಿತಲ್ಲ ಎಂಬ ಆನಂದವೇ ಹೆಚ್ಚಿನ ಸುಖವನ್ನು ತಂದುಕೊಡುತ್ತದೆ. ಇದನ್ನೇ ಹೇಳಿದ್ದು 'ವೃದ್ಧಂ ಪಾತ್ರೇಷು ನಿಕ್ಷಿಪೇತ್„ ಎಂಬುದಾಗಿ. ನಮ್ಮಲ್ಲಿ ಹೆಚ್ಚಿರುವುದನ್ನು ಯೋಗ್ಯತೆ ಇರುವಲ್ಲಿ ಕೊಟ್ಟರೆ ಅದು ಆನಂದಜನಕವಾಗುತ್ತದೆ. ಇಲ್ಲಿ ಪ್ರಕೃತ ವಿದ್ಯಾಧರನ ಬಳಿ ಇದ್ದ ಅಮೂಲ್ಯ ರತ್ನ ಅಥವಾ ಉಂಗುರಕ್ಕೆ ಇಷ್ಟು ದಿನ ವಿಶೇಷವಾದ ಕಾರ್ಯ ವಾ ಪ್ರಯೋಜನ ಇರಲಿಲ್ಲ. ಆದರೆ ಅದು ಅವಿಮಾರಕನ ಪ್ರಿಯಳನ್ನು ಸೇರಲು ಸಹಾಯಕವಾಗಿ ಸಾರ್ಥಕವಾಯಿತು. ನಮ್ಮಲ್ಲಿ ಇಂತಹ ಗುಣ ಬೆಳೆಸಿಕೊಳ್ಳೊಣ. ನಮಗಿಂತ ಇನ್ನೊಬ್ಬರು ಏನಾದರ...
🌹ಶಾಕುಂತಲದ ಸುಂದರ ಪುಷ್ಪ : 🌹                               *ಜಾನೇ ತಪಸೋ ವೀರ್ಯಂ ಸಾ ಬಾಲಾ ಪರವತೀತಿ ಮೇ ವಿದಿತಮ್ |ಅಲಮಸ್ಮಿ ತತೋ ಹೃದಯಂ ತಥಾಪಿ ನೇದಂ ನಿವರ್ತಯಿತುಮ್ ||*            _ದುಷ್ಯಂತನು ಶಕುಂತಲೆಯನ್ನು ನೋಡಿ ಅವಳಲ್ಲೇ ಮನವನ್ನು ಇಟ್ಟಿದ್ದಾನೆ. ಅವಳನ್ನು ಕ್ಷಣಕಾಲ ಬಿಟ್ಟಿರಲು ಸಾಧ್ಯವಾಗುತ್ತಿಲ್ಲ. ಆದರೆ ಪರಿಸ್ಥಿತಿ ಭಿನ್ನವಾಗಿದೆ.ಇಂತಹ ಸಂದರ್ಭದಲ್ಲಿ ಆಡುವ ಮಾತು. ಋಷಿಗಳ ತಪಸ್ಸಿನ ಸಾಮರ್ಥ್ಯ ಎಷ್ಟೆಂದು ಬಲ್ಲೆನು.ಶಾಪದಿಂದ ಭಸ್ಮ ಮಾಡಬಲ್ಲ ಮಹನೀಯರು. ಹಾಗೆಯೇ ಆ ಶಕುಂತಲೆ ಪರಾಧೀನಳು ಸ್ವತಂತ್ರಳಲ್ಲ, ಅವಳ ನಿರ್ಧಾರ ಹಿರಿಯರನ್ನು ಅವಲಂಬಿಸಿ ಸಾಕಾರಗೊಳ್ಳುವುದು ಎಂಬುದನ್ನೂ ಬಲ್ಲೆ. ಹಾಗಿದ್ದರೂ ಈ ಕೆಟ್ಟ ಮನಸ್ಸು ಅವಳನ್ನು ನಿರಂತರವಾಗಿ ಧ್ಯಾನಿಸುತ್ತಿದೆ.ಅವಳನ್ನು ಬಿಟ್ಟಿರುವುದು ಅಸಾಧ್ಯವೆಂದೆನಿಸುತ್ತಿದೆ. ಶಕುಂತಲೆಯನ್ನು ಪಡೆಯುವುದು ಋಷಿಗಳ ನಿರ್ಧಾರವನ್ನು ಅವಲಂಬಿಸಿದೆ, ಒಂದು ವೇಳೆ ಅದಕ್ಕೂ ಮೀರಿ ನಡೆದರೆ ಋಷಿಗಳ ಕೋಪಕ್ಕೆ ಗುರಿಯಾಗಿ ಏನು ಬೇಕಾದರೂ ಘಟಿಸಬಹುದು. ಆದರೆ ಯಾವಾಗಲೂ ಚಂಚಲವಾದ ಈ ಮನ ಈ ಸಮಯದಲ್ಲಿ ಶಕುಂತಲೆಯನ್ನು ಬಿಟ್ಟು ಚಲಿಸುತ್ತಿಲ್ಲ. ಏನು ಮಾಡಲಿ ಈ ಸಮಯದಿ? ನಮ್ಮ ಪರಿಸ್ಥಿತಿ ಹಲವು ಬಾರಿ ಹೀಗೆಯೇ ಇರುತ್ತದೆ. ಕೆಟ್ಟದ್ದೆಂದು ತಿಳಿದರೂ ಅಥವಾ ಸಿಗುವುದು...
🌺ಅವಿಮಾರಕದ ಒಂದು ಕಲ್ಪನಾ ಪ್ರಧಾನ ಶ್ಲೋಕ :🌺     *ಪ್ರಾಕ್ಸಂಧ್ಯಾ ಕುರುಷೂತ್ತರೇಷು ಗಮಿತಾ ಸ್ನಾತಂ ಪುನರ್ಮಾನಸೇ ಭೂಯೋ ಮಂದರಕಂದರಾಂತರತಟೇಷ್ವಾಮೋದಿತಂ ಯೌವನಮ್ | ಕ್ರೀಡಾರ್ಥಂ ಹಿಮವದ್ಗುಹಾಸು ಚರಿತಾ ದೃಷ್ಟಿಶ್ಚ ಸಂಲೋಭಿತಾ ಯಾಸ್ಯಾವೋ ಮಲಯಸ್ಯ ಚಂದನನಗಾನ್ಮಧ್ಯಾಹ್ನನಿದ್ರಾಸುಖಾನ್ ||*                 _ವಿದ್ಯಾಧರನೊಬ್ಬ ಲೋಕಾಭಿರಾಮವಾಗಿ ಪ್ರಿಯೆಗೆ ನುಡಿಯುವ ಮಾತು. ಉತ್ತರ ಕುರು ದೇಶದಲ್ಲಿ ಬೆಳಗಿನ ಸಂಧ್ಯಾವಂದನೆ ಮಾಡಲ್ಪಟ್ಟಿತು.ಅಥವಾ ಮುಂಜಾನೆಯ ಸುಂದರ ಸಮಯ ಅಲ್ಲಿ ಕಳೆಯಲ್ಪಟ್ಟಿತು. ಮತ್ತೆ ಸ್ನಾನವನ್ನು ಪವಿತ್ರವಾದ ಬ್ರಹ್ಮನ ಸಂಕಲ್ಪದಿಂದ ನಿರ್ಮಾಣವಾದ ಮಾನಸಸರೋವರದಲ್ಲಿ ಆಯಿತು.ಮನಸಾರೆ ಅಲ್ಲಿ ಮಿಂದೆವು. ಸ್ವಲ್ಪ ಹೊತ್ತಿನ ನಂತರ ಮಂದರ ಪರ್ವತದ ಗುಹೆಗಳಲ್ಲಿ ವಿಹರಿಸಿ ಯೌವನವು ಸಾಫಲ್ಯವನ್ನು ಹೊಂದಿತು. ಮನಸೋ ಇಚ್ಛೆ ಯಾರ ಹಂಗೂ ಇಲ್ಲದಂತೆ ವಿಹರಿಸಿದೆವು. ಪುನ: ಮನದ ಮುದಕ್ಕಾಗಿ ಹಿಮಾಲಯದ ತಪ್ಪಲು ಪ್ರದೇಶದ ಗುಹೆಗಳನ್ನೆಲ್ಲ ವೀಕ್ಷಿಸಿ ಕಣ್ಣಿನ ಬಯಕೆ ತೀರಿಸಿದೆವು. ಈಗ ಮಧ್ಯಾಹ್ನದ ನಿದ್ರೆಗಾಗಿ ಇಲ್ಲಿ ಕಾಣುತ್ತಿರುವ ಮಲಯ ಪರ್ವತದ ಗಂಧದ ಮರಗಳನ್ನು ಆಶ್ರಯಿಸಿ ಸ್ವಲ್ಪ ಕಾಲ ವಿರಮಿಸೋಣ. ವಿದ್ಯಾಧರನ ಮಾತಿನಂತೆ ನಮ್ಮ ಮನವೂ ಕೂಡ. ಕ್ಷಣದಲ್ಲೇ ಅನೇಕ ವಿಷಯಗಳನ್ನು ಅಪೇಕ್ಷಿಸುತ್ತದೆ.ಆದರೆ ಸಾಮರ್ಥ್ಯ ವಿದ್ಯಾಧರರಂತೆ ಇದ್ದರೆ ಅವೆಲ್ಲ ಈಡೆರಬಹುದು. ಇಲ್ಲದಿರೆ ಬರಿ...
🌹ಶಾಕುಂತಲದ ಸುಂದರ ಪುಷ್ಪ🌹    *ಕೃತ್ಯಯೋರ್ಭಿನ್ನದೇಶತ್ವಾತ್ ದ್ವೈಧೀಭವತಿ ಮೇ ಮನ: / ಪುರ: ಪ್ರತಿಹತಂ ಶೈಲೇ ಸ್ರೋತ: ಸ್ರೋತೋವಹೋ ಯಥಾ //*                          _ದುಷ್ಯಂತನು ನುಡಿಯುವ ಮಾತು. ಒಂದೆಡೆ ಋಷಿಗಳು ರಾಕ್ಷಸರ ತೊಂದರೆಯನ್ನು ನಿವಾರಿಸಲು ನಿವೇದಿಸಿಕೊಂಡಿದ್ದಾರೆ. ಇನ್ನೊಂದೆಡೆ ತಾಯಿ ಪುತ್ರಪಿಂಡಪಾಲನವೆಂಬ ವ್ತತಾಚರಣೆಗೆ ಶೀಘ್ರ ಹಿಂತಿರುಗಿ ಬರುವಂತೆ ಆಜ್ಞಾಪಿಸಿದ್ದಾಳೆ. ಹೀಗಿರಲಿ ಏನು ಮಾಡಲಿ ಎಂದೇ ತೋಚುತ್ತಿಲ್ಲ. ಮಾಡಬೇಕಾದ ಈ ಎರಡು ಕಾರ್ಯಗಳು ಬೇರೆ ಬೇರೆ ಪ್ರದೇಶಗಳಲ್ಲಿರುವುದರಿಂದ ನನ್ನ ಮನಸ್ಸು ಎದುರಿಗೆ ಬಂದ ಬಂಡೆಗೆ ಅಪ್ಪಳಿಸಿ ಎರಡಾದ ನದಿಯ ಪ್ರವಾಹದಂತೆ ಹೋಳಾಗಿದೆ. ಎರಡೂ ಮಾಡಲೇಬೇಕಾದ ಅವಶ್ಯಕ ಕಾರ್ಯಗಳು. ಯಾವುದನ್ನೂ ಬಿಡುವ ಹಾಗಿಲ್ಲ. ನದಿಯ ಪ್ರವಾಹವು ಎದುರಿಗೆ ದೊಡ್ಡ ಬಂಡೆ ಸಿಕ್ಕಿದಾಗ ಹೇಗೆ ಎರಡಾಗಿ ಹರಿಯುವುದೋ ನನಗೆ ಮನವು ಎರಡರ ಬಗೆಗೂ ಆಲೋಚಿಸುತ್ತಿದೆ.ನಮ್ಮ ಸ್ಥಿತಿಯೂ ಕೆಲವೊಮ್ಮೆ ದುಷ್ಯಂತನಂತೆಯೇ ಆಗುತ್ತದೆ. ಅಗತ್ಯ ಮಾಡಬೇಕಾದ ಕೆಲಸಗಳನೇಕವಿದ್ದಾಗ ಮನವು ಯೋಚಿಸುವುದನ್ನೇ ನಿಲ್ಲಿಸುತ್ತದೆ ಅಥವಾ ಎಲ್ಲದರ ಬಗ್ಗೆಯೂ ಯೋಚಿಸುತ್ತದೆ ಅಲ್ಲವೇ._                           *ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.*
🌺ಅವಿಮಾರಕದ ಒಂದು ಶ್ಲೋಕ :🌺  *ಅಸಿತಜಲವೃಂದೈರ್ಮಿಶ್ರಸಂದಿಗ್ಧಶೃಂಗೋ ಗಗನಚರಕುಲಾನಾಂ ವಿಶ್ರಮಸ್ಥಾನಭೂತ: / ಸುಕವಿಮತಿವಿಚಿತ್ರೋ   ಮಿತ್ರಸಂಯೋಗಹೃದ್ಯೋ ನರಪತಿರಿವನೀಚೋ ದೃಶ್ಯತೇ ನಿಷ್ಫಲಾಢ್ಯ: //*         _ಅವಿಮಾರಕನು ಪ್ರಿಯಳ ವಿರಹ ತಾಳಲಾರದೆ ಅಗ್ನಿಗೆ ಹಾರುವನು.ಅಗ್ನಿಸಂಜಾತನೇ ಆದದ್ದರಿಂದ ಅವನನ್ನು ಬೆಂಕಿ ಸುಡುವುದಿಲ್ಲ. ಬೇಸರದಿಂದ ಪರ್ವತದಿಂದ ಕೆಳಗೆ ಹಾರಲು ಯೋಚಿಸುತ್ತಾನೆ. ಆಗ ಪರ್ವತವನ್ನು ಕುರಿತ ಅವನ ಅನಿಸಿಕೆ. ಕಪ್ಪಾದ ಮೋಡಗಳು ಎಲ್ಲೆಡೆ ಸುತ್ತುವರಿದು ಪರ್ವತಕ್ಕೆ ಕೋಡುಗಳಿವೆಯೇನೋ ಎಂಬಂತೆ ತೋರುತ್ತಿದೆ. ಅಥವಾ ಕೊಬ್ಬಿದ ಗೂಳಿಯಂತೆ ಪರ್ವತ ಶೋಭಿಸುತ್ತಿದೆ. ಆಕಾಶದಲ್ಲಿ ಸಂಚರಿಸುವ ಯಕ್ಷ ಕಿನ್ನರ ಗಂಧರ್ವ ವಿದ್ಯಾಧರ ರಿಗೆ ಮಧ್ಯದ ವಿಶ್ರಾಂತಿ ತಾಣವಾಗಿದೆ ಈ ಗಿರಿ. ಕವಿಗಳ ಬುದ್ಧಿಯಂತೆ ಈ ಪರ್ವತವೂ ವಿಚಿತ್ರವಾಗಿದೆ. ಕವಿಗಳು ಹೇಗೆ ವಿಭಿನ್ನವಾಗಿ ಆಲೋಚಿಸಿ ಮೆರೆಯುತ್ತಾರೋ ಹಾಗೆಯೇ ಈ ಶೈಲವೂ ನಾನಾಘಟನೆಗಳ ಸಾಕ್ಷಿಭೂತವಾಗಿ ತನ್ನ ಮನದಿಂಗಿತವನ್ನು ಬಿಟ್ಟುಕೊಡದೆ ವಿರಾಜಿಸುತ್ತಿದೆ. ಮಿತ್ರರ ಸಂಪರ್ಕವು ಕವಿಗಳಿಗೆ ಆನಂದ ಜನಕವಾದಂತೆ ಇದೂ ಮಂದಾನಿಲದ ಸಂಪರ್ಕದಿಂದ ಆನಂದಿತವಾಗಿದೆ. ಆದರೆ ಹೀಗೆಲ್ಲ ಇದ್ದು ಎಲ್ಲ ರೀತಿಯ ಸೌಲಭ್ಯವಿದ್ದು ಈ ಪರ್ವತದಿಂದ ಊರ ಜನಕ್ಕೆ ಆಗುವ ಪ್ರಯೋಜನವಾದರೂ ಏನು? ಶೂನ್ಯವೇ ಸರಿ. ಹೇಗೆಂದರೆ ಸಂಪತ್ತು ತುಂಬಿತುಳುಕುತ್ತಿರುವ ರಾಜನಿಗೆ ದಾನಬುದ್ಧಿ ಇಲ್ಲದಿ...
🌹ಶಾಕುಂತಲದ ಸುಂದರ ಕುಸುಮ.🌹                     *ಅಧ್ಯಾಕ್ರಾಂತಾ ವಸತಿರಮುನಾಪ್ಯಾಶ್ರಮೇ ಸರ್ವಭೋಗ್ಯೇ ರಕ್ಷಾಯೋಗಾದಯಮಪಿ ತಪ: ಪ್ರತ್ಯಹಂ ಸಂಚಿನೋತಿ/ಅಸ್ಯಾಪಿ ದ್ಯಾಂ ಸ್ಪೃಶತಿ ವಶಿನಶ್ಚಾರಣದ್ವಂದ್ಚಗೀತ: ಪುಣ್ಯ: ಶಬ್ದೋ ಮುನಿರಿತಿ ಮುಹು: ಕೇವಲಂ ರಾಜಪೂರ್ವ://*                  _ರಾಜನ ಬಗ್ಗೆ ಋಷಿಗಳಾಡುವ ಮಾತು. ಈ ದುಷ್ಯಂತನು ಎಲ್ಲ ಭೋಗಗಳಿಗೂ ಅನುಕೂಲವಾದ ಗೃಹಸ್ಥಾಶ್ರಮದಲ್ಲಿ ಇದ್ದಾನೆ. ( ಆಶ್ರಮಗಳಲ್ಲಿ ಶ್ರೇಷ್ಠ. ಏಕೆಂದರೆ ಬ್ರಹ್ಮಚಾರಿಗಳು ಸನ್ಯಾಸಿಗಳು ಭಿಕ್ಷೆಗಾಗಿ ಅವಲಂಬಿಸಿರುವ ಆಶ್ರಮ. ಸಕಲ ಭೋಗಗಳನ್ನು ಅನುಭವಿಸಲು ಇಲ್ಲಿ ಮಾತ್ರ ಅವಕಾಶ. ಉಳಿದ ಆಶ್ರಮಗಳಲ್ಲಿ ವಿಧಿ ನಿಷೇಧಗಳು ಹೆಚ್ಚು)  ಪ್ರಜೆಗಳ ರಕ್ಷಣೆಯಲ್ಲಿ ನಿರತನಾಗಿ ಪ್ರತಿದಿನವೂ ತಪಸ್ಸಿನ ಫಲವನ್ನು ಸಂಗ್ರಹಿಸುತ್ತಾನೆ.( ಪ್ರಜಾರಂಜಕಾತ್ ರಾಜ: ಎಂಬಂತೆ ರಾಜ ಶಬ್ದವು ಸಾರ್ಥಕವಾಗುವುದು ಪ್ರಜೆಗಳನ್ನು ಸರಿಯಾಗಿ ಸಲಹಿದಾಗ. ಪ್ರಜೆಗಳ ಆದಾಯದಲ್ಲಿ ಹಾಗೂ ತಪಸ್ಸಿನ ಆರನೇ ಒಂದಂಶ ರಾಜನಿಗೆ ಸೇರುತ್ತದೆ. ಅದರಿಂದಲೇ ಅವನ ಬದುಕು. ) ಜಿತೇಂದ್ರಿಯನಾದ ಇವನ ಕೀರ್ತಿಯು ಹೊಗಳುಭಟರಿಂದ ಜೋರಾಗಿ ಹಾಡಲ್ಪಡುತ್ತಾ ಸ್ವರ್ಗದ ತುದಿಯವರೆಗೂ ಕೇಳಲ್ಪಡುತ್ತದೆ. ಇವನು ರಾಜ ಎಂಬ ವಿಶೇಷಣದಿಂದ ಕೂಡಿರುವ ವಿಶಿಷ್ಟವಾದ ಮುನಿ ಎಂಬ ಹೆಸರನ್ನು ಪಡೆದು ಸಾರ್...
🌺ಅವಿಮಾರಕದ ಒಂದು ಸುಮ:🌺  *ಕನ್ಯಾಪುರಾತ್ ಕಥಮಪೀಹ ವಿನಿರ್ಗತಂ ಮೇ  ಭಾಗ್ಯಾವಶೇಷಮವಲಂಬ್ಯ ಶರೀರಮಾತ್ರಮ್ / ಅದ್ಯಾಪಿ ತನ್ಮಮ ಮನೋ ನ ತು ಮಾಮುಪೈತಿ ನಾವೇಕ್ಷತೇ ಮಯಿ ತಯಾ ಪ್ರಿಯಯಾವರುದ್ಧಮ್||*  _ನಾಯಕನ ಶೋಕ ಗೀತೆ. ಅವಳ ಅಂತ:ಪುರದಿಂದ ಹೇಗೋ ಅದೃಷ್ಟವಶಾತ್ ಹೊರಗೆಬಂದೆ. ( ಸಿಕ್ಕಿಬಿದ್ದಿದ್ದರೆ ರಾಜನು ಗಲ್ಲಿಗೇರಿಸುತ್ತಿದ್ದನೇನೋ) ಆದರೆ ಬಂದದ್ದು ಶರೀರ ಮಾತ್ರ. ಶರೀರಕ್ಕೆ ಇನ್ನೂ ಆಯುಸ್ಸು ಇರುವುದರಿಂದ ಯಾರಿಗೂ ತಿಳಿಯದೇ ಹೊರಬಂದೆ. ನನ್ನ ಮನವು ಮಾತ್ರ ಇಷ್ಟು ದಿನಗಳಾದ ಮೇಲೂ ಅವಳನ್ನು ಬಿಟ್ಟಿಲ್ಲ.ಅವಳನ್ನು ಬಿಟ್ಟಿರುವ ನನ್ನೆಡೆಗೆ ತಿರುಗಿಯೂ ನೋಡುತ್ತಿಲ್ಲ. ಶರೀರ ಹೊರಗೆ ಬಂದರೂ ಮನವೆಲ್ಲ ಅವಳ ಕನವರಿಕೆಯಲ್ಲೇ ಇದೆ. ಒಂದು ಕ್ಷಣವೂ ಬಿಟ್ಟಿರಲು ಮನ ಒಪ್ಪುತ್ತಿಲ್ಲ. ಆದರೂ ರಾಜದಂಡ ಭಯದಿಂದ ಹೊರಗೆ ಬಂದಿದ್ದೇನೆ. ಈಗ ಏನು ಮಾಡಲಿ ಎಂಬ ಚಿಂತೆ ನಾಯಕನಿಗೆ._ 📜 ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.
🌺ಅವಿಮಾರಕದ ಒಂದು ರಸಶ್ಲೋಕ:🌺  *ನೇತ್ರೇ ಬಾಷ್ಪಪರಿಪ್ಲುತೇ ಕರಧೃತೌ ವ್ಯಾವಲ್ಗಮಾನೌ ಸ್ತನೌ ಶ್ರೋಣೀ ಚಾಧಿಕಭಾರಿಕಾ ನ ವಿಶದೌ ಪಾದೌ ಹ್ರಿಯಾ ಸ್ಯಂದಿನೌ / ಏತತ್ ಸಪ್ತಪದಪ್ರಮಾಣಮಿಹ ಭೋ: ಸಂಪಾದ್ಯತೇ ಯೋಜನಾ ಯದ್ಯೇಷಾ ಕ್ಷಣದಾ ಭವೇತ್ ಯುಗಶತಂ ಧನ್ಯೋ ಮದನ್ಯ: ಕುತ: ||*  _ಸಖಿಯರು ಅವಿಮಾರಕ ಮತ್ತು ಕುರಂಗಿಯರ ಮಿಲನಕ್ಕೆ ವೇದಿಕೆ ಕಲ್ಪಿಸಿಕೊಟ್ಟು ತಾವು ತೆರಳಿದ್ದಾರೆ. ಆ ಸಮಯದಲ್ಲಿ ನಾಯಕನಾಡುವ ಮಾತು.ಇಂದು ನಾನು ಯೌವ್ವನದ ಋಣವನ್ನು ತೀರಿಸಿದೆ.ಈ ಸಂದರ್ಭದಲ್ಲಿ ಪ್ರಿಯೆಯೊಡನೆ ಕೈ ಹಿಡಿದು ನಡೆಯುತ್ತಾ ಅವಳವರ್ಣನೆಗೆ ತೊಡಗಿದ್ದಾನೆ. ಅವಳ ಕಣ್ಣುಗಳು ಆನಂದ ಬಾಷ್ಪವನ್ನು ಹೊರಹಾಕುತ್ತಿವೆ.ಸಂತೋಷದ ಭರದಲ್ಲಿ ಹಸ್ತಗತವಾದ ಸ್ತನಗಳು ಕಂಪಿಸುತ್ತಿವೆ.ಕಟಿಯ ಇಕ್ಕೆಲಗಳಲ್ಲಿ ಭಾರ ತಡೆಯದಾಗದಾಗಿದೆ. ನಾಚಿ ನೀರಾದ ಕಾಲುಗಳು ಸ್ಪಷ್ಟವಾಗಿ ಕಾಣುತ್ತಿಲ್ಲ. ಇದೇ ನಮ್ಮ ಸಪ್ತಪದಿ. ಮನದಲ್ಲಿ ಕಲ್ಪಿಸಿದ್ದೆಲ್ಲವನ್ನು ಆಚರಿಸುತ್ತಿದ್ದೇವೆ. ( ಏಳು ಹೆಜ್ಜೆ ಒಟ್ಟಿಗೆ ನಡೆಯುವುದೆ ಸಪ್ತಪದಿ. ಅಲ್ಲಿ ವಿವಾಹಾಂಗ ಇಲ್ಲಿ ವಿಹಾರಾಂಗ ಅಷ್ಟೇ.ಪ್ರತ್ಯೇಕ ವಿವಾಹದ ಕಾರ್ಯ ಬೇಕಿಲ್ಲ ಎನ್ನುವ ಅಭಿಪ್ರಾಯ. ) ಈ ಕ್ಷಣಿಕ ( ಮೂರು ಯಾಮದಷ್ಟು ಸಣ್ಣ ಸಮಯದ) ರಾತ್ರಿಯು ನೂರಾರು ಯುಗಗಳಲ್ಲಿ ನನಗೆ ಸಿಗುವುದಾದರೆ ನನಗಿಂತ ಧನ್ಯ ಅದೃಷ್ಟಶಾಲಿ ಯಾರಿದ್ದಾರೆ?  ನಾನೇ ಧನ್ಯ. ಆದರೆ ಸಮಯ ಅಲ್ಪ.ಪ್ರಿಯೆಯ ಜೊತೆ ಇರುವ ನೂರಾರು ನಿಮಿಷಗಳು ಮೂರು ನಿಮಿಷದಂತೆ ಕಳೆದ...
🌺ಅವಿಮಾರಕದ ಒಂದು ಕುಸುಮ:🌺 _ನ ತ್ವಂ ಪ್ರಿಯೇ ಮಮ ನವಾಸಿ ಮನೋಭಿಯೋಗಾತ್ ಕಿಂ ಕಂಪಸೆ ಪವನವೇಗಹತಾ ಲತೇವ/ ಭದ್ರೆ ಭಯಂ ತ್ಯಜ ಕುರುಷ್ವ ಮಯಿ ಪ್ರಸಾದಂ ಕಿಂ ವಾ ಪ್ರಲಪ್ಯ ಬಹುಧಾ ಶರಣಾಗತೋಸ್ಮಿ||  _ಅವಿಮಾರಕನು ಪ್ರಿಯೆಯನ್ನು ಸಮೀಪಿಸಿದ್ದಾನೆ. ಅವಳಾದರೋ ಕನಸಿನಲ್ಲಿ ವಿಹರಿಸುತ್ತಿರುವಳು. ಅಕಸ್ಮಾತ್ತಾಗಿ ಎಚ್ಚರಗೊಂಡು ಸಖಿಗೆ ಆಲಂಗಿಸಿಕೊಂಡು ಸಮಾಧಾನಿಸುವಂತೆ ಹೇಳುವಳು.ಸಖಿಯು ನಾಯಕನಿಗೆ ಆ ಅವಕಾಶ ಬಿಟ್ಟುಕೊಡುತ್ತಾಳೆ. ಪೂರ್ತಿ ಎಚ್ಚರಗೊಂಡ ನಾಯಕಿ ನಾಚಿನೀರಾಗುತ್ತಾಳೆ ತನ್ನ ಕೃತ್ಯಕ್ಕಾಗಿ. ಆಗ ನಾಯಕ ನುಡಿಯುವ ಮಾತು. ಪ್ರಿಯೆ ಹೆದರಬೇಡ. ನೀನೆನೂ ನನಗೆ ಹೊಸಬಳಲ್ಲ. ಮನದಲ್ಲಿ ಎಂದೋ ಮೂಡಿರುವ ಪ್ರೇಮದ ಕಾರಣದಿಂದ ತುಂಬಾ ಪರಿಚಿತಳಾಗಿದ್ದಿ.ನನ್ನನ್ನು ನೋಡಿ ಜೋರಾಗಿ ಬೀಸುವ ಗಾಳಿಗೆ ನಡುಗುವ ಬಳ್ಳಿಯಂತೆ ಏಕೆ ನಡುಗುವಿ? ಶುಭಳೇ ಭಯವನ್ನು ಬಿಡು.ನನ್ನಲ್ಲಿ ಕೃಪೆ ತೋರು.ಹೆಚ್ಚೇನು ಹೇಳಲಿ ನಿನ್ನಲ್ಲಿ ಶರಣಾಗತನಾಗಿದ್ದೇನೆ.ಶರಣು ಬಂದವರನ್ನು ಸಲಹುವುದು ಕ್ಷತ್ರಿಯರ ಸ್ವಭಾವ. ಹಾಗಾಗಿ ನನ್ನ ಪ್ರೀತಿಯನ್ನು ಅಂಗೀಕರಿಸಿ ನನ್ನನ್ನು ರಕ್ಷಿಸು.ನಿನ್ನನ್ನು ರಕ್ಷಿಸಿಕೊ.ಅಂಜದಿರು ಅಳುಕದಿರು. ಆಲಿಂಗಿಸಿದ್ದು ನಿನ್ನ ಬಹುಕಾಲದ ಮನದ ಅರಸ ಎಂಬ ಭಾವ._ 📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.
🌺ಅವಿಮಾರಕದ ಸುಂದರ ಶ್ಲೋಕ : ನಾಯಕನು ಎವೆಯಿಕ್ಕದೆ ಮನದರಸಿಯ ಸೌಂದರ್ಯ ಆಸ್ವಾದಿಸುತ್ತಿದ್ದಾನೆ. ಆಗ ಬಂದ ನಾಯಕಿಯ ಸಖಿಯು ಇವಳನ್ನು ಎಬ್ಬಿಸಲೇ ಎಂದಾಗ ಹೇಳುವ ಶ್ಲೋಕ🌺  *ಅಹಂ ದ್ವಿನೇತ್ರೋ ನ ಸಹಸ್ರನೇತ್ರೋ ಮತಿಶ್ಚ ಮೂಢಾ ಸುಚಿರಾಭಿಲಾಷಾತ್/ ಕಾಮಾರ್ಣವಸ್ಯಾದ್ಯ ತು ದೃಷ್ಟಪಾರಂ ಚೇಕ್ರೀಡ್ಯತಾಂ ಮೇ ಸುಖಮಕ್ಷಿಯುಗ್ಮಮ್||*  _ನನಗೆ ಕಣ್ಣುಗಳೆರಡೇ ಇರುವುದು, ಸಾವಿರಕಣ್ಣುಗಳಿಲ್ಲ,ಇದ್ದರೆ ಒಂದೇ ಸಲ ಪ್ರಿಯೆಯ ರೂಪವನ್ನು ಕಣ್ತುಂಬಿಕೊಳ್ಳಬಹುದಿತ್ತು,ಏನು ಮಾಡಲಿ ಎರಡೂ ಎವೆಯಿಕ್ಕದೆ ದಿಟ್ಟಿಸುತ್ತಿವೆ. ತುಂಬಾ ಸಮಯದ ನಂತರ ಪ್ರಿಯೆಯ ದರ್ಶನವು ಬುದ್ಧಿಗೆ ಮಂಕು ಬಡಿಯುವಂತೆ ಮಾಡಿದೆ.ಸಂತೋಷದ ಭರದಲ್ಲಿ ಏನು ಮಾಡಬೇಕೆಂದೇ ತೋಚುತ್ತಿಲ್ಲ. ಬಯಕೆಯೆಂಬ ಸಮುದ್ರದ ತೀರವನ್ನು ಇಂದು ಕಂಡುಕೊಂಡೆ. ಇಷ್ಟು ದಿನ ಬಯಸುತ್ತಿದ್ದ ಪ್ರಿಯಳು ಅತ್ಯಂತ ಸಮೀಪದಲ್ಲೇ ಇರುವುದರಿಂದ ಬಯಕೆಯೆಂಬ ದೊಡ್ಡ ಸಮುದ್ರವನ್ನು ದಾಟಿದ್ದೇನೆ.ಇಂತಹ ಸಮಯದಲ್ಲಿ ಕಣ್ಣುಗಳೆರಡೂ ಅವಳ ರೂಪವೆಂಬ ಅಮೃತವನ್ನು ಯಥೇಚ್ಛವಾಗಿ ಕುಡಿದು ಆನಂದದಲ್ಲಿ ವಿಹರಿಸಲಿ. ಅವುಗಳ ಸುಖಕರವಾದ ವಿಹಾರಕ್ಕೆ ತೊಂದರೆ ಒಡ್ಡುವುದು ಬೇಡ.ಹಾಗಾಗಿ ಪ್ರಿಯೆ ನಿದ್ದೆಯಲ್ಲೇ ಇರಲಿ. ಎಬ್ಬಿಸುವುದು ಬೇಡ ಎನ್ನುವ ಭಾವ._ 📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.
🌺ಅವಿಮಾರಕದ ಸುಂದರ ಸುಮ🌺 *ದೃಷ್ಟಿರ್ನತೃಪ್ಯತಿ ಪರಿಷ್ವಜತೀವ ಸಾಂಗಂ ಬುದ್ಧಿಸ್ತ್ವರಾಂ ವ್ರಜತಿ ಬೋಧಯತೀವ ಸುಪ್ತಾಮ್ / ರಾಗೋಭಿಚೋದಯತಿ ಸಾದಯತೀವ ಚಾಂಗಂ ಹರ್ಷಾತ್ ಪ್ರಸೀದತಿ ವಿಮುಹ್ಯತಿ ಚಾಂತರಾತ್ಮಾ||*  _ನಾಯಕನು ನಡುರಾತ್ರಿ ಕಳ್ಳ ದಾರಿಯಲ್ಲಿ ರಾಜಪುತ್ರಿಯ ವಾಸಸ್ಥಾನ ತಲುಪಿದ್ದಾನೆ. ಅವಳನ್ನು ನೋಡುತ್ತಾ ತನ್ನನ್ನು ತಾನು ಮರೆಯುತ್ತಿದ್ದಾನೆ. ಎಷ್ಟು ಸಲ ನೋಡಿದರೂ ಕಣ್ಣುಗಳು ತೃಪ್ತಿಯನ್ನು ಹೊಂದುತ್ತಿಲ್ಲ.ಆ ದೃಷ್ಟಿಯೇ ಪ್ರಿಯಳ ಶರೀರವನ್ನು ಆಲಿಂಗಿಸುವಂತಿದೆ. ( ಕೆಲವರ ನೋಟ ಕುಡಿದುಬಿಡುವಂತಿದೆ ಎಂದು ಹೇಳುವಂತೆ) ಬುದ್ಧಿಯು ಅವಸರದಿಂದ ಪ್ರಚೋದಿಸುತ್ತಿದೆ ಸುಖನಿದ್ರೆಯಲ್ಲಿರುವ ಪ್ರಿಯೆಯನ್ನು ಎಚ್ಚರಿಸುವಂತೆ. ಅವಳ ಮೇಲಿನ ಅನುರಾಗವು ಅಲೆ ಅಲೆಯಾಗಿ ಆವರಿಸುತ್ತಿದೆ. ಅಂಗಾಂಗಗಳ ನಿಯಂತ್ರಣ ಕಳೆದುಹೋಗಿ ಅವುಗಳು ಕಷ್ಟವನ್ನನುಭವಿಸುತ್ತಿವೆ. ಅತಿಯಾದ ಸಂತೋಷವು ಮನದಲ್ಲಿ ಭಾವನೆಗಳನ್ನು ಬಡಿದೆಬ್ಬಿಸುತ್ತಿದೆ. ಹಾಗೆಯೇ ಅತಿ ಆನಂದವು ಮೋಹವನ್ನು ಅಥವಾ ಮೂರ್ಛೆಯನ್ನೂ ತಂದುಕೊಡುತ್ತಲಿದೆ. ಬಹಳ ಸಮಯದ ನಂತರ ಅನುಭವಿಸಿದ ಪ್ರಿಯಳ ದರ್ಶನವು ನಾಯಕನ ಮೇಲೆ ಬೀರಿದ ಪರಿಣಾಮ ಕವಿಯ ಪದಗಳಲ್ಲಿ ಮೂಡಿಬಂದ ರೀತಿ ಇದು. ಏನು ಮಾಡಬೇಕೆಂದು ತೋಚದೇ ಮಂಕುಬಡಿದಿರುವನಂತೆ ನಿಂತಿರುವನು ಅವಿಮಾರಕ._ 📜ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
🌺ಅವಿಮಾರಕದ ಒಂದು ಅಲಂಕಾರಿಕ ಶ್ಲೋಕ 🌺  *ಕಾಂತಾಸಮೀಪಮುಪಗಮ್ಯ ಮನೋಭಿಲಾಷಾತ್ ಹರ್ಮ್ಯಾಧಿರೋಹಣಮತೇರ್ಮಮ ಕಾ ವಿಶಂಕಾ/ ಸಂಸಕ್ತನಾಲಗತಕಂಟಕಭೀತಚೇತಾ ತೃಷ್ಣಾರ್ದಿತ: ಕ ಇಹ ಪುಷ್ಕರಿಣೀಂ ಜಹಾತಿ||*  _ನಾಯಕನು ಪ್ರಿಯಳನ್ನು ಕಾಣುವ ಅತಿ ಕಾತರದಿಂದ ಅರಮನೆಯಲ್ಲಿ ಕಳ್ಳ ದಾರಿಯಲ್ಲಿ ಹೊರಟಿದ್ದಾನೆ. ಮಧ್ಯರಾತ್ರಿಯ ಸಮಯ. ತನ್ನಲ್ಲೇ ಈ ಮಾತನ್ನು ಹೇಳಿಕೊಳ್ಳುತ್ತಿದ್ದಾನೆ. ಮನದಲ್ಲಿ ಮೂಡಿದ ಹೆಚ್ಚಿನ ಪ್ರೀತಿಯಿಂದಾಗಿ ಪ್ರಿಯಳ ಸಮೀಪಕ್ಕೆ ಬಂದು ಈಗ ಉಪ್ಪರಿಗೆಯನ್ನು ಏರಿವುದೊ ಬಿಡುವುದೊ ಎಂಬ ಸಂಶಯ ಯಾಕೆ!  ನಿಸ್ಸಂಶಯವಾಗಿ ಹತ್ತುವುದೇ ಸರಿ. ಬಾಯಾರಿದವನೊಬ್ಬ ನೀರನ್ನು ಹುಡುಕಿ ಕೊಳದಲ್ಲಿ ಇಳಿಯುವ ಮುಂಚೆ ಕೊಳದಲ್ಲಿ ಮುಳ್ಳಿದೆಯೆಂದು ಹೆದರಿದರೆ ನೀರು ಅವನಿಗೆ ದೊರಕೀತೆ? ಅವನು ಅದಕ್ಕೆಲ್ಲ ಹೆದರದೆ ಇಳಿದು ನೀರನ್ನು ಕುಡಿಯುತ್ತಾನೆ.ನನಗೂ ಪ್ರೀತಿಯ ದಾಹ ದೇಹವನ್ನು ಸುಡುತ್ತಿದೆ. ಈಗ ಹೆಚ್ಚು ಯೋಚಿಸದೇ ಪ್ರಿಯಳನ್ನು ಕಾಣಲು ಬೇಗ ಬೇಗ ಹತ್ತಿ ತೆರಳುತ್ತೇನೆ. ಬೀಳುವ ಜಾರುವ ಭಯವೆಲ್ಲ ಅವಳ ಯೋಚನೆಯ ಮುಂದೆ ಗೌಣ ಎನ್ನುವ ಅಭಿಪ್ರಾಯ._ 📜ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
🌺ಅವಿಮಾರಕದ ಒಂದು ಉತ್ಸಾಹ ಉಂಟು ಮಾಡುವ ಶ್ಲೋಕ 🌺  *ಯತ್ನೇ ಕೃತೇ ಯದಿ ನ ಸಿಧ್ಯತಿ ಕೋತ್ರ ದೋಷ: ಕೋ ವಾ ನ ಸಿಧ್ಯತಿ ಮಮೇತಿ ಕರೋತಿ ಕಾರ್ಯಮ್/ ಯತ್ನೈ: ಶುಭೈ: ಪುರುಷತಾ ಭವತೀಹ ನೃಣಾಂ ದೈವಂ ವಿಧಾನಮನುಗಚ್ಛತಿ ಕಾರ್ಯಸಿದ್ಧಿ:||* _ನಾಯಕನು ಪ್ರಯತ್ನದ ಬಗ್ಗೆ ನುಡಿಯುವ ಮಾತು. ನಾವು ಮಾಡಬೇಕಾದ ಕಾರ್ಯದಲ್ಲಿ ಎಷ್ಟು ಪ್ರಯತ್ನಪಟ್ಟರೂ ಕಾರ್ಯಸಿದ್ಧಿ ಆಗದೇ ಇದ್ದರೆ ಅದರಲ್ಲಿ ನಮ್ಮ ತಪ್ಪೇನಿಲ್ಲ. ಪ್ರಯತ್ನ ಮಾಡುವುದಷ್ಟೇ ಕರ್ತವ್ಯ. ಅಥವಾ ಯಾರಾದರೂ ನನ್ನ ಕೆಲಸ ಸರಿಯಾಗಲಾರದೆಂದು ಪ್ರಯತ್ನ ಪಡುವರೇ! ಸಮಯ ಸಂದರ್ಭದಲ್ಲಿ ಮಾಡುವ ಹೆಚ್ಚಿನ ಪರಿಶ್ರಮದ ಪ್ರಯತ್ನಗಳು ಪೌರುಷವನ್ನು ಸಾರುತ್ತವೆ. ಆದರೆ ಕಾರ್ಯಸಾಧನೆ ಮಾತ್ರ ಅದೃಷ್ಟವನ್ನು ಅವಲಂಬಿಸಿರುತ್ತದೆ. ತಮ್ಮ ಪ್ರಯತ್ನ ಹೆಚ್ಚಿದ್ದಾಗಲೂ ಕೆಲವೊಮ್ಮೆ ವೈಫಲ್ಯ ಅನುಭವಿಸಲು ವಿಧಿಯೇ ಕಾರಣ. ಹಾಗಂತ ಪ್ರಯತ್ನ ವಿಮುಖರಾಗಬಾರದೆಂಬ ಉತ್ತಮ ಸಂದೇಶ ಈ ಶ್ಲೋಕದಲ್ಲಿದೆ._ 📜ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
🌺ಅವಿಮಾರಕದ ಮತ್ತೊಂದು ಆಕರ್ಷಕ ಶ್ಲೋಕ :🌺  *ಸಂಪೀಡ್ಯತೆ ಪರಿಜನೇನ ಶನೈರ್ವದೇತಿ ಸಂವಿಗ್ನವದ್ಬವತಿ ಭೂಷಣನಿಸ್ವನೇನ/ ಸಂಗಂ ವದತ್ಯಸುಖದಂ ಮದನಾಭಿಭೂತ: ಸಂಕೇತಮಿಚ್ಛತಿ ಚ ನೇಚ್ಛತಿ ನಾಭಿಗಂತುಮ್||*  _ಅವಿಮಾರಕನು ರಾತ್ರಿ ಸಂಚರಿಸುತ್ತಾ ನಿಧಾನಕ್ಕೆ ಗುಟ್ಟಾಗಿ ಮಾತನಾಡುತ್ತಿರುವ ಒಬ್ಬ ಬ್ರಹ್ಮಚಾರಿಯನ್ನು ನೋಡಿ ನುಡಿಯುವ ಮಾತು. ಸೇವಕರಿಂದ ನಿಧಾನಕ್ಕೆ ಮಾತನಾಡು ಯಾರಾದರೂ ಕೇಳಿಸಿಕೊಂಡಾರೆಂದು ಒತ್ತಾಯಿಸಲ್ಪಟ್ಟಿದ್ದಾನೆ. ( ಸೇವಕರೊ ಸ್ನೇಹಿತರೊ) ಕಾಮಿನಿಯ ಭೂಷಣಗಳಾದ ಬಳೆ, ಗೆಜ್ಜೆ ಮುಂತಾದವುಗಳ ಧ್ವನಿಯು ಅವನಿಗೆ ಉದ್ವಿಗ್ನತೆಯನ್ನು ಉಂಟುಮಾಡುತ್ತಿದೆ. ಆದರೆ ಪರವನಿತೆಯ ಸಂಗವು ಅಹಿತವೆಂದು ಮನವು ಎಚ್ಚರಿಸುತ್ತಿದೆ. ಮನ್ಮಥ ಪೀಡಿತನಾದ ಅವನು ಅವಳನ್ನು ಭೇಟಿಯಾಗಲು ಸಂಕೇತವನ್ನು ಬಯಸುತ್ತಿದ್ದಾನೆ. ಯಾವುದಾದರೂ ಪ್ರದೇಶವನ್ನು ಹುಡುಕುತ್ತಿದ್ದಾನೆ. ಆದರೆ ಅಲ್ಲಿಗೆ ಹೋಗಲೊಲ್ಲನು. ಒಬ್ಬ ಹೇಡಿ ಕಾಮುಕನ ವರ್ಣನೆ ಸಂ ಎಂದು ನಾಲ್ಕು ಪಾದಗಳಲ್ಲಿಯೂ ಆರಂಭಿಸಿ ಸುಂದರವಾಗಿ ಮಾಡಿದ್ದಾನೆ ಭಾಸ._ 📜ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
🌺ಅವಿಮಾರಕದ ಮತ್ತೊಂದು ಸುಮ🌺  *ಬಾಷ್ಪೋಪರುದ್ಧಜಡಗದ್ಗದಜಿಹ್ಮಕಂಠಂ ಕಾಹಂ ತವೇತ್ಯಸಕಲಂ ಪ್ರಣಯಾದ್ವದಂತೀ/ ಸದ್ಭಾವತ: ಪ್ರಿಯವಶಂ ಸಮುಪಾಗತಾಪಿ ಸ್ತ್ರೀಭಾವತ: ಪ್ರವದತಿ ಪ್ರತಿಕೂಲಮೇವ||*  _ನಾಯಕನು ಹೋಗುವ ದಾರಿಯಲ್ಲಿ ಒಬ್ಬ ತನ್ನ ಮುನಿದ ಕಾಂತೆಯನ್ನು ಸಮಾಧಾನಿಸುತ್ತಿರುವ ಶಬ್ದ ಕೇಳಿಬರುತ್ತಿದೆ. ಈ ಮಧ್ಯರಾತ್ರಿಯಲ್ಲಿಯೂ ಪ್ರಸನ್ನಳಾಗದ ಪ್ರಿಯೆಯ ವಿಷಯದಲ್ಲಿ ಅವನು ಮಾಡಿರುವ ಅಪರಾಧವಾದರೂ ಏನಿರಬಹುದೆಂದು ಚಿಂತಿಸುತ್ತಾ ಹೇಳುವ ಮಾತಿದು ಅವಳ  ಮಾತು ಕಣ್ಣೀರಿನ ಕಾರಣದಿಂದ ಗದ್ಗದಿತವಾಗಿದೆ.ನಿಧಾನವಾಗಿ ಹೊರಡುತ್ತಿದೆ ಶಬ್ದಗಳು. ಗಂಟಲಿನಲ್ಲಿ ಉಳಿಯುತ್ತಿವೆ ಪದಗಳು.ಧ್ವನಿಯು ಗೊಗ್ಗರಾಗಿದೆ.'ನಾನು ನಿನಗೆ ಏನಾಗಬೇಕು ' ಎನ್ನುವ ಪದಗಳನ್ನು ತುಂಬಾ ಪ್ರೀತಿಯಿಂದ ಹೇಳುತ್ತಿರುವ ಆದರೆ ಮಧ್ಯದಲ್ಲಿ ಕೆಲವು ಪದಗಳನ್ನು  ಸ್ಪಷ್ಟವಾಗಿ ಹೇಳದೆ ಸೌಜನ್ಯದಿಂದ ಪ್ರಿಯನಲ್ಲಿ ಅನುರಕ್ತಳಾಗಿದ್ದರೂ ಸ್ತ್ರೀ ಸಹಜ ಸ್ವಭಾವದಿಂದ ಪ್ರತಿಕೂಲ ಅಂದರೆ ಕೊಂಕನ್ನೇ ನುಡಿಯುತ್ತಿರುವಳು.ಅವನ ಮೇಲಿನ ಪ್ರೀತಿಯನ್ನು ಸಾಕ್ಷಾತ್ತಾಗಿ ವ್ಯಕ್ತಪಡಿಸದೇ ಪಕ್ಕದಲ್ಲಿ ಇದ್ದರೂ ಸುತ್ತಿಬಳಸಿ ಮಾತನಾಡುತ್ತಿರುವಳು, ತನ್ನನ್ನು ಇನ್ನಷ್ಟು ಅನುನಯಿಸಲಿ ಎಂಬ ಬಯಕೆ ಹಾಗೂ ಎಲ್ಲವನ್ನೂ ಹೇಳಿಕೊಳ್ಳಲು ಹಿಂಜರಿಯುವ ಸ್ತ್ರೀಸಹಜ ನಾಚಿಕೆ._ 📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.
🌺ಅವಿಮಾರಕದ ಮತ್ತೊಂದು ಕುಸುಮ:🌺  *ತಾನಸ್ತು ಮಂದೋ ವಿಶದಪ್ರವೃತ್ತೋ ಜಾತಶ್ಚ ನಾದೋ ಮುಖನಾಸಿಕೇನ / ಸ್ಥೂಲೋಪಿ ಹೇತು: ಕರತಾಲನಾದ: ಸಂಜಾಯತೇ ಸದ್ವಲಯಸ್ವನೇನ||*  _ನಾಯಕನು ಮಧ್ಯರಾತ್ರಿಯಲ್ಲಿ ರಾಜಕುವರಿಯನ್ನು ಭೇಟಿಯಾಗಲು ತೆರಳುತ್ತಿರುವನು. ಒಂದೆಡೆ ಗಮನ ಕೊಟ್ಟಾಗ ಮಧುರರವ ಕೇಳಿಬರುತ್ತಲಿದೆ. ಅದರ ವರ್ಣನೆ. ತಾನವು ಸ್ಪಷ್ಟವಾಗಿ ಆರಂಭಿಸಲ್ಪಟ್ಟು ಮಂದಧ್ವನಿಯಲ್ಲಿ ಕೇಳುತ್ತಲಿದೆ. ಮುಖ ಮತ್ತು ಮೂಗಿನ ಸಹಾಯದಿಂದ ನಾದವು ಹೊರಡುತ್ತಿದೆ. ಕೈಯಲ್ಲಿ ಹಾಕುತ್ತಿರುವ ತಾಳವು  ದೀರ್ಘವಾಗಿದ್ದರೂ ಬಳೆಗಳ ಧ್ವನಿಯಿಂದ ಕೂಡಿರುವುದರಿಂದ ಇನ್ನಷ್ಟು ಮಾಧುರ್ಯವನ್ನು ತಂದುಕೊಡುತ್ತಿದೆ ಹಾಗೂ ಅಭ್ಯಾಸ ಮಾಡುತ್ತಿರುವವರು ಮೇಲಿನ ಲಕ್ಷಣಗಳಿಂದಾಗಿ ಸ್ತ್ರೀಯೆಂದೇ ತಿಳಿಯುತ್ತಿದೆ. ( ಆರಂಭದಲ್ಲಿ ನಿಧಾನಗತಿಯ ಸ್ವರ,ಮೂಗಿನ ಸಹಾಯ ಪಡೆಯುತ್ತಿರುವುದು,ಬಳೆಗಳ ಧ್ವನಿ, ಹೆಚ್ಚು ಗಂಭೀರವಲ್ಲದ ತಾಳ) ಹೀಗೆ ಅನುಮಾನಿಸುತ್ತಾನೆ ಮನದರಸಿಯನ್ನು ಅರಸಿ ಹೊರಟ ಅರಸಕುವರ._ 📜ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
🌺ಅವಿಮಾರಕದ ಸುಂದರ ಶ್ಲೋಕ 🌺 *ತಿಮಿರಮಿವ ವಹಂತಿ ಮಾರ್ಗನದ್ಯ: ಪುಲಿನನಿಭಾ: ಪ್ರತಿಭಾಂತಿ ಹರ್ಮ್ಯಮಾಲಾ:/ ತಮಸಿ ದಶ ದಿಶೋ ನಿಮಗ್ನರೂಪಾ: ಪ್ಲವತರಣೀಯ ಇವಾಯಮಂಧಕಾರ:||*  _ರಾತ್ರಿಯ ಗಾಢತೆಯ ವರ್ಣನೆ. ದಾರಿಗಳೆಂಬ ಬೇರೆ ಬೇರೆ ನದಿಗಳು ಕತ್ತಲೆಂಬ ಸಮುದ್ರವನ್ನು ಸೇರುತ್ತಲಿವೆ. ಅಥವಾ ಕತ್ತಲೆಂಬ ಸಮುದ್ರ ಸೇರಲು ಹೋಗುತ್ತಿವೆ.  (ಎಲ್ಲೆಡೆ ದಾರಿಯಲ್ಲಿ ಕತ್ತಲು ತುಂಬಿದೆ) ಮಾರ್ಗದ ಇಕ್ಕೆಲಗಳಲ್ಲಿ ಇರುವ ಮನೆಗಳು ನದಿಯ ತೀರದಂತೆ ಕಾಣುತ್ತಿವೆ.ಹತ್ತು ದಿಕ್ಕುಗಳು ತಮ್ಮ ರೂಪವನ್ನು ಕಳಚಿ ಕತ್ತಲಲ್ಲಿ ಮುಳುಗಿ ಒಂದಾಗಿವೆ. ( ಹತ್ತು ವೇಷ ಧರಿಸಿದ ಒಬ್ಬ ಪಾತ್ರಧಾರಿ ವೇಷ ಕಳಚಿದಂತೆ) ಹೀಗೆ ಬೆಳಕೆಂಬ ನಾವೆಯ ಬೆನ್ನೇರಿ ದಾಟಬಹುದಷ್ಟೇ ಈ ಭಯಂಕರ ಕತ್ತಲೆಯನ್ನು. ಸುತ್ತಮುತ್ತಲೆಲ್ಲ ಏನೂ ಕಾಣದ ಕತ್ತಲೆಯ ವರ್ಣನೆ ಕವಿಗೆ ನದಿ ಸಮುದ್ರದ ಉಪಮೆಗೆ ವಿಷಯವಾಗಿದೆ. ಹಾಗಾಗಿಯೇ ಕವಿಗೆ ಎಲ್ಲವೂ ಸ್ವರಸ._ 📜ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
🌺ಅವಿಮಾರಕದ ಒಂದು ಸುಂದರ ಶ್ಲೋಕ🌺 *गर्भस्था इव मोहमभ्युपगता: सर्वा: प्रजा निद्रया प्रासादा: सुखसुप्तनीरवजना: ध्यानं प्रविष्टा इव। प्रग्रस्ता इव संचितेन तमसा स्पर्शानुमेया नगा अन्तर्धानमिवोपयाति सकलं प्रच्छन्नरूपं जगत्।।*  _ಅವಿಮಾರಕದ ಮತ್ತೊಂದು ಸುಮ- ನಾಯಕನು ಮಧ್ಯರಾತ್ರಿಯ ನೀರವತೆಯನ್ನು ಚಂದದ ಪದಗಳಲ್ಲಿ ವರ್ಣಿಸುತ್ತಿದ್ದಾನೆ. ಎಲ್ಲ ಪ್ರಜೆಗಳು ಈ ಸಮಯದಲ್ಲಿ ಗರ್ಭದಲ್ಲಿರುವ ಮಕ್ಕಳಂತೆ ಪ್ರಜ್ಞೆಯಿಂದ ವಿಮುಖರಾಗಿದ್ದಾರೆ. (ಗಾಢ  ನಿದ್ರೆಯ ಕಾರಣದಿಂದ)  ರಾಜನ ಮನೆಗಳಲ್ಲಿ ಸುಖದಿಂದ ಮಲಗಿದ ಜನರಿಂದಾಗಿ ಆ ಮನೆಗಳು ಧ್ಯಾನ ಮಾಡುವಂತೆ ತೋರುತ್ತಿವೆ. ( ಧ್ಯಾನ ಮಾಡುವ ಪ್ರದೇಶದ ಶಾಂತ ಸ್ಥಿತಿ ಇಲ್ಲಿದೆ) ಗುಂಪು ಗುಂಪಾಗಿ ಓಡಾಡುವ ಕತ್ತಲೆಯಿಂದ ಮರಗಿಡಗಳೆಲ್ಲವೂ ನುಂಗಿಹಾಕಲ್ಪಟ್ಟು ಮುಟ್ಟಿದರೆ ಮಾತ್ರ ಗುರುತು ಸಿಗುವಂತಿವೆ. ( ಕತ್ತಲು ಅಷ್ಟು ಗಾಢವಾಗಿ ವ್ಯಾಪಿಸಿದೆ) ಹೀಗೆ ಜಗವೆಲ್ಲವೂ ಕತ್ತಲೆಯ ಪರಿಣಾಮ ಮಾಯವಾಗಿದೆಯೇನೋ ಅಥವಾ ಅಡಗಿ ಕುಳಿತಿರುವುದೋ ಎಂಬಂತಿದೆ ಈ ಸಮಯ. ಎಷ್ಟೊಂದು ನೈಜ ಚಿತ್ರಣ ಭಾಸನ ಮಾತುಗಳಲ್ಲಿ._ 📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.
🌺ಅವಿಮಾರಕದ ಮತ್ತೊಂದು ಆಕರ್ಷಣೆಯ ಶ್ಲೋಕ 🌺  *ರಾಗಂ ವಿಜೃಂಭಯತಿ ಸಂಶ್ರಯತೇ ಪ್ರಮಾದಂ ದೋಷಾನ್ ನ ಚಿಂತಯತಿ ಸಾಹಸಮಭ್ಯೈಪೈತಿ/ ಸ್ವಚ್ಛಂದತೋ ವ್ರಜತಿ ನೇಚ್ಛತಿ ನೀತಿಮಾರ್ಗಂ ಬುದ್ಧಿಂ ಶುಭಾಂ ಸುವಿದುಷಾಮವಶೀಕರೋತಿ ||* _ತಾರುಣ್ಯದ ದಿನಗಳ ಕಷ್ಟವನ್ನು ವರ್ಣಿಸುತ್ತಿರುವನು ನಾಯಕ. ಈ ವಯಸ್ಸಿನಲ್ಲಿ ಪ್ರಿಯತಮೆಯ ಮೇಲಿನ ಪ್ರೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಲಿದೆ. ಅವಸರದ ತೀರ್ಮಾನವನ್ನೆ ಅಪೇಕ್ಷಿಸುತ್ತಿದೆ. ನಿಧಾನವಾಗಿ ಕುಳಿತು ಆಲೋಚಿಸುವ ವ್ಯವಧಾನವಿಲ್ಲ. ಮುಂದೆ ಒದಗಬಹುದಾದ ಅನರ್ಥಗಳ ಬಗ್ಗೆ ಯೋಚಿಸುವುದೇ ಇಲ್ಲ. ಹೊಸ ಸಾಹಸ ಮಾಡಲು ಹವಣಿಸುತ್ತಿದೆ. ಸ್ವಚ್ಛಂದವಾಗಿ ವಿಹರಿಸುತ್ತಿದೆ. ಸಂಪ್ರದಾಯ ಶಾಸ್ತ್ರಗಳ ದಾರಿಯನ್ನು ಬಯಸುವುದಿಲ್ಲ. ತಾನು ನಡೆದಿದ್ದೇ ದಾರಿ ಎಂಬಂತೆ ವರ್ತಿಸುತ್ತಿದೆ. ಇಂತಹ ತಾರುಣ್ಯದ ಬುದ್ಧಿಯು ಒಳ್ಳೆಯ ಅಥವಾ ವಿದ್ವಾಂಸರ ,ತಿಳಿದವರನ್ನೂ ಕೂಡ ತನ್ನ ತೆಕ್ಕೆಯಲ್ಲಿ ಬಂಧಿಸುತ್ತದೆ. ಅವರ ಸ್ವತಂತ್ರ ಚಿಂತಿಸುವ ಶಕ್ತಿಯನ್ನು ಕಸಿಯುತ್ತದೆ. ಭಾಸನು ನೂರಾರು ವರ್ಷಗಳ ಹಿಂದೆಯೇ ಈ ಮಾತನ್ನು ಹೇಳಿ ತಾರುಣ್ಯದ ಪ್ರಭಾವವನ್ನು ವರ್ಣಿಸಿದ ಪರಿ ಇಂದಿಗೂ ನಮಗೂ ನಮ್ಮ ಮುಂದಿನವರಿಗೂ ಎಷ್ಟು ಪ್ರಸ್ತುತವಲ್ಲವೇ!_ 📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.
🌺ಅವಿಮಾರಕದ ಒಂದು ಸುಮ🌺  *ವ್ಯಾಮೃಷ್ಟ ಸೂರ್ಯತಿಲಕೊ ವಿತತೊಡುಮಾಲೊ ನಷ್ಟಾತಪೋ ಮೃದುಮನೋಹರ ಶೀತವಾತ: / ಸಂಲೀನಕಾಮುಕಜನ: ಪ್ರವಿಕೀರ್ಣಶೂರೊ ವೇಷಾಂತರಂ ರಚಯತೀವ ಮನುಷ್ಯಲೋಕ:||*  _ನಾಯಕನು ರಾತ್ರಿಯ ಕಾಲವನ್ನು ವರ್ಣಿಸುತ್ತಿರುವನು. ಅಂಬರವು ಸೂರ್ಯನೆಂಬ ಕೆಂಪು ತಿಲಕವನ್ನು ಅಳಿಸಿಕೊಂಡಿದೆ. ( ಯಾರೊ ಒಬ್ಬಳು ಕಾಮಿನಿ ಪ್ರಿಯನನ್ನು ಭೇಟಿಯಾಗಲು ಹಣೆ ಕುಂಕುಮವನ್ನು ಅಳಿಸಿ ಹೊರಟಿದ್ದಾಳೆ)  ಗಗನವು ನಕ್ಷತ್ರಗಳ ಮಾಲೆಯನ್ನು ಧರಿಸಿದೆ. ( ಪ್ರಿಯೆಯೊಬ್ಬಳು ಹಾರ ಮುಂತಾದವುಗಳನ್ನು ಧರಿಸಿ ಪ್ರಿಯನಿಗಾಗಿ ಹೊರಟಿದ್ದಾಳೆ. ) ಪ್ರಕೃತಿಯು ಸಹಕಾರಿಯಾಗಿದೆ. ಬಿಸಿಲು ಕಳೆದು ತಂಪಾದ ಮಂದಮಾರುತ ಬೀಸುತ್ತಿದೆ.( ಸಮಾಗಮಕ್ಕೆ ಪೂರಕ ವಾತಾವರಣ) ನಾನಾ ಬಯಕೆಗಳನ್ನು ಹೊಂದಿದ ಪ್ರಾಣಿ ಸಮೂಹ ಮನೆ ಗೂಡು ಮುಂತಾದವುಗಳನ್ನು ಸೇರಿಕೊಂಡಿತು. ( ಹೊರಗೆ ತೆರಳಿದವರು ತಮ್ಮ ತಮ್ಮ ಜನರನ್ನು ಸೇರಿ ಕೃತಾರ್ಥರಾದರು. ) ಹೀಗೆ ಈ ಮನುಷ್ಯರ ಲೋಕವು ಒಂದು ವೇಷವನ್ನು ಕಳಚಿ ಇನ್ನೊಂದು ವೇಷವನ್ನು ಧರಿಸಿದೆ ಆಕಾಶದಂತೆ. ನಾವು ಪ್ರತಿದಿನವೂ ಅನೇಕ ವೇಷಗಳನ್ನು ತಾಳಿ ವಿಶ್ವವೆಂಬ ನಾಟಕರಂಗದಲ್ಲಿ ಅಭಿನಯಿಸುವ ಪ್ರಯತ್ನ ಮಾಡುತ್ತೇವೆ ಅಲ್ಲವೇ!_  📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.
🌺ಅವಿಮಾರಕದ ಸುಂದರವಾದ ಶ್ಲೋಕ🌺 *पूर्वा तु काष्ठा तिमिरानुलिप्ता सन्ध्यारुणा भाति च पश्चिमाशा । द्विधा विभक्तान्तरमन्तरिक्षं यात्यर्धनारीश्वररूपशोभाम्।।*   _ನಾಯಕನು ಸೂರ್ಯಾಸ್ತ ಕಾಲ ವನ್ನು  ವರ್ಣಿಸುತ್ತಿರುವನು. ಪೂರ್ವ ದಿಕ್ಕು ಅಂಧಕಾರದಿಂದ ವ್ಯಾಪಿಸಿದೆ. ಪಶ್ಚಿಮ ದಿಕ್ಕಿನಲ್ಲಿ ಸಂಧ್ಯೆಯು ಕೆಂಪಾಗಿ ಶೋಭಿಸುತ್ತಿದೆ. ಹೀಗೆ ಎರಡು ವಿಭಾಗವಾಗಿ ಭಿನ್ನ ವರ್ಣಮಯ ಆಕಾಶವು ಅರ್ಧ ನಾರೀಶ್ವರನ ಸಾದೃಶ್ಯವನ್ನು ಹೊಂದಿದೆ._ 📜ಸಂಗ್ರಹ ✍ಶ್ರೀ ನಿಧಿ ಅಭ್ಯಂಕರ್.
🌺ಅವಿಮಾರಕದ ಒಂದು ನೀತಿ ಶ್ಲೋಕ :🌺 *एक: परगृह० गच्छेत् द्वितीयेन तु मन्त्रयेत्। बहुभि: समरं कुर्यात् इत्ययं शास्त्रनिर्णय:।।* _ಇನ್ನೊಬ್ಬರ ಮನೆಗೆ ಏನಾದರೂ ಕಾರ್ಯಸಾಧನೆಗೆ ಹೊರಟಾಗ ಒಬ್ಬನೇ ಹೋಗಬೇಕು. ಜೊತೆಗಾರನಿಂದ ಹಾನಿಯಾಗದೆ ಕಾರ್ಯಸಾಧನೆ ಸುಲಭವಾಗಿ ಆಗುವುದು. ಕೆಲವು ವಿಷಯಗಳನ್ನು ಆಲೋಚನೆ ಮಾಡುವ ಸಮಯದಲ್ಲಿ ನಂಬಿಕಸ್ಥನಾದ ಇನ್ನೊಬ್ಬ ಇರಬೇಕು. ಅವನ ಉಪಾಯಗಳು ಪ್ರಯೋಜನಕ್ಕೆ ಬಂದೀತು. ಯುದ್ಧ ಮಾಡುವಾಗ ಎಷ್ಟು ಜನ ಬೆಂಬಲಿಗರು ಸಿಕ್ಕಿದರೂ ಅವರನ್ನೆಲ್ಲ ಸೇರಿಕೊಂಡು ಯುದ್ಧಕ್ಕೆ ತೆರಳಬೇಕು. ಶತ್ರು ನೋಡಿಯೇ ಹೆದರಿಯಾನು. ಹೀಗೆ ಶಾಸ್ತ್ರ ನಿರ್ಣಯಿಸುತ್ತದೆ. ಪ್ರಕೃತ ಅವಿಮಾರಕನು ರಾಜಕನ್ಯೆಯನ್ನು ಬಯಸಿ ಅರಮನೆಗೆ ಕಳ್ಳ ಮಾರ್ಗದಿಂದ ಹೋಗುತ್ತಿರುವಾಗ ಒಬ್ಬನೇ ತೆರಳುತ್ತಿರುವನು. ಇದಕ್ಕೆ ಅಪವಾದಗಳಿರಬಹುದು. ಹಾಗಿದ್ದರೂ ಕವಿಯ ಒಂದು ಅಭಿಪ್ರಾಯ._ 📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.
🌺ಅವಿಮಾರಕದ ಒಂದು ಶೃಂಗಾರ ಶ್ಲೋಕ :🌺  *ಉರ: ಸ್ತನತಟಾಲಸಂ ಜಘನಭಾರಖಿನ್ನಾ ತನು: ಮುಖಂ ನಯನವಲ್ಲಭಂ ಪ್ರಕೃತಿತಾಮ್ರಬಿಂಬಾಧರಮ್ // ಭಯೇಪಿ ಯದಿ ತಾದೃಶಂ ನಯನಪಾತ್ರಪೇಯಂ ವಪು: ಕಥನ್ನು ಸುರತಾಂತರಪ್ರಚುರವಿಭ್ರಮಂ ತದ್ ಭವೇತ್||*  _ಅವಿಮಾರಕನು ಕುರಂಗಿಯನ್ನು ವರ್ಣಿಸುತ್ತಿದ್ದಾನೆ. ಎದೆ ಸ್ತನಗಳ ಭಾರದಿಂದ ಆಲಸ್ಯ ಹೊಂದಿದೆ. ಶರೀರವು ಜಘನ ಅಥವಾ ನಿತಂಬದ ಭಾರದಿಂದ ಖಿನ್ನವಾಗಿದೆ. ( ಭಾರ ತಡೆಯಲು ಅಸಾಧ್ಯವಾಗಿದೆ) ಅವಳ ಮೊಗ ಕಣ್ಣುಗಳಿಗೆಂದಿಗೂ ಚಂದ, ತುಟಿ ಯಾವ ಪ್ರಸಾಧನ ಸಾಮಗ್ರಿಗಳ ಲೇಪನವಿಲ್ಲದೆ ಸಹಜವಾಗಿ ಕೆಂಪು. ಆನೆಯ ದಾಳಿಯಿಂದ ಭೀತಳಾದ ಅವಳ ಮುಖ ಆಗಲೇ ಆಕರ್ಷಣೀಯ ಅಂದಮೇಲೆ ಸುರತಕಾಲದಲ್ಲಿ ನಾನಾ ವಿಲಾಸಗಳನ್ನು ತೋರುವ ಅವಳ ಮುಖದ ಆಕರ್ಷಣೆ ಹೇಗಿರಬಹುದು! ಹೆದರಿದಾಗಲೂ ಕಿಂಚಿತ್ತೂ ಕುಂದದ ಸೌಂದರ್ಯ ಸುರತದ ಸಮಯದಲ್ಲಿ ಇನ್ನೆಷ್ಟು ಭಾವನೆಗಳನ್ನು ವ್ಯಕ್ತಪಡಿಸಬಹುದು! ಪೃಥ್ವೀ ವೃತ್ತ._ 📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.
🌺ಅವಿಮಾರಕದ ಒಂದು ಶ್ಲೋಕ :🌺  *ಪ್ರತಿಷಿದ್ಧಂ ಪ್ರಯತ್ನೇನ ಕ್ಷಣಮಾತ್ರಂ ನ ವೀಕ್ಷತೆ/ ಚಿರಾಭ್ಯಸ್ತಪಥಂ ಯಾತಿ ಶಾಸ್ತ್ರಂ ದುರ್ಗುಣಿತಂ ಯಥಾ||*  _ಅವಿಮಾರಕನು ಪ್ರಿಯೆಯನ್ನು ಚಿಂತಿಸುತ್ತಾ ಹೀಗೆ ನುಡಿಯುತ್ತಿದ್ದಾನೆ. ಅವಳ ನೆನಪು ಮಾಡಬೇಡವೆಂದು ಪ್ರಯತ್ನ ಪೂರ್ವಕವಾಗಿ ತಡೆದರೂ ಈ ನನ್ನ ಕೆಟ್ಟ ಮನವು ಸ್ವಲ್ಪ ಕಾಲವೂ ತಡೆಯದೆ ಅವಳನ್ನೇ ನೆನೆಯುತ್ತಿದೆ. ಅದು ಹೇಗಿದೆಯೆಂದರೆ ಸರಿಯಾಗಿ ಶಾಸ್ತ್ರ ಓದದೇ ( ವಿದ್ಯಾಭ್ಯಾಸ ಸರಿಯಾದ ರೀತಿಯಲ್ಲಿ ಮಾಡದೆ)  ಬಹು ಕಷ್ಟಪಟ್ಟು ನೆನಪು ಮಾಡಿಕೊಂಡರೂ ಕ್ಷಣಮಾತ್ರದಲ್ಲಿ ಮರೆತುಹೋಗುವಂತೆ ನನಗೆ ಅವಳ ನೆನಪಿನಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ. ಅಧ್ಯಯನ ಕಾಲದಲ್ಲಿ ಸರಿ ಓದದೆ ಇದ್ದಾಗ ಬೇಕಾದಾಗ ವಿದ್ಯೆ ನೆನಪಿಗೆ ಬರುವುದಿಲ್ಲವಷ್ಟೇ. ನಾನು ಚಿಂತಿಸುವುದನ್ನು ನಿಲ್ಲಿಸಿದರು ಮನವು ನನಗೆ ವಿರುದ್ಧವಾದದ್ದನ್ನೇ ಮಾಡುತ್ತಿದೆ._ 📜 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
🌺ಅವಿಮಾರಕದ ಒಂದು ಕುಸುಮ:🌺  *ಅದ್ಯಾಪಿ ಹಸ್ತಿಕರಶೀಕರಶೀತಲಾಂಗೀಂ ಬಾಲಾಂ ಭಯಾಕುಲವಿಲೋಲವಿಷಾದನೇತ್ರಾಮ್/ ಸ್ವಪ್ನೇಷು ನಿತ್ಯಮುಪಲಭ್ಯ ಪುನರ್ವಿಬೋಧೆ ಜಾತಿಸ್ಮರ: ಪ್ರಥಮಜಾತಿಮಿವ ಸ್ಮರಾಮಿ||* _ಅವಿಮಾರಕನು ಅವಳ ಅಂದಿನ ಭೇಟಿಯನ್ನು  ನೆನಪುಮಾಡಿಕೊಳ್ಳುತ್ತಾನೆ. ಇಂದಿಗೂ ಆನೆಯ ಸೊಂಡಿಲಿನಿಂದ ನೀರು ಚಿಮ್ಮಿಸಿ ಒದ್ದೆಮಾಡಲ್ಪಟ್ಟ ಅಂಗವುಳ್ಳ ( ಆನೆಯು ಸೊಂಡಿಲಿನಿಂದ ನೀರು ಚೆಲ್ಲಿ ಅವಳನ್ನು ಒದ್ದೆಮಾಡಿತು ಅಂತಹ) ಭಯ, ಕಳವಳ, ಒತ್ತಡದಿಂದ ಕೂಡಿ ಚಂಚಲವಾದ ಕಣ್ಣುಗಳುಳ್ಳ, ಅವಳನ್ನು ಕನಸಿನಲ್ಲಿ ನಿತ್ಯವೂ ಪಡೆಯುತ್ತಿದ್ದರೂ ಎಚ್ಚರವಾದಾಗ ನೆನಪು ಮಾತ್ರವಿದೆ.ಹೇಗೆಂದರೆ ಹಿಂದಿನ ಜನ್ಮದ ಜಾತಿಯ ಸ್ಮರಣೆ ಉಳ್ಳವನು ಸ್ಮರಣೆ ಮಾತ್ರ ಹೊಂದಿರುತ್ತಾನೆ ಆದರೆ ಅದೇ ಜಾತಿಯನ್ನಲ್ಲ. ನನಗೂ ಹಾಗೆಯೇ ಅವಳ ನೆನಪು ಮಾತ್ರ ಆದರೆ ಅವಳು ಪ್ರತ್ಯಕ್ಷ ಕಾಣುತ್ತಿಲ್ಲ. ಉಪಮಾ ಅಲಂಕಾರ._ 📜 ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.
🌺ಅವಿಮಾರಕದ ಉತ್ತಮ ಶ್ಲೋಕ :🌺  *ಪ್ರತಿಚ್ಛಂದಂ ಧಾತ್ರಾ ಯುವತಿವಪುಷಾಂ ಕಿಂ ನು ರಚಿತಂ ಗತಾ ವಾ ಸ್ತ್ರೀರೂಪಂ ಕಥಮಪಿ ಚ ತಾರಾಧಿಪರುಚಿ:/ ವಿಹಾಯ ಶ್ರೀ: ಕೃಷ್ಣಂ ಜಲಶಯನಸುಪ್ತಂ ಕೃತಭಯಾ ಧೃತಾನ್ಯಸ್ತ್ರೀರೂಪಂ ಕ್ಷಿತಿಪತಿಗೃಹೇ ವಾ ನಿವಸತಿ||*  _ಅವಿಮಾರಕನು ಅವಳ ರೂಪವನ್ನು ನೆನೆಯುತ್ತಿರುವನು. ಬ್ರಹ್ಮನು ಯುವತಿಯರ ರೂಪ ಹೀಗೆ ಇರಬೇಕೆಂದು ಒಂದು ಆದರ್ಶ ಪ್ರತಿಕೃತಿಯೆಂಬಂತೆ ಇಂತಹ ಸುಂದರಿಯನ್ನು ಸೃಷ್ಟಿಸಿರುವನೆ! ಅಥವಾ ಚಂದ್ರನ ಚಂದದ ಕಾಂತಿಯು ಸ್ತ್ರೀ ರೂಪವನ್ನು ತಾಳಿ ನನ್ನೆದುರು ಬಂದಿತೇ! ಅಥವಾ ತ್ರಿಲೋಕಸುಂದರಿ ಸಮುದ್ರದಲ್ಲಿ ಜನ್ಮ ತಾಳಿದ ಲಕ್ಷ್ಮಿಯು ಕ್ಷೀರಸಾಗರದಲ್ಲಿ ಮಲಗಿದ ವಿಷ್ಣುವನ್ನು ಬಿಟ್ಟು (ವಿಷ್ಣುವು ಹುಡುಕಿಯಾನು)ಎಂಬ ಹೆದರಿಕೆಯಿಂದ ಬೇರೆ ಸ್ತ್ರೀ ರೂಪ ಧರಿಸಿ ಈ ರಾಜನ ಮನೆಯಲ್ಲಿ ವಾಸಮಾಡುತ್ತಿರುವಳೇ! ನಿಜವಾಗಲೂ ಅವಳ ರೂಪ ಅದ್ಭುತ ಅದಕ್ಕನುಗುಣವಾದ ಯೌವನ ಅದಕ್ಕನುಗುಣವಾದ ಕೋಮಲತೆ!  ಇಲ್ಲಿ ಮೂರು ಉತ್ಪ್ರೇಕ್ಷೆಗಳು ಒಟ್ಟಿಗೆ ಕಂಡುಬರುತ್ತವೆ.ಶಿಖರಿಣೀ ವೃತ್ತ._ 📜ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
🌺ಅವಿಮಾರಕದ ಒಂದು ಸುಮ🌺  *ದೃಷ್ಟಿಸ್ತದಾಪ್ರಭೃತಿ ನೇಚ್ಛತಿ ರೂಪಮನ್ಯದ್ ಬುದ್ಧಿ: ಪ್ರಹೃಷ್ಯತಿ ವಿಷೀದತಿ ಚ ಸ್ಮರಂತೀ / ಪಾಂಡುತ್ವಮೇತಿ ವದನಂ ತನುತಾಂ ಶರೀರಂ ಶೋಕಂ ವ್ರಜಾಮಿ ದಿವಸೇಷು ನಿಶಾಸು ಮೋಹಮ್ ||*  _ಅವಿಮಾರಕನ ಕನವರಿಕೆ- ಎಂದು ನಾನವಳ ನೋಡಿದೇನೋ ಅಂದಿನಿಂದ ಬೇರೆಡೆ ಸೌಂದರ್ಯವಿದ್ದರೂ ಕಣ್ಣೇಕೋ ಗ್ರಹಿಸುತ್ತಿಲ್ಲ.ಇಷ್ಟಪಡುತ್ತಲೂ ಇಲ್ಲ. ಅವಳ ಧ್ಯಾನದಲ್ಲಿ ಮನವು ಕುಣಿಯುತ್ತಲಿದೆ ಒಂದೆಡೆ ಮತ್ತೊಂದೆಡೆ ಅವಳ ಪಡೆಯುವುದು ಸಾಧ್ಯವೇ ಎಂಬ ಶಂಕೆಯಿಂದ ದು:ಖಿಸುತ್ತಿದೆ. ಸದಾ ಧ್ಯಾನಿಸುತ್ತಾ ಮೈಯೆಲ್ಲ ಬಿಳಿಚಿಕೊಂಡಿದೆ.( ಪ್ರೇಮರೋಗದ ಕಾರಣ) ಆರೈಕೆ ಇಲ್ಲದೆ ದೇಹ ಬಡವಾಗಿದೆ. ಹಗಲೆಲ್ಲ ಶೋಕಪಡುತ್ತೇನೆ.ರಾತ್ರಿಯಲ್ಲಿ ನೆನಪಿಸುತ್ತಾ ಹಾಗೆಯೇ ಮೂರ್ಛೆಹೊಂದುತ್ತಿದ್ದೇನೆ. ಅಬ್ಬಾ ಮನ್ಮಥನ ಲೀಲೆಯೋ!_ 📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.
🌺ಅವಿಮಾರಕದ ಒಂದು ಸುಮ: 🌺 *ಧರ್ಮ: ಪ್ರಾಗೇವ ಚಿನ್ತ್ಯ: ಸಚಿವಮತಿಗತಿ: ಪ್ರೇಕ್ಷಿತವ್ಯಾ ಸ್ವಬುದ್ಧ್ಯಾ ಪ್ರಚ್ಛಾದ್ಯೌ ರಾಗದೋಷೌ ಮೃದುಪರುಷಗಣೌ ಕಾಲಯೋಗೆನ ಕಾರ್ಯೌ/ ಜ್ಞೇಯಂ ಲೋಕಾನುವೃತ್ತಂ ಪರಚರನಯನೈರ್ಮಂಡಲಂ ಪ್ರೇಕ್ಷಿತವ್ಯಂ ರಕ್ಷ್ಯೋ ಯತ್ನಾದಿಹಾತ್ಮಾ ರಣಶಿರಸಿ ಪುನ: ಸೋಪಿ ನಾವೇಕ್ಷಿತವ್ಯ:||* _ರಾಜನ ಕರ್ತವ್ಯ ಜವಾಬ್ದಾರಿಗಳ ಬಗ್ಗೆ ಕುಂತಿಭೋಜನ ಸ್ವಗತ. ಸರಿ-ತಪ್ಪುಗಳ ಬಗ್ಗೆ ನಿರ್ಣಯಿಸುವ ಮೊದಲೇ ಪರಾಮರ್ಶೆ ಮಾಡಬೇಕು. ಅನಂತರ ತನ್ನ ಸೂಕ್ಷ್ಮಬುದ್ಧಿಯಿಂದ ಸಚಿವರ ಮನದಿಂಗಿತವನ್ನು ಅರಿಯಬೇಕು. ಅವರು ಸಜ್ಜನರಾ ದುರ್ಜನರಾ ಎಂಬುದನ್ನು ಹೀಗೆ ಪರೀಕ್ಷಿಸಬೇಕು. ಕೆಲವರ ಮೇಲೆ ತನಗಿರುವ ಅಕ್ಕರೆ ಕೆಲವರ ಮೇಲಿರುವ ದ್ವೇಷಭಾವವನ್ನು ಹೊರಗೆಂದೂ ಪ್ರಕಟಗೊಳಿಸದೆ ರಹಸ್ಯವಾಗಿರಿಸಬೇಕು. ಇದು ಗುಂಪುಗಾರಿಕೆ ತಡೆಯುವ ತಂತ್ರ. ಸಮಯ ಬಂದಾಗ ಮೃದು ಅಥವಾ ಕ್ರೂರವರ್ತನೆಯನ್ನು ತೋರಬೇಕು. ಲೋಕದ ಆಗುಹೋಗುಗಳನ್ನು ಗಮನಿಸುತ್ತಿರಬೇಕು.ಎಲ್ಲಿ ಏನಾದರೆ ತನಗೇನು ಎಂಬ ಉದಾಸೀನತೆ ಇರಬಾರದು. ಶ್ರೇಷ್ಠರಾದ ಗುಪ್ತಚರರ ಕಣ್ಣುಗಳಿಂದ ಪ್ರಜಾಸಮೂಹವನ್ನು ಅವಲೋಕಿಸಬೇಕು. ಗುಪ್ತಚರವಿಭಾಗ ಬಲಿಷ್ಠವಿರಬೇಕು. ಹೀಗೆ ಲೋಕದಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕು.ಅಷ್ಟಲ್ಲದೆ ತನ್ನ ಪ್ರಾಣದಾಸೆಯನ್ನೂ ತ್ಯಜಿಸಿ ಯುದ್ಧದಲ್ಲಿ ರಾಷ್ಟ್ರಕ್ಕಾಗಿ ಹೋರಾಡಬೇಕು. ಏಕೆಂದರೆ ಯುದ್ಧದ ಪರಾಜಯ ಮರಣಕ್ಕಿಂತಲೂ ಕೀಳು ರಾಜನಿಗೆ.  ಇಷ್ಟೆಲ್ಲಾ ಭಾರಗಳಿರುವ ರಾಜನ ಪದವಿ ಮುಳ್ಳಿ...
🌺ಅವಿಮಾರಕದ ಒಂದು ಉತ್ತಮ ಶ್ಲೋಕ :🌺  *ಕಾಮಾಹತ: ಕುಮತಿಭಿ: ಸಚಿವೈರ್ಗೃಹೀತೋ ರೋಗಾತುರ: ಸ್ವಜನರಾಗಮವೇಕ್ಷತೆ ವಾ / ಶಪ್ತೋ ದ್ವಿಜೈರ್ವ್ರತಮುಪೇತ್ಯ ಕರೋತಿ ಶಾಂತಿಂ ಕೋವಾ ಭವೇನ್ನರಪತೇರ್ಗೃಹರೋಧಹೇತು: ||* _ಕುಂತೀಭೋಜನು ಸೌವೀರರಾಜನ ಅರಮನೆಗೆ ಸಾಮಾನ್ಯ ಜನರ ಪ್ರವೇಶ ನಿರ್ಬಂಧಿಸಿರುವ ಬಗ್ಗೆ ಹೀಗೆ ವಿಚಾರ ಮಾಡುತ್ತಿರುವನು. ರಾಜಪುತ್ರ ಕಾಣುತ್ತಿಲ್ಲ ಅಮಾತ್ಯರೇ ಎಲ್ಲವನ್ನೂ ನಿರ್ವಹಿಸುತ್ತಿರುವರು ಎಂದು ಮಂತ್ರಿ ನುಡಿದಾಗ ಹೇಳಿದ ಮಾತು. ಯಾವುದಾದರೂ ವನಿತೆಯ ಪ್ರೇಮಪಾಶದಲ್ಲಿ ಬಂಧಿಯಾಗಿರುವನೋ,ಅಥವಾ ಕೆಟ್ಟ ಬುದ್ಧಿಯ ಮಂತ್ರಿಗಳಿಂದ ಬಂಧನಕ್ಕೊಳಪಟ್ಟಿರುವನೇ,ಅಥವಾ ದೊಡ್ಡ ರೋಗದ ಪೀಡೆಗೊಳಗಾಗಿ ಕಾಣಿಸಿಕೊಳ್ಳುತ್ತಿಲ್ಲವೋ,ಅಥವಾ ತಮ್ಮ ಜನರ ಪ್ರೀತಿಯನ್ನು ಪರೀಕ್ಷಿಸುತ್ತಿರುವನೋ,( ತಾನಿಲ್ಲದಾಗ ಹೇಗೆ ವರ್ತಿಸಬಹುದೆಂದು), ಅಥವಾ ಬ್ರಹ್ಮಜ್ಞಾನಿಗಳಿಂದ ಶಾಪಕ್ಕೊಳಗಾಗಿ ನಿವೃತ್ತಿಗಾಗಿ ಯಾವುದಾದರೂ ವ್ರತದಲ್ಲಿ ತೊಡಗಿರುವನೇ, ಇದರಲ್ಲಿ ಯಾವ ಕಾರಣಗಳಿರಬಹುದು ರಾಜನ ಕಾಣಿಸದಿರುವಿಕೆಗೆ? ಸ್ವಲ್ಪ ಕಾಲ ಒಬ್ಬರು ಕಾಣದಿದ್ದಾಗ ಯಾವೆಲ್ಲ ಆಲೋಚನೆಗಳು ಬರಬಹುದೆಂಬ ಸುಂದರ ಕಲ್ಪನೆ ಇಲ್ಲಿದೆ._ 📜ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
🌺ಅವಿಮಾರಕದ ಒಂದು ಶ್ಲೋಕ :🌺  *ವ್ಯಾಯಾಮಸ್ಥಿರವಿಪುಲೋಚ್ಛ್ರಿತಾಯತಾಂಸ: ಜ್ಯಾಘಾತಪ್ರಚಿತಕಿಣೊಲ್ಬಣಪ್ರಕೋಷ್ಠ: ಪ್ರಚ್ಛನ್ನೊಪ್ಯನುಕೃತಿಲಕ್ಷ್ಯರಾಜಭಾವೋ ಮೇಘಾಂತರ್ಗತರವಿವತ್ ಪ್ರಭಾನುಮೇಯ: ||*  _ಅವಿಮಾರಕನನ್ನು ಮಂತ್ರಿ ವರ್ಣಿಸುತ್ತಾನೆ. ನಿಯತವಾದ ವ್ಯಾಯಾಮದಿಂದ ಗಟ್ಟಿಯಾದ ಹಾಗೂ ಎದ್ದುನಿಂತ ಬಾಹುಗಳು ( ಮಸಲ್ಸ್ ಎದ್ದು ಕಾಣುತ್ತಿದೆ ಸಿಕ್ಸ್ ಪ್ಯಾಕ್ನಂತೆ) ಧನುಸ್ಸು ಹಿಡಿದು ಹೆದೆಯನ್ನು ಏರಿಸುವಾಗ ಆದ ಗಾಯಗಳಿಂದ ಭಯಂಕರವಾಗಿ ಕಾಣುತ್ತಿರುವ ಬಾಹುಗಳು, ಗುಪ್ತನಾಗಿದ್ದರೂ ( ಶಾಪಗ್ರಸ್ತನಾಗಿ ಅಂತ್ಯಜನಾಗಿದ್ದರೂ) ರಾಜಲಕ್ಷಣ ತೋರುತ್ತಿರುವ, ( ರಾಜಗಾಂಭೀರ್ಯ ತೋರುತ್ತಿರುವ) ಮೋಡದ ಒಳಗಿದ್ದರೂ ಪ್ರಭೆ ತೋರುತ್ತಿರುವ ಸೂರ್ಯನಂತೆ ಪ್ರಭಾವಿಯಾಗಿರುವನು ಈ ರಾಜಕುವರ. ಸೂರ್ಯನನ್ನು ಕಾಂತಿಯಿಂದ ಅನುಮಾನಿಸುವಂತೆ ಇವನ ಗಾಂಭೀರ್ಯ ರಾಜಲಕ್ಷಣಗಳು ದೇಹ ಪ್ರಕೃತಿ ಇದನ್ನು ನೋಡಿಯೇ ಅನುಮಾನಿಸಬಹುದು ರಾಜನೆಂದು._ 📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.
🌺ಅವಿಮಾರಕದ ಒಂದು ಶ್ಲೋಕ : 🌺 *ಛನ್ನಾ ಭವಂತಿ ಭುವಿ ಸತ್ಪುರುಷಾ: ಕಥಂಚಿತ್ ಸ್ವೈ: ಕಾರಣೈರ್ಗುರುಜನೈಶ್ಚ ನಿಯಮ್ಯಮಾನಾ:| ಭೂಯ: ಪರವ್ಯಸನಮೇತ್ಯ ವಿಮೋಕ್ತುಕಾಮಾ ವಿಸ್ಮೃತ್ಯ ಪೂರ್ವನಿಯಮಂ ವಿವೃತಾ ಭವಂತಿ||* _ಭಾಸನು ಸಜ್ಜನರ ಗುಣವನ್ನು ವರ್ಣಿಸಿದ ರೀತಿ.ಸತ್ಪುರುಷರು ಕೆಲವೊಮ್ಮೆ ತಮ್ಮದೇ ಕಾರಣಗಳಿಂದ ಇರುವಿಕೆಯನ್ನು ತೋರಿಸಿಕೊಳ್ಳುವುದಿಲ್ಲ.ಕೆಲವೊಮ್ಮೆ ತಮ್ಮ ತಂದೆತಾಯಿಗಳ ನಿಯಂತ್ರಣದಿಂದಾಗಿಯೋ ಅಥವಾ ಶಾಪಾದಿಗಳಿಂದ ಲೋಕದಲ್ಲಿ ಗುಪ್ತರಾಗಿ ಇರುತ್ತಾರೆ.ಆದರೆ ಯಾವಾಗ ಇನ್ನೊಬ್ಬರ ಕಷ್ಟವನ್ನು ನೋಡುತ್ತಾರೆಯೋ ಆ ಕೂಡಲೇ ಅದರ ಪರಿಹಾರಕ್ಕಾಗಿ ಹಿಂದಿನ ನಿಯಮವನ್ನೂ ಮರೆತು ಪ್ರಕಟರಾಗುತ್ತಾರೆ. ತಮ್ಮ ನಿಯಮವೇನಿದ್ದರೂ ಅದನ್ನೆಲ್ಲಾ ಬಿಟ್ಟು ಧಾವಿಸಿಬರುವ ಆಪತ್ಕಾಲಕ್ಕೆ ಒದಗುವ ಬುದ್ಧಿ ಸಜ್ಜನರದ್ದು ಎಂಬುದು ಕವಿಯ ಭಾವ.ಇಲ್ಲಿ ಪ್ರಕೃತ ಆನೆಯಿಂದ ದಾಳಿಗೊಳಗಾದ ರಾಜಕುವರಿಯ ರಕ್ಷಣೆಗೆ ಅವಿಮಾರಕನು ಶಾಪಗ್ರಸ್ತನಾಗಿದ್ದರೂ ಧಾವಿಸಿ ಬಂದು ಕಾಪಾಡುತ್ತಾನೆ. ಅದು ನಿಜವಾದ ಸಜ್ಜನಿಕೆ._ 📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.
🌺ಅವಿಮಾರಕದ ಒಂದು ಪುಷ್ಪ 🌺  *ಪ್ರಸಿದ್ಧೌ ಕಾರ್ಯಾಣಾಂ ಪ್ರವದತಿ ಜನ: ಪಾರ್ಥಿವಬಲಂ ವಿಪತ್ತೌ ವಿಸ್ಪಷ್ಟಂ ಸಚಿವಮತಿದೋಷಂ ಜನಯತಿ/ ಅಮಾತ್ಯಾ ಇತ್ಯುಕ್ತಾ: ಶ್ರುತಿಸುಖಮುದಾರಂ ನೃಪತಿಭಿ: ಸುಸೂಕ್ಷ್ಮಂ ದಂಡ್ಯಂತೇ ಮತಿಬಲವಿದಗ್ಧಾ: ಪುರುಷಾ: ||*  _ಕುಂತೀಭೋಜನ ಮಂತ್ರಿ ಹೇಳುವ ಮಾತು. ಕೆಲಸಗಳು ಸುಸೂತ್ರವಾಗಿ ನಡೆದಾಗ ರಾಜನ ಸಾಮರ್ಥ್ಯವೆಂದು ಜನರು ಅವನನ್ನು ಹೊಗಳುವರು.ಏನಾದರೂ ವಿಪತ್ತು ಉಂಟಾದರೆ ಘಟಿಸಿದರೆ ಮಂತ್ರಿಯ ಅಚಾತುರ್ಯ ಅಜ್ಞಾನವೆಂದು ನಿಂದಿಸುತ್ತಾರೆ. ರಾಜರಿಂದ ಕೇಳಲು ಹಿತಕರವಾದ ಅಮಾತ್ಯ ಎಂಬ ಶಬ್ದದಿಂದ ನಾವು ಕರೆಸಲ್ಪಡುತ್ತೇವೆ. ಹೀಗೆ ಕರೆಯುತ್ತಲೇ ಸೂಕ್ಷ್ಮವಾಗಿ ಸ್ವಲ್ಪ ಬುದ್ಧಿತಿರುಗಿದ ಮಂತ್ರಿಗೂ ಕಠಿಣ ದಂಡನೆಯನ್ನೇ ನೀಡುತ್ತಾನೆ ನಮ್ಮ ರಾಜ.ಹಾಗಾಗಿ ಮಂತ್ರಿ ಪದವಿ ಕತ್ತಿಯ ಅಲಗಿನ ಮೇಲೆ ನಡೆದಂತೆ ತುಂಬಾ ಕಷ್ಟ ನಿಭಾಯಿಸಲು.ಯಶಸ್ಸಿನಲ್ಲಿ ರಾಜನ ಹೆಸರು ಅಪಯಶಸ್ಸಿನಲ್ಲಿ ಮಂತ್ರಿಯ ಹೆಸರು, ಸಭೆಯಲ್ಲಿ ಕೇಳಲು ಮಧುರ ತಪ್ಪಿದರೆ ಕಷ್ಟ ಕಷ್ಟ._  📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.
🌺ಅವಿಮಾರಕದ ಒಂದು ಸುಮ:🌺  *ಬಹುತ್ವಾದ್ ದೂರಸಂಸ್ಥೊಪಿ ಸಮೀಪ ಇವ ವರ್ತತೇ/ ಸತ್ಸು ಹೇತುಸಹಸ್ರೇಷು ಕುರಂಗ್ಯಾಂ ಶಂಕತೇ ಮತಿ: ||*  _ಕುಂತೀಭೋಜ ತಾನು ಕೂತಲ್ಲೇ ದೊಡ್ಡ ಶಬ್ದವೊಂದನ್ನು ಕೇಳಿ ಆಲೋಚಿಸುತ್ತಿರುವನು.ದೂರದಿಂದ ಕೇಳಿಬರುತ್ತಿರುವ ಈ ಶಬ್ದ ಗಂಭೀರವಾಗಿ ಇರುವುದರಿಂದ ಸಮೀಪದಲ್ಲೇ ಧ್ವನಿಸಿದಂತೆ ಕಾಣುತ್ತಿದೆ. ಶಬ್ದವಾಗಲು ಕಾರಣಗಳು ಸಾವಿರಾರು ಇದ್ದರೂ ಮಗಳಿಗೇನಾದರೂ ಅಪಾಯ ಉಂಟಾಯಿತೇ ಎಂದು ನನ್ನ ಮನ ಶಂಕಿಸುತ್ತಿದೆ. ತಂದೆ ಮಗನಂತೆ ಸಾಕಿಬೆಳೆಸಿದ ಒಬ್ಬಳೇ ಮಗಳು. ಅವಳ ಚಿಂತೆಯೇ ಸದಾ ಅಪ್ಪನಿಗೆ. ಹೀಗಾಗಿ ಏನೇ ಶಬ್ದವಾದರೂ  ಕುಂತೀಭೋಜನಿಗೆ ಮಗಳ ಬಗ್ಗೆಯೇ ಚಿಂತೆ.ಅತಿಸ್ನೇಹ: ಪಾಪಶಂಕೀ ಎಂಬ ಕವಿವಾಣಿಯಂತೆ ಹೆಚ್ಚಿನ ಮಮತೆ ಅನರ್ಥವನ್ನೇ ಯೋಚಿಸುತ್ತದೆ._ 📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.
🌺ಅವಿಮಾರಕದ ಒಂದು ಕುಸುಮ:🌺  *ಜಾಮಾತೃಸಂಪತ್ತಿಮಚಿಂತಯಿತ್ವಾ ಪಿತ್ರಾ ತು ದತ್ತಾ ಸ್ವಮನೋಭಿಲಾಷಾತ್/ ಕುಲದ್ವಯಂ ಹಂತಿ ಮದೇನ ನಾರೀ ಕೂಲದ್ವಯಂ ಕ್ಷುಬ್ದಜಲಾ ನದೀವ||*  _ಕುಂತೀಭೋಜನ ಮನೋಗತ- ಅಳಿಯನಾಗುವವನ ರೂಪ ಗುಣ ವರ್ತನೆ ಉದ್ಯೋಗ ಮುಂತಾದ ಸಂಪತ್ತು ಅಥವಾ ಮನೆತನ ಶ್ರೀಮಂತಿಕೆ ಇವುಗಳ ಬಗ್ಗೆ ವಿಚಾರಿಸದೇ ತನಗೆ ಅನ್ನಿಸಿದ ಹಾಗೆ  ತಂದೆ ಯಾರು ಯಾರಿಗೋ ಮಗಳನ್ನು ನೀಡಿ ಮದುವೆ ಮಾಡಿದರೆ ಆ ಸ್ತ್ರೀ ಎರಡು ಕುಲದ ಶಾಂತಿಯನ್ನು ಹಾಳುಮಾಡುವಳು.ಗಂಡನ ದುರ್ವರ್ತನೆಯಿಂದ ನೊಂದು ಸಾವನ್ನು ವಿಚ್ಛೇದನೆಯನ್ನೊ ಬಯಸಿ ಅಥವಾ ಅವನ ಅಸಾಮರ್ಥ್ಯದ ದುರುಪಯೋಗದಿಂದ ಇವಳೇ ದಾರಿತಪ್ಪಿ ಕುಲ ಕೆಟ್ಟುಹೋಗುತ್ತದೆ.ಉದಾಹರಣೆಗೆ ತುಂಬಿ ಹರಿಯುವ ನದಿ ಎರಡೂ ಕಡೆಯ ದಂಡೆಗಳನ್ನು ನಾಶಪಡಿಸುವಂತೆ ಸ್ತ್ರೀಯು ಕೂಡ. ಪ್ರವಾಹ ಹೆಚ್ಚಾದಾಗ ನದಿಯ ಇಕ್ಕೆಲಗಳು ಕೊಚ್ಚಿಹೋಗುವಂತೆ ಕುಲಗಳೆರಡರ ಮನಶ್ಶಾಂತಿಯೂ ಕೂಡ.ಈ ಕಾರಣದಿಂದಲೇ ಮದುವೆಯನ್ನು ತುಂಬಾ ವಿಚಾರಿಸಿ ಮಾಡಬೇಕು.ಭಾಸನ ಈ ಶ್ಲೋಕ ಇಂದಿಗೂ ಪ್ರಸ್ತುತ._ 📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.
🌺ಅವಿಮಾರಕದ ಒಂದು ಸುಂದರ ಶ್ಲೋಕ:🌺  *ಇಷ್ಟಾ ಮಖಾ ದ್ವಿಜವರಾಶ್ಚ ಮಯಿ ಪ್ರಸನ್ನಾ: ಪ್ರಜ್ಞಾಪಿತಾ ಭಯರಸಂ ಸಮದಾ ನರೇಂದ್ರಾ: ಏವಂವಿಧಸ್ಯ ಚ ನಮೇಸ್ತಿ ಮನ:ಪ್ರಹರ್ಷ: ಕನ್ಯಾಪಿತುರ್ಹಿ ಸತತಂ ಬಹು ಚಿಂತನೀಯಮ್||*  _ಕುಂತೀಭೋಜ ಚಿಂತಿಸುತ್ತಿದ್ದಾನೆ.ಯಜ್ಞಗಳನ್ನು ಯಥಾವಧಿಯಾಗಿ ಮಾಡಿ ಆಯಿತು.ಬ್ರಾಹ್ಮಣರು ನನಗೆ ಅನುಕೂಲರೇ ಆಗಿದ್ದಾರೆ.ಗರ್ವದಿಂದ ಕೂಡಿರುವ ರಾಜರಿಗೆ ಭಯವೆಂದರೇನೆಂದು ತಿಳಿಸಿರುವೆ.ಇಷ್ಟೆಲ್ಲ ಅನುಕೂಲಗಳಿದ್ದರೂ ನನ್ನ ಮನವು ಹರ್ಷದಿಂದಿಲ್ಲ.ಏಕೆಂದರೆ ಕನ್ಯೆಯ ಮದುವೆ ಆಗುವ ತನಕ ಅವಳ ತಂದೆಗೆ ಚಿಂತೆಯೇ ಅಲ್ಲವೇ!  ಮಗಳ ವಿಷಯದಲ್ಲಿ ಚಿಂತೆ ಬಾಧಿಸುತ್ತಿದೆ. ಕಾಳಿದಾಸನ ಅಭಿಪ್ರಾಯ ಹೀಗೆ ಇದೆ- ಕನ್ಯಾಪಿತೃತ್ವಂ ಬಹು ನಾಮ ಕಷ್ಟಮ್._ 📜.ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.
*🌺ಅವಿಮಾರಕದ ಒಂದು ಸುಮ🌺* *ನಾಟಕರಚನೆಯಲ್ಲಿ ಉತ್ಕೃಷ್ಟತೆಯನ್ನು ತೋರಿದ ಕವಿಗಳಲ್ಲಿ ಭಾಸನೂ ಒಬ್ಬ. ಅವನ ಅವಿಮಾರಕವೆಂಬ ನಾಟಕದ ಮಂಗಲಶ್ಲೋಕ ದಶಾವತಾರಸ್ತುತಿಯೂ ಹೌದು.*  _ಉತ್ಕ್ಷಿಪ್ತಾಂ ಸಾನುಕಂಪಂ ಸಲಿಲನಿಧಿಜಲಾದೇಕದಂಷ್ಟ್ರಾಗ್ರರೂಢಾಂ ಆಕ್ರಾಂತಾಮಾಜಿಮಧ್ಯೇ ನಿಹತದಿತಿ ಸುತಾಮೇಕಪಾದಾವಧೂತಾಮ್| ಸಂಭುಕ್ತಾಂ ಪ್ರೀತಿಪೂರ್ವಂ ಸ್ವಭುಜವಶಾಗತಾಮೇಕಚಕ್ರಾಭಿಗುಪ್ತಾಂ ಶ್ರೀಮಾನ್ ನಾರಾಯಣಸ್ತೇ ಪ್ರದಿಶತು ವಸುಧಾಮುಚ್ಛ್ರಿತೈಕಾತಪತ್ರಾಮ್||_  *ಮತ್ಸ್ಯಾವತಾರದಲ್ಲಿ ಭಗವಂತನು ಸಮುದ್ರದಲ್ಲಿ ಮುಳುಗಿದ್ದ ಭೂಮಿಯನ್ನು ದಯೆಯಿಂದ ಮೇಲಕ್ಕೆತ್ತಿದನು. ವರಾಹಾವತಾರದಲ್ಲಿ ಮತ್ತೆ ಅದೇ ಭೂಮಿಯನ್ನು ತನ್ನ ಒಂದೇ ಕೋರೆಹಲ್ಲಿನಲ್ಲಿ ಎತ್ತಿ ಉದ್ಧರಿಸಿದನು.ಯುದ್ಧದಲ್ಲಿ  ರಾಕ್ಷಸರ ಕೈವಶವಾಗಿದ್ದ ಲೋಕಗಳನ್ನು ಉದ್ಧರಿಸಲು ನರಸಿಂಹಾವತಾರ ತಾಳಿ ದಿತಿಸುತನಿಗೆ ಗತಿಕರುಣಿಸಿ, ವಾಮನಾವತಾರದಲ್ಲಿ ಕೇವಲ ಒಂದು ಕಾಲಿನಿಂದಲೇ ಅಳೆದು, ರಾಮಾವತಾರದಲ್ಲಿ ಪ್ರೀತಿಯಿಂದ ಹನ್ನೊಂದು ಸಾವಿರವರ್ಷಗಳಷ್ಟು ಕಾಲ ಆಳು, ಚಕ್ರವೆಂಬ ಒಂದೇ ಅಸ್ತ್ರದಿಂದ ಕೃಷ್ಣಾವತಾರಕಾಲದಲ್ಲಿ ಶತ್ರುಗಳಿಲ್ಲದಂತೆ ಮಾಡಿಕಾಪಾಡಿದ ( ಭೂಭಾರವನ್ನು ಕಡಿಮೆಮಾಡಿದ) ಬಹುಕಾಲದಿಂದ ಭಗವಂತನೆಂಬ ಛತ್ರಿಯ ಅಡಿಯಲ್ಲಿ ರಕ್ಷಣೆ ಪಡೆಯುತ್ತಿರುವ ಈ ಭೂಮಿಯನ್ನು ಭಗವಂತನು ನಿನಗೆ ನೀಡಲಿ. ನಿನಗ್ಯಾರೂ ಶತ್ರುಗಳು ಅವನ ದಯೆಯಿಂದ ಇರದಿರಲಿ ಎಂದು ಆಶಿಸುವ, ರಾಜನಿಗೆ ದೇವರ ಅನುಗ್ರಹ ಕೇಳುವ ಶ್ಲೋಕ....
🌹ಶಾಕುಂತಲದ ಒಂದು ಸುಮ:🌹  *ಸಹಜಂ ಕಿಲ ಯದ್ವಿನಿಂದಿತಂ ನ ಖಲು ತತ್ಕರ್ಮ ವಿವರ್ಜನೀಯಮ್ ಪಶುಮಾರಣಕರ್ಮದಾರುಣೋ ಅನುಕಂಪಾಮೃದುರೇವ ಶ್ರೋತ್ರಿಯ: ||*  _ಮೀನುಗಾರನು ತನ್ನ ವೃತ್ತಿಯ ಬಗ್ಗೆ ಭಟರು ನಿಂದಿಸಿದಾಗ ನುಡಿಯುವ ಮಾತು. ಮೀನು ಹಿಡಿಯುವ ನನ್ನ ವೃತ್ತಿಯನ್ನು ನಿಂದಿಸಬೇಡಿ. ಅವರವರಿಗೆ ಸಹಜವಾದ ಕಾರ್ಯವು ನಿಂದ್ಯವಾಗಿದ್ದರೂ ಬಿಡಬಾರದು. ಉ: ಶ್ರೋತ್ರಿಯನಾದ ಬ್ರಾಹ್ಮಣನು ಅನುಕಂಪದಿಂದ ಕೂಡಿದ ಮೃದು ಸ್ವಭಾವದವನಾದರೂ ಯಜ್ಞದಲ್ಲಿ ಪಶುವನ್ನು ಕೊಲ್ಲುವ ದಾರುಣ ಕರ್ಮ ಮಾಡುವನು. ಅದು ಆ ಸಂದರ್ಭದಲ್ಲಿ ಅವನಿಗೆ ಸಹಜ.ನನಗೆ ಮೀನು ಹಿಡಿಯುವುದು ಕುಲಪರಂಪರೆಯಾಗಿ ಬಂದಿರುವ ವೃತ್ತಿ. ಅವರವರ ಕರ್ತವ್ಯ ಅವರವರ ಧರ್ಮ ಎಂಬ ಗೀತೆಯ ಜೀವನದೃಷ್ಟಿ ಕಂಡುಬರುತ್ತದೆ . ಜನ್ಮನಾ ಬ್ರಾಹ್ಮಣೋ ಜ್ಞೇಯ: ಸಂಸ್ಕಾರಾದ್ವಿಜ ಉಚ್ಯತೆ ವಿದ್ಯಯಾ ಯಾತಿ ವಿಪ್ರತ್ವಂ ತ್ರಿಭಿ: ಶ್ರೋತ್ರಿಯ ಏವ ಚ/ ಜೀವನೋಪಾಯಕ್ಕಾಗಿ ತಾನು ಮಾಡುವ ವೃತ್ತಿ ಸಮರ್ಥಿಸುತ್ತಿದ್ದಾನೆ. ಸಂಸ್ಕಾರ ಮತ್ತು ವಿದ್ಯೆಯಿಂದ ಕೂಡಿದ ಶ್ರೋತ್ರಿಯನೇ ಹಾಗೆ ಮಾಡುವುದು ಅಪರಾಧವಲ್ಲ. ಹಾಗಾಗಿ ತನ್ನ ವೃತ್ತಿ ಶ್ರೇಷ್ಠ ಎಂದು ಅಭಿಪ್ರಾಯ. ಧರ್ಮವ್ಯಾಧನು ಮಾಂಸ ಮಾರುತ್ತಲೇ ಧರ್ಮದಿಂದ ಜೀವನ ನಡೆಸಿ ಕೌಶಿಕನೆಂಬ ಅಹಂಕಾರಿ ತಪಸ್ವಿಗೆ ಧರ್ಮ ಬೋಧಿಸಿದ ಕಥೆ ಇದಕ್ಕೆ ಪೂರಕ._ 📜ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
📃ಶಾಕುಂತಲದ ಒಂದು ಆಶೀರ್ವಚನ:📜  *ತವ ಭವತು ಬಿಡೌಜಾ: ಪ್ರಾಜ್ಯವೃಷ್ಟಿ: ಪ್ರಜಾಸು ತ್ವಮಪಿ ವಿತತಯಜ್ಞೋ ವಜ್ರಿಣಂ ಪ್ರೀಣಯಸ್ವ/ ಯುಗಶತಪರಿವರ್ತಾನೇವಮನ್ಯೋನ್ಯಕೃತ್ಯೈ: ನಯತಮುಭಯಲೋಕಾನುಗ್ರಹಶ್ಲಾಘನೀಯೈ: ||*  _ಮಾರೀಚರು ಅಂದರೆ ಕಶ್ಯಪರು ರಾಜನಿಗೆ ಹೇಳಿದ ಮಾತು- ಇಂದ್ರನು ನಿನ್ನ ಪ್ರಜೆಗಳಿಗೆ ವಿಪುಲವಾದ ಮಳೆಯನ್ನು ಕೊಡಲಿ.ನೀನು ಪ್ರಜೆಗಳ ಜೊತೆಗೆ ಯಜ್ಞಗಳನ್ನು ಮಾಡಿ ಸ್ವರ್ಗದ ದೇವತೆಗಳನ್ನು ತೃಪ್ತಿಪಡಿಸು. ಹೀಗೆ ಎರಡೂ ಲೋಕಗಳಿಗೆ ಅನುಗ್ರಹಕಾರಿಯಾದ ಶ್ಲಾಘನೀಯ ಪರಸ್ಪರ ಉಪಕಾರದ ಕಾರ್ಯಗಳಿಂದ ನೂರಾರು ಯುಗಗಳನ್ನು ಸುಖವಾಗಿ ಕಳೆಯಿರಿ.ಬಿಡವೆಂದರೆ ಭೇದಿಸುವುದು ಶತ್ರುಗಳನ್ನು  ನಾಶಮಾಡುವ ವೀರ್ಯವುಳ್ಳವನು ಇಂದ್ರ. ದೇವತೆಗಳು ಕಾಲಕಾಲಕ್ಕೆ ಮಳೆಬೆಳೆಗಳನ್ನು ಕರುಣಿಸಲು ಯಜ್ಞಗಳನ್ನು ಮಾಡುವುದು ಕಾರಣ. ಹಾಗೆ ಆಹುತಿ ಪಡೆದ ಅವರು ಎಲ್ಲವನ್ನೂ ನೀಡುತ್ತಾರಷ್ಟೆ.ಯಜ್ಞಾದ್ಭವತಿ ಪರ್ಜನ್ಯೋ ಗೀತೆಯ ಮಾತಿನಂತೆ ಯಜ್ಞಗಳ ಆಚರಣೆ ಮಳೆಗೆ ಕಾರಣ. ಅದನ್ನು ಸರಿಯಾಗಿ ಮಾಡಿ ಪರಸ್ಪರಂ ಭಾವಯಂತ: ಶ್ರೇಯ: ಪರಮವಾಪ್ಸ್ಯಥ ಎಂಬ ಕೃಷ್ಣನ ಮಾತನ್ನು ಉಪದೇಶಿಸಿದ್ದಾರೆ ಕಶ್ಯಪ ಮಹರ್ಷಿಗಳು. ಯಜ್ಞಗಳು ಮುಖ್ಯವಾಗಿ ಐದು ವಿಧ ತಾನು ಓದಿದ್ದನ್ನು ಮನನ ಮಾಡಿ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದು ಬ್ರಹ್ಮಯಜ್ಞ, ಅತಿಥಿಗಳಿಗೆ ದೀನ ದುರ್ಬಲರಿಗೆ ಉಪಚರಿಸುವುದು ಸಹಾಯ ಮಾಡುವುದು ಮನುಷ್ಯಯಜ್ಞ, ಪ್ರಾಣಿ ಪಕ್ಷಿಗಳಲ್ಲಿ ಕರುಣೆ ಪ್ರಾಕೃತಿಕ ಸಂಪತ್ತು ...
🌺ಶಾಕುಂತಲದ ಸುಂದರ ಶ್ಲೋಕ : 🌺 *ಶಾಪಾದಸಿ ಪ್ರತಿಹತಾ ಸ್ಮ್ಮತಿರೋಧಪಕ್ಷೇ ಭರ್ತರ್ಯಪೇತತಮಸಿ ಪ್ರಭುತಾ ತವೈವ/ ಛಾಯಾ ನ ಮೂರ್ಛತಿ ಮಲೋಪಹತಪ್ರಸಾದೇ ಶುದ್ಧೇ ತು ದರ್ಪಣತಲೇ ಸುಲಭಾವಕಾಶಾ||*  _ಮಾರೀಚರು ಶಕುಂತಲೆಗೆ ಸಮಾಧಾನ ಮಾಡುತ್ತಿದ್ದಾರೆ. ಮಗಳೇ - ನಿನ್ನ ಪತಿಯು ಶಾಪದಿಂದ ನಿನ್ನ ನೆನಪಿಲ್ಲದೆ ನಿಷ್ಠುರನಾದಾಗ ಅವನಿಂದ ತಿರಸ್ಕಾರಕ್ಕೆ ಒಳಗಾದೆ. ಅವನ ಬುದ್ಧಿಮಾಂದ್ಯತೆ ಹೋದಮೇಲೆ ನಿನ್ನ ಅಧಿಕಾರ ಉಂಟಾಯಿತು. ಕನ್ನಡಿಯು ಕೊಳೆಯಿಂದ ಕೂಡಿದಾಗ ಅದರಲ್ಲಿ ಪ್ರತಿಬಿಂಬ ಮೂಡುವುದಿಲ್ಲ.ಆದರೆ ಶುದ್ಧವಾದ ಕನ್ನಡಿಯಲ್ಲಿ ಸುಲಭವಾಗಿ ಮೂಡುತ್ತದೆ. ಹಿಂದೆ ಸ್ಮರಣೆ ಇಲ್ಲದೆ ಕ್ರೂರನಾಗಿದ್ದ.ಈಗ ಕತ್ತಲೆ ಕಳೆದು ಬೆಳಕು ಬಂದಂತೆ ನಿನ್ನ ನೆನಪು ಬಂದಿದೆ. ಕೊಳೆಯನ್ನು ತೆಗೆದಾಗ ಕನ್ನಡಿ ಸ್ವಚ್ಛವಾದ ಬಿಂಬ ತೋರುವಂತೆ ಶಾಪವೆಂಬ ಕೊಳೆ ಈಗ ಹೊರಟುಹೋಗಿ ನಿನ್ನನ್ನು ಬಯಸುತ್ತಿದ್ದಾನೆ .ಇದರಲ್ಲಿ ಅವನದೇನೂ ತಪ್ಪಿಲ್ಲವೆಂಬ ಭಾವ ಕವಿಯದ್ದು. ದೃಷ್ಟಾಂತ ಅಲಂಕಾರ._  📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.
🌹ಶಾಕುಂತಲದ ಮತ್ತೊಂದು ಸುಮ:🌹  *ಯಥಾ ಗಜೋ ನೇತಿ ಸಮಕ್ಷರೂಪೆ ತಸ್ಮಿನ್ನಪಕ್ರಾಮತಿ ಸಂಶಯ: ಸ್ಯಾತ್/ ಪದಾನಿ ದೃಷ್ಟ್ವಾ ತು ಭವೇತ್ಪ್ರತೀತಿ: ತಥಾವಿಧೋ ಮೇ ಮನಸಿ ವಿಕಾರ: ||*  _ದುಷ್ಯಂತನು ತನ್ನ ಕೃತ್ಯದ ಬಗ್ಗೆ ಪಶ್ಚಾತ್ತಾಪಪಡುತ್ತಾ ಹೀಗೆ ಹೇಳುತ್ತಿದ್ದಾನೆ. ನನ್ನ ಬುದ್ಧಿ ವಿಕಾರಕ್ಕೆ ಒಳಗಾಗಿತ್ತು.ಅದು ಹೇಗೆಂದರೆ ಆನೆಯು ಎದುರಿಗಿದ್ದರೂ ಅದು ಇಲ್ಲವೆನ್ನುವುದು. ಮುಂದೆ ಹೋದಾಗ ಉಂಟೋ ಇಲ್ಲವೋ ಎಂದು ಸಂಶಯಪಡುವುದು.ಅದರ ಹೆಜ್ಜೆಗಳನ್ನು ಕಂಡು ಉಂಟೆಂದು ನಂಬುವುದು ಎಂಬಂತೆ ನನ್ನ ಮನವು ವಿಕಾರಗೊಂಡಿತು.ಇಲ್ಲಿ ದುಷ್ಯಂತನ ಮೂರು ಹಂತದ ಬುದ್ಧಿಯ ವಿಕಾರಗಳಿಗೆ ಜ್ಞಾನದ ಮೂರು ಅವಸ್ಥೆಗಳನ್ನು ಹೋಲಿಸಲಾಗಿದೆ.ಶಕುಂತಲೆ ಎದುರಿಗೆ ಬಂದಾಗ ಗುರುತಿಸದಿರುವುದು.ಶಕುಂತಲೆ ಹೋದ ನಂತರ ಮನದಲ್ಲಿ ಸಂಶಯ ಪಡುವುದು.ಆನೆಯ ಹೆಜ್ಜೆ ಕಂಡು ಸಂಶಯಪಟ್ಟಂತೆ ಉಂಗುರವನ್ನು ನೋಡಿ ಸ್ಮರಣೆ. ಈ ಹಂತದಲ್ಲಿ ಅವಳ ನೆನಪು ಬಂತೆಂದು ದು:ಖಪಡುತ್ತಿದ್ದಾನೆ. ನಿದರ್ಶನ ಅಲಂಕಾರ._  📜ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
🌹ಶಾಕುಂತಲದ ಸುಂದರ ಪುಷ್ಪ : 🌹 *ಉದೇತಿ ಪೂರ್ವಂ ಕುಸುಮಂ ತತ: ಫಲಂ ಘನೋದಯ: ಪ್ರಾಕ್ತದನಂತರಂ ಪಯ:/ ನಿಮಿತ್ತನೈಮಿತ್ತಿಕಯೋರಯಂ ಕ್ರಮ: ತವ ಪ್ರಸಾದಸ್ಯ ಪುರಸ್ತು ಸಂಪದ: ||  _ಮಾರೀಚರ ದರ್ಶನ ಪಡೆದ ರಾಜ ದುಷ್ಯಂತನ ಮಾತು- ಲೋಕದಲ್ಲಿ ಮೊದಲು ಹೂವು ಚಿಗುರಿ ನಂತರ ಹಣ್ಣು ಬಿಡುತ್ತವೆ ಸಸ್ಯ ಅಥವಾ ಮರಗಳು. ಮೊದಲು ಮೋಡ ಕಾಣಿಸಿಕೊಳ್ಳುತ್ತದೆ ನಂತರ ಮಳೆ ಸುರಿಯುತ್ತದೆ. ಕಾರಣ ಮೊದಲು ನಂತರ ಕಾರ್ಯ ಹೀಗೆ ಕ್ರಮ ಇರುವುದು.ನಿಮ್ಮ ವಿಷಯದಲ್ಲಿ ಇದು ತಿರುಗಿದೆ.ನಿಮ್ಮ ದರ್ಶನಕ್ಕೆ ಮುಂಚೆಯೇ ನನಗೆ ಫಲ ದೊರಕಿತು.ಶಕುಂತಲೆಯನ್ನು ಮತ್ತು ಪುತ್ರನನ್ನು ಪಡೆದೆ. ತಮ್ಮ ದರ್ಶನಕ್ಕೆ ಪೂರ್ವದಲ್ಲಿಯೇ ಫಲವನ್ನು ಪಡೆದೆನೆಂಬ ಭಾವ  ದುಷ್ಯಂತನದ್ದು. ಅತಿಶಯೋಕ್ತಿ ಅಲಂಕಾರ._  📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.
🌹ಶಾಕುಂತಲದ ಕುಸುಮ:🌹  *ಸುತನು ಹೃದಯಾತ್ಪ್ರತ್ಯಾದೇಶವ್ಯಲೀಕಮಪೈತು ತೇ/ ಕಿಮಪಿ ಮನಸ: ಸಂಮೋಹೊ ಮೇ ತದಾ ಬಲವಾನಭೂತ್// ಪ್ರಬಲತಮಸಾಮೇವಂ ಪ್ರಾಯಾ: ಶುಭೇಷು ಪ್ರವೃತ್ತಯ: / ಸ್ರಜಮಪಿ ಶಿರಸ್ಯಂಧ: ಕ್ಷಿಪ್ತಾಂ ಧುನೋತ್ಯಹಿಶಂಕಯಾ||*  _ದುಷ್ಯಂತನು ತಾನು ಹಿಂದೆ ಮಾಡಿದ ತಪ್ಪಿಗೆ ಶಕುಂತಲೆಯ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಿರುವನು. ಕೋಮಲಾಂಗಿ - ತಿರಸ್ಕಾರದ ಆ ಕಳಂಕವನ್ನು ನಿನ್ನ ಮನದಿಂದ ತೊಡೆದುಹಾಕು. ಆ ಸಮಯದಲ್ಲಿ ನನ್ನ ಮನಸ್ಸಿಗೆ ಯಾವುದೊ ಬಲವಾದ ಮಾಂದ್ಯವು ( ಮಂಕು) ಕವಿದಿತ್ತು. ಬುದ್ಧಿಮಾಂದ್ಯತೆ ಪ್ರಬಲವಾಗಿದ್ದಾಗ ಒಳ್ಳೆಯವರ ವಿಷಯದಲ್ಲಿಯೂ ಇಂತಹ ನಡತೆ ಉಂಟಾಗುತ್ತದೆ. ಹೇಗೆಂದರೆ ಕುರುಡನು ತನ್ನ ತಲೆಯ ಮೇಲೆ ಹಾರ ಬಿದ್ದರೂ ಹಾವೆಂದು ಭಯಪಟ್ಟು ತಲೆ ಜಾಡಿಸುವನು. ನಾನೂ ಆ ಸಮಯದಲ್ಲಿ ನಿನ್ನ ಪ್ರೀತಿಯ ಬಗ್ಗೆ ಕುರುಡಾಗಿದ್ದೆ. ದುಷ್ಯಂತನ ಈ ಮಾತಿನಲ್ಲಿ ಪಶ್ಚಾತ್ತಾಪ ಕಾಣುತ್ತಿದೆ ಹಾಗೆಯೇ ಅರಿಯದೇ ಮಾಡಿದ್ದರಿಂದ ತಾನು ನಿರಪರಾಧಿ ಕ್ಷಮೆಗೆ ಯೋಗ್ಯ ಎನ್ನುವ ಭಾವನೆಯೂ ಇದೆ._  📜ಸಂಗ್ರಹ : ✍ಶ್ರೀನಿ‍ಧಿ ಅಭ್ಯಂಕರ್.
🌹ಶಾಕುಂತಲದ ಮತ್ತೊಂದು ಪುಷ್ಪ:🌹  *ಬಾಷ್ಪೇಣ ಪ್ರತಿಷಿದ್ಧೆಪಿ ಜಯಶಬ್ದೆ ಜಿತಂ ಮಯಾ/ ಯತ್ತೇ ದೃಷ್ಟಮಸಂಸ್ಕಾರಪಾಟಲೋಷ್ಟಪುಟಂ ಮುಖಮ್ ||*  _ಶಕುಂತಲೆ ರಾಜನನ್ನು ನೋಡಿ ಜಯಕಾರ ಹಾಕುತ್ತಾ ಮಧ್ಯದಲ್ಲಿ ಕಣ್ಣೀರು ತುಂಬಿಬಂದು ನಿಲ್ಲಿಸುತ್ತಾಳೆ. ಆಗ ದುಷ್ಯಂತ ಹೇಳಿದ ಮಾತು. ಸುಂದರಿ - ಕಣ್ಣೀರಿನಿಂದ ಜಯಶಬ್ದ ತಡೆಯಲ್ಪಟ್ಟರೂ ನಾನು ಜಯಶಾಲಿಯು. ಏಕೆಂದರೆ ಸಂಸ್ಕರಿಸದಿದ್ದರೂ ನಸುಗೆಂಪಿನ ತುಟಿಯಿರುವ ನಿನ್ನ ಮುಖವನ್ನು ನೋಡಿದೆನು. ಪತಿಯ ವಿರಹದಿಂದ ಶಕುಂತಲೆ ಅಲಂಕರಿಸಿಕೊಂಡಿರಲಿಲ್ಲ. ನಿಯಮಶೀಲಳಾದ್ದರಿಂದ ತುಟಿಗಳು ಗಾಢಕೆಂಪು ಕಳೆದು ನಸುಗೆಂಪು ಪಡೆದಿದ್ದವು. ಅಂತಹ ತುಟಿಗಳಿರುವ ಮುದ್ದು ಮುಖವನ್ನು ನೋಡಿ ನಿಜಕ್ಕೂ ನಾನು ಜಯಶೀಲನಾದೆ. ( ನಿನ್ನನ್ನು ಮತ್ತೆ ಪಡೆದು ಧನ್ಯನಾದೆ ಎಂಬ ಭಾವ)_  📜ಸಂಗ್ರಹ: ✍ಶ್ರೀನಿಧಿ ಅಭ್ಯಂಕರ್.
🌺ಅವಿಮಾರಕದ ಸುಂದರ ಸುಮ:🌺 *ಅತ್ಯುಷ್ಣಾ ಜ್ವರಿತೇವ ಭಾಸ್ಕರಕರೈರಾಪೀತಸಾರಾ ಮಹೀ ಯಕ್ಷ್ಮಾರ್ತಾ ಇವ ಪಾದಪಾ: ಪ್ರಮುಷಿತಚ್ಛಾಯಾ ದವಾಗ್ನ್ಯಾಶ್ರಯಾತ್| ವಿಕ್ರೋಶನ್ತ್ಯವಶಾದಿವೊಚ್ಛ್ರಿತಗುಹಾ ವ್ಯಾತ್ತಾನನಾ: ಪರ್ವತಾ: ಲೋಕೋಯಂ ರವಿಪಾಕನಷ್ಟಹೃದಯ: ಸಂಯಾತಿ ಮೂರ್ಛಾಮಿವ||*  _ರಾತ್ರಿಯಾಗುತ್ತಿದ್ದಂತೆ ನಾಯಕನಿಗೆ ಪ್ರಿಯಳ ನೆನಪು ಕಾಡುತ್ತಿದೆ. ಅವಳನ್ನು ಬಿಟ್ಟಿರಲು ಸಾಧ್ಯವಾಗುತ್ತಿಲ್ಲ. ಹಾಗೇ ರಾತ್ರಿಯು ಎಷ್ಟು ಕ್ರೂರ ಸೂರ್ಯನ ಪ್ರತಾಪ ಎಂಥಹದ್ದು ಎಂದೆಲ್ಲ ಬಡಬಡಿಸುತ್ತಿರುವನು.ಸೂರ್ಯನ ಬಿಸಿ ಕಿರಣಗಳು ಭೂಮಿಯ ನೀರನ್ನೆಲ್ಲ ಹೀರಿ ಅದರ ಮೂಲಕ ಸಾರವನ್ನು ಕುಡಿದು ಈಗ ಬಿಸಿಯಾದ ನೆಲ ಜ್ವರ ಬಂದವರಂತೆ ಇದೆ.( ಒಳಗಿನ ಸಾರವೆಲ್ಲ ಬರಿದಾದಾಗ ಜ್ವರ ಅಡರುವಂತೆ) ಈ ರಾತ್ರಿ ಪ್ರಿಯಳ ವಿರಹವು ಎಲ್ಲೆಡೆ ಬಿಸಿಯನ್ನೇ ಉಂಟುಮಾಡುತ್ತಿದೆ. ಕಾಡ್ಗಿಚ್ಚು ವ್ಯಾಪಿಸಿ ಮರಗಳ ಎಲೆ ಹೂವು ಉದುರಿ ನೆರಳಿಲ್ಲದಂತೆ ಆಗಿ ಯಕ್ಷ್ಮವೆಂಬ ರೋಗದಿಂದ ನರಳುತ್ತಿವೆ. ( ಇದಕ್ಕೆ ಸೂರ್ಯನ ಬಿಸಿಲೇ ಕಾರಣ) ಪರ್ವತಗಳು ಬಿಸಿ ತಾಳಲಾಗದೇ ಗುಹೆಗಳೆಂಬ ಬಾಯಿಗಳಿಂದ ಜೋರಾಗಿ ಕೂಗುತ್ತಾ ಅಳುತ್ತಿರುವಂತೆ ಇದೆ. ( ಗುಹೆಗಳಿಂದ ಹೊರಬರುವ ವಿಧ ವಿಧದ ಶಬ್ದಗಳು ಕವಿಗೆ ಅಳುವಂತೆ ತೋರುತ್ತಿದೆ.ನಮಗೆ ರಾತ್ರಿ ಭೂತ ದೆವ್ವಗಳ ಧ್ವನಿ ಕೇಳಿದಂತೆ) ಹೀಗೆ ಸೂರ್ಯನ ಕಿರಣಗಳಿಂದ ಬಳಲಿದ ಈ ಜಗತ್ತು ಮೂರ್ಛೆ ಹೊಂದುವಂತೆ ತೋರುವುದು. ಬಿಸಿಲಿಗೆ ನೀರೆಲ್ಲ ಒಣಗಿ ಭೂಮಿ ಬಿರುಕುಬಿಡುತ್ತಿದೆ. ಬಿ...
🌹ತಪಸ್ವಿಗಳನ್ನು ಪ್ರಶಂಸಿಸುವ ಶಾಕುಂತಲದ ಒಂದು ಮಧುರ ಶ್ಲೋಕ 🌹  *ಶಮಪ್ರಧಾನೇಷು ತಪೋಧನೇಷು ಗೂಢಂ ಹಿ ದಾಹಾತ್ಮಕಸ್ತಿ ತೇಜ: / ಸ್ಪರ್ಶಾನುಕೂಲಾ ಇವ ಸೂರ್ಯಕಾಂತಾಸ್ತದನ್ಯತೇಜೋಭಿಮಿವಾದ್ವಪಂತಿ ||*  _ಶಾಂತಿಯೇ ಪ್ರಧಾನವಾದ ಅಥವಾ ಭಕ್ತಿಯೇ ಜೀವನದ ಧ್ಯೇಯವಾಗುಳ್ಳ ತಪಸ್ವಿಗಳಲ್ಲಿ ಸುಡುವ ಶಕ್ತಿಯುಳ್ಳ ಬೆಂಕಿಯಂತಹ ತೇಜಸ್ಸು ಅಡಗಿರುತ್ತದೆ. ಸಾಧಾರಣವಾಗಿ ಮುಟ್ಟಬಹುದಾದ ಸೂರ್ಯಕಾಂತಮಣಿಗಳಂತೆ ಬೇರೆ ತೇಜಸ್ಸು ಆಕ್ರಮಿಸಲು ಬಂದಾಗ ತನ್ನ ಪ್ರಭಾವವನ್ನು ಬೀರುತ್ತದೆ. ಅದ್ಭುತವಾದ ವರ್ಣನೆ. ಸಾಮಾನ್ಯವಾಗಿ ಸೂರ್ಯಕಾಂತಮಣಿಯನ್ನು ಮುಟ್ಟಿದರೆ ಬಿಸಿ ಅನುಭವಕ್ಕೆ ಬರುವುದಿಲ್ಲ. ಅದೇ ಸೂರ್ಯನ ಕಿರಣಗಳು ಅಥವಾ ಬೆಂಕಿಯ ಸಮೀಪವಿಟ್ಟರೆ ಕಾದ ಕಬ್ಬಿಣದಂತೆ ಸುಡುತ್ತದೆ.ತಪಸ್ವಿಗಳ ಶಕ್ತಿಯ ಹೀಗೆಯೇ ಇರುವುದು. ಸಾಧಾರಣವಾಗಿ ಸಮಚಿತ್ತರಾದ ತಪಸ್ವಿಗಳು ಕೋಪಗೊಂಡರೆ ಅಂದರೆ ಪರರು ಅವರ ನಿಯಮ ಮೀರಲು ಯತ್ನಿಸಿದಾಗ ಬೆಂಕಿಯಂತೆ ಎದಿರಾದವನನ್ನು ಸುಡುವರು.ಶೃಂಗಿಯ ತಂದೆಯನ್ನು ಪರೀಕ್ಷಿತನು, ದೂರ್ವಾಸರನ್ನು ಸಾಂಬನು ಕೆಣಕಿದಾಗ ಇಂತಹ ಪರಿಣಾಮಗಳು ಗೋಚರಿಸಿದವು. ಹೀಗಾಗಿ ನಾವೂ ಶ್ರೇಷ್ಠ ಗುಣಿಗಳನ್ನು ಎದುರಿಸುವ ಮೊದಲು ಅವರ ಅಂತಸ್ಸತ್ವವನ್ನು ಅರಿತು ಮುಂದಡಿ ಇಡಬೇಕು.ಇಲ್ಲದಿರೆ ತೊಂದರೆಗೆ ಒಳಗಾಗಬೇಕಾದಿತು._ 📜ಸಂಗ್ರಹ : ✍ಶ್ರೀನಿಧಿ ಅಭ್ಯಂಕರ್.
🌹ಶಾಕುಂತಲದ ಮತ್ತೊಂದು ಶ್ಲೋಕ🌹 *ಚಿತ್ರೇ ನಿವೇಶ್ಯ ಪರಿಕಲ್ಪಿತಸತ್ವಯೋಗಾ ರೂಪೋಚ್ಚಯೇನ ಮಹತಾ ವಿಧಿನಾ ಕೃತಾ ನು/ ಸ್ತ್ರೀರತ್ನಸೃಷ್ಟಿರಪರಾ ಪ್ರತಿಭಾತಿ ಮೇ ಧಾತುರ್ವಿಭುತ್ವಮನುಚಿಂತ್ಯ ವಪುಶ್ಚ ತಸ್ಯಾ:*  _ಶಕುಂತಲೆಯನ್ನು ವರ್ಣಿಸುವ ಅನೇಕ ಶ್ಲೋಕಗಳಲ್ಲಿ ಇದೊಂದು ಸುಂದರ ಶ್ಲೋಕ. ದುಷ್ಯಂತನು ವಿದೂಷಕನ ಬಳಿ ಅವಳ ಸೌಂದರ್ಯವನ್ನು ವರ್ಣಿಸುತ್ತಾನೆ. ಸೃಷ್ಟಿಕರ್ತ ಬ್ರಹ್ಮ ಮೊದಲು ಚಿತ್ರದಲ್ಲಿ ಬರೆದು ನಂತರ ಜೀವಕಳೆಯನ್ನು ತುಂಬಿದನೋ? ಅಥವಾ ಸೌಂದರ್ಯದ ಅಂಶಗಳನ್ನೆಲ್ಲ ಮನದಲ್ಲಿ ತುಂಬಿಕೊಂಡು ಸೃಷ್ಟಿ ಮಾಡಿದನೋ? ಬ್ರಹ್ಮನ ಸರ್ವೋಚ್ಚ ಸಾಮರ್ಥ್ಯವನ್ನು, ಇವಳನ್ನೂ ನೋಡಿದಾಗ ಅಪೂರ್ವ ಸ್ತ್ರೀ ರತ್ನವೆಂದೆ ನನಗೆ ತೋರುತ್ತದೆ. ಚಿತ್ರದಲ್ಲಿ ಹೇಗಿರಬೇಕೆಂದು ಕಲ್ಪಿಸಿ ನಂತರ ಜೀವಕೊಟ್ಟಾಗ ಅಂದುಕೊಂಡ ಸೃಷ್ಟಿ ನಿಜವಾಗುತ್ತದೆ,ಹಾಗೆಯೇ ಬ್ರಹ್ಮನು ಮಾಡಿರಬೇಕೆಂದು ನನಗನಿಸುತ್ತದೆ. ಏಕೆಂದರೆ ಅವಳು ಅಪರೂಪದ ರೂಪಸಿ._ 📃ಸಂಗ್ರಹ : ✍ಶ್ರೀನಿಧಿ ಅಭ್ಯಂಕರ್.
🌹ಶಾಕುಂತಲದ ವರ್ಣನೆಯ ಪರಾಕಾಷ್ಠೆಯ ಒಂದು ಶ್ಲೋಕ🌹 *ಅನಾಘ್ರಾತಂ ಪುಷ್ಪಂ ಕಿಸಲಯಮಲೂನಂ ಕರರುಹೈ: ಅನಾವಿದ್ಧಂ ರತ್ನಂ ಮಧು ನವಮನಾಸ್ವಾದಿತರಸಮ್ / ಅಖಂಡಂ ಪುಣ್ಯಾನಾಂ ಫಲಮಿವ ಚ ತದ್ರೂಮಮನಘಂ ನ ಜಾನೇ  ಭೋಕ್ತಾರಂ ಕಮಿಹ ಸಮುಪಸ್ಥಾಸ್ಯತಿ ವಿಧಿ:*  _ರಾಜ ದುಷ್ಯಂತ ಶಕುಂತಲೆಯನ್ನು ವರ್ಣಿಸುವ ಪರಿ. ಯಾವ ಲೋಪದೋಷವಿಲ್ಲದ ಅವಳು  ಮೂಸಿನೋಡದ ಹೂವು. ಹೂವನ್ನು ಮುಟ್ಟುವುದಿರಲಿ ಇನ್ನೂ ಪರಿಮಳವನ್ನೇ ಯಾರೂ ಸವಿದಿಲ್ಲ.ವನವಾಸ ಅದಕ್ಕೆ ಕಾರಣವೇನೋ! ಉಗುರಿನಿಂದ ಚಿವುಟದ ಹೊಸ ಚಿಗುರು.ಇನ್ನೂ ನಳನಳಿಸುತ್ತಿದೆ. ಸಾಣೆ ಹಚ್ಚಿ ರೂಪ ಕೊಡದಿರುವ ರತ್ನ. ಸಹಜ ಸೌಂದರ್ಯ. ಪ್ರಸಾಧನಗಳನ್ನವಲಂಬಿಸಿದ್ದಲ್ಲ.ಇನ್ನೂ ರುಚಿ ನೋಡದ ಹೊಸಜೇನು.ಗೂಡಿನಿಂದ ಈಗಷ್ಟೇ ಪ್ರತ್ಯೇಕಿಸಿದ ಜೇನಿಗೆ ಅದರದ್ದೇ ಆದ ಒಂದು ಘಮ ಮತ್ತು ರುಚಿ ಇರುತ್ತದೆ ಹಾಗೆಯೇ ಇಲ್ಲಿಯೂ. ಇನ್ನೂ ಹೇಳಬೇಕೆಂದರೆ ನಾಶವಾಗದ ಬಹುದೊಡ್ಡ ಪುಣ್ಯಫಲ.ದೈವವು ಯಾರಿಗೆ  ಇವಳ ಸೌಂದರ್ಯ ಸವಿಯುವ ಬಾಗ್ಯ ಯಾರಿಗೆ ಸಿಗುತ್ತದೆಯೋ ಏನೋ ಅವನೇ ಭಾಗ್ಯವಂತ._ 📜ಸಂಗ್ರಹ: ✍ಶ್ರೀನಿಧಿ ಅಭ್ಯಂಕರ್.
🌹ಶಾಕುಂತಲದ ನುಡಿಮುತ್ತು.🌹 *ಪ್ರಥಮೋಪಕೃತಂ ಮರುತ್ವತ: ಪ್ರತಿಪತ್ಯಾ ಲಘು ಮನ್ಯತೇ ಭವಾನ್ / ಗಣಯತ್ಯವದಾನ ವಿಸ್ಮಿತೋ ಭವತ: ಸೋಪಿ ನ ಸತ್ಕ್ರಿಯಾಗುಣಾನ್||*  _ಇಂದ್ರನು ಮಾಡಿದ ಸತ್ಕಾರದ ಮಾನದಿಂದ ದುಷ್ಯಂತನು ತಾನು ಮಾಡಿದ ಉಪಕಾರ ಕಡಿಮೆಯಾಯಿತೆಂದು ಭಾವಿಸಿದನು. ಆದರೆ ದುಷ್ಯಂತನ ಉಪಕಾರವನ್ನು ಕಂಡ ಇಂದ್ರನು ತಾನು ಮಾಡಿದ ಸತ್ಕಾರ ಸಾಲದೆಂದು ಭಾವಿಸಿದನು. ದೇವತೆಗಳ ಕೋರಿಕೆಯಂತೆ ರಾಕ್ಷಸರನ್ನು ಮಟ್ಟಹಾಕಿ ಇಂದ್ರನಿಂದ ಅರ್ಧಾಸನದಲ್ಲಿ ಕುಳ್ಳಿರಿಸಿ ನಾನಾವಿಧವಾಗಿ ಸತ್ಕೃತನಾದ ದುಷ್ಯಂತನು ತಾನು ಅಷ್ಟೊಂದು ಸತ್ಕಾರ ಪಡೆದು ಹೆಚ್ಚು ಪ್ರಯೋಜನ ಮಾಡಿಕೊಡಲಿಲ್ಲವಲ್ಲಾ ಎಂದು ಮಾತಲಿಯೆದುರು ಹೇಳಿದಾಗ ಮಾತಲಿ ಹೇಳುವ ಮಾತು. ನಾವು ಹೆಚ್ಚು ಕಾರ್ಯ ಮಾಡದೇ ಹೆಚ್ಚಿನ ಗೌರವವನ್ನು ಸತ್ಕಾರವನ್ನು ಅಪೇಕ್ಷಿಸುತ್ತೇವೆ. ನಮ್ಮ ಮೇಲಿನವರು ಎಷ್ಟು ಮಾಡಿದರೂ ನಮ್ಮನ್ನು ಉಪೇಕ್ಷಿಸುತ್ತಾರೆ .ಇಂತಹ ಮನಸ್ಥಿತಿ ಇಬ್ಬರಲ್ಲೂ ಹೊರಟುಹೋದಾಗ ನಾವು ಉನ್ನತಿಯನ್ನು ಗಳಿಸಲು ಸಾಧ್ಯವೇನೋ? ನಮ್ಮ ಕೆಲಸ ನಾವು ಮಾಡುತ್ತಾ ನಿರೀಕ್ಷೆಗಳನ್ನು ನಿಯಂತ್ರಣ ಮಾಡಿದರೆ ದುಷ್ಯಂತ ಮತ್ತು ಇಂದ್ರರ ವಿಶಾಲಮನೋಭಾವ ನಮ್ಮದಾಗಬಹುದು._ 📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.
🌹ಶಾಕುಂತಲದ ಸೌರಭ:🌹  *ಸಿಧ್ಯಂತಿ ಕರ್ಮಸು ಮಹತ್ಸ್ವಪಿ ಯನ್ನಿಯೋಜ್ಯಾ: ಸಂಭಾವನಾಗುಣಮವೇಹಿ ತಮೀಶ್ವರಾಣಾಮ್ ಕಿಂ ವಾ ಭವಿಷ್ಯದರುಣಸ್ತಮಸಾಂ ವಿಭೇತ್ತಾ ತಂ ಚೇತ್ಸಹಸ್ರಕಿರಣೋ ಧುರಿ ನಾಕರಿಷ್ಯತ್||*  _ಸೇವಕರಾದವರು  ದೊಡ್ಡ ಕೆಲಸಗಳಲ್ಲಿ ಯಶಸ್ಸು ಪಡೆಯಲು ಅವರನ್ನು ಆ ಕೆಲಸದಲ್ಲಿ ನಿಯೋಜಿಸಿದ ಒಡೆಯರ ಅನುಗ್ರಹವೇ ಕಾರಣ ಸೂರ್ಯನು ಸಾರಥಿಯಾಗಿ ಮುಂದೆ ಕುಳ್ಳಿರಿಸದಿದ್ದರೆ ಅರುಣನು ಕತ್ತಲೆಯನ್ನು ಭೇದಿಸುತ್ತಿದ್ದನೇ! ದುಷ್ಯಂತನು ತನ್ನ ಪರಾಕ್ರಮದಿಂದ ರಾಕ್ಷಸರ ನಾಶವಾಯಿತೆಂದು ಮಾತಲಿಯು ನುಡಿದಾಗ ವಿನೀತನಾಗಿ ಇಂದ್ರನಿಗೆ  ಅದರ ಯಶಸ್ಸನ್ನು ಅರ್ಪಿಸುತ್ತಾನೆ . ಎಷ್ಟೊಂದು ಉದಾರತೆ ಎಂತಹ ದೃಷ್ಟಾಂತ.ನಾವು ನಮ್ಮ ಅರ್ಹತೆಗೆ ವಿನಯವನ್ನು ಭೂಷಣವಾಗಿಸೋಣವೇ!_  📜ಸಂಗ್ರಹ: ✍ಶ್ರೀನಿಧಿ ಅಭ್ಯಂಕರ್.
🌹ಶಾಕುಂತಲದ ಮತ್ತೊಂದು ಕುಸುಮ:🌹  *ಶೈಲಾನಾಮವರೋಹತೀವ ಶಿಖರಾದುನ್ಮಜ್ಜತಾಂ ಮೇದೀನೀ ಪರ್ಣಸ್ವಾಂತರಲೀನತಾಂ ವಿಜಹತಿ ಸ್ಕಂಧೋದಯಾತ್ಪಾದಪಾ: ಸಂತಾನೈಸ್ತನುಭಾವನಷ್ಟಸಲಿಲಾ ವ್ಯಕ್ತಿಂ ಭಜನ್ತ್ಯಾಪಗಾ: ಕೇನಾತ್ಯುತ್ಕ್ಷಿಪತೇವ ಪಶ್ಯ ಭುವನಂ ಮತ್ಪಾರ್ಶ್ವಮಾನೀಯತೆ||*  _ದುಷ್ಯಂತನು ದೇವಲೋಕದ ಕಾರ್ಯಗಳನ್ನು ಮುಗಿಸಿ ಇಂದ್ರನ ರಥದಲ್ಲಿ ಭೂಮಿಗೆ ಹಿಂದಿರುಗುತ್ತಿದ್ದಾಗ ಹೇಳುವ ಮಾತು ಕಾಳಿದಾಸ ಸ್ವತ: ವಿಮಾನದಲ್ಲಿ ಕೂತು ಅನುಭವಿಸಿದಂತೆ ಮಾಡಿದ ವರ್ಣನೆ. ಕೆಳಗಿಳಿದಂತೆ ಅಸ್ಪಷ್ಟವಾಗಿ ಕಾಣುತ್ತಿದ್ದ ಪರ್ವತದ ಶಿಖರಗಳು ಸರಿಯಾಗಿ ಕಂಡು ಭೂಮಿ ಪರ್ವತಗಳಿಂದ ಇಳಿಯುವಂತೆ ಕಾಣುತ್ತಿದೆ.  ಮರಗಳು ರೆಂಬೆ ಕೊಂಬೆ ಗಳು ಮೇಲಿನಿಂದ ಹುದುಗಿಕೊಂಡಿರುವಂತೆ ಕಂಡದ್ದು ಈಗ ಎಲೆಗಳಿಂದ ಪ್ರತ್ಯೇಕವಾಗಿ ತೋರುತ್ತಿವೆ. ಕಿರಿದಾಗಿ ಕಾಣುತ್ತಿದ್ದುದರಿಂದ ನೀರಿಲ್ಲದಂತಿದ್ದ ನದಿಗಳು ಸ್ಫುಟವಾಗಿ ಗೋಚರಿಸುತ್ತಿವೆ. ಯಾರೋ ಮೇಲೆ ಹಾರುತ್ತ ನನ್ನೆಡೆಗೆ ಭೂಮಿಯನ್ನು ಹೊತ್ತುತರುವಂತಿದೆ. ವಿಮಾನಯಾನದ ಅನುಭವವನ್ನು ಪ್ರತ್ಯಕ್ಷವಾಗಿ ತಂದುಕೊಡುತ್ತಿದೆ ಕಾಳಿದಾಸನ ಈ ಶ್ಲೋಕ._  📜ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
🌹ಶಾಕುಂತಲದ ಸುಂದರ ಶ್ಲೋಕ:🌹  *ಪ್ರಾಣಾನಾಮನಿಲೇನ ವೃತ್ತಿರುಚಿತಾ ಸತ್ಕಲ್ಪವೃಕ್ಷೆ ವನೆ ತೋಯೇ ಕಾಂಚನಪದ್ಮರೇಣುಕಪಿಶೆ ಧರ್ಮಾಭಿಷೇಕಕ್ರಿಯಾ,  ಧ್ಯಾನಂ ರತ್ನಶಿಲಾತಲೇಷು ವಿಭುಧಸ್ತ್ರೀಸನ್ನಿಧೌ ಯತ್ಕಾಂಕ್ಷಂತಿ ತಪೋಭಿರನ್ಯಮುನಯಸ್ತಸ್ಮಿನ್ತಪಸ್ಯನ್ತ್ಯಮೀ||*  _ದುಷ್ಯಂತನು ಮಾರೀಚಮಹರ್ಷಿಗಳ ಆಶ್ರಮದ ಸ್ಥಿತಿಯನ್ನು ಹೇಳುತ್ತಿದ್ದಾನೆ. ಕೇಳಿದ್ದೆಲ್ಲವನ್ನು ಕೊಡುವ ಕಲ್ಪವೃಕ್ಷಗಳಿಂದ ತುಂಬಿದ ವನಗಳಲ್ಲಿ ಜೀವಿಸಲು ಅಗತ್ಯವಿರುವಷ್ಟು ಗಾಳಿಯನ್ನು ಮಾತ್ರ ಸ್ವೀಕರಿಸಿ ತಪಸ್ಸು ಮಾಡುತ್ತಿರುವರು ಋಷಿಗಳು. ಬಂಗಾರದ ಕಮಲಗಳ ಧೂಳಿಯಿಂದ ಕೇಸರಿಬಣ್ಣವುಳ್ಳ ನೀರಿನಲ್ಲಿ ಧರ್ಮಾಚರಣೆಗಾಗಿ ಮಾತ್ರ ಸ್ನಾನ ಮಾಡುತ್ತಿರುವರು.  ರತ್ನದ ಹಾಸುಗಲ್ಲಿನ ಮೇಲೆ ಕುಳಿತು ಧ್ಯಾನ ಮಾಡುತ್ತಿರುವರು ದೇವನನ್ನು, ಲೋಕಸ ಸೌಂದರ್ಯ ಕೇಂದ್ರೀಕೃತವಾದಂತಿರುವ ದೇವಸ್ತ್ರೀಯರು ಸಮೀಪದಲ್ಲಿದ್ದರೂ ಸಂಯಮದಿಂದಿರುವರು. ಬೇರೆಯವರು ತಪಸ್ಸಿನಿಂದ ಏನನ್ನು ಪಡೆಯಬೇಕೆಂದು ಅಪೇಕ್ಷಿಸುವರೋ ಅವೆಲ್ಲ ಸಮೀಪದಲ್ಲಿದ್ದರೂ ಇವರು ತಪಸ್ಸನ್ನೇ ಜೀವಿಕೆಯಾಗಿ ಮಾಡಿಕೊಂಡಿದ್ದಾರೆ. ನಿಜಕ್ಕೂ ಆಶ್ಚರ್ಯ. ಬಹುಶಃ ಎಲ್ಲವೂ ಸಿಕ್ಕಾಗ ವೈರಾಗ್ಯ ಸ್ವಭಾವ ತನ್ನಿಂದ ತಾನಾಗಿ ಬರುವುದೇನೋ. ನಮಗೆ ದೀರ್ಘಕಾಲನಿದ್ರಿಸಿದರೂ ಬಗೆಬಗೆಯ ಭಕ್ಷ್ಯ ಸವಿದರೂ ಸಾಕಷ್ಟು ರಮಿಸಿದರೂ ಬಯಸಿದ್ದೆಲ್ಲ ದೊರಕಿದರೂ ನಮ್ಮಯ ಆಸೆಗಳು ತಣಿಯುವುದಿಲ್ಲವೇನೋ. ಅಂತಹುದರಲ್ಲಿ ಎಲ್ಲ ಎದುರಿಗಿದ್ದರೂ ವೈರಾಗ್ಯ ...
🌹ಶಾಕುಂತಲದ ಸುಂದರ ಮಾತು🌹  *ಆಲಕ್ಷ್ಯದಂತಮುಕುಲಾನನಿಮಿತ್ತಹಾಸೈ: ಅವ್ಯಕ್ತವರ್ಣರಮಣೀಯ ವಚ: ಪ್ರವೃತ್ತೀನ್ /ಅಂಕಾಶ್ರಯಪ್ರಣಯಿನಸ್ತನಯಾನ್ವಹಂತೋ ಧನ್ಯಾಸ್ತದಂಗರಜಸಾ ಮಲಿನೀಭವಂತಿ||*  _ಋಷ್ಯಾಶ್ರಮದಲ್ಲಿ ಆಡುತ್ತಿದ್ದ ಮಗುವನ್ನು ಕಂಡು ದುಷ್ಯಂತನು ಹೇಳುವ ಮಾತು- ಕಾರಣವಿಲ್ಲದೆಯೂ ನಗುತ್ತಾ ಎಳೆಮೊಗ್ಗುಗಳಂತಹ ಹಲ್ಲುಗಳನ್ನು ತೋರುತ್ತಿರುವ(ಸ್ವಲ್ಪ ಮಾತ್ರ ಕಾಣುತ್ತಿರುವ ಹಲ್ಲುಗಳು)  ತೊದಲುನುಡಿಗಳಿಂದ ಆಕರ್ಷಕವಾಗಿ ಮಾತನಾಡಲು ಪ್ರಯತ್ನಿಸುತ್ತಿರುವ( ಅಕ್ಷರ ಅಸ್ಪಷ್ಟ ವಾದರೂ ಪ್ರಯತ್ನ ಸುಂದರ)ಯಾವಾಗಲೂ ತಂದೆತಾಯಿಗಳ ತೊಡೆಯಮೇಲೆ ಕುಳಿತುಕೊಳ್ಳಲು ಬಯಸುವ ಮಕ್ಕಳನ್ನು ಎತ್ತಿಕೊಂಡ ಭಾಗ್ಯಶಾಲಿಗಳು ಮಾತ್ರ ಆ ಮಕ್ಕಳ ಮೈಯ ಧೂಳಿನಿಂದ ಮಲಿನರಾಗುತ್ತಾರೆ ( ಅವರ ಸಂಪರ್ಕ ದೇಹವನ್ನು ಮಲಿನ ಮಾಡಿದರೂ ಮನಸ್ಸಿಗೆ ಹೊಸತನವನ್ನು ತಂದುಕೊಡುತ್ತದೆ ಹೀಗಾಗಿ ಅವರೇ ಧನ್ಯರು ಎಂಬ ಭಾವ) ಅಪ್ರಸ್ತುತಪ್ರಶಂಸಾಲಂಕಾರ._  📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.
🌹ಶಾಕುಂತಲದ ಸೌರಭ:🌹  *ಸ್ಮೃತಿಭಿನ್ನಮೋಹತಮಸೋ ದಿಷ್ಟ್ಯಾ ಪ್ರಮುಖೇ ಸ್ಥಿತಾಸಿ ಮೇ ಸುಮುಖಿ/ ಉಪರಾಗಾಂತೇ ಶಶಿನ: ಸಮುಪಗತಾ ರೋಹಿಣೀ ಯೋಗಮ್||* _ದುಷ್ಯಂತನು ಶಕುಂತಲೆಯನ್ನು ಕಂಡು ಈ ಮಾತನ್ನು ನುಡಿಯುತ್ತಿದ್ದಾನೆ. ಸುಂದರಿ ಅದೃಷ್ಟದಿಂದ ನೆನಪು ಬಂದು ಬುದ್ಧಿಮಾಂದ್ಯ ಕಳೆದುಕೊಂಡ ನನ್ನ ಎದುರಲ್ಲಿ ನಿಂತಿರುವಿ, ಗ್ರಹಣಮುಗಿದ ಮೇಲೆ ರೋಹಿಣಿ ನಕ್ಷತ್ರ ಚಂದ್ರನನ್ನು ಸೇರಿದಂತೆ. ಮೋಹವೆಂಬ ರಾಹುವು ನಿನ್ನ ಸ್ಮರಣೆಯನ್ನು ದೂರಮಾಡಿ ನನ್ನ ಬುದ್ಧಿಗೆ ಗ್ರಹಣ ತಂದಿದ್ದನು,ಈಗ ಅದು ಕಳೆದು ರೋಹಿಣಿಯಂತೆ ನೀನು ಕಾಣುತ್ತಿರುವೆ ನಿನ್ನನ್ನು ಗುರುತಿಸುತ್ತಿರುವೆ.ನಿದರ್ಶನ ಅಲಂಕಾರ. ಕಾಳಿದಾಸನಿಗೆ ಕೇವಲ ಉಪಮೆಯ ಪ್ರಯೋಗ ಮಾತ್ರ ಸಿದ್ಧಿಸಿದ್ದಲ್ಲ ಬೇರೆ ಅಲಂಕಾರಗಳನ್ನು ಸುಂದರವಾಗಿ ಬಳಸುವ ಕಲೆ ಅವನಿಗೆ ಸ್ವಭಾವವೇ ಆಗಿದೆ._ .📜ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
🌹ಶಾಕುಂತಲದ ಸುಂದರ ಶ್ಲೋಕ:🌹  *ಮೋಹಾನ್ಮಯಾ ಸುತನು ಪೂರ್ವಮುಪೇಕ್ಷಿತಸ್ತೇ ಯೋ ಬಾಷ್ಪಬಿಂದುರಧರಂ ಪರಿಬಾಧಮಾನ: / ತಂ ತಾವದಾಕುಟಿಲ ಪಕ್ಷ್ಮವಿಲಗ್ನಮದ್ಯ ಬಾಷ್ಪಂ ಪ್ರಮೃಜ್ಯ ವಿಗತಾನುಶಯೋ ಭವೇಯಮ್||*  _ದುಷ್ಯಂತನು ಶಕುಂತಲೆಯನ್ನು ಸಮಾಧಾನಿಸುತ್ತಿರುವನು.ಪ್ರಿಯೆ ಹಿಂದೆ ನಿನ್ನ ಅಧರದ ಮೇಲೆ ನಿಂತ ಯಾವ ಕಣ್ಣೀರ ಹನಿಗಳನ್ನು ನಾನು ಉಪೇಕ್ಷಿಸಿ ಇನ್ನಷ್ಟು ದು:ಖವನ್ನು ತಂದುಕೊಟ್ಟೆನೊ,ಇಂದು ತುಸು ವಕ್ರವಾಗಿರುವ ರೆಪ್ಪೆಯ ಮೇಲಿಂದ ಇಳಿಯುತ್ತಿರುವ ಅದೇ ಕಣ್ಣೀರ ಹನಿಯನ್ನು ಒರೆಸಿ ನನ್ನ ತಪ್ಪಿನ ಪಶ್ಚಾತಾಪವನ್ನು ಕಳೆದುಕೊಳ್ಳುತ್ತೇನೆ. ನಿನ್ನ ದು:ಖಕ್ಕೆ ಕಾರಣನಾಗದೇ ಆನಂದಜನಕನಾಗುತ್ತೇನೆ ಎಂಬ ಭಾವ._ .📜ಸಂಗ್ರಹ: ✍ಶ್ರೀನಿಧಿ ಅಭ್ಯಂಕರ್.
🌹ಶಾಕುಂತಲದ ಮಕರಂದ:🌹  *ಪ್ರಾಹುರ್ದ್ವಾದಶಧಾ ಸ್ಥಿತಸ್ಯ ಮುನಯೋ ಯತ್ತೇಜಸ: ಕಾರಣಂ ಭರ್ತಾರಂ ಭುವನತ್ರಯಸ್ಯ ಸುಷುವೇ ಯದ್ಯಜ್ಞಭಾಗೇಶ್ವರಮ್/ ಯಸ್ಮಿನ್ನಾತ್ಮಭವ: ಪರೋಪಿ ಪುರುಷಶ್ಚಕ್ರೇ ಭವಾಯಾಸ್ಪದಂ ದ್ವಂದ್ವಂ ದಕ್ಷಮರೀಚಿಸಂಭವಮಿದಂ ತತ್ಸ್ರಷ್ಟುರೇಕಾಂತರಮ್||*  _ದುಷ್ಯಂತನು ಕಶ್ಯಪದಂಪತಿಗಳ ಕುರಿತು ಹೇಳುವ ಮಾತು. ಯಾರನ್ನು ಮುನಿಗಳು ಹನ್ನೆರಡು ಭಾಗವಾಗಿ ನಿಂತ ತೇಜಸ್ಸಿನ ಕಾರಣವೆಂದು ಹೇಳುವರೋ,( ದ್ವಾದಶಾದಿತ್ಯರು ಕಶ್ಯಪ- ಅದಿತಿ ಪುತ್ರರು)  ಯಾರು ಯಜ್ಞ ಭಾಗವನ್ನು ಸ್ವೀಕರಿಸುವ ಮೂರು ಲೋಕಗಳ ಒಡೆಯನನ್ನು ಹಡೆದರೋ,( ಇಂದ್ರ ಯಜ್ಞಾಹುತಿ ಸ್ವೀಕರಿಸುವವ) ,ಯಾರಲ್ಲಿ ಬ್ರಹ್ಮನಿಗೂ ಮಿಗಿಲಾದ ಪರಮಪುರುಷನೂ ಕೂಡ ತನ್ನ ಅವತಾರಕ್ಕೆ ಆಸ್ಪದ ನೀಡಿದನೋ,(ವಾಮನಾವತಾರದ),ದಕ್ಷ ಮತ್ತು ಮರೀಚಿಗಳಿಂದ ಹುಟ್ಟಿದ ಪ್ರಜಾಪತಿಯ ನಂತರದ ಆ ಶ್ರೇಷ್ಠ ದಂಪತಿಗಳು ಇವರಲ್ಲವೇ?  ಅವರಿಗೆ ಅವರ ಶ್ರೇಷ್ಠತೆಗೆ ಸಾಟಿಯೇ ಇಲ್ಲ ಎನ್ನುವ ಭಾವ.( ದಕ್ಷನ ಮಗಳು ಅದಿತಿ,ಮರೀಚಿಯ ಮಗ ಕಶ್ಯಪ)  ಸೃಷ್ಟಿಕರ್ತನ ನಿಕಟ ಸಂಬಂಧ ಅವರ ಶ್ರೇಷ್ಠತೆಯ ಸೂಚಕ. ಉದಾತ್ತ ಮತ್ತು ವಿರೋಧಾಭಾಸ ಅಲಂಕಾರ._  📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.
🌹ಶಾಕುಂತಲದ ಒಂದು ಪುಷ್ಪ:🌹  *ಸ್ವಪ್ನೊ ನು ಮಯಾ ನು ಮತಿಭ್ರಮೊ ನು ಕ್ಲಿಷ್ಟಂ ನು ತಾವತ್ಫಲಮೇವ ಪುಣ್ಯಮ್/ ಅಸಂನಿವೃತ್ಯೈ ತದತೀತಮೇತೆ ಮನೋರಥಾ ನಾಮ ತಟಪ್ರಪಾತಾ:||*  _ದುಷ್ಯಂತನು ಶಕುಂತಲೆಯನ್ನು ನೆನೆದು ದು:ಖಿಸುತ್ತಿರುವನು. ಅದೇನು ನಾ ಕಂಡ ಕನಸೋ! ಅಥವಾ ಮಂತ್ರವಾದಿಯ ಮಾಯಾಜಾಲವೋ! ಅಥವಾ ಬುದ್ಧಿಭ್ರಮಣೆಯೋ! ಅಥವಾ ಪುಣ್ಯದ ಫಲ ಅಲ್ಲಿಗೆ ಮುಗಿದುಹೋಯಿತೇ! ಆ ಅಪರೂಪದ ವಸ್ತು ಇನ್ನು ತಿರುಗಿ ದೊರೆಯದಂತೆ ಕಳೆದುಹೋಯಿತಲ್ಲ. ಈ ನಮ್ಮ ಮನದ ಬಯಕೆಗಳು ನದಿಯ ದಂಡೆಗಳು ಉರುಳಿದಂತೆ ಉರುಳುವಂಥವು.ಕನಸಲ್ಲಿ ಕಂಡದ್ದು ಎದುರಿಗಿರುವುದಿಲ್ಲ. ವಸ್ತು ಇಲ್ಲದಿದ್ದರೂ ಇದ್ದಂತೆ ತೋರುವುದು ಮಂತ್ರವಾದಿಯ ಕೈಚಳಕ.ಒಂದು ವಸ್ತುವನ್ನು ನೋಡಿ ಮತ್ತೊಂದೆಂದು ಭ್ರಮೆ ಪಡುವುದು. ಹಿಂದಿರುಗಿ ಬರಲು ಅಸಾಧ್ಯವೇನೋ ಅವಳು.ನದಿಯ ದಡಗಳು ಪ್ರವಾಹಕ್ಕೆ ಕೊಚ್ಚಿ ಹೋಗುವಂತೆ ಕುಸಿಯತಕ್ಕಂತಹ ಅಥವಾ ದಂಡೆಯಿಲ್ಲದೆ ಹರಿಯುವ ಪ್ರವಾಹದಂತೆ ನಿಯಂತ್ರಣವಿಲ್ಲದವು. ಶಕುಂತಲೆಯನ್ನು ಕಂಡದ್ದು ಓಡಾಡಿದ್ದು ಪ್ರೀತಿಸಿದ್ದು ಎಲ್ಲವೂ ಈಗ ಕನಸಾಗಿಯೇ ಕಾಣುತ್ತಿದೆ. ಮನಸ್ಸು ಒತ್ತಡಕ್ಕೊಳಗಾದಾಗ ಹೇಗೆ ಆಲೋಚಿಸುತ್ತದೆ ಎಂಬುದನ್ನು ಮನೋವಿಜ್ಞಾನಿಯಂತೆ ನಿರೂಪಿಸಿದ್ದಾನೆ ಕಾಳಿದಾಸ._ .📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್
🌹ಶಾಕುಂತಲದ ಒಂದು ಸುಮ🌹  *ತವ ಸುಚರಿತಮಂಗುಲೀಯ ನೂನಂ ಪ್ರತನು ಮಮೇವ ವಿಭಾವ್ಯತೇ ಫಲೇನ/ ಅರುಣನಖಮನೋಹರಾಸು ತಸ್ಯಾಶ್ಚುತಮಸಿ ಲಬ್ಧಪದಂ ಯದಂಗುಲೀಷು||*  _ದುಷ್ಯಂತನ ಕನವರಿಕೆ ಮುಂದುವರೆಯುತ್ತಿದೆ.ಎಲೆ ಉಂಗುರವೇ, ನಿನ್ನ ಭಾಗ್ಯವೂ ನನ್ನ ಭಾಗ್ಯದಂತೆ ಅಲ್ಪವೆಂದು ಪರಿಣಾಮದಿಂದಲೇ ಕಂಡುಬರುತ್ತದೆ. ( ಅಲ್ಪ ಕಾಲದಲ್ಲಿಯೇ ಅವಳ ಬೆರಳಿನಿಂದ ಜಾರಿ ಹೋಗಿದೆ.) ಕೆಂಪಾದ ಉಗುರುಗಳಿಂದ ಮನೋಹರವಾದ ಅವಳ ಬೆರಳಿನಲ್ಲಿ ಸ್ಥಾನವನ್ನು ಪಡೆದೂ ಕೂಡ ಕೆಳಗುರುಳಿರುವೆ. ನಾನೂ ನಿನ್ನಂತೆ ಕೆಂಪಾದ ಮೊಗದ ಆ ಸುಂದರಿಯನ್ನು ಪಡೆದು ಮರೆತುಬಿಟ್ಟೆ. ಇಬ್ಬರೂ ದುರದೃಷ್ಟಶಾಲಿಗಳು ಎಂಬುದು ಭಾವ. ಮೀನುಗಾರನಿಂದ ಉಂಗುರವನ್ನು ಪಡೆದ ರಾಜನಿಗೆ ಹಿಂದಿನ ಘಟನೆ ನೆನಪಾಗಿ ಉಂಗುರವನ್ನು ಸಂಬೋಧಿಸುವ ರೀತಿ. ಅನುಮಾನ ಅಲಂಕಾರ._ 📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.
🌹ಶಾಕುಂತಲದ ಒಂದು ಸುಮ: 🌹 *ಸಾಕ್ಷಾತ್ಪ್ರಿಯಾಮುಪಗತಾಮಪಹಾಯ ಪೂರ್ವಂ ಚಿತ್ರಾರ್ಪಿತಾಂ ಪುನರಿಮಾಂ ಬಹು ಮನ್ಯಮಾನ: / ಸ್ರೋತೋವಹಾಂ ಪಥಿ ನಿಕಾಮಜಲಾಮತೀತ್ಯ ಜಾತ: ಸಖೇ ಪ್ರಣಯವಾನ್ಮೃಗತೃಷ್ಣಿಕಾಯಾಮ್||* _ದುಷ್ಯಂತನು ಶಕುಂತಲೆಯನ್ನು ಚಿಂತಿಸುತ್ತಾ ನುಡಿಯುವ ಮಾತು. ಮೊದಲು ಸಾಕ್ಷಾತ್ತಾಗಿ ಎದುರಿಗೆ ಬಂದ ಪ್ರೇಯಸಿಯನ್ನು ಪರಿತ್ಯಜಿಸಿ ಈಗ ಚಿತ್ರದಲ್ಲಿ ಬರೆದ ಅವಳನ್ನು ಆದರಿಸುತ್ತಿರುವ ನಾನು ಮಾರ್ಗದಲ್ಲಿ ತುಂಬಿ ಹರಿಯುವ ನದಿಯನ್ನು ಬಿಟ್ಟು ಬಿಸಿಲುಗುದುರೆಯಲ್ಲಿ ಆಸಕ್ತಿ ಪಡುವವನಂತೆ ಆಗಿದ್ದೇನೆ. ಸಮೃದ್ಧ ನೀರುಳ್ಳ ನದಿಯನ್ನು ಬಿಟ್ಟು ಮೃಗಗಳಿಗೆ ಬಾಯಾರಿಕೆಯ ಆಸೆಯನ್ನು ಹುಟ್ಟಿಸುವ ಬಿಸಿಲ್ಗುದುರೆ ಅಥವಾ ಮರೀಚಿಕೆಯನ್ನು ನೋಡಿ ನೀರು ಸಿಗದೆ ಹತಾಶರಾಗುವಂತೆ ತಾನೇ ಸ್ವತಃ ಬಂದ ಶಕುಂತಲೆಯನ್ನು ಬಿಟ್ಟು ಮೂರ್ಖನಾಗಿದ್ದೇನೆ.ಹೇತು ಮತ್ತು ನಿದರ್ಶನ ಅಲಂಕಾರ. ನಾವು ಎಷ್ಟೋ ಸಲ ಎದುರಿಗೆ ಕಂಡದ್ದನ್ನು ಬಿಟ್ಟು ದುಷ್ಯಂತನಂತೆ ಪರಿತಪಿಸುತ್ತೇವೆ ಆದರೆ ಆಗ ಸಮಯ ಮೀರಿಹೋಗಿರುತ್ತದೆ._ 📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.
🌹ಶಾಕುಂತಲದ ಒಂದು ರಮಣೀಯ ಶ್ಲೋಕ :🌹  *ಚೂತಾನಾಂ ಚಿರನಿರ್ಗತಾಪಿ ಕಲಿಕಾ ಬಧ್ನಾತಿ ನ ಸ್ವಂ ರಜ: ಸಂನದ್ಧಂ ಯದಪಿ ಸ್ಥಿತಂ ಕುರಬಕಂ ತತ್ಕೋರಕಾವಕಸ್ಥಯಾ/ ಕಂಠೇಷು ಸ್ಖಲಿತಂ ಗತೇಪಿ ಶಿಶಿರೇ ಪುಂಸ್ಕೋಕಿಲಾನಾಂ ರುತಂ ಶಂಕೇ ಸಂಹರತಿ ಸ್ಮರೋಪಿ ಚಕಿತಸ್ತೂರ್ಣಾರ್ಧಕೃಷ್ಟಂ ಶರಮ್ ||*  _ದುಷ್ಯಂತನು ಶಕುಂತಲೆಯನ್ನು ನೆನೆಯುತ್ತಾ ವಿರಹವೇದನೆಯಿಂದ ಬಳಲುತ್ತಿದ್ದಾನೆ. ಪ್ರಕೃತಿಯು ಅವನ ದು:ಖದಲ್ಲಿ ಭಾಗಿಯಾಗಿದೆ. ಮಾವಿನ ಮೊಗ್ಗುಗಳು ಹುಟ್ಟಿ ಬಹುಕಾಲದವರೆಗೆ ಅವುಗಳಲ್ಲಿ ಹೂವಿನ ಕೇಸರ ತುಂಬಿಕೊಳ್ಳುತ್ತಿಲ್ಲ. ಕುರಬಕವೆಂಬ ಪುಷ್ಪವು ಅರಳಲು ಸಿಧ್ಧವಾಗಿದ್ದರೂ ಮೊಗ್ಗಿನ ದಶೆಯನ್ನು ಬಿಟ್ಟು ಹೊರಬರುತ್ತಿಲ್ಲ. ಚಳಿಗಾಲ ಮುಗಿದಿದ್ದರೂ ಗಂಡುಕೋಗಿಲೆಗಳ ಧ್ವನಿಯು ಗಂಟಲಿನಲ್ಲಿ ಅಡಗಿಹೋಗಿದೆ.ಮನ್ಮಥನೂ ಕೂಡ ಅರ್ಧ ಎಳೆದ ಬಾಣವನ್ನು ಹಿಂತೆಗೆಯುತ್ತಿದ್ದಾನೆ ಎಂದು ಭಾವಿಸುತ್ತೇನೆ. ಮಾವಿನ ಮೊಗ್ಗುಗಳು ಪರಾಗವನ್ನು ಬಿಡುತ್ತಿಲ್ಲ.ಕುರಬಕ ಪುಷ್ಪವು ದುಷ್ಯಂತನನ್ನು ನೋಡಿ ಅರಳುವ ಸೂಚನೆಯನ್ನೇ ನೀಡುತ್ತಿಲ್ಲ.ಕೋಗಿಲೆಗಳು ತಮ್ಮ ಮಧುರ ನಿನಾದವನ್ನು ಹೊರಡಿಸುತ್ತಿಲ್ಲ. ಮನ್ಮಥನೂ ದುಷ್ಯಂತನ ಅವಸ್ಥೆ ನೋಡಿ ತನ್ನ ಕುಸುಮದ ಬಾಣಗಳನ್ನು ಬಿಡುವುದನ್ನು ನಿಲ್ಲಿಸಿದ್ದಾನೆ .ಹೀಗೆ ದುಷ್ಯಂತನ ನೋವಿನಲ್ಲಿ ಪ್ರಕೃತಿಯು ಪಾಲುಗೊಂಡಿದೆ. ಸೀತೆಯ ವಿರಹದ ಕಾಲದಲ್ಲಿ ರಾಮನು ಅತ್ತಾಗ ಮರಗಿಡಗಳು ಅತ್ತವಂತೆ ಎಂದು ವಾಲ್ಮೀಕಿಗಳ ವರ್ಣನೆ ಅದೇ ರೀತಿ ಪ್ರಕೃತ ಸಂದರ್ಭ. ಸ್ವ...
🌹ಶಾಕುಂತಲದ ಒಂದು ಕುಸುಮ:🌹  *ರಮ್ಯಂ ದ್ವೇಷ್ಟಿ ಯಥಾಪುರಾ ಪ್ರಕೃತಿಭಿರ್ನ ಪ್ರತ್ಯಹಂ ಸೇವ್ಯತೇ ಶಯ್ಯಾಪ್ರಾಂತವಿವರ್ತನೈವಿಗಶಯ್ಯಾಪ್ರಾಂತವಿವರ್ತನೈವಿಗಮಯತ್ಯುನ್ನಿದ್ರ ಏವ ಕ್ಷಪಾ: / ದಾಕ್ಷಿಣ್ಯೇನ ದದಾತಿ ವಾಚಮುಚಿತಾಮಂತ:ಪುರೇಭ್ಯೊ ಯದಾ ಗೋತ್ರೇಷು ಸ್ಖಲಿತಾಸ್ತದಾ ಭವತಿ ಚ ವ್ರೀಡಾವಿಲಕ್ಷಶ್ಚಿರಮ್||*  _ದುಷ್ಯಂತನು ವಿರಹದಿಂದ ಬಳಲುತ್ತಿದ್ದಾನೆ. ಸುಂದರವಾದ ಯಾವ ವಸ್ತುಗಳನ್ನು ಕಂಡರೂ ಕಳವಳಪಡುತ್ತಿದ್ದಾನೆ.ತನ್ನ ಪ್ರಿಯೆಯನ್ನೇ ಕಂಡವನಂತೆ.ಮಂತ್ರಿಗಳು ಮತ್ತು ಪ್ರಜೆಗಳ ಮೊದಲಿನಂತೆ ಪ್ರತಿದಿನವೂ ರಾಜನ ಜೊತೆ ವ್ಯವಹರಿಸಲು ಸಾಧ್ಯವಿಲ್ಲ. ರಾಜನು ರಾತ್ರಿಯೆಲ್ಲ ಹಾಸಿಗೆಯ ಅಂಚಿನಲ್ಲಿ ಹೊರಳಾಡುತ್ತಾ ರಾತ್ರಿಯನ್ನೆಲ್ಲಾ ಜಾಗರಣೆಯಲ್ಲಿ ಕಳೆಯುತ್ತಿದ್ದಾನೆ.ಅಂತ:ಪುರದ ಸ್ತ್ರೀಯರ ಮಾತಿಗೆ ದಾಕ್ಷಿಣ್ಯಕ್ಕೆ ಉತ್ತರಿಸುವಾಗ ಎಂದಿಗೂ ತಪ್ಪು ಹೆಸರು ಹೇಳದ ರಾಜನು ಈಗ ಯಾವುದೋ ಹೆಸರನ್ನು ಹೇಳಿ ನಾಚಿ ಮುಖ ಕೆಳಗೆ ಮಾಡುತಿದ್ದಾನೆ. ಹೀಗೆ ದುಷ್ಯಂತನು ದೈನಂದಿನ ಚಟುವಟಿಕೆಗಳನ್ನು ಮರೆತು ಶಕುಂತಲೆಯನ್ನು ಧ್ಯಾನಿಸುತ್ತಿರುವನು. ಸೇವಕಿಯರನ್ನು ಬಾಯಿ ತಪ್ಪಿ ಶಕುಂತಲೆ ಎಂದು ಕರೆದು ನಾಚುತ್ತಿರುವನು.ಮಂತ್ರಿಗಳ ಜನರ ಸಲಹೆ ಪಡೆಯುತ್ತಿಲ್ಲ. ಪುಷ್ಪ ಗಂಧ ಮೊದಲಾದ ರಮ್ಯವಸ್ತುಗಳನ್ನು ಶಕುಂತಲೆಯ ನೆನಪು ಬರುವುದೆಂದು ದ್ವೇಷಿಸುತ್ತಿರುವನು. ಹೀಗೆ ವಿರಹ ನೂರು ನೂರು ತರಹದಲ್ಲಿ ಬಾಧಿಸುತ್ತಿದೆ. ಕಾವ್ಯಲಿಂಗಾಲಂಕಾರ._ 📜ಸಂಗ್ರಹ ✍ಶ್ರೀನಿಧಿ ...
🌹ಶಾಕುಂತಲದ ಒಂದು ಸೌರಭ:🌹  *ಪ್ರತ್ಯಾದಿಷ್ಟವಿಶೇಷಮಂಡನವಿಧಿರ್ವಾಮಪ್ರಕೋಷ್ಠಾರ್ಪಿತಂ ಬಿಭ್ರತ್ಕಾಂಚನಮೇಕಮೇವ ವಲಯಂ ಶ್ವಾಸೋಪರಕ್ತಾಧರ: ಚಿಂತಾಜಾಗರಣಪ್ರತಾಂತನಯನಸ್ತೇಜೋಗುಣಾದಾತ್ಮನ: ಸಂಸ್ಕಾರೋಲ್ಲಿಖಿತೋ ಮಹಾಮಣಿರಿವ ಕ್ಷೀಣೋಪಿ ನಾಲಕ್ಷ್ಯತೇ||*  _ಕಂಚುಕಿಯು ರಾಜನನ್ನು ವರ್ಣಿಸುತ್ತಿರುವನು ಮೊದಲಿಗೆ ಸುಂದರರಾಗಿರುವರು ಎಲ್ಲ ದಶೆಯಲ್ಲಿಯೂ ರಮಣೀಯರಾಗಿಯೇ ತೋರುತ್ತಾರೆಂದು ಹೇಳುತ್ತಾ( ಅಹೋ ಸರ್ವಾಸ್ವವಸ್ಥಾಸು ರಮಣೀಯತ್ವಮಾಕೃತಿವಿಶೇಷಾಣಾಮ್) ಮುಂದುವರೆಸುತ್ತಿದ್ದಾನೆ. ದುಷ್ಯಂತನು ಶಕುಂತಲೆಯ ನೆನಪಿನಲ್ಲಿ ಕೊರಗುತ್ತಾ ಹೆಚ್ಚಿನ ಅಲಂಕಾರ ಮಾಡಿಕೊಳ್ಳದೇ ( ದು:ಖದಿಂದ) ಎಡಗೈಯ ಮುಂಗೈಯಲ್ಲಿ ಒಂದೇ ಒಂದು ಬಂಗಾರದ ಬಳೆಯನ್ನು ತೊಟ್ಟ, ನಿಟ್ಟುಸಿರು ಬಿಟ್ಟು ಬಾಡಿಹೋದ ಕೆಳದುಟಿಯವನಾಗಿ,( ಅಭ್ಯಾಸಗಳಿಂದಲ್ಲ)😜,ಚಿಂತೆಯಿಂದ ನಿದ್ರೆಗೆಟ್ಟು ಕಣ್ಣೆಲ್ಲ ಕೆಂಪಾಗಿರುವ, ಈ ರಾಜನು ತನ್ನ ತೇಜಸ್ಸಿನಿಂದ ಸಾಣೆಹಿಡಿದ ಉತ್ತಮ ರತ್ನದಂತೆ ಕ್ಷೀಣನಾಗಿದ್ದರೂ ಕಂಡುಬರುವುದಿಲ್ಲ. ನೋಟದಿಂದ ಅವನ ಆಂತರ್ಯದ ತುಮುಲ ಗ್ರಹಿಸಲು ಸಾಧ್ಯವಿಲ್ಲ. ದೊಡ್ಡ ವ್ಯಕ್ತಿಗಳು ಒಳಗೆ ಎಷ್ಟೇ ದು:ಖವಿದ್ದರೂ ಅದನ್ನು ಪ್ರದರ್ಶಿಸುವುದಿಲ್ಲವಷ್ಟೇ! ರತ್ನಗಳನ್ನು ಸಾಣೆ ಹಿಡಿದು ರೂಪ ಕೊಟ್ಟಷ್ಟು ಅವುಗಳ ಗಾತ್ರ ಕಿರಿದಾದರೂ ಕಾಂತಿ ಹಿರಿದಾಗುವುದು ಹಾಗೆಯೇ ದುಷ್ಯಂತನು ಚಿಂತಿತನಾಗಿ ಕ್ಷಯಿಸುತ್ತಿದ್ದರೂ ಕಾಂತಿ ಕಳೆದುಕೊಂಡಿಲ್ಲ.ಸಾಮಾನ್ಯವಾಗಿ ಬಲಗೈಯಲ್ಲಿ ಧರಿಸುವ ಕಂ...
📃ಶಾಕುಂತಲದ ಒಂದು ಶ್ಲೋಕ :📃  *ಇತ: ಪ್ರತ್ಯಾದೇಶಾತ್ಸ್ವಜನಮನುಗಂತುಂ ವ್ಯವಸಿತಾ ಮುಹುಸ್ತಿಷ್ಠೇತ್ಯುಚ್ಚೈರ್ವದತಿ ಗುರುಶಿಷ್ಯೇ ಗುರುಸಮೇ/ ಪುನರ್ದೃಷ್ಟಿಂ ಬಾಷ್ಪಪ್ರಸರಕಲುಷಾಮರ್ಪಿತವತೀ ಮಯಿ ಕ್ರೂರೇ ಯತ್ತತ್ಸವಿಷಮಿವ ಶಲ್ಯಂ ದಹತಿ ಮಾಮ್||*  _ದುಷ್ಯಂತನು ತಾನು ಹಿಂದೆ ಶಕುಂತಲೆಯನ್ನು ಪರಿತ್ಯಜಿಸಿದ ಸಂದರ್ಭವನ್ನು ನೆನಪಿಸಿ ದು:ಖಪಡುತ್ತಿದ್ದಾನೆ. ನನ್ನಿಂದ ತಿರಸ್ಕೃತಳಾಗಿ ತನ್ನ ಜನರನ್ನು ಹಿಂಬಾಲಿಸಲು ತೊಡಗಿದಾಗ, ತಂದೆಗೆ ಸಮಾನನಾದ ಅವಳ ತಂದೆಯ ಶಿಷ್ಯನು 'ನಿಲ್ಲು' ಎಂದು ಗದರಿಸಲು, ತುಂಬುಗರ್ಭಿಣಿಯ ಪರಿತ್ಯಾಗವೆಂಬ ಕ್ರೂರಕರ್ಮದಲ್ಲಿ ತೊಡಗಿದ ನನ್ನ ಕಡೆಗೆ ತಿರುಗಿಸಿದ ಕಣ್ಣೀರು ತುಂಬಿದ ಅವಳ ದೃಷ್ಟಿ ವಿಷವನ್ನು ಹಚ್ಚಿದ ಬಾಣದ ಚೂರು ಘಾಸಿಗೊಳಿಸುವಂತೆ ನನ್ನನ್ನು ಇಂದಿಗೂ ಸುಡುತ್ತಿದೆ ಅಥವಾ ನನ್ನ ದು:ಖವನ್ನು ಹೆಚ್ಚಿಸುತ್ತಿದೆ.ಕಣ್ಣೀರು ಹರಿಯುತ್ತಿರುವುದರಿಂದ ದೃಷ್ಟಿ ಮಸುಕಾಗಿದೆ.ಶಕುಂತಲೆ ತನ್ನವರಿಂದಲೂ ದುಷ್ಯಂತನಿಂದಲೂ ತಿರಸ್ಕೃತಳಾದಾಗ ಅನುಭವಿಸಿದ ವೇದನೆಯ ದೃಶ್ಯವನ್ನು ಈ ಶ್ಲೋಕದಲ್ಲಿ  ಮನ ಕರಗುವಂತೆ ಕವಿ ಚಿತ್ರಿಸಿದ್ದಾನೆ.ದುಷ್ಯಂತನು ಇವಳು ತನ್ನ ಹೆಂಡತಿಯಲ್ಲವೆಂದು ತಿರಸ್ಕರಿಸುತ್ತಾನೆ.ಕಣ್ವಶಿಷ್ಯ ನೀನು ನಮ್ಮನ್ನು ಕೇಳಿ ವಿವಾಹವಾಗಿಲ್ಲ ಹಾಗಾಗಿ ನಿನಗೆ ಗಂಡನ ಮನೆಯಲ್ಲಿ ಕೆಲಸದವಳಾಗಿಯಾದರೂ ಇರಲೇಬೇಕು ಎಂದಾಗ ಚಿಕ್ಕಂದಿನಿಂದಲೂ ಕಣ್ವರ ಮುದ್ದಿನ ಮಗಳಾಗಿ ಬೆಳೆದ ಶಕುಂತಲೆಯ ಭಾವ ಹೇಗಿದ್ದಿರಬಹುದು...
🌹ಶಾಕುಂತಲದ ಒಂದು ಸುಮ:🌹  *ಯದ್ಯತ್ಸಾಧು ನ ಚಿತ್ರೇ ಸ್ಯಾತ್ಕ್ರಿಯತೇ ತತ್ತದನ್ಯಥಾ/ ತಥಾಪಿ ತಸ್ಯಾ ಲಾವಣ್ಯಂ ರೇಖಯಾ ಕಿಂಚಿದನ್ವಿತಮ್ ||* _ದುಷ್ಯಂತನು ಶಕುಂತಲೆಯ ಸೌಂದರ್ಯ ವರ್ಣಿಸುತ್ತಿದ್ದಾನೆ. ಸೇವಕಿ ಶಕುಂತಲೆಯ. ಚಿತ್ರವನ್ನು ರಾಜನಿಗೆ ತೋರಿಸಿದಾಗ ಹೇಳುವ ಮಾತು. ಚಿತ್ರದಲ್ಲಿ ಯಾವುದು ಸರಿಯಾಗಿ ಮೂಡಿಲ್ಲವೋ ಅದನ್ನು ತಿದ್ದುತ್ತಲೇ ಹೋಗುತ್ತಿರುವನು. ಆದರೂ ಅವಳ ಸೌಂದರ್ಯದ ಕಿಂಚಿದ್ಭಾಗ ಮಾತ್ರ ಚಿತ್ರದಲ್ಲಿ ಬಂದಿದೆ. ಅನೇಕ ಸಲ ತಿದ್ದಿದ ನಂತರವೂ ಶಕುಂತಲೆಯ ಲಾವಣ್ಯದ ಅಲ್ಪಾಂಶವೂ ಚಿತ್ರ ಅಭಿವ್ಯಕ್ತಪಡಿಸುತ್ತಿಲ್ಲ. ಅಂತಹ ಸೌಂದರ್ಯ ಶಕುಂತಲೆಯದ್ದು._  📜✍ಸಂಗ್ರಹ ಶ್ರೀನಿಧಿ ಅಭ್ಯಂಕರ್.