📙 ವೇದ- ಧರ್ಮ ಭಾಗ-೧೨

*ವೇದದ ಬ್ರಾಹ್ಮಣಗಳು*

ಯಜುರ್ವೇದ ಬ್ರಾಹ್ಮಣ

ಶುಕ್ಲ ಯಜುರ್ವೇದದ ಮಾಧ್ಯಂದಿನ ಹಾಗೂ ಕಾಣ್ವ ಶಾಖೆಗೆ ಸಂಬಂಧಿಸಿದ ಬ್ರಾಹ್ಮಣ. ಈ ಗ್ರಂಥ ಉಳಿದೆಲ್ಲ ಬ್ರಾಹ್ಮಣಗಳಿಗಿಂತ ಹೆಚ್ಚು ಮಹತ್ವಪೂರ್ಣವಾಗಿದೆ ಹಾಗೂ ಬೃಹತ್ತಾಗಿಯೂ ಇದೆ. ಯಜ್ಞಾನುಷ್ಠಾನದ ಸಂಪೂರ್ಣ ಪ್ರತಿಪಾದನೆ ಇಲ್ಲಿ ಕಂಡುಬರುತ್ತದೆ.‌

ಮಾಧ್ಯಂದಿನೀಯ ಶತಪಥಬ್ರಾಹ್ಮಣದಲ್ಲಿ ೧೪ ಕಾಂಡಗಳು, ೧೦೦ ಅಧ್ಯಾಯಗಳು, ೪೩೮ ಬ್ರಾಹ್ಮಣಗಳು, ೭೬೨೪ ಕಂಡಿಕೆಗಳು ಇವೆ. ಇದರ ನೂರು ಅಧ್ಯಾಯಗಳಿಂದಾಗೆಯೇ ಇದಕ್ಕೆ *ಶತಪಥ* ವೆಂಬ ಹೆಸರು ಬಂದಿದೆ.

*ಶತಂ ಪಂಥಾ: ಯಸ್ಯ ತತ್* ಎಂಬ ವ್ಯುತ್ಪತ್ತಿಯಿಂದ ಸಿದ್ಧವಾದ ಹೆಸರು. ನೂರು ವಿಧಾನಗಳ ಪ್ರತಿಪಾದಕ ಎನ್ನುವ ಅರ್ಥವನ್ನು ಹೇಳಬಹುದು. ಪಥಿ ಶಬ್ದವು ಮಾರ್ಗ ಎನ್ನುವ ಅರ್ಥ ಹೇಳಿದಾಗ. ದೇವರನ್ನು ಹೊಂದಲು ನೂರಾರು ಮಾರ್ಗಗಳು. ದ್ರವ್ಯಯಜ್ಞ, ಯೋಗಯಜ್ಞ, ಜ್ಞಾನಯಜ್ಞ, ತಪೋಯಜ್ಞ ಇತ್ಯಾದಿ.

ಕಾಣ್ವ ಶಾಖೆಯ ಇದೇ ಬ್ರಾಹ್ಮಣದಲ್ಲಿ ೧೭ ಕಾಂಡಗಳೂ, ೧೦೪ ಅಧ್ಯಾಯಗಳೂ ೪೩೫ ಬ್ರಾಹ್ಮಣಗಳೂ ( ಅನುವಾಕ ಅಥವಾ ಸೂಕ್ತ) ೬೮೦೬ ಕಂಡಿಕೆಗಳೂ ( ಮಂತ್ರಗಳು) ಇವೆ. ಹಾಗಿದ್ದರೂ ಅದನ್ನೂ ಇದೇ ಹೆಸರಿನಿಂದಲೇ ಕರೆಯಲಾಗುವುದು.

ಈ ಶತಪಥ ಬ್ರಾಹ್ಮಣದಲ್ಲಿ ಯಜ್ಞಗಳ ವಿಭಿನ್ನ ಪರಿಚಯ, ಹಾಗೂ ಅನುಷ್ಠಾನ, ಅವುಗಳ ಪರಿಪೂರ್ಣತೆ ಇದನ್ನು ಸುಂದರವಾಗಿ ನಿರೂಪಣೆ ಮಾಡುತ್ತಾರೆ.( ವ್ಯರ್ಥವೆಂದು ಆಪಾದನೆ ಮಾಡುವವರ ಸಂಶಯ ಪರಿಹಾರಕ್ಕೆ ಹೇಗೆ ಪರಿಪೂರ್ಣ ಸಾರ್ಥಕ ಎನ್ನುವ ಮಾಹಿತಿ)

ಆಧ್ಯಾತ್ಮಿಕ ದೃಷ್ಟಿಯಲ್ಲಿ ಯಜ್ಞ ಗಳು ಹೇಗೆ ಮೋಕ್ಷ ಕಾರಕ ಎನ್ನುವುದರ ನಿರೂಪಣೆ ಇದರ ವಿಶೇಷ. ಕೆಲವು ಅಲ್ಪ ಮತಿಗಳು ಕೇವಲ ಜ್ಞಾನವೊಂದೇ ಮೋಕ್ಷಕಾರಕ ಎಂದಾಗ ಕರ್ಮದ ಮೂಲಕ ಜ್ಞಾನ ವೆಂಬ ಮೆಟ್ಟಿಲು ಹತ್ತಿ ದೇವನೆಂಬ ಸೌಧ ಸಿಗುವ ಬಗೆ ಇಲ್ಲಿ ಮನದಟ್ಟಾಗುವಂತಿದೆ.

ಅಗ್ನಿಹೋತ್ರ ಆಚರಿಸುವವನನ್ನು ನೌಕೆ ತೀರಕ್ಕೆ ಕರೆದುಕೊಂಡು ಹೋಗುವಂತೆ ಅಗ್ನಿ ಸ್ವರ್ಗಕ್ಕೆ ಕರೆದುಕೊಂಡು ಹೋಗುವನು ಎಂಬ ಒಂದು ಮಂತ್ರ ಇಲ್ಲಿದೆ. *ನೌರ್ಹಿವಾ ಏಷಾ ಸ್ವರ್ಗ್ಯಾ ಯದಗ್ನಿಹೋತ್ರಮ್*  *ಯಜ್ಞೋ ವೈ ಶ್ರೇಷ್ಠತಮಂ ಕರ್ಮ* ಎಂದು ಯಜ್ಞ ವೇ ಬೇರೆಲ್ಲಾ ಕರ್ಮಗಳಿಗಿಂತ ಶ್ರೇಷ್ಠ ಎಂಬ ಮಂತ್ರವೂ ಇದೆ. ಇದರ ಪ್ರಕಾರ ಈ ಜಗತ್ತು *ಅಗ್ನೀಷೋಮಾತ್ಮಕ*  ಅಗ್ನಿ ಎಂದರೆ ಅನ್ನಾದ,( ಅನ್ನ ತಿನ್ನುವವ) ಸೋಮವೆಂದರೆ ಅನ್ನ. ಅಗ್ನಿರೂಪೀ ಅನ್ನಾದನು ಸೋಮರೂಪೀ ಅನ್ನವನ್ನು ಸ್ವೀಕರಿಸುತ್ತಲೇ ಇರುವನು. ಈ ಕ್ರಿಯೆ ಜಗದಲ್ಲಿ ನಿರಂತರವಾಗಿ ನಡೆಯುತ್ತಲೇ ಇರುತ್ತದೆ.

ನಮ್ಮ ಕರ್ಮಗಳೆಲ್ಲವೂ ಭಗವಂತನಿಗೆ ಅರ್ಪಣೆ ಮಾಡುವುದೇ ಯಜ್ಞ. ಮಾಡುತ್ತಿರುವುದೂ ಮಾಡುವವನೂ ಆ ಕರ್ಮ ಕಾರಣ ಎಲ್ಲವೂ ದೇವನೆಂಬ ಕಲ್ಪನೆ ಮನದಲ್ಲಿ ಮೂಡಿದಾಗ ಆಗುವ ಕಾರ್ಯ ನಿಜವಾದ ಯಜ್ಞ. ಇಲ್ಲದಿದ್ದರೆ ಗೀತೆಯ ಮಾತಿನಂತೆ *ಅಸತ್* ಎಂದೆನಿಸುತ್ತದೆ. *ಅಶ್ರದ್ಧಯಾ ಹುತಂ ದತ್ತಂ ತಪಸ್ತಪ್ತಂ ಕೃತಂ ಚ ಯತ್* ಅಶ್ರದ್ಧೆಯಿಂದ ಹೋಮ ಮಾಡಿರುವುದಾಗಲೀ, ದಾನ ಮಾಡಿದ್ದಾಗಲೀ ( ಭಿಕ್ಷುಕನಿಗೆ, ಇದ್ದವರಿಗೆ ಯಾರಿಗೆ ಕೊಟ್ಟರೂ) ತಪಸ್ಸನ್ನು ಆಚರಿಸಿದ್ದಾಗಲೀ ( ವ್ರತ, ಧ್ಯಾನ, ಪೂಜೆ, ಉಪವಾಸ) ಅಥವಾ ಇನ್ನೇನನ್ನು ಆಚರಿಸಿದರೂ ಅವೆಲ್ಲ ವ್ಯರ್ಥ , ಸಾರ್ಥಕವಲ್ಲ.

*ತೈತ್ತಿರೀಯ ಬ್ರಾಹ್ಮಣ*

ಕೃಷ್ಣ ಯಜುರ್ವೇದದ ಬ್ರಾಹ್ಮಣ. ಮೂರು ಕಾಂಡಗಳಲ್ಲಿ ಇದು ವಿಭಕ್ತವಾಗಿದೆ. ಮೊದಲೆರಡು ಕಾಂಡಗಳಲ್ಲಿ ಎಂಟೆಂಟು ಪ್ರಪಾಠಕಗಳೂ, ಮೂರನೆಯ ಕಾಂಡದಲ್ಲಿ ಹನ್ನೆರಡು ಪ್ರಪಾಠಕಗಳೂ ಇವೆ. ಒಟ್ಟು ೩೫೩ ಅನುವಾಕಗಳು ಇವೆ. ಈ ಬ್ರಾಹ್ಮಣದಲ್ಲಿ ಅಧ್ವರ್ಯು ಮಾಡಬೇಕಾದ ಎಲ್ಲಾ ಕೆಲಸಗಳ ಬಗ್ಗೆ ವಿವರಣೆ ಇದೆ.

ಮೊದಲನೇ ಕಾಂಡದಲ್ಲಿ ಗವಾಮಯನ, ವಾಜಪೇಯ, ಅಗ್ನ್ಯಾಧಾನ, ನಕ್ಷತ್ರೇಷ್ಟಿ, ರಾಜಸೂಯ ಮುಂತಾದ ಯಜ್ಞಗಳ ಸವಿಸ್ತಾರ ವಿವರಣೆ ಇದೆ.

ಇಷ್ಟಲ್ಲದೆ ಭಾರದ್ವಾಜ, ನಚಿಕೇತ, ಪ್ರಹ್ಲಾದ, ಅಗಸ್ತ್ಯ ಮುಂತಾದ ಮಹನೀಯರ ಆಖ್ಯಾನಗಳು, ಸತ್ಯಭಾಷಣ- ಮಾತಿನ ಮಾಧುರ್ಯ- ತಪಸ್ವೀಜೀವನದ ಮಹತ್ವ- ಅತಿಥಿ ಸತ್ಕಾರ- ಒಗ್ಗಟ್ಟಿನಲ್ಲಿರುವ ಬಲ- ಪರರ ಉನ್ನತಿಗಾಗಿ ಬಳಸಬೇಕಾದ ಸಂಪತ್ತು- ಬ್ರಹ್ಮಚರ್ಯ ಪಾಲನೆಯ ಅವಶ್ಯಕತೆ ಇತ್ಯಾದಿ ಲೌಕಿಕ ಬದುಕಿನ ಜೀವನದ ಮೇಲೆ ಪ್ರಭಾವ ಬೀರುವ ಸಾಕಷ್ಟು ವಿಷಯಗಳು ಇಲ್ಲಿವೆ.


📙 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩