🌹ಮೇಘದೂತದ ಒಂದು ಸುರಭಿ 🌹

*जालोद्गीर्णैरुपचितवपु: केशसंस्कारधूपै: बन्धुप्रीत्या भवनशिखिभिर्दत्तनृत्योपहार: । हर्म्येष्वस्या: कुसुमसुरभिष्वध्वखेदं नयेथा लक्ष्मीं पश्यल्ललितवनितापातयदरागाङ्कितेषु ।।*

_ಮೇಘನೇ ಮಾರ್ಗಾಯಾಸದ ನಿವಾರಣೆಗೆ ನಿನಗೆ ಸಾಕಷ್ಟು ಉಪಾಯ ಹೇಳುವೆನು. ಕಿವಿಗೊಟ್ಟು ಕೇಳು. ಉಜ್ಜಯಿನಿಯ ಆ ಪ್ರಾಸಾದಗಳಲ್ಲಿ ( ಮಹಡಿಮನೆ) ಸುಂದರ ಸ್ತ್ರೀಯರು ಅಭ್ಯಂಗ ಮಾಡಿ ಕೇಶಸಂಸ್ಕಾರವೆಂದು ಕಿಟಕಿಯ ಸಮೀಪದಲ್ಲಿ ಅಗರು ಚಂದನ ಮುಂತಾದ ಸುಗಂಧ ವಸ್ತುಗಳ ಧೂಪ ಹಾಕುವರು. ( ಈಗಿನ ಕೂದಲು ಒಣಗಿಸುವ ಸಾಧನದ ಬದಲು ಆಗ ಪರಿಮಳದ ಧೂಪ ಹಾಕಿ ಒಣಗಿಸಿ ಕೇಶ ಸಂಸ್ಕಾರ ಕೊಡುತ್ತಿದ್ದರು) ಆ ಸುಗಂಧ ಧೂಪವನ್ನು ಯಥೇಚ್ಛವಾಗಿ ಕುಡಿದು ನಿನ್ನ ದೇಹವನ್ನು ಬೆಳೆಸಿಕೊ. ಮೇಘಕ್ಕೆ ಧೂಮವೂ ಒಂದು ಮೂಲದ್ರವ್ಯ. ಕವಿ ಮೊದಲಿಗೆ *ಧೂಮಜ್ಯೋತಿ* ಎಂಬ ಶ್ಲೋಕದಲ್ಲಿ ಈ ಅಂಶವನ್ನು ಹೇಳಿದ್ದಾನೆ. ಅಷ್ಟಲ್ಲದೇ ನಿನ್ನನ್ನು ತಮ್ಮ ಬಂಧುವೆಂದು ಭಾವಿಸುವ ಆ ಲಲನೆಯರ ಮನೆಯಲ್ಲಿ ಸಾಕಿರುವ ನವಿಲುಗಳು ನಿನ್ನ ಆಗಮನವಾದೊಡೆ ಮಳೆ ಬರುವ ಕಾರಣದಿಂದೆಂಬಂತೆ ಮನದಣಿ ನರ್ತಿಸುತ್ತವೆ.‌ ಹಿಂದೆ ನವಿಲುಗಳನ್ನು ಸೌಂದರ್ಯದ ದೃಷ್ಟಿಯಿಂದ ಸಾಕುತ್ತಿದ್ದರು. ( ಈಗ ಮುದ್ದು ಮಾಡಲು ಪೆದ್ದು ನಾಯಿ ಸಾಕುವಂತೆ) ಹಾಗೆಯೇ ಆ ಮಹಡಿ ಮನೆಗಳ ಹೊರಭಾಗದಲ್ಲಿ ನೆಟ್ಟ ಹೂವಿನ ಬಳ್ಳಿಗಳು ಮನೆಸುತ್ತಲೂ ಪೂಜೆ ಮಾಡುವಂತೆ ಹೂವು ಚೆಲ್ಲುತ್ತವೆ. ಸಂಪಿಗೆ ಮಲ್ಲಿಗೆ ಜಾಜಿ ಮುಂತಾದ ಆ ಪುಷ್ಪಗಳ ಪರಿಮಳವನ್ನು ಆಸ್ವಾದಿಸು. ಇನ್ನೊಂದು ವಿಷಯ ಮರೆಯದಿರು. ಸುಂದರ ರಮಣಿಯರು ತಮ್ಮ ಪಾದಕಮಲಗಳಿಗೆ ಲಾಕ್ಷಾ ಎಂಬ ಹೆಸರಿನ ಒಂದು ಜಾತಿಯ ಸೊಪ್ಪಿನ ರಸವನ್ನು ಹಚ್ಚಿರುತ್ತಾರೆ. ( ಈಗಿನ ಮದರಂಗಿಯಂತೆ ) ಅವರ ಪಾದದ ರಸದ ಚಿಹ್ನೆಗಳು ಅಲ್ಲೆಲ್ಲ ಮಹಡಿಯ ಮೆಟ್ಟಿಲುಗಳಲ್ಲಿ ಪಡಿ ಮೂಡಿರುತ್ತವೆ. ಪುಟ್ಟ ಪುಟ್ಟ  ಆಕರ್ಷಕವಾದ ಆ ಚಿಹ್ನೆಗಳನ್ನು ನೋಡಿ ಸಂತೋಷಪಡು._

_ಕವಿ ಇಲ್ಲಿ ಮೇಘಕ್ಕೆ ಮನರಂಜನೆಯನ್ನು ಪಡೆದು ಮುಂದುವರೆ ಎನ್ನುತ್ತಿರುವನು.ಅತಿಥಿ ಮನೆಗೆ ಬಂದ ಕ್ಷಣವೇ ಪಾನೀಯ ತಿಂಡಿ ಕೊಡುವಂತೆ ಮೇಘದ ಪಾನೀಯವಾದ ಧೂಮ ಅಲ್ಲಿ ನೀಡುವರು. ತಿಂದು ಹೆಚ್ಚಾದಾಗ ಮನವು ವಿಶ್ರಾಂತಿ ಪಡೆಯಲು ಮಯೂರಗಳ ನೃತ್ಯ. ಅನಂತರ ಸುಗಂಧದ ಆಸ್ವಾದ ಅನುಭವಿಸುವುದು. ಕೊನೆಗೆ ರಸಿಕ ಮನದ ವಿನೋದಕ್ಕಾಗಿ ಲಲನೆಯರ ನುಣುಪಾದ ಪಾದಗಳ ಚಿಹ್ನೆ ನೋಡಿ ಸಂತೋಷಿಸುವುದು._

_ಕವಿ ಪ್ರಕೃತಿಯ ಪ್ರತಿಯೊಂದು ದೃಶ್ಯದಲ್ಲೂ ಸೌಂದರ್ಯ ಹುಡುಕುವನು._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩