🌺 ಪ್ರತಿಮಾ ನಾಟಕದ ಒಂದು ಕುಸುಮ 🌺

*वयमयशसा चीरेणार्यो नृपो गृहमृत्युना प्रततरुदितै: कृत्स्नायोध्या मृगै: सह लक्ष्मण: दयिततनया: शोकेनाम्बा: स्नुषाध्वपरिश्रमै: धिगिति वचसा चोग्रेणात्मा त्वया ननु योजिता: ।।*

_ಭರತನ ಸಿಟ್ಟಿನ ಮಾತು. ಸುಮಂತ್ರನು ಇವಳು ನಿನ್ನವ್ವೆ, ನಮಸ್ಕರಿಸು ಎಂದಾಗ ಭರತನ ಪಾಪಿ ಎಂದು ಬೈಯುವನು. ಗಂಗೆ ಯಮುನೆಯರ ನಡುವೆ ಕೊಳಚೆ ನೀರೊಂದು ಬಂದಂತೆ ಕೌಸಲ್ಯಾ ಸುಮಿತ್ರೆಯರ ನಡುವೆ ಕೆಟ್ಟವಳಾದ ನೀನು ನಿಂತಿರುವೆ ಎಂದೆಲ್ಲಾ ಕ್ರೂರವಾಗಿ ನಿಂದಿಸುತ್ತಾನೆ. ಆಗ ಕೈಕೇಯಿ ಮಗನೇ ನಾನು ಏನು ಮಾಡಿದೆಯೆಂದು ಈ ನಿಂದೆ ಎಂದು ಪ್ರಶ್ನಿಸುತ್ತಾಳೆ. ಆಗ ಭರತನ ಮಾತು._

_ರಾಜ್ಯಲೋಭದಿಂದ ಭರತನು ಅಮ್ಮನ ಕೈಯಿಂದ ಹೀಗೆ ಮಾಡಿಸಿದನು ಎಂಬ ಅಪಕೀರ್ತಿ ನನಗೆ ತಂದೊಡ್ಡಿದೆ. ಅರಮನೆಯಲ್ಲಿ ಸುಖವಾಗಿದ್ದ ನನ್ನಣ್ಣ ರಾಮನಿಗೆ ನಾರುಬಟ್ಟೆ ಉಡಿಸಿ ಕಾಡಿಗೆ ಕಳುಹಿದೆ. ಇಕ್ಷ್ವಾಕು ವಂಶದವರಿಗೆ ಅನುರೂಪವಲ್ಲದ ಮನೆಯಲ್ಲೇ ಸಾವನ್ನು ರಾಜನಿಗೆ ಉಂಟುಮಾಡಿದೆ.ಅವರೇನಿದ್ದರೂ ಯೋಗೇನಾಂತೇ ತನುಂ ತ್ಯಜೇತ್ ಎಂಬಂತೆ ವಾನಪ್ರಸ್ಥಾಶ್ರಮದ ಕೊನೆಯಲ್ಲಿ ಯೋಗಮಾರ್ಗದಿಂದ ಪ್ರಾಣ ಬಿಡುವವರು. ಈಗ ನೋಡಿದರೆ ದಶರಥ ಎದೆ ಒಡೆದು ಸತ್ತಿದ್ದಾನೆ. ಈ ಎರಡು ಘಟನೆಗಳ ಕಾರಣ ರಾಮನ ವನವಾಸ ದಶರಥನ ಸ್ವರ್ಗ ವಾಸದ ಕಾರಣ ಅಯೋಧ್ಯೆಗೆ ಅಯೋಧ್ಯೆಯೇ ದು:ಖವೆಂಬ ಕಡಲಿನಲ್ಲಿ ಮುಳುಗಿದೆ. ಸಾಧು ಸ್ವಭಾವದ ನನ್ನ ತಮ್ಮ ಲಕ್ಷ್ಮಣನಿಗೆ ಮೃಗಗಳ ಜೊತೆಗೆ ಅಲೆಯುವ ಸ್ಥಿತಿ, ಅಮ್ಮಂದಿರು ಒಂದೆಡೆ ಮಕ್ಕಳ ಇಂತಹ ಅವಸ್ಥೆ( ರಾಮ ಸೌಮಿತ್ರರ ವನವಾಸ) ಗಂಡನ ಪ್ರಾಣ ತ್ಯಾಗದ ಕಾರಣ ದು:ಖಿಸುತ್ತಿರುವರು. ಅಯೋಧ್ಯೆಯ ಮುದ್ದಿನ ಸೊಸೆ ಪಟ್ಟದರಾಣಿ ಇನ್ನೂ ಚಿಕ್ಕವಯಸ್ಸಿನ ಸೀತೆಗೆ ಕಲ್ಲು ಮುಳ್ಳುಗಳ ಹಾದಿಯನ್ನು ಸವೆಸುವ ಶಿಕ್ಷೆ ಕೊಡಿಸಿದ ನಿನಗೆ ನೀನೆ ಧಿಕ್ಕಾರವಿರಲಿ ಕೈಕೇಯಿಗೆ ಎಂದು ಹೇಳಬೇಕೆನಿಸುವುದಿಲ್ಲವೇ!
ಇಷ್ಟು ಅನರ್ಥ ಪರಂಪರೆಗೆ ಕಾರಣವಾದ ನಿನಗೆ ಧಿಕ್ಕಾರವಲ್ಲದೆ ಪ್ರೀತಿ ತೋರಬೇಕೇ! ಎಂಬ ಭಾವ. ಪ್ರಸ್ತುತ ಹಾಗೂ ಅಪ್ರಸ್ತುತ ಘಟನೆಗಳನ್ನು ಒಂದುಕ್ರಿಯೆಗೆ ಸಂಬಂಧಿಸಿ ವರ್ಣಿಸಿದ ಕಾರಣ ತುಲ್ಯಯೋಗಿತಾ ಅಲಂಕಾರ._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩