📙 ವೇದ- ಧರ್ಮ ಭಾಗ-೧೧

*ವೇದದ ಬ್ರಾಹ್ಮಣಗಳು*

*ಋಗ್ವೇದದ ಐತರೇಯ ಬ್ರಾಹ್ಮಣ*

ಅನೇಕ ರೋಚಕವಾದ ಕಥೆಗಳು, ಸೂಕ್ತಗಳು ಇಲ್ಲಿ ಕಾಣಸಿಗುತ್ತವೆ. ಮಾನವೀಯ ಮೌಲ್ಯಗಳನ್ನು ಮನಮುಟ್ಟುವಂತೆ ಪ್ರತಿಪಾದಿಸಿದೆ ಈ ಬ್ರಾಹ್ಮಣ.

೮ ಪಂಜಿಕಾಗಳು, ( ಒಂದು ರೀತಿಯ ವಿಭಾಗ) ೪೦ ಅಧ್ಯಾಯಗಳು, ೨೮೫ ಕಂಡಿಕಾಗಳಷ್ಟು ವಿಸ್ತಾರವಾಗಿದೆ.

ಯಜ್ಞದಲ್ಲಿ *ಹೋತೃವಿನ* ಕೆಲಸವನ್ನು ,ಜವಾಬ್ದಾರಿಯನ್ನು, ಶಾಸ್ತ್ರದ ಆಚರಣೆಯನ್ನು ಇಲ್ಲಿ ವಿವರಿಸಲಾಗಿದೆ. ಒಂದು ಯಜ್ಞದಲ್ಲಿ *ಹೋತೃ, ಅಧ್ವರ್ಯು, ಉದ್ಗಾತೃ, ಬ್ರಹ್ಮ* ಹೀಗೆ ನಾಲ್ಕು ಜನರು ಮುಖ್ಯ ಪಾತ್ರ ವಹಿಸುತ್ತಾರೆ. ಮೂರು ಜನರು ಮೂರು ವೇದಗಳ ಕರ್ಮಾನುಷ್ಠಾನದಲ್ಲಿ ಪ್ರವೀಣರಾದರೆ, ಬ್ರಹ್ಮನು ನಾಲ್ಕು ವೇದಗಳಲ್ಲೂ ಪರಿಣತಿ ಹೊಂದಿ ಎಲ್ಲರ ಸರಿ-ತಪ್ಪುಗಳ ಮೇಲ್ವಿಚಾರಣೆ ನಡೆಸುತ್ತಾನೆ.

ಹೋತೃವು ಯಜ್ಞದಲ್ಲಿ ದೇವತೆಯನ್ನು ಸ್ತುತಿಗೈಯ್ಯುವ ಕೆಲಸ ಪ್ರಧಾನವಾಗಿ ನಿರ್ವಹಿಸುವನು. ಅಧ್ವರ್ಯುವು ಉಳಿದ ಪ್ರಕ್ರಿಯೆಗಳನ್ನು ಕೈಗೊಳ್ಳುತ್ತಾನೆ. ಉದ್ಗಾತೃವು ಸಾಮಗಾನದ ಮೂಲಕ ಸುಸ್ವರದಿಂದ ದೇವತೆಗಳನ್ನು ಸ್ವಾಗತಿಸುತ್ತಾನೆ. ಬ್ರಹ್ಮನು ಇವರಲ್ಲದೇ ಉಳಿದ ಋತ್ವಿಜರೆಂಬ ಯಜ್ಞ ಪ್ರಕ್ರಿಯೆಯಲ್ಲಿ ಪಾಲ್ಗೊಂಡವರ ಕರ್ಮಗಳನ್ನು ನಿರ್ದೇಶಿಸುತ್ತಾನೆ. ಇವನು ಅಥರ್ವವೇದಿಯಾಗಿರುವುದು ಸಾಮಾನ್ಯ. ಉಳಿದ ವೇದಗಳು ಇವನಿಗೆ ತಿಳಿದಿರುವುದು ಅವನ ಮಹತ್ವವನ್ನು ಹೆಚ್ಚಿಸುತ್ತದೆ. ಇವೆಲ್ಲ ಸೋಮ, ವಾಜಪೇಯ, ರಾಜಸೂಯ, ಸೌತ್ರಾಮಣ ಮುಂತಾದ ಯಜ್ಞಗಳಲ್ಲಿ ಕಂಡುಬರುವ ರೀತಿ. ನಮ್ಮ ನಿಮ್ಮ ಮನೆಗಳಲ್ಲಿ ನಡೆಯುವ ಸಣ್ಣ ಯಜ್ಞಗಳಲ್ಲಿ ಇವರ ಪಾತ್ರ ಹೆಚ್ಚಾಗಿ ಇರುವುದಿಲ್ಲ.

ಸೋಮಯಾಗದ ವಿಸ್ತೃತ ವರ್ಣನೆ ಇಲ್ಲಿದೆ. ಇಂದ್ರನು ವೃತ್ರನನ್ನು ಕೊಂದಾಗ ಅವನ ಪಾಪ ನಿವೃತ್ತಿಗೆ ದೇವತೆಗಳೆಲ್ಲ ಸೇರಿ ಮಾಡಿದ ಯಜ್ಞ, ಹಾಗೂ ಕೊನೆಯಲ್ಲಿ ನಡೆದ ಅವಭೃಥ ಸ್ನಾನ,( ಯಜ್ಞದ ಕೊನೆಗೆ ಮಾಡುವ ಅಭಿಷೇಕ)  ಮೂರು ಸಂಧ್ಯಾಕಾಲಗಳಲ್ಲಿ ಮಾಡಬೇಕಾದ ಸಣ್ಣ ಸವನಗಳು ( ಯಾಗ) , ಹನ್ನೆರಡು ದಿನಗಳಷ್ಟು ದೀರ್ಘ ಕಾಲ ಮಾಡುವ ಯಜ್ಞದ ಬಗ್ಗೆ, ರಾಜಸೂಯ ಯಾಗದ ಬಗ್ಗೆ ಇಲ್ಲಿ ವಿವರಣೆ ಇದೆ.

ಶುನ:ಶೇಫನ ಕಥೆಯು ತ್ಯಾಗದ ಮಹತ್ವವನ್ನು ಸಾರುತ್ತದೆ. *ಚಕ್ರವರ್ತಿ* ಆಗಬೇಕಾದರೆ ಅವನ ಲಕ್ಷಣ ಗುಣ ಮಾಡಬೇಕಾದ ಸಾಧನೆ, ಪಟ್ಟ ಏರುವ ಸಂದರ್ಭದಲ್ಲಿ ಮಾಡುವ ಅಭಿಷೇಕ ಹೀಗೆ ಬಹಳಷ್ಟು ವಿಷಯ ಈ ಬ್ರಾಹ್ಮಣದಲ್ಲಿದೆ. ಮುಖ್ಯವಾಗಿ ಸೋಮಯಾಗದ ವಿಷಯ ಹಾಗೂ ಹೋತೃವಿನ ಕರ್ಮ ಇಲ್ಲಿ ಪ್ರತಿಪಾದಿತವಾದ ವಿಷಯಗಳು.

*ಋಗ್ವೇದದ ಶಾಂಖಾಯನ ಬ್ರಾಹ್ಮಣ*

ಋಗ್ವೇದದ ಇನ್ನೊಂದು ಬ್ರಾಹ್ಮಣವಿದು. ಇದರಲ್ಲಿ ೩೦ ಅಧ್ಯಾಯಗಳು, ೨೨೬ ಖಂಡಗಳೂ ಇವೆ‌. ಇಲ್ಲಿ ಉದ್ದುದ್ದ ಗದ್ಯಗಳ ಮೂಲಕ ನಿರೂಪಣೆ ಸಾಗುವುದು.( ಭೋಜನ ಚಂಪೂರಾಮಾಯಣದಲ್ಲಿ ಬರುವ ಗದ್ಯಗಳಂತೆ) ಇದರ ಇನ್ನೊಂದು ಹೆಸರು *ಕೌಶಿಕೀ ಬ್ರಾಹ್ಮಣ* ಎಂದು.

ಈ ಹೆಸರು ಏಕೆಂದರೆ ಇಲ್ಲಿ ಅನೇಕ ಋಷಿಗಳ ಆಚಾರ್ಯರ ಮತವನ್ನು ಉಲ್ಲೇಖಿಸಿ ಕೊನೆಗೆ ಕೌಶಿಕರ ಮತವನ್ನು ಯಥಾರ್ಥವೆಂದು ಪ್ರತಿಪಾದಿಸುತ್ತಾರೆ. ವಿಷಯ ನಿರೂಪಣೆಯ ದೃಷ್ಟಿಯಲ್ಲಿ ಐತರೇಯ ಬ್ರಾಹ್ಮಣಕ್ಕೂ ಇದಕ್ಕೂ ಹೆಚ್ಚು ವ್ಯತ್ಯಾಸಗಳಿಲ್ಲ. ಉತ್ತರ ದೇಶಗಳ ಸಂಸ್ಕೃತಿಯ ಪರಿಚಯ ಇಲ್ಲಿ ಸುಂದರವಾಗಿ ಕೊಡಲಾಗಿದೆ. ( ಈಗಿನ ಉತ್ತರ ಭಾರತ ಹಾಗೂ ಪಾಕ್ ಅಪ್ಘಾನ್ ಇತ್ಯಾದಿ ವ್ಯಾಪಿಸಿರುವ ಪ್ರದೇಶ) ರುದ್ರನ ಸಾಕಷ್ಟು ಮಹಿಮೆಗಳನ್ನು ಇಲ್ಲಿ ವರ್ಣಿಸಲಾಗಿದೆ. ವೃತ್ರನ ವಧೆಗಾಗಿ ಮಾಡಿದ *ಮಹಾನಾಮ್ನೀ* ಎಂಬ ಮಂತ್ರಗಳ ಮಹಿಮೆ, ಅದರ ಉದ್ದೇಶ, ಪ್ರಯೋಜನ ಇತ್ಯಾದಿಗಳ ವಿವರಣೆ, *ಶಕ್ವರೀ* ಎಂಬ ಇನ್ನೊಂದು ಬಗೆಯ ಮಂತ್ರಗಳ ಮಹತ್ವ ಹೀಗೆ ಹತ್ತು ಹಲವು ವಿಷಯ ಹೊಸದಾಗಿ ನಿರೂಪಿತವಾಗಿದೆ.

📙 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩