🌹 ಮೇಘದೂತದ ಒಂದು ಬಿಂದು 🌹

*वीचिक्षोभस्तनितविहगश्रेणिकाञ्चीगुणाया: संसर्पन्त्या: स्खलितसुभगं दर्शितावर्तनाभे: । निर्विन्ध्याया: पथि भव रसाभ्यन्तरस्सन्निपत्य स्त्रीणामाद्यं प्रणयवचनं विभ्रमो हि प्रियेषु ।।*

_ಹೇ ಮೇಘವೇ, ನೀನು ಚಲಿಸುವ ದಾರಿಯಲ್ಲಿ ಅಲೆಗಳ ಭೋರ್ಗರೆತದ ನಾದವನ್ನು ಉಂಟುಮಾಡುತ್ತಿರುವ, ಸ್ವಲ್ಪ ಮೇಲೆ ಗುಂಪು ಗುಂಪಾಗಿ ಹೃದಯದ ಆಕಾರದಲ್ಲಿ ಹಾರುತ್ತಿರುವ ಪಕ್ಷಿಗಳೇ ಸೊಂಟದ ಡಾಬಾಗಿರುವ, ಬಂಡೆಗಳಲ್ಲಿ ಒಮ್ಮೆ ಜಾರುತ್ತಾ ಮತ್ತೆ ಇಳಿಯುತ್ತಾ ಹರಿಯುವ ಮೂಲಕ ನಾಚೆಕೆ ತೋರುತ್ತಿರುವ, ಒಂದೆಡೆ ಸುಳಿಯೆಂಬ ತನ್ನ ಹೊಕ್ಕುಳನ್ನು ತೋರುತ್ತಾ ಆಕರ್ಷಿಸುತ್ತಿರುವ ನಿರ್ವಿಂಧ್ಯಾ ಎಂಬ ನದಿಯ ಸಂಸರ್ಗವನ್ನು ಹೊಂದಿ ನೀನು ಶೃಂಗಾರ ರಸವನ್ನು ಮನಸಾರೆ ಅನುಭವಿಸು. ಏಕೆಂದರೆ ಸ್ತ್ರೀಯರೆಂದೂ ಪ್ರೀತಿಯನ್ನು ಅಥವಾ ಪ್ರಿಯನ ಮೇಲಿನ ಬಯಕೆಯನ್ನು ಮಾತಿನಲ್ಲಿ ಹೇಳಲಾರರು. ಅವರ ವಿಲಾಸವೇ ( ಹಾವ-ಭಾವ, ವೇಷ- ಭೂಷಣ, ಸ್ವರಭಾರ,ನಾಚಿಕೆ) ಮೊದಲನೆಯ ಅನುರಾಗದ ನುಡಿ._

_ಉಜ್ಜಯಿನಿಗೆ ತೆರಳುವ ಮಾರ್ಗದಲ್ಲಿ ಸಿಗುವ ನಿರ್ವಿಂಧ್ಯಾ ಎಂಬ ನದಿಯ ವರ್ಣನೆ ಇಲ್ಲಿದೆ. ವಿಂಧ್ಯ ಪರ್ವತದಿಂದ ಉತ್ತರಕ್ಕೆ ಈ ನದಿ ಹರಿಯುತ್ತದೆ. ಈ ನದಿಯ ಪ್ರವಾಹ ಸಾಗುವ ವೇಳೆ ತೆರೆಗಳು ಅಲೆ ಅಲೆಯಾಗಿ ಸಾಗುವ ವೇಳೆ, ಅವುಗಳ ಮೇಲ್ಭಾಗದಲ್ಲಿ ಒಂದು ಪ್ರಕಾರವಾಗಿ ಹಾರುತ್ತಾ ಶಬ್ದ ಮಾಡುತ್ತಿರುವ ಪಕ್ಷಿಗಳ ಸಾಲು ಕವಿಗೆ ಹೆಣ್ಣಿನ ಡಾಬಿನಂತೆ ಕಂಡಿದೆ. ಮುಗುದೆಯ ನಡಿಗೆ ಗಜದಂತೆ ಸಾಗಿದಾಗ ಆ ಸೊಂಟದಲ್ಲಿ ಧರಿಸಿದ ಡಾಬು ಅತ್ತಿಂದಿತ್ತ ಸರಿದು ನಾದ ಉಂಟುಮಾಡುತ್ತಿದೆ. ಇಲ್ಲಿನ ನದಿಯ ದೃಶ್ಯವೂ ಹಾಗೆಯೇ ಇದೆ. ಬಂಡೆಗಳ ನಡುವೆ ತಡೆ ತಡೆದು ಮಂದಗಮನಳಾಗಿ ಮದುಮಗಳಂತೆ ಪ್ರವಹಿಸುತ್ತಿರುವಳು ಆ ನದಿ. ಇಂತಹ ನಿಧಾನದ ನಡಿಗೆಯು ಅವಳ ಸೊಬಗನ್ನೆಲ್ಲ ಕಣ್ಣಲ್ಲೇ ಸವಿಯಲು ಅಣಿ ಮಾಡಿಕೊಟ್ಟಂತಿದೆ. ಅನತಿ ಕಾಲದಲ್ಲಿ ಪಕ್ಷಿಗಳ ಸಾಲು ಹಾರಿದೂರ ಹೋದಾಗ ಕೆಳಗೆ ಡಾಬು ಜಾರಿ ನಾಭಿ ಕಂಡಂತೆ ಆಳವಾದ ಅಷ್ಟೇ ಆಕರ್ಷಕವಾದ ಮನವನ್ನು ಆಸಕ್ತಿಯಲ್ಲಿ ಮುಳುಗುವಂತೆ ಮಾಡುವ ಆ ಹೊಕ್ಕಳನ್ನು ನೋಡು. ಇಲ್ಲಿ ಎರಡರ ಸಾದೃಶ್ಯ ಸುಂದರ. ಸುಳಿಯೂ ಈಜುಗಾರರನ್ನು ಸೆಳೆದು ಮುಳುಗಿಸುತ್ತದೆ. ಎಷ್ಟು ನುರಿತರಾದರೂ ಸುಳಿಯ ಆಕರ್ಷಣೆಗೆ ಒಳಗಾಗಿ ಕೆಲವೊಮ್ಮೆ ಮುಳುಗುವರು. ಅತ್ಯಂತ ಆಳವೂ ಹೌದು. ಪ್ರಕೃತಿ ಸಹಜವಾಗಿ ಹೆಣ್ಣಿನ ನಾಭಿ ಸುಳಿಯಂತೆ ಆಳ. ಎಂತಹ ಜಿತೇಂದ್ರಿಯರನ್ನೂ ಆಕರ್ಷಿಸಿ ಕೆಡಹುವ ಮಾದಕತೆ ಅದರಲ್ಲಿದೆ. ಈಗ ಆ ನದಿ ಇಂತಹ ಶೃಂಗಾರ ಚೇಷ್ಟೆಗಳ ಮೂಲಕ ನಿನ್ನನ್ನು ಆಹ್ವಾನಿಸುತ್ತಿರುವಳು. ಬಯಸಿ ಬಂದಾಗ ತಣಿಸದೇ ಮುಂದುವರೆಯದಿರು. ಮನಸಾರೆ ಅವಳಲ್ಲಿ ಮಿಂದು ಸುಖಿಸು._

_ಕವಿ ಕೊನೆಗೆ ಒಂದು ಉತ್ತಮ ಮಾತನ್ನು ನುಡಿಯುತ್ತಿದ್ದಾನೆ. ಸ್ತ್ರೀಯರ ಹಾವಭಾವಗಳೇ ಅವರ ವರ್ತನೆಯನ್ನು ಮನದಿಚ್ಛೆಯನ್ನು ವ್ಯಕ್ತ ಪಡಿಸುತ್ತವೆ. ಅವರೆಂದಿಗೂ ಬಾಯಿ ಬಿಟ್ಟು ತಮ್ಮ ಬಯಕೆಗಳನ್ನು ಹೇಳಲಾರರು. ಅವರ ವಿಲಾಸವೇ ಅದರ ಸೂಚಕ. ಅದೇ ಮೊದಲ ಪ್ರೀತಿಯ ಮಾತು. ಮಾತು ನೋಟ, ನಡಿಗೆ, ವಸ್ತ್ರ ವಿನ್ಯಾಸ ಹಾವ ಭಾವಗಳ ಮೂಲಕ ಹೊರಹೊಮ್ಮುವುದು. ಹಾಗಾಗಿ ಬಾಯಿ ತೆರೆದು ಹೇಳುವಳೆಂದು ಕಾಯದೆ ಸಮಯವರಿತು ವ್ಯವಹರಿಸು._

📜ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩