🌾📗🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು.

*ಸಲಿಲಸಮೇ ಶಶಿನಿ ರವೇರ್ದೀಧಿತಯೋ ಮೂರ್ಛಿತಾಸ್ತಮೋ ನೈಶಮ್, ಕ್ಷಪಯಂತಿ ದರ್ಪಣೋದರನಿಹಿತಾ ಇವ ಮಂದಿರಸ್ಯಾಂತ:* ಸೂರ್ಯನ ಸಂಪರ್ಕದಿಂದ ಚಂದ್ರನ ಬೆಳಕೆಂಬುದನ್ನು ಸುಂದರಕಾಂಡದಲ್ಲಿ ಹೇಳುತ್ತಾರೆ. ಅದರ ವ್ಯಾಖ್ಯಾನದ ಸಂದರ್ಭದಲ್ಲಿ ವರಾಹ ಮಿಹಿರನ ಈ ಶ್ಲೋಕ ಉದಾಹರಿಸುತ್ತಾರೆ. ಸೂರ್ಯನ ಕಿರಣಗಳೇ ಚಂದ್ರನ ಮೇಲೆ ಬಿದ್ದು ತನ್ಮೂಲಕ ಚಂದ್ರ ಬೆಳಗುವನು. ಸೂರ್ಯನ ಕಿರಣಗಳ ಸಂಪರ್ಕವಿಲ್ಲದಿರೆ ಚಂದ್ರನ ಜಗವ ಬೆಳಗುವ ಕಾಂತಿ ಸಾಧ್ಯವಿಲ್ಲ. ಆಧುನಿಕ ವಿಜ್ಞಾನ ಸಂಶೋಧನೆ ಎನ್ನುವ ಈ ವಿಷಯ ವರಾಹಮಿಹಿರನಿಂದ ತುಂಬಾ ಮುಂಚೆಯೇ ಹೇಳಲ್ಪಟ್ಟಿತ್ತು.

ಮುಂದೆ ರಾವಣನ ಸೈನ್ಯದ ಮಹಾರಥಿಗಳ ವರ್ಣನೆ ಬರುತ್ತದೆ. ಮಹಾರಥಿ ಎಂದರೇನು?
*ಏಕೋ ದಶಸಹಸ್ರಾಣಿ ಯೋಧಯೇದ್ಯಸ್ತು ಧನ್ವಿನಾಮ್ ಶಸ್ತ್ರಶಾಸ್ತ್ರ ಪ್ರವೀಣಶ್ಚ ಸ ಮಹಾರಥ ಉಚ್ಯತೇ* ಹತ್ತು ಸಾವಿರ ಧನುರ್ಧಾರಿಗಳನ್ನು ಎದುರಿಸುವ ಸಾಮರ್ಥ್ಯ ಉಳ್ಳವನು ಹಾಗೂ ಶಸ್ತ್ರ ಮತ್ತು ಶಾಸ್ತ್ರಗಳೆರಡರ ಪರಿಣತಿ ಹೊಂದಿದ ವ್ಯಕ್ತಿಯೇ ಮಹಾರಥನಾಗುತ್ತಿದ್ದ. ಗೀತೆಯಲ್ಲಿ ಶಿಖಂಡಿಯನ್ನೂ ಮಹಾರಥನೆಂದು ಹೇಳಿರುವುದು ಭೀಷ್ಮನ ಎದುರಿಗೆ ಅವನ ಪರಾಕ್ರಮವೂ ಇತ್ತು ಎನ್ನುವುದರ ಸೂಚಕವೂ ಹೌದೇನೋ!

*ಮನೋ ಹಿ ಹೇತು: ಸರ್ವೇಷಾಮಿಂದ್ರಿಯಾಣಾಂ ಪ್ರವರ್ತನೇ ಶುಭಾಶುಭಾಸ್ವವಸ್ಥಾಸು ತಚ್ಚ ಮೇ ಸುವ್ಯವಸ್ಥಿತಮ್*

ಹನುಮಂತ ರಾವಣನ ಅಂತ:ಪುರದಲ್ಲಿ ನಾನಾ ಭಂಗಿಯಲ್ಲಿ ಮಲಗಿದ್ದ ಸಾವಿರಾರು ಸುಂದರಿಯರನ್ನೂ ನೋಡಿಯೂ ಯಾವುದೇ ಕೆಟ್ಟ ಭಾವನೆಗಳಿಗೆ ಒಳಗಾಗದೇ ಈ ಮಾತನ್ನು ನುಡಿಯುತ್ತಾನೆ. ಪಾಪಕರ್ಮ ಅಥವಾ ಪುಣ್ಯಕರ್ಮ ಇದರ ತೊಡಗುವಿಕೆಯಲ್ಲಿ ಇಂದ್ರಿಯಗಳ ನಿಯಂತ್ರಣ ಮಾಡುವುದು ಮನಸ್ಸೇ. ಬೇರಾವುದೂ ಅಲ್ಲ. ಮನದ ಮೂಲಕವೇ ಇಂದ್ರಿಯಗಳು ಶುಭಾಶುಭಕಾರ್ಯಗಳಲ್ಲಿ ತೊಡಗುತ್ತವೆ. ಈ ವಿಷಯದಲ್ಲಿ ಪರನಾರಿಯರನ್ನು ವಿವಸ್ತ್ರರಾಗಿ ನೋಡಿದರೂ ನನ್ನ ಮನ ವ್ಯವಸ್ಥಿತವಾಗಿದೆ. ಇಂದ್ರಿಯಗಳನ್ನು ಪಾಪಕರ್ಮದೆಡೆಗೆ ಚೋದಿಸುವ ಆಲೋಚನೆ ಹುಟ್ಟುತ್ತಿಲ್ಲ. ಹಾಗಾಗಿ ಅವರನ್ನು ನೋಡಿ ನಾನು ಪಾಪ ಮಾಡಿಲ್ಲ. ಅವೆಲ್ಲ ಸೀತಾನ್ವೇಷಣೆಯ ಒಳ್ಳೆಯ ಉದ್ದೇಶಕ್ಕಾಗಿ ಮಾಡಿದ್ದು ಎನ್ನುವನು. ಹನುಮಂತನಂತೆ ನಾವೂ ಮನದ ನಿಗ್ರಹ ಅಭ್ಯಾಸದಿಂದ ಸಾಧಿಸೋಣ.

📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩