🌾📗🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು
ಭಾಗ-೨

*ಭೂತಾಶ್ಚಾರ್ಥಾ ವಿಪದ್ಯಂತೇ ದೇಶಕಾಲವಿರೋಧಿತಾ: ವಿಕ್ಲವಂ ದೂತಮಾಸಾದ್ಯ ತಮ: ಸೂರ್ಯೋದಯೇ ಯಥಾ*

ದೂತನ ಲಕ್ಷಣವನ್ನು ಹೇಳಿದ್ದಾರೆ. ಸಮಯ ಸಂದರ್ಭ ನೋಡದೇ ವ್ಯವಹರಿಸುವ ದೂತನಿಗೆ ಒಪ್ಪಿಸಿದ ಕಾರ್ಯಗಳೆಲ್ಲವೂ ಸೂರ್ಯೋದಯವಾಗುವಾಗ ನಾಶ ಹೊಂದುವ ಕತ್ತಲಿನಂತೆ ಸರ್ವನಾಶವಾಗುತ್ತವೆ.

ವಿಕ್ಲವ ಎಂದರೆ ಕಕ್ಕಾಬಿಕ್ಕಿಯಾದ, ಕಳವಳಗೊಂಡ, ಧೈರ್ಯವಿಲ್ಲದ, ವಿಮರ್ಶಿಸದೇ ಕಾರ್ಯ ಮಾಡುವವ ಎಂದೆಲ್ಲಾ ವ್ಯಾಖ್ಯಾನಗಳಿವೆ. ಹನುಮಂತನ ಮನದ ಮಾತಿದು. ನಾನು ರಾಮನ ದೂತನಾಗಿ ಬಂದು ವಿಕ್ಲವ ಹೊಂದದೇ ಪಕ್ವತೆಯಿಂದ ಕಾರ್ಯ ಮಾಡಬೇಕೆಂದು ಚಿಂತಿಸುತ್ತಿದ್ದಾನೆ.

ದೂತನೆಂದಲ್ಲ ನಮ್ಮ ನಿಮ್ಮೆಲ್ಲರಿಗೂ ಈ ಗುಣಗಳು ವ್ಯವಹಾರಕ್ಕೆ ಎಂದಿಗೂ ಅವಶ್ಯವಾಗಿ ಬೇಕೇ ಬೇಕು.

*ಅರ್ಥಾನರ್ಥಾನ್ತರೇ ಬುದ್ಧಿರ್ನಿಶ್ಚಿತಾಪಿ ನ ಶೋಭತೆ ಘಾತಯಂತಿ ಹಿ ಕಾರ್ಯಾಣಿ ದೂತಾ: ಪಂಡಿತಮಾನಿನ:*

ಇದು ಹನುಮನದೇ ಮುಂದಿನ ಮಾತು. ಯಾವ ಕಾರ್ಯ ಮಾಡಬೇಕು ಯಾವುದನ್ನು ಮಾಡಬಾರದೆನ್ನುವ ವಿಷಯದಲ್ಲಿ ರಾಜನು ಮಂತ್ರಿಗಳೊಡನೆ ಸಮಾಲೋಚಿಸಿ ನಿರ್ಣಯಿಸಿದ ಬುದ್ಧಿಯೂ ಅವಿವೇಕಿ ದೂತನಲ್ಲಿ ಶೋಭಿಸುವುದಿಲ್ಲ. ತಾನೇ ಮಹಾಪಂಡಿತನೆಂದು ಭಾವಿಸಿ ತನಗೆ ಸರಿಬಂದಂತೆ ಸ್ವೇಚ್ಛೆಯಿಂದ ಕಾರ್ಯಮಾಡುವ ದೂತರು ಸ್ವಾಮಿಯ ಕಾರ್ಯ ಹಾಳುಮಾಡುತ್ತಾರೆ.

ರಾಜನ ಮಂತ್ರ ಎಷ್ಟು ಚೆನ್ನಾಗಿದ್ದರೂ ದೂತನ ಬುದ್ಧಿ ವಿವೇಕರಹಿತವಾದರೆ ಆ ಕಾರ್ಯ ಮಣ್ಣು ಪಾಲಾದಂತೆಯೇ ಸರಿ. ದೂತರು ವಿವೇಕಿಯಾದರೆ ರಾಜನ ನಿರ್ಣಯದಲ್ಲಿ ಗೊಂದಲವಿದ್ದರೂ ಕಾರ್ಯ ಯಶಸ್ವಿಯಾಗುವುದು‌. ಈ ಅವಿವೇಕಕ್ಕೆ ಮೂಲ ಕಾರಣ ತಾನೇ ಮಹಾ ಪಂಡಿತನೆಂಬ ಅಹಂಭಾವ. ಇದು ನಮ್ಮನ್ನೆಲ್ಲಾ ಆಗಾಗ ಗಂಟುಹಾಕಿಕೊಳ್ಳುತ್ತದೆ. ಅಂತಹ ಸಮಯದಲ್ಲಿ ಈ ವಾಕ್ಯ ನೆನಪಿಸಿಕೊಂಡು ಮುನ್ನಡೆಯೋಣ.

*ಸಮಯೇ ಸೌಮ್ಯ ತಿಷ್ಠಂತಿ ಸತ್ವವಂತೋ ಮಹಾಬಲಾ:*

ಲಂಕಾದೇವತೆಯ ಮಾತಿದು. ಹನುಮನ ಪೆಟ್ಟು ತಿಂದು ಗದ್ಗದ ಧ್ವನಿಯಿಂದ ಈ ಮಾತು ನುಡಿಯುವಳು.

ಮಹಾಬಲರಾದ ಧೈರ್ಯವಂತರಾದ ಪುರುಷರು ಸಮಯಗಳಲ್ಲಿ ಶಾಸ್ತ್ರಮರ್ಯಾದೆಯನ್ನು ಮೀರಿ ನಡೆದುಕೊಳ್ಳುವುದಿಲ್ಲ.

ಸ್ತ್ರೀಯರ ವಧ ಶಾಸ್ತ್ರದಲ್ಲಿ ನಿಷಿದ್ಧ. ಹಾಗಾಗಿ ನನ್ನನ್ನು ಕೊಂದು ಶಾಸ್ತ್ರದ ಮಾತು ಮೀರದಿರು. ನೀನು ಪರಾಕ್ರಮಿಯೂ ಧೈರ್ಯವಂತನೂ ಆಗಿರುವೆ. ಹಾಗಿರುವಾಗ ಈ ಸಮಯದಲ್ಲಿ ಏಕೆ ಸಮಯವನ್ನು ಅಂದರೆ ಶಾಸ್ತ್ರವನ್ನು ಮೀರಿ ನಡೆಯುವೆ!

ವಿಶ್ವಾಮಿತ್ರರು ತಾಟಕಿಯನ್ನು ಕೊಲ್ಲೆಂದಾಗ ರಾಮ ಸ್ತ್ರೀ ವಧೆ ಎಷ್ಟು ಸರಿ ಎಂದು ಪ್ರಶ್ನಿಸುತ್ತಾನೆ. ಕೊನೆಗೆ ಅನೇಕ ದೃಷ್ಟಾಂತ ಕೊಟ್ಟು ಅತ್ಯಂತ ಕೆಟ್ಟ ಸ್ತ್ರೀ ವಧೆ ಶಾಸ್ತ್ರಸಮ್ಮತ ಎಂದು ಮಹರ್ಷಿಗಳು ಹೇಳಿದಾಗ ಒಪ್ಪಿ ಕೊಲ್ಲುವನು.

ನಮ್ಮ ಶಾಸ್ತ್ರಗಳು ಸ್ತ್ರೀ ಯರ ಬಗೆಗೆ ಎಂತಹ ಉನ್ನತ ಭಾವನೆ ಹೊಂದಿದ್ದವು ಎನ್ನಲು ಈ ಮಾತೊಂದೇ ಸಾಕು.

ಬರಿದೆ ಪರಾಕ್ರಮ, ಅಥವಾ ಧೈರ್ಯ ಸಾಲದು , ಜ್ಞಾನವೂ ಅಡಕವಾಗಿದ್ದಾಗ ಲೋಕವ್ಯವಹಾರ ಸಾಧ್ಯ ಎನ್ನುವ ಧ್ವನಿಯೂ ಇಲ್ಲಿ ಅಡಗಿದೆ.

📙 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩