🌺 ಪ್ರತಿಮಾನಾಟಕದ ಒಂದು ಸುಮ 🌺

*अयशसि यदि लोभ: कीर्तयित्वा किमस्मान् किमु नृपफलतर्ष: किं नरेन्द्रो न दद्यात् ।अथ तु नृपतिमातेत्येष शब्दस्तवेष्टो वदतु भवति! सत्यं किं तवार्यो न पुत्र: ।।*

_ಭರತನ ಭಾವುಕ ನುಡಿಗಳು ಮುಂದುವರಿಯುತ್ತಿವೆ. ತನ್ನ ತಾಯಿ ಮಾಡಿದ ಕಾರ್ಯ ಅವನಿಗೆ ಎಳ್ಳಷ್ಟೂ ಸಮ್ಮತವಲ್ಲ. ಅಣ್ಣನನ್ನು ಮಡದಿಯ ಜೊತೆಗೆ ಕಾಡಿಗೆ ಕಳುಹಿಸುವುದೂ ಶುಲ್ಕದಲ್ಲಿ ಹೇಳಲ್ಪಟ್ಟಿತ್ತಾ? ಎಂದು ಪ್ರಶ್ನೆ ಮಾಡುವನು. ಮುಂದೆ ಹೀಗೆ ನುಡಿಯುವನು. ನಿನಗೆ ಒಂದು ವೇಳೆ ಅಪಕೀರ್ತಿಯಲ್ಲಿ ಆಸೆ ಇದ್ದರೆ ನಾನು ರಾಜನಾಗಬೇಕೆಂದು ಹೇಳಿ ನನಗೂ ಅಪಕೀರ್ತಿ ತಂದು ಕೊಟ್ಟೆಯಲ್ಲ. ಒಂದೋ ನೀನೇ ಆಡಳಿತ ನಡೆಸಿ ಮಗನನ್ನು ರಾಜ್ಯ ಭ್ರಷ್ಟನನ್ನಾಗಿಸಿದ ಲೋಭಿ ಎಂಬ ಅಪಕೀರ್ತಿ ಸಿಗುತ್ತಿತ್ತು. ಇಲ್ಲ ನಿನಗಿಷ್ಟವಿಲ್ಲವಾದರೆ ರಾಮನನ್ನು ಕಾಡಿಗೆ ಕಳುಹುವುದನ್ನು ಮಾತ್ರ ಬಯಸಬೇಕಾಗಿತ್ತು, ಭರತನು ರಾಜನಾಗುವುದನ್ನಲ್ಲ. ಈಗ ನಾನು ರಾಜನಾಗಬೇಕೆಂದು ಹೇಳಿ ಈ ಪಾಪದಲ್ಲಿ ನನ್ನನ್ನೂ ಭಾಗಿಯಾಗಿಸಿದೆಯಲ್ಲ. ಹೋಗಲಿ, ರಾಜನು ನಿನಗೆಂದಾದರೂ ಬಯಸಿದ್ದನ್ನು ನೀಡಲಿಲ್ಲವೇ? ನೀನು ಬಯಸಿದೆ ಎಂದಾದರೆ ರಾಜ್ಯವನ್ನೇ ಕೊಡುತ್ತಿದ್ದ. ನಿನ್ನ ಮೇಲೆ ಬೇರೆ ರಾಣಿಯರಿಗಿಂತ ಹೆಚ್ಚು ಪ್ರೀತಿ ಹೊಂದಿದ್ದ ನಮ್ಮ ಅಪ್ಪ. ನಿನಗೆ ಎಂದಾದರೂ ಕಡಿಮೆ ಮಾಡಿದ್ದಾನೆಯೇ ಅವನು? ಅಂತಹ ರಾಜನ ಪ್ರಾಣ ತೆಗೆದೆಯಲ್ಲಾ! ಇಲ್ಲ, ರಾಜನ ತಾಯಿ ಎಂಬ ಮಾತನ್ನು ಕೇಳಲು ನೀನು ಬಯಸಿದ್ದೆಂದಾದರೆ ಸತ್ಯ ಹೇಳು, ರಾಮನು ನಿನಗೆ ಮಗನಲ್ಲವೇ! ಅವನು ಎಂದಾದರೂ ನಿನಗೆ ಅನಾದರ ತೋರಿರುವನೇ! ಅಥವಾ ನೀನು ನಮ್ಮೆಲ್ಲರನ್ನೂ ಒಂದೇ ರೀತಿಯ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಿ. ಅವನು ನಿನಗೆ ಹೊರಗಿನವನಾದನೇ! ಅವನು ರಾಜನಾದರೂ ನೀನು ರಾಜಮಾತೆ ಎಂಬ ಬಿರುದನ್ನು ಪಡೆದೇ ಪಡೆಯುತ್ತಿದ್ದಿ. ಏಕೆ ಹೀಗೆ ಅನರ್ಥ ಮಾಡಿದೆ?_


_ಭರತನ ಭಾವವನ್ನು ವಾಲ್ಮೀಕಿಯ ಅಂತರಾಳದಂತೆ ಭಾಸ ಪ್ರತಿಯೊಂದು ಶ್ಲೋಕದಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾನೆ. ಈ ಸಂದರ್ಭದ ಒಂದೊಂದು ಶ್ಲೋಕಗಳನ್ನು ಓದಿದಾಗಲೆಲ್ಲ ನಾವೇ ಭರತನಾಗಿ ಅಳು ಒತ್ತರಿಸಿಬರುವುದು. ಕವಿಯ ರಚನಾ ಸಾಮರ್ಥ್ಯ ಅಂತಹದು. ಅಮ್ಮನಿಗೆ ಸುಮ್ಮನೆ ನಿಂದಿಸದೇ ಅವಳು ಮಾಡಿದ ಕಾರ್ಯಗಳನ್ನೆಲ್ಲ ವಿಮರ್ಶಿಸಿ ಮಾತನಾಡುವ ಭರತ ಭಾಸನ ಕಲ್ಪನೆಯ ಕೂಸು._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩