🌹 ಮೇಘದೂತದ ಒಂದು ಕುಸುಮ 🌹

*तेषां दिक्षु प्रथितविदिशालक्षणां राजधानीं गत्वा सद्य: फलमविकलं कामुकत्वस्य लब्धा । तीरोपान्तस्तनितसुभगं पास्यसि स्वादु यस्मात् सभ्रूभङ्गं मुखमिव पयो वेत्रवत्याश्चलोर्मि ।।*

_ಎಲೈ ಮಿತ್ರನೇ, ನೀನೀಗ ದಶದಿಕ್ಕುಗಳಲ್ಲಿ ಪ್ರಸಿದ್ಧವಾದ ವಿದಿಶಾ ಎಂಬ ಹೆಸರಿನ ಆ ದಶಾರ್ಣದೇಶದ ರಾಜಧಾನಿಯನ್ನು ಪ್ರವೇಶಿಸಿ ಸುಖವನ್ನು ಹೊಂದುವೆ. ಇಲ್ಲಿ ನಿನಗೆ ಹೊಸ ಹೊಸ ಅನುಭವಗಳು ಜೊತೆಯಾಗುವವು. ಇಲ್ಲಿ ನೀನು ನಿನ್ನ ರಸಿಕತೆಗೆ ಸಂಪೂರ್ಣ ಫಲವನ್ನು ಪಡೆಯುವೆ ಅಥವಾ ನಿನ್ನ ವಿಲಾಸಿತನಕ್ಕೆ ಪ್ರಯೋಜನ ದೊರಕುವುದು. ಅದು ಹೇಗೆಂದರೆ ಅಲ್ಲಿ ವೇತ್ರವತಿಯೆಂಬ ನದಿ ಹರಿಯುತ್ತಲಿರುವುದು. ಅದರ ಅಲೆಗಳು ಬಹಳ ಚಂಚಲ. ( ನದಿಗಳ ಅಲೆ ಸಾಮಾನ್ಯವಾಗಿ ಚಂಚಲವೇ, ಹೆಣ್ಣಿನ ಮನದಂತೆ) ಆ ನದಿಯ ನೀರನ್ನು ಹುಬ್ಬುಗಂಟಿಕ್ಕುತ್ತಿರುವ ಅಥವಾ ಓರೆನೋಟ ಬೀರುತ್ತಿರುವ ಹೆಣ್ಣಿನ ಮೊಗವೆಂಬಂತೆ ಅವಲೋಕಿಸಿ ಆ ನೀರನ್ನು ಪಾನ ಮಾಡಲು ಬಯಸಿದವನಾಗಿ ಜೋರಾಗಿ ಒಮ್ಮೆ ಗರ್ಜಿಸಿ ನಿಧಾನಕ್ಕೆ ಪಾನಮಾಡು. ಇಲ್ಲಿ ನದಿಯ ಬಾಗಿದ ಅಲೆಗಳು ಕಾಮಿನಿಯ ಬಾಗಿದ ಹುಬ್ಬನ್ನು ಹೋಲುತ್ತವೆ. ಆ ಅಲೆಗಳು ಅತ್ತಿತ್ತ ಗಾಳಿಗೆ ಸುತ್ತಾಡುವುದು ಲಲನೆಯ ಕೇಶಗಳು ಸುತ್ತಾಡುವಂತಿದೆ. ಅಲೆಗಳ ಕೊನೆ ಅಂದರೆ ತೀರದ ಸಮೀಪ ಅವಳ ಮೊಗ. ಮಧುರ ಜಲವನ್ನು ಸರಸರ ಪಾನಮಾಡುವುದು ಕಾಮಿನಿಯ ಅಧರವನ್ನು ಪಾನಮಾಡಿದಂತೆ. ನೀರನ್ನು ಪಾನ ಮಾಡುವಾಗ ಅಲೆಗಳು ಚೆಲ್ಲಾಪಿಲ್ಲಿಯಾಗುವ ರೀತಿ ಚುಂಬನ ಕಾಲದಲ್ಲಿ ಅಧರಕ್ಷತದಿಂದ ಕುಪಿತಳಾದ ಹುಬ್ಬುಗಂಟಿಕ್ಕಿದ ಕಾಮುನಿಯ ಮೊಗ. ಆಗ ಸ್ವಲ್ಪ ಬಾಗಿ ಅಂದರೆ ಮೋಡವು ಸಮೀಪಕ್ಕೆ ಬಂದು ನೀರು ಹೀರಿಕೊಳ್ಳುವ ರೀತಿ, ಅದು ಅವಳ ಸಮಾಧಾನಕ್ಕೆ ಒಂದು ಸಲ ಮಾತನಾಡಿಸುವಂತೆ ಗರ್ಜಿಸಿ ಅಧರ ಪಾನವನ್ನು ಮತ್ತೆ ಮುಂದುವರೆಸುತ್ತಾ , ಚತುರನಾದ ಕಾಮುಕನು ಪ್ರಿಯಳನ್ನು ಮಾತನಾಡಿಸಿ ಬರಸೆಳೆದು ಮಧುರ ಮಾತಿನಿಂದ ( ಗುಡುಗಿನಿಂದ) ಚುಂಬನದ ಸಂತೋಷವನ್ನು ಅನುಭವಿಸುವಂತೆ ನೀನು ರಸಿಕತನದ ಸಂಪೂರ್ಣ ಫಲವನ್ನು ಪಡೆಯುವೆ. ಹಾಗಾಗಿ ನೇರ ಹೋಗದೇ ವೇತ್ರಾಳನ್ನು ಭೇಟಿಯಾಗಿ ನೀನು ತುಂಬಿಕೊಂಡೇ ಹೋಗು.ಕವಿಗೆ ಪ್ರಕೃತಿಯ ಪ್ರತಿ ದೃಶ್ಯವೂ ಸುಂದರವೇ. ರಸಿಕನಿಗೆ ಕಂಡಲ್ಲೆಲ್ಲ ರಸ ಕಂಡುಬರುವುದೆಂಬ ನುಡಿ ಕಾಳಿದಾಸನಿಗೆ ಅನ್ವರ್ಥವಾಗಿದೆ._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩