🌹 ಮೇಘದೂತದ ಒಂದು ಮಧುಬಿಂದು 🌹

*वक्र: पन्था यदपि भवत: प्रस्थितस्योत्तराशां सौधौत्सङ्गप्रणयविमुखो मा स्म भूरुज्जयिन्या: । विद्युद्दामस्फुरितचकितैस्तत्र पौराङ्गनानां लोलापाङ्गैर्यदि न रमसे लोचनैर्वञ्चितोसि ।।*

_ಎಲೈ ಸಖನೇ, ಉತ್ತರದಿಕ್ಕಿನಲ್ಲಿ ಹೊರಟಿರುವ ನಿನಗೆ ಮಾರ್ಗವು ಸುತ್ತುಬಳಸಿ ಹೋಗುವ ರೀತಿಯೆಂದು ಕಾಣಿಸಿದರೂ ಹಾಗೆಯೇ ಹೋಗು. ಏಕೆಂದರೆ ಆ ದಾರಿಯಲ್ಲಿ ಕಾಣಸಿಗುವ ಉಜ್ಜಯಿನೀ ನಗರದ ಉನ್ನತ ವಾದ ಭವನಗಳ ಮೇಲ್ಭಾಗದಲ್ಲಿ ಮಾನಿನಿಯರ ಸ್ನೇಹದಿಂದ ವಿರಹಿತನಾಗದಿರು. ನೀನು ಮಿಂಚು ಕಾಣಿಸಿದಾಗ ಆ ಮಿಂಚಿನ ಬಳ್ಳಿಯಿಂದ ಅಥವಾ ಅಕಸ್ಮಾತ್ತಾಗಿ ಕಾಣಿಸಿಕೊಂಡ ಮಿಂಚಿನ ರೇಖೆಯಿಂದ ಭಯ ಹಾಗೂ ಆಶ್ಚರ್ಯದಿಂದ ಕೂಡಿರುವ ಅತ್ಯಂತ ಚಂಚಲವಾದ ನೋಟದಿಂದ ಕೂಡಿರುವ ಆ ನಗರದ ಮುದ್ದು ಮುದ್ದಾದ ಅತ್ತಿತ್ತ ಓಲಾಡುತ್ತಿರುವ ಸ್ತ್ರೀಯರ ಕಣ್ಣುಗಳಿಂದ ನೀನು ವಿಹರಿಸದಿದ್ದಲ್ಲಿ ನಿನ್ನ ಜನ್ಮವು ವ್ಯರ್ಥವಾದೀತು._

_ಉಜ್ಜಯಿನಿಯ ಮಹಿಳೆಯರು ಸ್ವಭಾವ ಸುಂದರಿಯರು. ಅವರು ಬಟ್ಟೆ ಒಣಗಹಾಕಲೆಂದೋ ಅಥವಾ ಸಂಡಿಗೆ ಮುಂತಾದವುಗಳನ್ನು ಒಣಗಿಸಲೆಂದೋ ಅಥವಾ ತಂಗಾಳಿ ಸೇವಿಸಲೆಂದೋ ಅಥವಾ ಪ್ರಿಯನ ಮುಖಕಮಲ ಕಾಣಸಿಗುವುದೆಂದೋ ಉಪ್ಪರಿಗೆಯ ಮೇಲೆ ಬಂದಿರುತ್ತಾರೆ. ನೀನು ನೇರವಾಗಿ ಹೋದರೆ ಆ ನಗರ ಸಿಗಲಾರದು. ಸುತ್ತು ಬಳಸಿ ಹೋಗುವುದೆಂದೆನಿಸದರೂ ಅವರ ಆ ಒಂದು ಕಣ್ಣೋಟವನ್ನು ಅನುಭವಿಸಲಿಕ್ಕಾದರೂ ಉಜ್ಜಯಿನಿಯ ಕಡೆಗೆ ತೆರಳು. ನಿನ್ನ ಆಗಮನವಾಗುತ್ತಿದ್ದಂತೆ ಮಳೆಯ ಪೂರ್ವದಲ್ಲಿ ಮಿಂಚು ಕಾಣಿಸಿಕೊಳ್ಳುವುದು. ಆ ಮಿಂಚಿನ ಸಂಚಾರದಿಂದ ಭಯಚಕಿತರಾಗಿ ಮೊದಲೇ ಚಂಚಲವಾದ ಆ ನಳಿನಾಕ್ಷಿಯರ ಅಕ್ಷಿಗಳು ಮತ್ತಷ್ಟು ಚಂಚಲವಾಗಿ ತೊಯ್ದಾಡುವ ಹಾಗೆಯೇ ನಿನ್ನೆಡೆಗೆ  ಬೀರುವ ಓರೆನೋಟವನ್ನು ಕಂಡು ಸುಖಿಸುತ್ತಾ ಮಾರ್ಗಾಯಾಸವನ್ನು ಅದೊಂದು ಕಣ್ಣೋಟದಿಂದ ಪರಿಹರಿಸಿಕೊಂಡು ಅಷ್ಟು ಕಾಲ ಕಣ್ಣಿನ ಮೂಲಕ ಅವರೊಡನೆ ಸಂಬಂಧ ಬೆಳೆಸಿದವನಾಗಿ ಸುಖಿಸುವೆ._

_*ಕಣ್ಣಿನ ನೋಟಗಳು ಕೋಲ್ ಮಿಂಚಿನ ಬಾಣಗಳು* ಎಂಬ ಕನ್ನಡದ ಒಂದು ಪದ್ಯ ಇಲ್ಲಿ ಹಿಂದು ಮುಂದಾಗಿದೆ. ಮಿಂಚಿನ ಬಾಣ ಮೊದಲಿಗೆ ಅನಂತರ ಕಣ್ಣೋಟಗಳು. ಅದನ್ನು ತಪ್ಪಿಸಿಕೊಳ್ಳದಿರು ಎಂಬ ಭಾವ._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩