📙 ವೇದ- ಧರ್ಮ ಭಾಗ-೧೩

*ವೇದದ ಬ್ರಾಹ್ಮಣಗಳು*

ಸಾಮವೇದದ ಬ್ರಾಹ್ಮಣಗಳು

*ತಾಂಡ್ಯ* ಬ್ರಾಹ್ಮಣ. ೨೫ ಅಧ್ಯಾಯಗಳಿಂದ ಕೂಡಿರುವ ಇದನ್ನು ಪಂಚವಿಂಶ ಬ್ರಾಹ್ಮಣ ಎಂದೂ ಕರೆಯುತ್ತಾರೆ. ಎಲ್ಲಾ ಬ್ರಾಹ್ಮಣಗಳಿಗಿಂತ ಬೃಹತ್ತಾದ ಕಾರಣ *ಮಹಾಬ್ರಾಹ್ಮಣ* ಎಂದೂ ಹೆಸರಿದೆ. ವಿಷಯಪ್ರತಿಪಾದನೆಯಲ್ಲಿರುವ ವಿಭಿನ್ನತೆ ಇಲ್ಲೂ ಕಂಡುಬರುತ್ತದೆ. *ವೀಂಕ* ಎಂಬ ಸಾಮದ ಸಹಾಯದಿಂದ ಚ್ಯವನನು ಕಾಯಕಲ್ಪ ಪಡೆದ ಕಥೆ( ಅಶ್ವಿನೀ ದೇವತೆಗಳ ಉಪದೇಶ ಇರಬಹುದು) , ಹಾಗೆಯೇ *ವಾತ್ಸ* ಎಂಬ ಸಾಮದ ಮಹತ್ವ ಹಾಗೂ ಅದರ ಕಥೆಯೂ ಹೇಳಲ್ಪಟ್ಟಿದೆ. ಈ ಸಾಮದಲ್ಲಿ ವತ್ಸ ಮತ್ತು ಮೇಧಾತಿಥಿ ಎಂಬ ಇಬ್ಬರು ಕಣ್ವ ಗೋತ್ರದ ಋಷಿಗಳ ಕಥೆ ಇದೆ. ಮೇಧಾತಿಥಿಯು ವತ್ಸನಿಗೆ ಶೂದ್ರಪುತ್ರ, ಅಬ್ರಾಹ್ಮಣ ಎಂದೆಲ್ಲಾ ನಿಂದಿಸುತ್ತಾನೆ. ವತ್ಸನು ಇದನ್ನು ನಿರ್ಣಯಿಸಲು ವಾತ್ಸವೆಂಬ ಸಾಮ ಹಾಡಿ ಅವನನ್ನು ನಿರಾಕರಿಸುತ್ತಾನೆ. ಹಾಡುತ್ತಾ ಅಗ್ನಿ ಪ್ರವೇಶಿಸಿದರೂ ವತ್ಸನಿಗೆ ಅಗ್ನಿ ತಂಪನ್ನೇ ಉಂಟುಮಾಡುತ್ತಾನೆ. ಮೇಧಾತಿಥಿಯು ಇನ್ನೊಂದು ಸಾಮ ಹಾಡಿ ಪ್ರವೇಶಿಸಲು ಪ್ರಯತ್ನಿಸುವಾಗ ಅವನಿಗೆ ಬೆಂಕಿಯ ಅನುಭವವಾಗಿ ಶರಣಾಗುತ್ತಾನೆ. ಹೀಗೆ ಕುಲ ಗೋತ್ರ ಯಾವುದಿದ್ದರೂ ಜ್ಞಾನ ಮಾರ್ಗದಿಂದ ಶ್ರೇಷ್ಠತ್ವ ನಿರ್ಣಯಿಸುವ ಕಥೆ ವೇದದ ಮಹತ್ವ ತಿಳಿಸುತ್ತದೆ. ಈ ಕಾರಣದಿಂದ ಈ ಸಾಮಕ್ಕೆ  *ಕಾಮಸನಿ* ಎಂದರೆ ಬಯಸಿದ್ದನ್ನು ನೀಡುವುದು ಎಂಬ ಹೆಸರೂ ಇದೆ.

*ಷಡ್ವಿಂಶ ಬ್ರಾಹ್ಮಣ* ಆರು ಅಧ್ಯಾಯಗಳ ಬ್ರಾಹ್ಮಣ. ಆರನೇ ಅಧ್ಯಾಯದಲ್ಲಿ ವಿಶಿಷ್ಟ ವಿಷಯಗಳ ಚರ್ಚೆ ನಡೆಯುವ ಕಾರಣ ಇದನ್ನು ತಾಂಡ್ಯದ ಮುಂದುವರೆದ ಭಾಗ ಎಂದು ಕರೆಯುತ್ತಾರೆ. ಅಲ್ಲಿ ಇಪ್ಪತ್ತೈದು ಆದರೆ ಇದನ್ನು ಇಪ್ಪತ್ತಾರನೆಯ ಅಥವಾ ಷಡ್ವಿಂಶ ಎಂದು ಕರೆದಿರುವುದು. ಇಲ್ಲಿ ಪ್ರಕೃತಿ ವಿಕೋಪಗಳ ನಿವಾರಣೆ, ಕಾನೂಗಳಲ್ಲಿನ ವಾದ-ವಿವಾದಗಳು ಹಾಗೂ ವಿಚಾರಣೆ ಮತ್ತು ಶಿಕ್ಷೆ ಕೊಡುವ ಬಗೆಗಳು, ಅಂಗಾಂಗಗಳ ನಾಶ ಆದಾಗ  ಸಾವು ತಡೆಯಲು ಅನುಸರಿಸಬೇಕಾದ ಮಾರ್ಗಗಳು, ಹಾಗೆಯೇ ಬೇರೆ ಬೇರೆ ಅನಿಷ್ಟಗಳಿಂದ ಪರಿಹಾರ ಹೇಗೆ ಪಡೆಯುವುದು ಇತ್ಯಾದಿ ವಿವರಿಸಿದ್ದಾರೆ.

*ಸಾಮವಿಧಾನ ಬ್ರಾಹ್ಮಣ*
ಇದರಲ್ಲಿ ಮೂರು ಅಧ್ಯಾಯಗಳಿವೆ. ಬ್ರಹ್ಮನ ಸೃಷ್ಟಿಕ್ರಮ ಜೀವಿಗಳ ಆಹಾರದ ಬಗೆಗಳನ್ನು ಹೇಳಲಾಗಿದೆ. *ಕ್ರುಷ್ಟ, ಪ್ರಥಮ, ದ್ವಿತೀಯ, ತೃತೀಯ, ಚತುರ್ಥ, ಮಂದ, ಅತಿಸ್ವರ* ಎಂಬ ಏಳು ಸ್ವರಗಳನ್ನು ಕ್ರಮವಾಗಿ ದೇವ, ಮಾನವ, ಪಶು ಗಂಧರ್ವ, ಅಪ್ಸರೆ, ಪಿತೃಗಳು ಹಾಗೂ ಪಕ್ಷಿಗಳು, ಅಸುರರು ಹಾಗೂ ಜಡವಸ್ತುಗಳನ್ನು ತೃಪ್ತಿಪಡಿಸುವ ಇಷ್ಟಗಳನ್ನು ಪಡೆಯುವ ಬಗೆ ವಿವರಿಸಲಾಗಿದೆ.

*ಆರ್ಷೇಯ ಬ್ರಾಹ್ಮಣ*
ಮಂತ್ರದೃಷ್ಟಾರರಾದ ಋಷಿಗಳ ಹೆಸರಿಗನುಗುಣವಾಗಿ ಸಾಮವು ಇಲ್ಲಿ ಹೇಳಲ್ಪಟ್ಟಿದೆ. ಇದರಲ್ಲಿ ಆರು ಅಧ್ಯಾಯಗಳಿವೆ.

*ಛಾಂದೋಗ್ಯ ಬ್ರಾಹ್ಮಣ*
ಇದು ಹತ್ತು ಪ್ರಪಾಠಕಗಳಲ್ಲಿದೆ. ಮೊದಲ ಎರಡು ಪ್ರಪಾಠಕಗಳಲ್ಲಿ ವಿವಾಹಸಂಬಂಧಿ ಮಂತ್ರಗಳೂ, ಉಳಿದ ಎಂಟು ಪ್ರಪಾಠಕಗಳಲ್ಲಿ ಉಪನಿಷತ್ ಇದೆ. ಸಂಹಿತೆಯಲ್ಲೂ ಬ್ರಾಹ್ಮಣಗಳಲ್ಲೂ ಆರಣ್ಯಕದ ಕೊನೆಯಲ್ಲಿ ಉಪನಿಷತ್ ಗಳು ಕಂಡುಬರುವ ಕಾರಣ ಅವು ಕೊನೆ ಭಾಗಗಳಲ್ಲ. ಅಥವಾ ಪಾಶ್ಚಿಮಾತ್ಯ ಚಿಂತಕರ ಮತದಂತೆ ವೇದೋತ್ತರ ಕಾಲದಲ್ಲಿ ರಚಿತವಾದವುಗಳಲ್ಲ. ಅವೂ ವೇದದ ಮುಖ್ಯ ಭಾಗ ಎಂದು ನುಡಿಯುವುದು ಸರಿ ಎನಿಸುವುದು. ಸ್ವರವೇ ಸಾಮದ ಅತ್ಮ ಎಂದು ಇಲ್ಲಿ ವರ್ಣಿಸಲಾಗಿದೆ. ದೇವತೆಗಳು ಅಮೃತ/ಸೋಮ ಪಾನ ಮಾಡುವ ಸಮಯದೊಳು ಯಾವ ಸಾಮ ಹಾಡಬೇಕು, ಜೀವಿಗಳಿಗೆ ಅಹಾರಾಭಾವ ಉಂಟಾದಾಗ ಯಾವ ಸಾಮ ಆಹಾರವಾಗಿ ಪ್ರಯೋಜನಕಾರಿ, ಸ್ವರ್ಗಕಾಮಿಯಾದ ನರನಿಗೆ ಯಾವ ಸಾಮ ಸ್ವರ್ಗದಾಯಕ , ಸಂಪತ್ತು ಹೆಚ್ಚಿಸಿಕೊಳ್ಳಲು ಯಾವ ಸಾಮ ಸೂಕ್ತ ಎಂದೆಲ್ಲಾ ವಿವರಿಸುವುದು ಈ ಬ್ರಾಹ್ಮಣ.

*ವಂಶ ಹಾಗೂ ದೈವತ ಬ್ರಾಹ್ಮಣ*
ಸಾಮವೇದದ ಅಧ್ಯಯನ ಪರಂಪರೆಯನ್ನು ಇದು ತಿಳಿಸುತ್ತದೆ. ನಿಧನವೆಂಬ ಸಾಮದ ಇನ್ನೊಂದು ರೂಪ ಇಲ್ಲಿ ನಿರೂಪಿತವಾಗಿದೆ.

*ಸಂಹಿತೋಪನಿಷತ್ ಬ್ರಾಹ್ಮಣ*
ಐದು ಖಂಡಗಳಲ್ಲಿ ಇದೆ. ರಥಂತರ ಸಾಮದ ಗಾಯನದಲ್ಲಿ ತಪ್ಪುಗಳನ್ನು ಸರಿಪಡಿಸಲು ಇದರ ಅಧ್ಯಯನ ಅವಶ್ಯಕ. ಈ ಸಾಮವನ್ನು ಭಿನ್ನ ಭಿನ್ನ ಸ್ವರಗಳಲ್ಲಿ ಹಾಡಿದಾಗ ಭಿನ್ನ ಭಿನ್ನ ಫಲಗಳು ದೊರಕುವುದೂ ಇದರ ಉದ್ದೇಶ. ಹೀಗೆ ಸಾಮವೇದದಲ್ಲಿ ಅನೇಕ ಬ್ರಾಹ್ಮಣಗಳಿವೆ.


📙 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩