🌾📗🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೪

*ಯಸ್ಯ ಸತ್ವಸ್ಯ ಯಾ ಯೋನಿಸ್ತಸ್ಯಾಂ ತತ್ಪರಿಮಾರ್ಗ್ಯತೇ. ನ ಶಕ್ಯಾ ಪ್ರಮದಾ ನಷ್ಟಾ ಮೃಗೀಷು ಪರಿಮಾರ್ಗಿತುಮ್*

ಹನುಮಂತ ಸೀತೆಯನ್ನು ಎಲ್ಲೆಡೆ ಹುಡುಕುತ್ತಿರುವಾಗ ಹೇಳುವ ಮಾತು. ನಮ್ಮನ್ನು ಕುರಿತೇ ಹೇಳಿದಂತಿದೆ. ತಪ್ಪಿಸಿಕೊಂಡು ಹೋದ ಒಂದು ಪ್ರಾಣಿಯನ್ನು ಆ ಜಾತಿಯ ಪ್ರಾಣಿಗಳ ಗುಂಪಲ್ಲೆ ಹುಡುಕಬೇಕೇ ಹೊರತು ಬೇರೆಡೆಯಲ್ಲ. ಹಸು ತಪ್ಪಿಸಿಕೊಂಡರೆ ಹಸುಗಳೆಡೆಯಲ್ಲಿ, ಜಿಂಕೆ ತಪ್ಪಿಸಿಕೊಂಡರೆ ಜಿಂಕೆಗಳ ಮಧ್ಯೆ ಹುಡುಕಬೇಕೇ ಹೊರತು ಮೊಲಗಳ ನಡುವೆ ಅಲ್ಲ. ಹಾಗಾಗಿ ಸ್ತ್ರೀಯರ ಸಮೂಹದಲ್ಲೇ ಸೀತೆಯ ಅನ್ವೇಷಣೆ ಸರಿಯಾದುದು ಎನ್ನುವ ಮಾತು. ನಾವೂ ಎಲ್ಲಿ  ತಪ್ಪು ಮಾಡುತ್ತೇವೆಯೋ ಅಲ್ಲಿ ಸರಿ ಮಾಡಿಕೊಳ್ಳದೇ ಬೇರೆ ಏನು ಮಾಡಿದರೂ ಫಲವಿದೆಯೇ! ವೈಫಲ್ಯ ಹೊಂದಿದಲ್ಲೇ ಮತ್ತೆ ಮತ್ತೆ ಫಲಾನ್ವೇಷಣೆ ನಡೆಸಿದರೆ ಯಶಸ್ವಿಯಾಗಬಹುದು. ಇನ್ನೊಂದು ರೀತಿಯಲ್ಲಿಯಾದರೆ ತಪ್ಪನ್ನು ಬೇರೆಡೆ ಹುಡುಕುವ ನಾವು ನಮ್ಮ ತಪ್ಪುಗಳನ್ನು ಮರೆತೇ ಬಿಡುತ್ತವೆ. ನಮ್ಮಲ್ಲೆ ಮೊದಲು ಹುಡುಕಿ ಸರಿ ಮಾಡುತ್ತಾ ಬಂದರೆ ಯಶಸ್ಸು ಸುಲಭವಾಗುವುದಲ್ಲವೇ!

*ಅನಿರ್ವೇದ: ಶ್ರಿಯೋ ಮೂಲಮ್ ಅನಿರ್ವೇದ: ಪರಂ ಸುಖಮ್* ಕಳವಳಗೊಳ್ಳದೇ ಉತ್ಸಾಹಿತನಾಗಿರುವುದೇ ಶ್ರೇಯಸ್ಸಿನ ಪರಮ ಸಾಧನ. ಅದೇ ಸುಖಕ್ಕೂ ಹೇತುವಾಗಿದೆ. ಸಿಗಲಿಲ್ಲವೆಂದು ಧೈರ್ಯಗೆಡದೆ ಕಳವಳಪಡದೆ ಹಿಂದಿರುಗದೇ ಮರಳಿ ಯತ್ನವ ಮಾಡು ಎಂಬಂತೆ ಉತ್ಸಾಹದಿಂದ ಕಾರ್ಯದಲ್ಲಿ ತೊಡಗುವುದೇ ಯಶಸ್ಸಿನ ಮೂಲ ಕಾರಣ. ಸೀತೆ ಬಹಳ ಕಾಲದ ಹುಡುಕಾಟದ ನಂತರವೂ ಸಿಗದೆ ನಿರಾಶೆ ಆವರಿಸಿದಾಗ ಹನುಮನ ಮಾತು.ನಾವೂ ನಮ್ಮ ಎಂತಹ ಪರಿಸ್ಥಿತಿಯಲ್ಲೂ ಕಳವಳ ಪಡದೆ ಕವಳ ಪಡೆಯುವ ಬಗೆ ಯೋಚಿಸೋಣ.( ಕವಳ=ಅಹಾರ)

*ಅನಿರ್ವೇದೊ ಹಿ ಸತತಂ ಸರ್ವಾರ್ಥೇಷು ಪ್ರವರ್ತಕ: ಕರೋತಿ ಸಫಲಂ ಜಂತೋ: ಕರ್ಮ ಯಚ್ಚ ಕರೋತಿ ಸ:*
ಇದೂ ಅದೇ ಸಂದರ್ಭದಲ್ಲಿ ಬಂದ ಮಾತು. ಉತ್ಸಾಹವೆಂಬುದೇ ಮನುಷ್ಯನನ್ನು ಯಾವಾಗಲೂ ಕಾರ್ಯಗಳಲ್ಲಿ ಪ್ರವರ್ತಿಸುವಂತೆ ಮಾಡುವುದು. ಪ್ರಯತ್ನದಲ್ಲಿ ನಿರಾಶನಾಗದಿರುವುದು ಪ್ರಾರಂಭಿಸಿದ ಕಾರ್ಯವನ್ನು ಕೊನೆಗೊಳಿಸಲು ಸಾಧ್ಯ ಮಾಡುವುದು. ಹೀಗಾಗಿ ನಮ್ಮ ಚಿಕ್ಕ ಪುಟ್ಟ ಕೆಲಸಗಳಿಂದ ಬೆಟ್ಟ ಹತ್ತುವ ಕೆಲಸಗಳಾದರೂ ಉತ್ಸಾಹ ಒಂದೇ ರೀತಿ ಇರಲಿ.

ಮುಂದುವರಿಯುವುದು....

📗ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩