🌹ಮೇಘದೂತದ ಒಂದು ಮಧುಬಿಂದು 🌹

*तस्मिन् काले नयनसलिलं योषितां खण्डितानां शान्तिं नेयं प्रणयिभिरतो वर्त्म भानोस्त्यजाशु । प्रालेयास्रं कमलवदनात्सोपि हर्तुं नलिन्या: प्रत्यावृत्तस्त्वयि कररुधि स्यादनल्पाभ्यसूय: ।।*

_ಹೇ ಮಿತ್ರನೇ, ನೀನು ಮರುದಿನ ದಿನಕರನ ದಾರಿಯನ್ನು ಮುಚ್ಚಬೇಡ.  ಪ್ರಿಯತಮರ ಸಂಗದಿಂದ ವಂಚಿತರಾದ ಮಾನಿನಿಯರು ಕಣ್ಣೀರು ಸುರಿಸುತ್ತಾ ಸಮಯ ವೀಕ್ಷಿಸುತ್ತಾರೆ. ಸೂರ್ಯೋದಯವಾದೊಡನೆ ಎಲ್ಲವನ್ನೂ ಮರೆತು ತಮ್ಮ ತಮ್ಮ ಕೃತ್ಯಗಳನ್ನು ಕೈಗೊಳ್ಳುವರು. ಹಾಗಾಗಿ ಸೂರ್ಯನಿಗೆ ಬೆಳಗಲು ಅನುವು ಮಾಡಿಕೊಡು. ಹೀಗೆ ಅವರ ಕಣ್ಣೀರು ಒರೆಸುವ ಕೆಲಸದಲ್ಲಿ ಭಾಗಿಯಾಗು. ಆ ಸೂರ್ಯನೂ ಅದೇ ಸಮಯದಲ್ಲಿ ತನ್ನ ಕಾಂತೆಯಾದ ತಾವರೆಯ ದಂಟಿನ ಕೊನೆಯಲ್ಲಿ ಇರುವ ಕಮಲವೆಂಬ ಮುಖದ ಹಿಮವೆಂಬ ಕಣ್ಣೀರನ್ನು ಹೋಗಲಾಡಿಸಲು ಮರಳಿ ಬಂದಿರುತ್ತಾನೆ. ಆಗ ನೀನು ಒಂದು ವೇಳೆ ಅವನ ಕಿರಣವೆಂಬ ಕೈಯನ್ನು ತಡೆದರೆ ಮನದರಸಿಯ ಕಣ್ಣೀರು ಒರೆಸದೆ ಸೂರ್ಯನು ಕೋಪಗೊಳ್ಳುವನು._

_ಕವಿ ಪ್ರಕೃತಿ ಸಹಜ ದೃಶ್ಯಗಳನ್ನೇ ಸುಂದರವಾಗಿ ರೂಪಿಸಿದ್ದಾನೆ. ಪತಿಗಳು ಕಾರ್ಯ ನಿಮಿತ್ತವೋ, ಅಥವಾ ಪರಸತಿಯರ ಸಂಬಂಧ ನಿಮಿತ್ತವೋ ರಾತ್ರಿ ಮನೆಗೆ ಬಾರದೇ ಬೆಳಗಿನ ಜಾವ ಬಂದಾಗ ಮಾನಿನಿಯರು ಕೋಪಗೊಳ್ಳುವರು. ಆಗ ಅವರನ್ನು ಪತಿಯಂದಿರು ಸಮಾಧಾನ ಮಾಡಿ ಸೂರ್ಯ ಬರುವ ಹೊತ್ತಾಯಿತು ಬೇಗ ಉಳಿದ ಕಾರ್ಯಗಳಲ್ಲಿ ರತಳಾಗು ಎಂದು ಅನುನಯಿಸುತ್ತಾರೆ, ವಿಷಯಾಂತರ ಮಾಡಿ ಸಮಾಧಾನಿಸುತ್ತಾರೆ. ನೀನು ಸೂರ್ಯನಿಗೆ ಅಡ್ಡವಾಗಿ ನಿಂತರೆ ಬೆಳಕಾಗದೇ ಅವರ ಮುಖದ ಬೆಳಕು ಕಾಣದು. ಹಾಗಾಗಿ ಭಾನುವಿನ ದಾರಿಗೆ ತಡೆ ಒಡ್ಡದಿರು. ಇದೊಂದೇ ಕಾರಣವಲ್ಲ. ರವಿಯೂ ತನ್ನ ಮನದನ್ನೆಯಾದ ಪದ್ಮಿನೀಲತೆಯ ತುದಿಗೆ ಅಂಟಿರುವ ಕಮಲಿಯ ಮೇಲಿರುವ ಹಿಮವೆಂಬ ಕಣ್ಣೀರನ್ನು ಒರೆಸಲು ಪ್ರಿಯಳ ಮುಖಕಮಲ ಅರಳಿಸಲು ತನ್ಮೂಲಕ ಕೃತಾರ್ಥನಾಗಲು ಕಾತರನಾಗಿರುವನು. ನೀನು ಅಡ್ಡ ಬಂದರೆ ಅವನ ಕೋಪಕ್ಕೂ ಗುರಿಯಾಗುವೆ. ಸೂರ್ಯೋದಯದಿ ಸಹಜವಾಗಿ ಅರಳುವ ಕಮಲಗಳು, ರಾತ್ರಿಯೆಲ್ಲಾ ಅವುಗಳ ಮೇಲೆ ಚೆಲ್ಲಿರುವ ಮಂಜು ಇದನ್ನೇ ಇಟ್ಟುಕೊಂಡು ಕವಿ ಅದ್ಭುತ ಕಲ್ಪನೆಯಲ್ಲಿ ವರ್ಣಿಸಿದ್ದಾನೆ._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩