🌹ಮೇಘದೂತದ ಒಂದು ಬಿಂದು 🌹

*गच्छन्तीनां रमणवसतिं योषितां तत्र न्यक्तं रुद्धालोके नरपतिपथे सूचिभेद्यैस्तमोभि: । सौदामन्या कनकनिकषस्निग्धया दर्शयोर्वीं तोयोत्सर्गस्तनितमुखरो मा च भूर्विक्लवास्ता: ।।*

_ಎಲೈ ಮೇಘವೇ, ಉಜ್ಜಯಿನಿ ನಗರದಲ್ಲಿ ತಿರುಗುತ್ತಾ ರಾತ್ರಿಯಲ್ಲಿ ಗುಪ್ತವಾಗಿ ಪ್ರಿಯನ ಮನೆಗೆ ಹೊರಟಿರುವ ಸ್ತ್ರೀಯರ ದಾರಿಯನ್ನು ಬೆಳಗಿಸು. ಅತಿ ನಿಬಿಡವಾದ ಕತ್ತಲಲ್ಲಿ ಅವರಿಗೆ ಯಾವ ಕಡೆ ಹೋಗಬೇಕೆಂದು ಗೊತ್ತಾಗದೆ ಚಡಪಡಿಸುತ್ತಿರುವಾಗ ಒಂದು ಸಲ ಮಿಂಚು ಕಾಣಿಸಿ ಬೆಳಗಿಸು. ರಾಜಮಾರ್ಗದಲ್ಲಿ ಅಪ್ಪಟ ಬಂಗಾರದ ರೇಖೆಯಂದದಿ ಮನೋಹರವಾದ ಸೌದಾಮಿನಿಯಿಂದ ಭೂ ದಾರಿಯನ್ನು ತೋರಿಸು. ಅಷ್ಟು ಮಾತ್ರ ಮಾಡು. ಅವರನ್ನು ನೋಡಿದ ಹುಮ್ಮಸ್ಸಿನಲ್ಲಿ ಮಳೆ ಸುರಿಸುವುದನ್ನೊ ಅಥವಾ ಗುಡುಗುವುದನ್ನೋ ಮಾಡಿ ಹೆದರಿಕೆ ಹುಟ್ಟಿಸಬೇಡ. ಅವರು ತುಂಬಾ ಭೀರುಸ್ವಭಾವದವರು. ಮಿಂಚಿಗೆ ಹೆದರಿದರೂ ದಾರಿ ತಿಳಿದು ಬೇಗ ಬೇಗ ಸಾಗುವರು. ಮಳೆ ಸುರಿಸಿದರೆ ಹೋಗಲು ಸಾಧ್ಯವಾಗದೆ ನಿರಾಸೆ ಉಂಟಾಗಬಹುದು. ಗುಡುಗಂತೂ ಬೇಡವೇಬೇಡ. ಗುಡುಗಿಗೆ ಹೆದರಿ ನಡುಗಬಹುದು ಅಥವಾ ಹಿಂತಿರುಗಬಹುದು. ನಾವೂ ಕೇವಲ ಮಿಂಚಿಗೆ ಭಯ ಪಡದೇ ಗುಡುಗಿನ ಧ್ವನಿಗೆ ಬೆದರುತ್ತೇವೆ. ಅದನ್ನೇ ಕವಿ ಇಲ್ಲಿ ಹೇಳಿದ್ದಾನೆ. ನಿನ್ನ ಮಿಂಚಿನಿಂದ ದಾರಿ ತಿಳಿದ ಅವರು ಪ್ರಿಯರನ್ನು ಸೇರಿ ಮನಸಾರೆ ನಿನ್ನನ್ನು ಹರಸುವರು. ಹಾಗಾಗಿ ಮಾರ್ಗಕ್ರಮಣದ ಮನರಂಜನೆಗಾಗಿ ಹೀಗೆಲ್ಲಾ ಮಾಡುತ್ತಾ ಉಳಿದವರನ್ನು ಸಂತೋಷಿಸುತ್ತಾ ನೀನು ಪುಳಕಿತನಾಗುತ್ತಾ ಮುಂದುವರೆ. ಸೂಚಿಭೇದ್ಯೈಃ ಎಂದು ಸೂಜಿಯೂ ಭೇದಿಸಲು ಕಷ್ಟವಾದ ಗಾಢಾಂಧಕಾರ ಎಂದಿದ್ದಾರೆ. ಮಿಂಚು ಒಂದು ಕ್ಷಣದಲ್ಲಿ ಮರೆಯಾದಾಗ ಬಂಗಾರದ ರೇಖೆ ಪ್ರಕೃತಿಯ ಕಂಠದಲ್ಲಿ ಕಾಣಿಸಿಕೊಂಡಿತೇನೋ ಎಂಬ  ಕಲ್ಪನೆ ಕವಿ ಧ್ವನಿಸಿದ್ದಾನೆ.

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩