🌾📗ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು📗🌾
ಭಾಗ-೮

*ಸರ್ವತ್ರಾತಿಕೃತಂ ಭದ್ರೇ ವ್ಯಸನಾಯ ಉಪಕಲ್ಪತೇ*

ಸೀತೆಗೆ ರಾಕ್ಷಸಿಯರು ನುಡಿಯುವ ಮಾತು. ನೀನು ಪತಿಯ ಮೇಲೆ ತೋರುವ ಅತಿಯಾದ ಪ್ರೀತಿಯೇ ನಿನ್ನ ದುಃಖಕ್ಕೆ ಕಾರಣವಾಗುವುದು.

ಪತ್ನಿ ಪತಿಯರಲ್ಲಿ ಪರಸ್ಪರ ಎಷ್ಟು ಪ್ರೀತಿ ಇದ್ದರೂ ಅದು ಅತಿಯಾಗಲಾರದು. ಹಾಗಾಗಿ ಸೀತೆಗೆ ಈ ಮಾತು ಅನ್ವಯಿಸಲಾರದು.ನಮಗೆ ಬೇಕಾದಷ್ಟು ಅನ್ವಯಿಸುವುದು. ಎಲ್ಲೆಡೆ ಅತಿನಿದ್ರೆ ಅತಿಕಾಮ ಅತಿಸೇವನೆ( ತಿನ್ನುವುದು,ಕುಡಿಯುವುದು) ಅತಿ ವಿನಯ ಮುಂತಾದವುಗಳು ಒಳ್ಳೆಯದಲ್ಲ. ಅವೆಲ್ಲ ವ್ಯಸನಕ್ಕೆ ಕಾರಣವಾಗುವುದು. ಕನ್ನಡದ ವ್ಯಸನ ಅಲ್ಲ ದುಃಖ ಎಂಬ ಅರ್ಥದ ವ್ಯಸನ. *ಅತಿ ಸರ್ವತ್ರ ವರ್ಜಯೇತ್, ಅತಿ ವಿನಯಂ ಧೂರ್ತ ಲಕ್ಷಣಮ್*ಇತ್ಯಾದಿ ಮಾತುಗಳು ಇದನ್ನೇ ಪುಷ್ಟೀಕರಿಸುತ್ತವೆ. ಅತಿಯಾದ ಧರ್ಮಪ್ರೀತಿಯೇ ಇಂದಿನ ಭಯೋತ್ಪಾದನೆಗೆ ಮೂಲ ಕಾರಣ.

*ದೃಶ್ಯಮಾನೇ ಭವೇತ್ಪ್ರೀತಿಃ ಸೌಹೃದಂ ನಾಸ್ತ್ಯಪಶ್ಯತಃ ನಾಶಯಂತಿ ಕೃತಘ್ನಾಸ್ತು ನ ರಾಮೋ ನಾಶಯಿಷ್ಯತಿ*

ಸಾಮಾನ್ಯವಾಗಿ ಲೋಕದಲ್ಲಿ ಕಣ್ಣೆದುರಿನ ವಸ್ತು ಅಥವಾ ವ್ಯಕ್ತಿಯ ಮೇಲೆ ಪ್ರೀತಿ ಸದಾ ಇರುವುದು. ಬಹಳ ಕಾಲ ನೋಡದೇ ಇದ್ದರೆ ಸೌಹಾರ್ದ ಕ್ಷೀಣಿಸುತ್ತದೆ. ಹಾಗಂತ ಬಹಳ ಕಾಲ ನೋಡದಿದ್ದ ಮಾತ್ರಕ್ಕೆ ಪ್ರೀತಿಯಾಗಲೀ ಸೌಹಾರ್ದವಾಗಲೀ ಇರಲೇಬಾರದೆಂದಲ್ಲ. ಕೃತಘ್ನರು ( ಸಹಾಯವನ್ನು ಮರೆಯುವವರು) ಕಾಲ ಗತಿಸಿದಂತೆ ಪ್ರೀತಿಯನ್ನು ಸೌಜಾರ್ದವನ್ನು ಮರೆತುಬಿಡುತ್ತಾರೆ. ಆದರೆ ರಾಮನ ಸ್ವಭಾವ ಅಂತಹುದಲ್ಲ. ಹಾಗಾಗಿ ನಾನು ಕಣ್ಣೆದುರಿಗೆ ಇಲ್ಲದಿದ್ದರೂ ಅವನ ಪ್ರೀತಿ ಕುಂದದು. ಸೌಹಾರ್ದದ ಬಗೆಗೆ ಎಷ್ಟು ಸತ್ಯ ವಾದ ಮಾತು. ನಾವು ಕೃತಘ್ನರೊ, ಕೃತಜ್ಞರೋ ನಾವೇ ನಿರ್ಧರಿಸಬೇಕು.

*ಧನ್ಯಾಃ ಖಲು ಮಹಾತ್ಮಾನಃ ಮುನಯಸ್ತ್ಯಕ್ತಕಿಲ್ಬಿಷಾಃ ಜಿತಾತ್ಮಾನೋ ಮಹಾಭಾಗಾ ಯೇಷಾಂ ನಸ್ತಃ ಪ್ರಿಯಾಪ್ರಿಯೇ*

ಸೀತೆಯ ಮಾತು. ಪ್ರಿಯ, ಅಪ್ರಿಯ ಎಂಬ ಭಾವನೆ ಇಲ್ಲದ ಮಹಾತ್ಮರಾದ, ಪಾಪರಹಿತರಾದ, ಜಿತೇಂದ್ರಿಯರಾದ, ಮಹಾಭಾಗ್ಯಶಾಲಿಗಳಾದ ಮುನಿಗಳೇ ಧನ್ಯರು. ಇವರು ನಮ್ಮವರು ಇವರು ಹೊರಗಿನವರು, ಇವರು ನಮ್ಮ ಜಾತಿಯವರು, ಇವರು ಸುಂದರರು, ಇವರು ಕುರೂಪಿಗಳು, ಇವರು ಕಪ್ಪು- ಬಿಳಿ, ಇವರು ಪಂಡಿತರು ಇವರು ಪಾಮರರು ಮುಂತಾದ ಪುರಸ್ಕಾರ ತಿರಸ್ಕಾರಗಳಿಗೆ ಕಾರಣವಾಗುವ ಭಾವ ಯಾರಲ್ಲಿ ಇಲ್ಲವೋ ಅವರೇ ಮಹಾತ್ಮರು. ವ್ಯಾಸರು ಕೌರವ ಪಾಂಡವರೀರ್ವರಿಗೂ ಸಮಾನವಾಗಿಯೇ ಪ್ರೀತಿ ತೋರಿದರು. ಇದನ್ನೇ ಗೀತೆ ಹೇಳಿದ್ದು *ಶುನಿ ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನಃ* ನಮ್ಮ ದೃಷ್ಟಿಯಲ್ಲಿ ವ್ಯತ್ಯಾಸ ಇರಬಾರದು. ಆಗ ಮಹಾತ್ಮರೆನಿಸಲು ಸಾಧ್ಯ. ರಾಮ ಗುಹನಿಗೂ ಶಬರಿಗೂ ಮನೆಗೆ ಬಂದ ಋಷಿಮುನಿಗಳಿಗೂ ಸಮಾನ ಪ್ರೀತಿ ತೋರಿದ.ಪ್ರೀತಿಯಲ್ಲಿ ಗೌರವದಲ್ಲಿ ಸಮಾನತೆ ತೋರಲು ಪ್ರಯತ್ನಿಸೋಣವೇ!

*ಪ್ರಿಯಾನ್ನ ಸಂಭವೇದ್ದುಃಖಂ ಅಪ್ರಿಯಾದಧಿಕಂ ಭಯಮ್ ತಾಭ್ಯಾಂ ಹಿ ಯೇ ವಿಯುಜ್ಯಂತೇ ನಮಸ್ತೇಷಾಂ ಮಹಾತ್ಮನಾಮ್*

ಸಾಮಾನ್ಯವಾಗಿ ಪ್ರಿಯವಾದ ಕಾರ್ಯ ನಡೆದರೆ ಸಂತೋಷವಾಗುವುದು. ಇಷ್ಟವಿಲ್ಲದ ಕೆಲಸ ನಡೆದರೆ ದುಃಖವೂ ಕೋಪವೂ ಕಂಡುಬರುತ್ತದೆ. ಆದರೆ ಯಾರು ಪ್ರಿಯಾಪ್ರಿಯಗಳನ್ನು ಪರಿತ್ಯಜಿಸುವರೋ ಅವರಡನ್ನೂ ತಕ್ಕಡಿಯ ಕಲ್ಲು ಮತ್ತು ದ್ರವ್ಯವನ್ನು ಸಮಾನವಾಗಿ ತೂಕ ಮಾಡಿದಂತೆ ಯಾರು ಭಾವಿಸುವರೋ ಅಂತಹ ಮಹಾತ್ಮರಿಗೆ ನನ್ನ ನಮಸ್ಕಾರವಿರಲಿ. ಸೀತೆಯ ಸ್ವಗತ. ನಾವೂ ನಮಸ್ಕಾರ ಯೋಗ್ಯತೆಯನ್ನು ಬೆಳೆಸಿಕೊಳ್ಳೋಣ. ಭಾವನೆಯಲ್ಲಿ ಮುಳುಗಿ ನಿಜವಾದ ಭವದ ಭಾವ ಮರೆಯದಿರೋಣ.

📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩