🌾📗🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು. ಭಾಗ-೧

*ಕರ್ತವ್ಯಮಕೃತಂ ಕಾರ್ಯಂ ಸತಾಂ ಮನ್ಯುಮುದೀರಯೇತ್*
ಮಾಡಬೇಕಾಗಿರುವ ಕೆಲಸ ಸರಿಯಾದ ಸಮಯದಲ್ಲಿ ಮಾಡದಿದ್ದಾಗ ಸಜ್ಜನರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಸಮುದ್ರರಾಜನು ಮೈನಾಕನಿಗೆ ನುಡಿಯುವ ಮಾತು. ಹನುಮಂತ ರಾಮಕಾರ್ಯಕ್ಕಾಗಿ ಜಲಧಿಯನ್ನು ದಾಟುವಾಗ ಉತ್ತಮ ಕೆಲಸಕ್ಕಾಗಿ ಹೊರಟ ಇವನಿಗೆ ನೀನೀಗಲೇ ಸಹಾಯ ಮಾಡು ಎಂದು ಆಜ್ಞಾಪಿಸುತ್ತಾನೆ.

ನಾವಾದರೂ ನಮ್ಮ ನಮ್ಮ ವೃತ್ತಿಗಳಲ್ಲಿ ಉದಾಸೀನತೆ ತೋರಿದಾಗ ಸಜ್ಜನರೆಂದಲ್ಲಾ, ಎಲ್ಲರ ಕೋಪಕ್ಕೂ ಗುರಿಯಾಗಬೇಕಾದೀತು. ಸಮಯ ಸಂದರ್ಭ ನೋಡಿ ಅವಶ್ಯ ಮಾಡಬೇಕಾದ ಕಾರ್ಯಗಳಲ್ಲಿ ಕೂಡಲೇ ತೊಡಗಬೇಕೆಂಬುದು ಈ ಮಾತಿನ ಅಭಿಪ್ರಾಯ. ಯಾರೋ ಒಳ್ಳೆಯದನ್ನು ಮಾಡ ಹೊರಟಾಗ ಒಂದಷ್ಟು ಪ್ರೋತ್ಸಾಹಕ ಮಾತು, ಕೈಲಾದಷ್ಟು ಸಹಾಯ ಇವು ನಮ್ಮ ಶ್ರಮವನ್ನು ಹೆಚ್ಚಿಸಲಾರವು.ಹಾಗಾಗಿ ಯಾರೇ ಸಾಧನೆಗೆ ಹೊರಟಾಗ ಸಮುದ್ರರಾಜನಂತೆ ವಿಶಾಲಮನದಿಂದ ಬೆಂಬಲಿಸೋಣ.

*ಕೃತೇ ಚ ಪ್ರತಿಕರ್ತವ್ಯಂ ಏಷ ಧರ್ಮ: ಸನಾತನ:*

ಮೈನಾಕನು ಹನುಮನಿಗೆ ನುಡಿಯುವ ಮಾತಿದು. ಉಪಕಾರ ಮಾಡಿದವರಿಗೆ ಪ್ರತ್ಯುಪಕಾರ ಮಾಡುವುದು ಸನಾತನ ಧರ್ಮವಾಗಿದೆ. ನಮ್ಮ ಸಂಸ್ಕೃತಿಯ ಮಹತ್ವ ಇಲ್ಲಿ ಗಮನಿಸಬಹುದು. ರಾಘವನ ವಂಶದಲ್ಲಿ ಜನಿಸಿದವರೇ ಸಮುದ್ರರಾಜನ ಏಳಿಗೆಗೆ ಕಾರಣರಾದವರು. ಹಾಗೆ ಸಹಾಯ ಮಾಡಿರುವುದನ್ನು ನೆನಪು ಮಾಡಿಕೊಂಡು ಈಗ ಮತ್ತೆ ಅವನ ಮೂಲಕ ನಿನ್ನೆದುರು ನಿನ್ನ ಸಹಾಯಕನಾಗಿ ನಾನು ಬಂದಿರುವೆ.

ಇನ್ನೊಬ್ಬರ ಸಹಾಯ ಪಡೆದಾಗ ಬರಿಯ ಥ್ಯಾಂಕ್ಸ್, ಧನ್ಯವಾದ, ತುಂಬಾ ಉಪಕಾರವಾಯಿತು ಮುಂತಾದ ಮಾತುಗಳನ್ನು ಮಾತ್ರ ಆಡುವುದಲ್ಲ. ಸಮಯ ಸಂದರ್ಭ ಒದಗಿದಾಗ ಉಪಕಾರಿಗಳು ಕಷ್ಟದಲ್ಲಿರುವಾಗಲೋ ಅಥವಾ ಮಹತ್ತರವಾದ ಕಾರ್ಯ ಕೈಗೊಂಡಾಗ ನಾವೂ ಪ್ರತ್ಯುಪಕಾರ ಮಾಡಬೇಕಾದುದು ನಮ್ಮ ಕರ್ತವ್ಯ. ಅವರು ಬಯಸಲಿ ಬಿಡಲಿ ಕೂಡಲೇ ಧಾವಿಸುವುದು ಕೃತಜ್ಞತೆ ಸಲ್ಲಿಸುವ ಸರಿಯಾದ ರೀತಿ.

*ಅತಿಥಿ: ಕಿಲ ಪೂಜಾರ್ಹೋ ಪ್ರಾಕೃತೋಪಿ ವಿಜಾನತಾ*

ಇದೂ ಮೈನಾಕನ ಮಾತು. ಹೇಳದೇ ಕೇಳದೇ ಮನೆಗೆ ಬಂದವನು ಅತಿಥಿ. ಹೇಳಿ ಬರುವವನು ಅಥವಾ ಕರೆದು ಬರುವವ ಅಭ್ಯಾಗತ. ತಿಥಿ ಯಾವುದೆಂದು ವಿಚಾರಿಸದೇ ಬರುವವನೇ ಅತಿಥಿ. ಅಂತಹವನು ಯಾರೇ ಬಂದಿರಲಿ ಅವನು ಸಾಮಾನ್ಯ ನಾದರೂ ಗೌರವಾರ್ಹನೇ ಆಗಿರುತ್ತಾನೆ. ಎಷ್ಟು ಒಳ್ಳೆಯ ಮಾತಲ್ಲವೇ! ನಾವು ಹೇಳದೇ ಬಂದಾಗಲೆಲ್ಲ ಬಂದವರ ಬಗೆಗೆ ಮನದಲ್ಲೇ ಬೈದುಕೊಳ್ಳುತ್ತೇವೆ. ಅಂತಹುದರಲ್ಲಿ ನಮ್ಮವರು, ನಮ್ಮ ಜಾತಿಯವರು, ನಮ್ಮ ಧರ್ಮದವರು, ಶ್ರೀಮಂತರು-ಬಡವರು, ಹಳ್ಳಿಯವರು, ಅನಾಗರಿಕರು ಇತ್ಯಾದಿ ನೂರೆಂಟು ಯೋಚನೆಗಳಿಲ್ಲದೆ ಬಂದವನ ಸತ್ಕಾರ ಮಾಡುವುದೇ ನಿಜವಾದ ಮಾನವ ಗುಣ. ಹುಟ್ಟುಹಬ್ಬಕ್ಕೆ ಅನಾಥಾಶ್ರಮಕ್ಕೋ ವೃದ್ಧಾಶ್ರಮಕ್ಕೋ ಊಟ, ಹಣ್ಣು ಕೊಡುವುದರ ಬದಲು, ಅಥವಾ ಮನೆಗಳಲ್ಲಿ ಬಂದವರು ತಿನ್ನಲಿ ಬಿಡಲಿ ಹತ್ತಾರು ಭಕ್ಷ್ಯ ಮಾಡಿ ದೌಲತ್ತು ಪ್ರದರ್ಶಿಸುವ ಇಂದಿನ ಜನರಲ್ಲಿ ಇಂತಹ ಔದಾರ್ಯ  ಕಂಡುಬಂದರೆ ಎಲ್ಲೆಡೆ ಸುಭಿಕ್ಷೆ ನೆಲೆಸೀತು.

*ಯಸ್ಯ ತು ಏತಾನಿ ಚತ್ವಾರಿ ವಾನರೇಂದ್ರ ಯಥಾ ತವ ಧೃತಿರ್ದೃಷ್ಟಿರ್ಮತಿರ್ದಾಕ್ಷ್ಯಂ ಸ ಕರ್ಮಸು ನ ಸೀದತಿ*

ಹನುಮಂತ ಸಿಂಹಿಕೆಯ ಹನನಗೈದಾಗ ಆಕಾಶನಿಷ್ಠರಾದ ಸುರರಾಡಿದ ನುಡಿ. ಯಾವನಲ್ಲಿ ನಿನ್ನಲ್ಲಿರುವಂತೆ ಧೈರ್ಯ, ದೂರದೃಷ್ಟಿ, ಬುದ್ಧಿ, ಕಾರ್ಯಕುಶಲತೆ ಈ ನಾಲ್ಕು ಗುಣಗಳು ಇರುತ್ತವೆಯೋ ಅಂತಹವನ ಯಾವುದೇ ಕಾರ್ಯವೂ ನಿಸ್ಸಂಶಯವಾಗಿ ಕೈಗೂಡುವುದು. ಅದು ವಿಫಲವಾಗಲು ಸಾಧ್ಯವೇ ಇಲ್ಲ.

ಎಷ್ಟು ಸತ್ಯ ಮಾತು. ಕಾರ್ಯ ಸಾಧನೆಗೆ ಮೊದಲು ತೊಡಗಲು ಬೇಕಾದುದೇ ಧೈರ್ಯ. ಇದನ್ನು ಬೇಕಾದರೆ ಆತ್ಮವಿಶ್ವಾಸ ಎನ್ನಬಹುದು. ಎರಡನೆಯದ್ದು ದೂರದೃಷ್ಟಿ. ಮುಂದಿನ ಪರಿಣಾಮ ಏನಾಗಬಹುದೆಂಬ ಎಚ್ಚರವೇ ದೂರದೃಷ್ಟಿ. ಮೂರನೆಯದಾಗಿ ಬುದ್ಧಿವಂತಿಕೆ ಅತ್ಯಂತ ಅವಶ್ಯ. ಇದು ಬೇರೆಲ್ಲಾ ವೈಫಲ್ಯಗಳನ್ನು ತಪ್ಪನ್ನೂ ಮರೆಮಾಚಿ ಯಶಸ್ಸಿಗೆ ಕಾರಣವಾಗುವುದು. ನಾಲ್ಕನೆಯದಾಗಿ ಕೆಲಸದಲ್ಲಿನ ಕೌಶಲ್ಯ. ಇದರ ಕೊರತೆ ಹೆಚ್ಚಿನೆಲ್ಲೆಡೆ ಕಂಡುಬರುತ್ತದೆ. ಕೆಲಸದಲ್ಲಿ ನಿಷ್ಠೆ, ಶ್ರದ್ಧೆ, ಅರಿತು ‌ಮಾಡುವ ಪರಿ, ಮಾಡುತ್ತಾ ಮಾಡುತ್ತಾ ಪಡೆದುಕೊಳ್ಳುವ ಪರಿಣತಿ ಇವೆಲ್ಲ ಕಾರ್ಯ ಕುಶಲತೆಯ ಅಂಗಗಳು. ಯೋಗವೆಂದರೆ ಇದೇ ಎಂದು ಕೃಷ್ಣನ ಮಾತೂ ಇದೆ. *ಯೋಗ: ಕರ್ಮಸು ಕೌಶಲಂ* ನಾವು ಮಾಡುವ ಸಣ್ಣ ಅಥವಾ ದೊಡ್ಡ ಕೆಲಸಗಳಲದಲ್ಲೆಲ್ಲ ಈ ಕೌಶಲತೆಯನ್ನು  ಸಂಪಾದಿಸಿ ಯಶಸ್ಸು ಪಡೆಯೋಣ. ಹನುಮಂತನ ಈ ಎಲ್ಲಾ ಗುಣಗಳು ಪ್ರತಿಯೊಬ್ಬರ ಉನ್ನತಿಗೂ ಕಾರಣವೇ ಅಲ್ಲವೇ!

ಮುಂದುವರೆಯುವುದು.....

👨‍💻 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩