ವೇದ- ಧರ್ಮ ಭಾಗ- ೨೩
📗🌾📙 ವೇದ-ಧರ್ಮ 📗🌾📙 ಭಾಗ-23
*ವೇದಾಂಗಗಳು*
*ಜ್ಯೋತಿಷ್ಯ*
_*ಪ್ರತ್ಯಕ್ಷಂ ಜ್ಯೌತಿಷಂ ಶಾಸ್ತ್ರಂ* ಎಂಬ ಮಾತಿನಂತೆ ಕಣ್ಣೆದುರು ಕಾಣುವ ಗ್ರಹ ನಕ್ಷತ್ರಗಳು ಅವುಗಳ ಪರಿಣಾಮ ಇವೆಲ್ಲವನ್ನೂ ವಿವರಿಸುವ ಶಾಸ್ತ್ರ. ಜ್ಯೋತಿ ಎಂದರೆ ಬೆಳಕು. ಬೆಳಕನ್ನು ಆಧರಿಸಿ ಬೆಳೆದುಬಂದ ಶಾಸ್ತ್ರ ಎಂದೂ ಹೇಳಬಹುದು. ಬೆಳಕು ಎಂದರೆ ಗ್ರಹಗಳ ವಿವಿಧ ಪರಿಣಾಮಗಳು, ಕಾಲದ ವಿವಿಧ ಅಂಶಗಳು ಎಂದೆಲ್ಲಾ ಅಭಿಪ್ರಾಯಪಡುತ್ತಾರೆ. ಸಂವತ್ಸರ, ಋತು, ಮಾಸ, ಪಕ್ಷ, ತಿಥಿ, ನಕ್ಷತ್ರ ಮೊದಲಾದ ಕಾಲದ ವಿವಿಧ ಪರಿಣಾಮಗಳನ್ನು ವೇದದಲ್ಲಿ ಉಲ್ಲೇಖಿಸಲಾಗಿದೆ. *ಸಂವತ್ಸರಮೇತದ್ವ್ರತಂ ಚರೇತ್ ದ್ವೌ ವಾ ಮಾಸೌ ಕೃತ್ತಿಕಾಸ್ವಗ್ನಿಮಾದಧೀತ* ಇತ್ಯಾದಿ. ಈ ಕಾಲದ ನಿರ್ಣಯ ಹೇಗೆ ಮಾಡುವುದು ಎಂಬ ಪ್ರಶ್ನೆಗೆ ಉತ್ತರ ಜ್ಯೋತಿಷ್ಯ ಶಾಸ್ತ್ರ._
_ಈ ಜ್ಯೋತಿಷ್ಯದಲ್ಲಿ ಮೂರು ವಿಭಾಗವಿದೆ. *ತ್ರಿಸ್ಕಂಧಂ ಜ್ಯೌತಿಷಂ ಶಾಸ್ತ್ರಂ* ಎಂಬಂತೆ ಸಿದ್ಧಾಂತ, ಸಂಹಿತಾ, ಹೋರಾ ಎಂಬ ಮೂರು ಭಾಗಗಳಿವೆ. ಈ ಶಾಸ್ತ್ರಕ್ಕೆ ಅಷ್ಟಾದಶ ಮಹರ್ಷಿಗಳ ಪರಂಪರೆ ಇದೆ. ಈ ಪರಂಪರೆಯ ಕ್ರಮ ಭಿನ್ನವಾಗಿದೆ ಕೆಲವು ಗ್ರಂಥಗಳಲ್ಲಿ. ಕಶ್ಯಪಸಂಹಿತೆಯಂತೆ ಸೂರ್ಯನಿಂದ ಆರಂಭಿಸಲ್ಪಟ್ಟು ನಾರದ ವ್ಯಾಸ ಹೀಗೆ ಬೆಳೆದು ಶೌನಕರ ತನಕ ಈ ಶಾಸ್ತ್ರವು ಬೆಳೆದುಬಂದಿದೆ. ಪರಾಶರ ಸಂಹಿತೆಯಂತೆ ಬ್ರಹ್ಮನಿಂದ ಆರಂಭಿಸಿ ಮರೀಚಿಯ ತನಕ ಹೀಗೆ ಒಂದೊಂದು ಗ್ರಂಥ ಭಿನ್ನವಾದ ಪರಂಪರೆ ಹೇಳುವುದು._
_ಇದು ಸಾಕ್ಷಾತ್ತಾಗಿ ವೇದಕ್ಕೆ ಸಂಬಂಧಿಸಿಲ್ಲವಾದರೂ ವೇದೋಕ್ತ ಕರ್ಮಗಳ ಅನುಷ್ಠಾನಕ್ಕೆ ಅವಶ್ಯವಾದ ಕಾರಣ ಇದೂ ವೇದಾಂಗವೆನಿಸಿದೆ. ಗಣಿತದ ಮೂಲಕ ಗ್ರಹಗಳ ಚಲನವಲನಗಳನ್ನು ಸರಿಯಾಗಿ ಲೆಕ್ಕ ಮಾಡಿ ಭವಿಷ್ಯ ಹೇಳುವ ಜ್ಯೋತಿಷ್ಯ ಇದರ ಒಂದು ಭಾಗವಷ್ಟೇ. ಜ್ಯೋತಿಷ್ಯದ ಸಂಪೂರ್ಣ ಅಧ್ಯಯನ ಇತ್ತೀಚೆಗೆ ಮರೆಯಾಗಿದೆ. ಜೀವನಕ್ಕೆ ಬೇಕಾದಷ್ಟೇ ಕಲಿತು ವೃತ್ತಿ ನಿರ್ವಹಿಸುವ ಕಾರಣ ಜನರಲ್ಲಿ ಜ್ಯೋತಿಷ್ಯವೆಂದರೆ ಭವಿಷ್ಯ ಎನ್ನುವ ಅಭಿಪ್ರಾಯ ಇದೆ. ಅಮಾವಾಸ್ಯೆ ಹುಣ್ಣಿಮೆಗಳ ಗ್ರಹಣಗಳ ನಿಖರ ಸಮಯದ ಮಾಹಿತಿ ಜ್ಯೋತಿಷ್ಯದಿಂದಲೇ ಸಾಧ್ಯವಾಗುವುದು._
*ಛಂದಸ್ಸು*
_*ಯದಕ್ಷರಪರಿಮಾಣಂ ತಚ್ಛಂದಃ* ಎಂಬ ವೇದದ ಮಾತಿನಂತೆ ಅಕ್ಷರಗಳ ನಿಯಮಗಳನ್ನು ಛಂದಶ್ಶಾಸ್ತ್ರ ಎನ್ನುವರು. ಉದಾ- ಗಾಯತ್ರೀ ಛಂದಸ್ಸಿನಲ್ಲಿ ಇಪ್ಪತ್ತನಾಲ್ಕು ಅಕ್ಷರಗಳಿವೆ. ಅನುಷ್ಟುಪ್ ಛಂದಸ್ಸಿನಲ್ಲಿ ಮೂವತ್ತೆರಡು ಅಕ್ಷರಗಳಿವೆ. ಇವುಗಳಲ್ಲಿ ಲಘು ಗುರುಗಳು ಯಾವ ಅಕ್ಷರವಾಗಿರಬೇಕು ಇತ್ಯಾದಿ ಅರಿಯಲು ಈ ಛಂದಸ್ಸಿನ ಜ್ಞಾನ ಅವಶ್ಯಕ._
_ಈ ಛಂದಶ್ಶಾಸ್ತ್ರದ ಪ್ರವರ್ತಕ ಪಿಂಗಲ ಮಹರ್ಷಿ. ವೇದಮಂತ್ರಗಳ ಛಂದಸ್ಸನ್ನು ಅರಿಯಲು ಸಹಾಯಕವಾದ್ದರಿಂದ ಇದು ವೇದಾಂಗವೆನಿಸಿದೆ. ಋಗ್ವೇದಿಗಳಂತೂ ಪ್ರತಿಯೊಂದು ಮಂತ್ರಗಳಿಗೂ ಛಂದಸ್ಸು ಋಷಿ ದೇವತೆಯನ್ನು ಹೇಳಿಯೇ ಮುಂದುವರೆಯುತ್ತಾರೆ. *ಛಂದೋಹೀನೋ ನ ಶಬ್ದೋಸ್ತಿ ನಚ್ಛಂದಃ ಶಬ್ದವರ್ಜಿತಂ* ಎಂಬಂತೆ ಪ್ರತಿಯೊಂದು ಪದವೂ ಒಂದಲ್ಲ ಒಂದು ರೀತಿಯ ಅಕ್ಷರ ನಿಯಮವನ್ನು ಒಳಗೊಂಡಿದೆ. ಓಂ ಎನ್ನುವ ಅಕ್ಷರವನ್ನೂ ದೈವೀ ಗಾಯತ್ರೀ ಛಂದವೆಂದಿದ್ದಾರೆ. ಪಿಂಗಲನ ಗ್ರಂಥದ ಮೂರನೆಯ ಅಧ್ಯಾಯದಲ್ಲಿ ಛಂದಸ್ಸುಗಳ ದೇವತೆ ವರ್ಣ ಗೋತ್ರ ಮುಂತಾದ ಉಲ್ಲೇಖವಿದೆ. ವೇದಾರ್ಥ ನಿರ್ಣಯದಲ್ಲಿ ಮಂತ್ರದ ಛಂದಸ್ಸಿನ ಬಗೆಗೆ ಸಂದೇಹ ಹುಟ್ಟಿದಾಗ ಅದರ ದೇವತೆಯನ್ನಾಧರಿಸಿ ನಿರ್ಧರಿಸಬೇಕೆಂದು ವಿದ್ವಾಂಸರು ಹೇಳುತ್ತಾರೆ. ಈ ವೇದಾಂಗಗಳಲ್ಲಿ ಕಲ್ಪ ವ್ಯಾಕರಣ ಜ್ಯೋತಿಷಗಳು ಹೆಚ್ಚು ಪ್ರಚಲಿತವಾಗಿವೆ. ಉಳಿದವುಗಳ ಅಧ್ಯಯನವು ಜೀವಿಕೆಯ ಸಾಧನವಾಗದ ಕಾರಣ ಮರೆಯಾಗುತ್ತಿದೆ._
📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ