ರಾಮಾಯಣ

📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙
ಭಾಗ-28

*ಪ್ರತ್ಯಕ್ಷೇ ಗುರವಸ್ತುತ್ಯಾಃ ಪರೋಕ್ಷೆ ಮಿತ್ರಬಾಂಧವಾಃ ಕರ್ಮಾಂತೇ ದಾಸಭೃತ್ಯಾಶ್ಚ ನ ಕದಾಚನ ಪುತ್ರಕಾಃ*

_ಗುರುಗಳನ್ನು ಪ್ರತ್ಯಕ್ಷವಾಗಿಯೇ ಸ್ತೋತ್ರ ಮಾಡಬೇಕು. ಮಿತ್ರರನ್ನೂ ಬಂಧುಗಳನ್ನೂ ಪರೋಕ್ಷವಾಗಿ ಹೊಗಳಬೇಕು. ಕರ್ಮದ ಕೊನೆಯಲ್ಲಿ ದಾಸರನ್ನು ಹೊಗಳಬೇಕು. ಸ್ವಂತ ಮಕ್ಕಳನ್ನು ಎಂದಿಗೂ ಹೊಗಳಬಾರದು. ನಮ್ಮ ಗುರುಗಳು ಏನಾದರೂ ಮಹತ್ಕಾರ್ಯ ಮಾಡಿದರೆ ಎದುರಿಗೇ ಹೊಗಳಬೇಕು. ಬಂಧು ಮಿತ್ರರನ್ನು ಹಿಂದಿನಿಂದ ಹೊಗಳಬೇಕು. ಎದುರಿನಿಂದ ಹೊಗಳಿದರೆ ಮತ್ತೇನು ಕಾರ್ಯವಾಗಬೇಕೋ ಎಂದು ಚಿಂತಿಸುವರು. ಮಕ್ಕಳನ್ನು ಹೊಗಳಿದರೆ ಅವರ ಬೆಳವಣಿಗೆಗೆ ನಾವೇ ತಡೆಯಾದಂತಾಗುತ್ತದೆ. ಅವರು ತಾವು ಮತ್ತಷ್ಟು ಸಾಧಿಸಬೇಕೆಂಬ ಹಂಬಲ ಮರೆತು ತಾವು ಸಾಧಕರೆಂದು ಬೀಗುವರು. ಹಾಗಾಗಿ ಅವರನ್ನು ಎಂದಿಗೂ ಹೊಗಳಬಾರದು. ಇದು ರಾಮಾಯಣದ ಮಾತಲ್ಲ. ಇದಕ್ಕನುಗುಣವಾಗಿ ರಾಮ ಹನುಮಂತನನ್ನು ಕಾರ್ಯಾಂತ್ಯದಲ್ಲಿ ಹೊಗಳುತ್ತಿದ್ದಾನೆ._

*ಕೃತಂ ಹನುಮತಾ ಕಾರ್ಯಂ ಸುಮಹದ್ಭುವಿ ದುಷ್ಕರಮ್ ಮನಸಾಪಿ ಯದನ್ಯೇನ ನ ಶಕ್ಯಂ ಧರಣೀತಲೇ*

_ಇಡೀ ಭೂಮಂಡಲದಲ್ಲಿ ಯಾರೂ ಮಾಡಲಾಗದ ಅಸಾಧ್ಯವಾದ ಕೆಲಸವನ್ನು ಈ ಮಾರುತಿ ಸಾಧಿಸಿದ್ದಾನೆ. ಈ ಲೋಕದಲ್ಲಿ ಉಳಿದವರಿಗೆ ಹನುಮಂತನು ಮಾಡಿರುವ ಇಂತಹ ಕಾರ್ಯವನ್ನು ಮಾಡುವೆನೆಂದು ಮನದಲ್ಲಿ ಚಿಂತಿಸಲೂ ಸಾಧ್ಯವಿಲ್ಲ. ಹನುಮನ ಕಾರ್ಯ ಅಷ್ಟು ಮಹತ್ತರವಾದದ್ದು. ಮತ್ತೊಬ್ಬರು ಘನ ಕಾರ್ಯವನ್ನು ಸಾಧಿಸಿದರೆ ಶ್ಲಾಘಿಸುವ ರಾಮನ ನಡತೆ ನಮಗೆ ಅದರ್ಶ. ನಿಜಕ್ಕಾದರೆ ಹನುಮನು ರಾಮನ ಸೇವಕನೆಂದು ಒಪ್ಪಿಯಾಗಿದೆ. ಇನ್ನು ಹೊಗಳಿದರೂ ತೆಗಳಿದರೂ ಅವನು ರಾಮನನ್ನು ಬಿಡಲಾರ. ಆದರೂ ಅವನ ಕಾರ್ಯ ಶ್ಲಾಘಿಸುವ ಉದಾರತೆ ರಾಮನದ್ದು._

*ಯೋ ವೀರ್ಯಬಲಸಂಪನ್ನೋ ದ್ವಿಷದ್ಭಿರನಿವಾರಿತಃ ಪ್ರವಿಷ್ಟಃ ಸತ್ವಮಾಶ್ರಿತ್ಯ ಶ್ವಸನ್ಕೋ ನಾಮ ನಿಷ್ಕ್ರಮೇತ್*

_ಆ ರಾಕ್ಷಸರಿಂದ ಸುರಕ್ಷಿತವಾಗಿರುವ ಲಂಕೆಯನ್ನು ಪ್ರವೇಶಿಸಿಯೂ ಸುಗಮವಾಗಿ ಜೀವಸಹಿತ ಬಂದನೆಂದರೆ ಹನುಮನ ಬಲ ಎಂತಹ ಮಹತ್ತರವಾದುದು. ದೇವ ದಾನವ ಗಂಧರ್ವರಿಗೆ ಆಕ್ರಮಿಸಲು ಸಾಧ್ಯವಿಲ್ಲದ ಲಂಕೆಯನ್ನು ಈ ಮಾರುತಿ ಸುಲಭವಾಗಿ ಸಂದರ್ಶಿಸಿ ಬಂದನಲ್ಲ. ಇದು ನಿಜಕ್ಕೂ ಅದ್ಭುತ._

*ಯೋ ಹಿ ಭೃತ್ಯೋ ನಿಯುಕ್ತಃ ಸನ್ ಭರ್ತ್ರಾ ಕರ್ಮಣಿ ದುಷ್ಕರೇ ಕುರ್ಯಾತ್ತದನುರಾಗೇಣ ತಮಾಹುಃ ಪುರುಷೋತ್ತಮಮ್*

_ಒಡೆಯನಿಂದ ಕಷ್ಟಕರವಾದ ಕಾರ್ಯದಲ್ಲಿ ನಿಯುಕ್ತನಾದ ಯಾವನು ಆ ಕಾರ್ಯ ಪೂರ್ಣಗೊಳಿಸಿ ಮುಖ್ಯಕಾರ್ಯಕ್ಕೆ ವಿರೋಧ ಉಂಟಾಗದಂತೆ ಇನ್ನೂ ಅನೇಕ ಕಾರ್ಯಗಳನ್ನು ಸಾಧಿಸಿ ಹಿಂತಿರುಗುವನೋ ಅವನು ಸೇವಕರಲ್ಲಿ ಅತ್ಯುತ್ತಮನಾದವನು. ಅವನೇ ಪುರುಷೋತ್ತಮನು. ಹೇಳಿದ ಕೆಲಸ ಮಾತ್ರ ಮಾಡುವುದಲ್ಲ. ಮುಖ್ಯ ಕೆಲಸ ಕೆಡದಂತೆ ಉಳಿದ ಕೆಲಸಗಳನ್ನು ಕಂಡು ಮಾಡುವುದು ಒಳ್ಳೆಯ ಕರ್ಮಿಯ ಲಕ್ಷಣ. ಲಂಕಾದಹನ ಪ್ರಮುಖ ರಾಕ್ಷಸರ ಸಂಹಾರ ಶಕ್ತಿಯ ಪರಿಚಯ ಮುಂತಾದವು ಸುಗ್ರೀವನೋ ರಾಮನೋ ಹೇಳಿ ಹನುಮ ಮಾಡಿದ್ದಲ್ಲ. ಸೀತೆಯ ಸಂದರ್ಶನದ ತನ್ನ ಉದ್ದೇಶಕ್ಕೆ ಪೂರಕವಾಗುವಂತೆ ಶತ್ರುಗಳನ್ನು ಎಚ್ಚರಿಸಲು ಈ ಕಾರ್ಯ ಅವನು ಮಾಡಿದ್ದು. ಹೀಗಾಗಿಯೇ ಹೇಳದೆ ಮಾಡುವುದು ಉತ್ತಮ ಎನ್ನುವುದು. ಹನುಮನ ಇಂತಹ ಸಾಧನೆ ನಮಗೆ ಪ್ರೇರಕ._

📙 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩