ಪ್ರತಿಮಾನಾಟಕ

🌺 ಪ್ರತಿಮಾನಾಟಕದ ಒಂದು ಸುಮ 🌺

*कृतान्तशल्याभिहते शरीरे तथैव तावद्धृदयवृणो मे | नानाफला: शोकशराभिघातास्तत्रैव तत्रैव पुन: पतन्ति ||*

_ಶೋಕದಿಂದ ಶೂನ್ಯವಾಗಿದೆಯಲ್ಲವೇ ರಾಮನ ಮುಖಕಮಲ ಎಂದು ಸೀತೆ ಕೇಳಿದಾಗ ರಾಮನಾಡುವ ಮಾತು. ಪ್ರಿಯೇ, ಏನು ಹೇಳಲಿ ನನ್ನ ದುಃಖವನ್ನು! ದುರದೃಷ್ಟವೆಂಬ ಅಥವಾ ವಿಧಿಯೆಂಬ ಅಥವಾ ಯಮನೆಂಬ ಬಾಣದಿಂದ ಘಾಸಿಗೊಂಡ ನನ್ನ ಹೃದಯವು ಮತ್ತೆ ಮತ್ತೆ  ಬೇರೆ ಬೇರೆ ಫಲಗಳುಳ್ಳ ಶೋಕಗಳೆಂಬ ಬಾಣಗಳಿಂದ ಘಾಸಿಗೊಳ್ಳುತ್ತಲೇ ಇದೆ. ಒಂದು ಗಾಯ ಒಣಗಿತೆಂದು ಎಣಿಸುವಷ್ಟರಲ್ಲಿ ಅಲ್ಲಿಗೆ ಮತ್ತೆ ಮತ್ತೆ ಅನೇಕ ಬಾಣಗಳು ತಾಗಿ ಗಾಯ ದೊಡ್ಡದಾಗುತ್ತಿದೆಯೇ ಹೊರತು ಗುಣವಾಗುತ್ತಿಲ್ಲ. ವಿಧಿವಶಾತ್ ತಂದೆ ಕಾಲಲೀನರಾದರು. ಆ ದುಃಖವೇ ಮರೆಯಲಾಗದಷ್ಟು ಮಹತ್ತರವಾದದ್ದು. ಹೆತ್ತು ಹೊತ್ತು ಸಾಕಿ ಸಲಹಿದ ಅಪ್ಪನ ಆ ಪ್ರೀತಿ ಜೀವನವಿಡೀ ಮರೆಯಲಾಗದು. ಅಂತಹ ಅಪ್ಪನನ್ನು ಕಳೆದುಕೊಂಡೆ. ಅದರ ಜೊತೆಗೆ ನಿನ್ನೊಡಗೂಡಿ ವನವಾಸವೆಂಬ ಇನ್ನೊಂದು ಬಾಣ ನಾಟಿತು. ಕೈಗಳಲ್ಲಿ ದರ್ಪಣ ಹಿಡಿಯಲು ಕಷ್ಟಪಡುತ್ತಿದ್ದ ನಿನ್ನ ಕೋಮಲ ಕರಗಳು ಈಗ ನೀರು ತುಂಬಿದ ಕೊಡಗಳನ್ನು ಸಲೀಸಾಗಿ ಹಿಡಿಯುತ್ತಿವೆ. ಕಷ್ಟಗಳಿಗೆಲ್ಲ ನೀನು ಒಗ್ಗಿಹೋಗಿರುವೆ. ನಿನ್ನೀ ಅವಸ್ಥೆ ನೋಡಿ ವನವಾಸವೂ ದುಃಖ ದಾಯಕವಾಗಿದೆ. ತಮ್ಮನಾದ ಭರತನೊಬ್ಬನಿಗೇ ವಿಶಾಲಸಾಮ್ರಾಜ್ಯದ ಹೊಣೆಗಾರಿಕೆ ವಹಿಸಬೇಕಾಗಿ ಬಂತಲ್ಲ ಎಂಬ ಇನ್ನೊಂದು ದುಃಖ. ನನ್ನ ಮೇಲಿನ ಪ್ರೀತಿಯು ಲಕ್ಷ್ಮಣನನ್ನು ಈ ಕಷ್ಟಕರವಾದ ವನವಾಸದಲ್ಲಿ ಕಟ್ಟಿಹಾಕಿದೆಯಲ್ಲ ಎಂಬ ಇನ್ನೊಂದು ತೆರನಾದ ಶೋಕ. ಹೀಗೆ ಫಲಗಳು ಬೇರೆ ಬೇರೆ ಇದ್ದರೂ ಶೋಕವು ಮೊದಲೇ ಆಗಿದ್ದ ಗಾಯಕ್ಕೆ ಉಪ್ಪು ಸುರಿದು ಉಲ್ಬಣಿಸುವಂತೆ ಮಾಡುತ್ತಿದೆ. ಫಲಗಳನ್ನು ಬೀಳಿಸಲು ಪ್ರಯೋಗಿಸುವ ಅಂಬುಗಳಂತೆ ಇಲ್ಲಿ ತರತರಹದ ಶೋಕವನ್ನುಂಟು ಮಾಡುವ ಅಂಬುಗಳು, ಅವೇ ವಿವಿಧ ಘಟನೆಗಳು._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩