ವೇದ-ಧರ್ಮ ೨೪

📗🌾📙 ವೇದ-ಧರ್ಮ 📗🌾📙 ಭಾಗ-24

*ಋಷಿ ಛಂದಸ್ಸು ದೇವತೆ*

_ಕೆಲವು ಮಂತ್ರಗಳನ್ನು ಉಚ್ಚರಿಸುವಾಗ ಆ ಮಂತ್ರ ಕಂಡುಹಿಡಿದರ ಋಷಿ, ಆ ಮಂತ್ರದ ಛಂದಸ್ಸು, ಆ ಮಂತ್ರ ಯಾವ ದೇವತೆಗೆ ಸಂಬಂಧಿಸಿದೆಯೋ ಅದರ ಉಚ್ಚಾರ ಮಾಡುವುದನ್ನು ಗಮನಿಸುತ್ತೇವೆ. ಉ: ಗಣಾನಾಂ ತ್ವಾ ಎಂಬ ಗಣಪತಿಯ ಮಂತ್ರಕ್ಕೆ ಶೌನಕರಾದ ಗೃತ್ಸಮದ ಎನ್ನುವವರು ಋಷಿ, ಗಣಪತಿ ಮಂತ್ರ ಪ್ರತಿಪಾದ್ಯನಾದ ದೇವ, ಜಗತೀ ಎನ್ನುವ ಛಂದಸ್ಸಿನಲ್ಲಿ ಈ ಮಂತ್ರವಿದೆ. ಇಂತಹ ಉಲ್ಲೇಖವನ್ನು ಹೆಚ್ಚಾಗಿ ಋಗ್ವೇದಿಗಳು ಕೆಲವೊಮ್ಮೆ ಸಾಮವೇದಿಗಳು ಮಾಡುತ್ತಾರೆ. ಹಾಗಾದರೆ ಇದು ಐಚ್ಛಿಕವೋ, ಯಾವ ಉದ್ದೇಶದಿಂದ ಮಾಡಬೇಕು ಇತ್ಯಾದಿ ವಿಷಯಗಳ ಸಣ್ಣ ವಿಮರ್ಶೆ ಇಲ್ಲಿದೆ._

_ಋಷಿಗಳು ಮಂತ್ರಗಳನ್ನು ಬರೆದವರಲ್ಲ. ಕಂಡುಕೊಂಡವರು. ಧ್ಯಾನದಲ್ಲಿ ಗೋಚರಿಸಿದ ಜ್ಞಾನಕ್ಕೆ ಭಾಷೆಯ ರೂಪ ಕೊಟ್ಟಾಗ ಮೂಡಿದ ಅಕ್ಷರಗಳೇ ಮಂತ್ರಗಳು. ಋಷಿ ಎಂಬ ಶಬ್ದಕ್ಕೆ ಜ್ಞಾನಿ ಎಂಬುದೇ ಮುಖ್ಯ ಅರ್ಥ. *ಋಷ- ಜ್ಞಾನೇ* ಎಂಬ ಧಾತುವಿನಿಂದ ಹುಟ್ಟಿದ ಪದವದು. ಋಷಿ ಶಬ್ದಕ್ಕೆ ಮಂತ್ರಗಳನ್ನು ಕಾಣಿಸಿದವನು ಎನ್ನುವ ಅರ್ಥವೂ ಜ್ಞಾನಿ ಎಂಬ ಮೂಲಾರ್ಥವನ್ನೇ ಪರೋಕ್ಷವಾಗಿ ಹೇಳುತ್ತದೆ. ಹಾಗಾದರೆ ಋಷಿಯ ಲಕ್ಷಣಗಳೇನು ಎಂದರೆ *ಯಃ ಪಶ್ಯತಿ ಸ್ವಯಂ ವಾಕ್ಯಂ ಸ ಋಷಿಸ್ತಸ್ಯ ಕೀರ್ತಿತಃ* ಯಾರು ಅಧ್ಯಯನ ಮಾಡದೇ ದೇವರ ಅನುಗ್ರಹದಿಂದ ಮಂತ್ರಗಳನ್ನು ಸಾಕ್ಷಾತ್ಕರಿಸಿಕೊಳ್ಳುವರೋ ಅವರೇ ಋಷಿಗಳು. ಮಂತ್ರಗಳನ್ನು ಮೊದಲಿಗೆ ಕಂಡುಕೊಂಡವರೂ ಋಷಿಗಳೇ ಆಗಿದ್ದಾರೆ. ಕಡಿಮೆ ಅಧ್ಯಯನ ಮಾಡಿಯೂ ವೇದವನ್ನು ಅರಿತವನನ್ನೂ ಋಷಿ ಎನ್ನಬಹುದು. ಜನಕ ಮುಂತಾದ ಮಹನೀಯರು ಅಧ್ಯಯನ ಮಾಡಿಯೂ ಋಷಿಪಟ್ಟ ಪಡೆದಿದ್ದರು._

_*ಏವಂ ಯೋ ದ್ವಾದಶಾವೃತ್ತೇರರ್ವಾಗಧೀತ್ಯಾಪಿ ಪ್ರತಿಪದ್ಯತೇ ಸೋಪಿ ಋಷಿರೇವ* ಎಂಬಂತೆ ಹನ್ನೆರಡು ಬಾರಿಗಿಂತ ಕಡಿಮೆ ಅಧ್ಯಯನ ಮಾಡಿಯೂ ವೇದವನ್ನು ಅರಿತವನು ಋಷಿ ಎಂದೇ ಕರೆಸಿಕೊಳ್ಳುವನು. ಮಂತ್ರಗಳನ್ನು ಸಾಕ್ಷಾತ್ಕರಿಸಿಕೊಳ್ಳುವ ಇಚ್ಛೆಯಿಂದಲೂ ಅಸಂತೋಷ, ಭಯ, ಶೋಕ, ಸುಖ- ದುಃಖ ಮುಂತಾದವುಗಳಿಂದ ಬಿಡುಗಡೆ ಹೊಂದಬೇಕೆಂದು ಋಷಿಗಳು ದೀರ್ಘಕಾಲ ತಪಸ್ಸನ್ನಾಚರಿಸಿದರು. ಆಗ ಅವರಿಗೆ ಗೋಚರಿಸಿದ ಮಂತ್ರಗಳನ್ನು ತಮ್ಮ ಶಿಷ್ಯರಿಗೆ ಪಾಠ ಮಾಡಿ ಪರಂಪರೆ ಉಳಿಯುವಲ್ಲಿ ಪ್ರಮುಖಪಾತ್ರ ವಹಿಸಿದರು._

*ಋಷೀಣಾಂ ತಪ್ಯತಾಮುಗ್ರಂ ತಪಃ ಪರಮದುಷ್ಕರಮ್ ಮಂತ್ರಾಃ ಪ್ರಾದುರ್ಬಭೂವುರ್ಹಿ ಪೂರ್ವಮನ್ವಂತರೇಷ್ವಿಹ ಅಸಂತೋಷಾದ್ಭಯಾದ್ದುಃಖಾತ್ಸುಖಾಚ್ಛೋಕಾಚ್ಚ ಪಂಚಧಾ*

_ಋಷಿಗಳು ತಪಸ್ಸು ಮಾಡುತ್ತಿದ್ದಂತೆ ಅವರಿಗೆ ಮಂತ್ರಗಳು ಒಂದೊಂದಾಗಿ ಸ್ಫುರಣೆಯಾಗತೊಡಗಿದವು. ಹೇಗೆ ಒಬ್ಬ ಸಂಶೋಧಕನು ಅನೇಕ ಪ್ರಯತ್ನಗಳಲ್ಲಿ ಯಶಸ್ಸನ್ನು ಸಾಧಿಸುವನೋ ಹಾಗೆಯೇ ಶ್ರದ್ಧೆಯಿಂದ ಮಾಡಿದ ತಪವು ಮಹತ್ತಾದ ಋಷಿ ಎಂಬ ಶ್ರೇಷ್ಠತೆಯನ್ನು ಕರುಣಿಸಿತು. ತಾತ್ಕಾಲಿಕ ಸುಖವನ್ನೂ ಅವರು ನಿರಾಕರಿಸಿದ್ದರೆಂಬುದು ವಿಶೇಷ. ಏನಾದರೂ ನೋಡಿದರೆ, ತಿಂದರೆ, ಸ್ಪರ್ಶಿಸಿದರೆ, ಕೇಳಿದರೆ, ಸೇವಿಸಿದರೆ ಯಾವುದು ಸುಖವೆಂದು ನಾವು ಭಾವಿಸುವೆವೋ ಅದು ಒಂದು ರೀತಿಯ ದುಃಖ ಕಾರಣವೂ ಹೌದು. ಏಕೆಂದರೆ ಅದರ ಮರುಕ್ಷಣ ನಮಗೆ ಮತ್ತೆ ಬಯಕೆ ಹುಟ್ಟುತ್ತದೆ. ಅಂತಹ ದುಃಖ ಕಾರಣವಾದ ಅಥವಾ ಶೋಕಜನಕವಾದ ಸುಖವನ್ನು ನಿರಾಕರಿಸಿ ತಪಗೈದರು ಮಹಿಮರು._

*ಭೃಗುರ್ಮರೀಚಿರತ್ರಿಶ್ಚ ಅಂಗಿರಾಃ ಪುಲಹಃ ಕ್ರತುಃ ವಸಿಷ್ಠಶ್ಚ ಮನುರ್ದಕ್ಷೋ ಪುಲಸ್ತ್ಯಶ್ಚೇತಿ ತೇ ದಶ ಬ್ರಹ್ಮಣೋ ಮಾನಸಾಹ್ಯೇತೆ ಉದ್ಭೂತಾಃ ಸ್ವಯಮೀಶ್ವರಾಃ*

_ಈ ಋಷಿಗಳಲ್ಲಿ ಮೊದಲು ತಪಗೈದವರು ಬ್ರಹ್ಮನ ಮಾನಸ ಪುತ್ರರು. ನಾವು ದೊಡ್ಡ ವ್ಯಕ್ತಿಗೆ ಹುಟ್ಟಿದೆವೆಂದು ಅವರೆಲ್ಲರೂ ಸುಖಭೋಗಗಳಲ್ಲಿ ತೊಡಗದೇ ಶಾಶ್ವತ ಸುಖವಾಗಿ ಅರಸಿದರು. ಅದೇ ಅವರಿಗೆ  *ಈಶ್ವರ* ಬಿರುದನ್ನು ನೀಡಿತು‌. ಭೃಗು, ಮರೀಚಿ, ಅತ್ರಿ, ಅಂಗಿರ, ಪುಲಹ, ಕ್ರತು, ಮನು, ದಕ್ಷ, ವಸಿಷ್ಠ, ಪುಲಸ್ತ್ಯ ಎಂಬ ಮಹರ್ಷಿಗಳೇ ಮುಂದೆ ವೇದಗಳ ದ್ರಷ್ಟಾರರಾಗಿಈಶ್ವರ ಎಂಬ ಹೆಸರು ಪಡೆದರು._

_ಇವರ ನಂತರದಲ್ಲಿ ಇವರಲ್ಲದೇ ಅನೇಕ ಮಹನೀಯರ ಮಕ್ಕಳಾದ ಶುಕ್ರ, ಬೃಹಸ್ಪತಿ, ಕಶ್ಯಪ, ಉತಥ್ಯ, ವಾಮದೇವ, ಅಗಸ್ತ್ಯ, ಔಶಿಕ, ಕರ್ದಮ, ವಿಶ್ರವಸ್, ಶಕ್ತಿ, ವಾಲಖಿಲ್ಯ ಮತ್ತು ಅರ್ವತ ಇವರು ಎರಡನೇ ವರ್ಗಕ್ಕೆ ಸೇರಿ ಋಷಿಗಳೆನಿಸಿದರು._

ಮುಂದುವರೆಯುವುದು.....

📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩