ಮೇಘದೂತ
🌹 ಮೇಘದೂತದ ಒಂದು ಬಿಂದು 🌹
*वामश्चास्या: कररुहपदैर्मुच्यमानो मदीयै: मुक्ताजालं चिरपरिचितं त्याजितो दैवगत्या | सम्भोगान्ते मम समुचितो हस्तसंवाहनानां यास्यत्यूरुस्सरसकदळी स्तम्भगौरश्चलत्वम् ||*
_ಇದೊಂದು ವಿಪ್ರಲಂಭ ಶೃಂಗಾರದ ಶ್ಲೋಕ. ಮೇಘವೇ, ನೀನು ಆ ಮಾಯಾನಗರಿಯಲ್ಲಿ ಸಂಚರಿಸುತ್ತಾ ನನ್ನ ಮನೆ ತಲುಪಿ ಅಲ್ಲಿ ವಿರಹದಲ್ಲಿ ಬೇಯುತ್ತಿರುವ ಆ ಅಬಲೆಯನ್ನು ನೋಡುವಿ. ಅವಳಾದರೋ ಈಗ ಮೊದಲಿನಂತೆ ನನ್ನೊಡನೆ ಸೇರದಿರುವ ಕಾರಣ ಮೈಮೇಲೆ ಅಲ್ಲಲ್ಲಿ ನಖಕ್ಷತದ ಗುರುತಿಲ್ಲದ ಕಾರಣ ವಿರಹದಿಂದ ಬಳಲುತ್ತಿರುವಳು. ರತಿಯ ಸಮಯದಲ್ಲಿ ಅಂಗಾಗಗಳಲ್ಲಿ ಉಂಟಾಗುವ ಉಗುರಿನ ಗೀರುಗಳು ಅಲ್ಪ ನೋವನ್ನು ಕೊಟ್ಟರೂ ಹೆಚ್ಚು ಸುಖವನ್ನು ಕಲ್ಪಿಸುತ್ತವೆ. ಆದರೆ ಬಹಳ ಕಾಲದಿಂದ ಪ್ರಿಯನಿಲ್ಲದೆ ಮನಕ್ಕೂ ದೇಹಕ್ಕೂ ಆಸರೆ ಸಿಗದೆ ಎರಡೂ ಸೊರಗಿದೆ. ಕಟಿಯಲ್ಲಿನ ಬಂಗಾರದ ಡಾಬು ಎಂದೋ ಕಳಚಿಹೋಗಿದೆ. ಮೊದಲೇ ಕೃಶವಾಗಿದ್ದ ನಡುವಿನಲ್ಲಿ ನಿಲ್ಲದ ಆ ಚಿನ್ನದ ಡಾಬು ಈಗ ಆಹಾರ ತೆಗೆದುಕೊಳ್ಳದ ಕಾರಣ ಇನ್ನಷ್ಟು ತೆಳ್ಳಗಾಗಿ ಡಾಬು ಎಂದೋ ಬಿದ್ದುಹೋಗಿದೆ. ಹಾಗಾಗಿ ಆ ನಡು ಕಾಂತಿಹೀನವಾಗಿದೆ. ಕಾಲುಗಳಲ್ಲಿ ಮುತ್ತಿನ ಜೋಡಣೆಯ ಗೆಜ್ಜೆಗಳಿಲ್ಲದೆ ನಡಿಗೆಯ ಧ್ವನಿ ಅಂದ ಕಳೆದುಕೊಂಡಿದೆ. ಇನ್ನು ಸಂಭೋಗದ ಕೊನೆಯಲ್ಲಿ ಅಯಾಸ ಪರಿಹಾರಕ್ಕಾಗಿ ನನ್ನ ಕೈಗಳ ಮಧುರವಾದ ಒತ್ತುವಿಕೆ ಇಲ್ಲದೇ ಅವಳ ಎಡ ತೊಡೆಯು ನಡುಗುತ್ತಿದೆ. ಸಂಭೋಗಕಾಲದಲ್ಲಿ ಸಾಕಷ್ಟು ಬಳಲಿದ ಆ ರಸಭರಿತ ಬಾಳೆಯ ದಿಂಡಿನಂತೆ ಶೋಭಿಸುತ್ತಿದ್ದ ಪ್ರಿಯೆಯ ತೊಡೆಗಳನ್ನು ಆಯಾಸ ನಿವಾರಣೆಗಾಗಿ ನಿಧಾನಕ್ಕೆ ನೀವುತ್ತಿದ್ದೆ. ( ನೀವು= ಒತ್ತು) ಈಗ ಅಂತಹ ಯಾವ ಸ್ಪರ್ಶವೂ ಇಲ್ಲದೆ ಆ ನನ್ನ ಪ್ರಿಯೆಯ ಬಾಳೆದಿಂಡಿನಂತೆ ದಪ್ಪಕ್ಕೂ ಬೆಳ್ಳಗೂ ನುಣುಪಾಗಿಯೂ ಕಾಂತಿಯುತವಾಗಿದ್ದ ಎಡ ಊರು ಊರುಗೋಲಿಲ್ಲದೆ ನಡುಗುತ್ತಿದೆ. ಹೀಗೆ ಆ ನನ್ನ ಮನದರಸಿಯ ಅವಸ್ಥೆ ಮರುಕ ಹುಟ್ಟಿಸುವಂತಿದೆ. ಶೃಂಗಾರ ವರ್ಣನೆಗಳಲ್ಲಿ ಸಂಸ್ಕೃತ ಕವಿಗಳನ್ನು ಮೀರುವವರಿಲ್ಲ._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ