📙🌾📗ಮಹಾಭಾರತದ ಅಪ್ರಸಿದ್ಧ ಕಥೆಗಳು📗🌾📙

_ಹಿಂದೆ ಇಕ್ಷ್ವಾಕು ವಂಶದಲ್ಲಿ ಕಲ್ಮಾಷಪಾದನೆಂಬ ರಾಜನಿದ್ದನು. ಅವನೊಮ್ಮೆ ಬೇಟೆಯಾಡಲು ಹೋಗಿ ಬಾಯಾರಿಕೆ ಹಾಗೂ ಹಸಿವೆಯಿಂದ ಬಳಲಿ ಕಾಲುದಾರಿಯಲ್ಲಿ ಹೋಗುತ್ತಿದ್ದನು. ಅದೇ ಸಮಯದಲ್ಲಿ ವಸಿಷ್ಠ ಪುತ್ರನಾದ ಶಕ್ತಿಯು ಅದೇ ದಾರಿಯಲ್ಲಿ ಬರುತ್ತಿದ್ದನು. ಇಬ್ಬರಿಗೂ ಪರಸ್ಪರ ದಾರಿ ಬಿಡುವ ಬಗೆಗೆ ವಿವಾದಗಳಾಗಿ ವಿರಸವುಂಟಾಯಿತು. ಸ್ವಲ್ಪ ಸಮಯದ ನಂತರ  ಸಿಟ್ಟುಗೊಂಡ ರಾಜನು ಎದುರಿನವನು ಋಷಿಯೆಂದೂ ವಿಚಾರಿಸದೇ ಅಜ್ಞಾನದಿಂದ ತನ್ನ ಕೈಯಲ್ಲಿನ ಚಾವಟಿಯಿಂದ ರಾಕ್ಷಸನಂತೆ ಹೊಡೆದನು. ಪೆಟ್ಟು ತಿಂದ ಆ ಶಕ್ತಿಯೂ ಕೋಪಗೊಂಡು ರಾಜನಿಗೆ ಶಾಪಕೊಟ್ಟನು. ' ನೀಚನೇ ನೀನು ರಾಕ್ಷಸನಂತೆ ತಾಪಸನಾದ ನನ್ನನ್ನು ಹೊಡೆದ ಕಾರಣ ಇಂದಿನಿಂದ ರಾಕ್ಷಸರಂತೆ ನರಭಕ್ಷಕನಾಗುವೆ, ಮನುಷ್ಯಮಾಂಸದಲ್ಲಿ ಆಸಕ್ತನಾಗಿ ನೀನು ಭೂಮಿಯಲ್ಲಿ ಅಲೆಯುವೆ, ಹೋಗು' ಎಂದು ಉಗ್ರವಾದ ಶಾಪ ನೀಡಿದನು. ಅದೇ ಸಮಯದಲ್ಲಿ ವಸಿಷ್ಠರಿಗೂ ವಿಶ್ವಾಮಿತ್ರರಿಗೂ ಒಂದು ಯಾಗ ಮಾಡುವ ವಿಷಯದಲ್ಲಿ ವೈಮನಸ್ಯ ತಲೆದೋರಿತ್ತು. ರಾಜನು ತನಗೆ ಶಾಪಕೊಟ್ಟ ಮಹರ್ಷಿ ವಸಿಷ್ಠಪುತ್ರನೆಂದರಿತು ಶಾಪದಿಂದ ತಪ್ಪಿಸಿಕೊಳ್ಳಲು ವಿಶ್ವಾಮಿತ್ರರ ಮೊರೆಹೊಕ್ಕನು. ವಿಶ್ವಾಮಿತ್ರರಾದರೋ ಶಾಪ ಪರಿಹಾರದ ಉಪಾಯ ಹೇಳುವ ಬದಲು ಒಬ್ಬ ರಾಕ್ಷಸನಿಗೆ ಕಲ್ಮಾಷಪಾದನ ದೇಹವನ್ನು ಪ್ರವೇಶಿಸುವಂತೆ ಆದೇಶಿಸಿದನು. ವಸಿಷ್ಠರ ಮೇಲಿನ ಕ್ರೋಧವು ವಿಶ್ವಾಮಿತ್ರರಿಂದ ಹೀಗೆ ಮಾಡಿಸಲ್ಪಟ್ಟಿತ್ತು. ತರುವಾಯ ರಾಜನು ತನ್ನ ಶಾಪವನ್ನು ಹಿಂಪಡೆಯಲು ಶಕ್ತಿಯ ಮೊರೆಹೊಕ್ಕನು. ಆದರೆ ಶಕ್ತಿಯೂ ಅವನನ್ನು ತಿರಸ್ಕರಿಸಿದನು._

_ಅನಂತರ ರಾಜನನ್ನು  ಒಳಗಿದ್ದ ರಾಕ್ಷಸನು ಪೀಡಿಸುತ್ತಿದ್ದರೂ ಸಾಕಷ್ಟು ತಾಳ್ಮೆಯಿಂದ ಇದ್ದನು.ಹೀಗಿರಲು ಒಂದು ದಿನ ಒಬ್ಬ ಹಸಿದ ಬ್ರಾಹ್ಮಣನು ರಾಜನನ್ನು ಕಂಡು ಮಾಂಸಸಮೇತ ಭೋಜನವನ್ನು ಅಪೇಕ್ಷಿಸಿದನು. ರಾಜನಾದರೋ ಆ ಸಮಯದಲ್ಲಿ ತನ್ನ ದುಸ್ಥಿತಿಯ ಬಗ್ಗೆಯೇ ಚಿಂತಿಸುತ್ತಿದ್ದ ಕಾರಣ ಹೀಗೆಂದನು. " ಬ್ರಾಹ್ಮಣ ಮುಹೂರ್ತಕಾಲದಲ್ಲಿ ನಿನಗೆ ಯಥೇಚ್ಛ ಭೋಜನ ಕೊಡುವೆನು. ತರುವಾಯ ಅಂತಃಪುರ ಪ್ರವೇಶಿಸಿ ರಾಜನು ಮಲಗಿದನು. ಅಮೇಲೆ ನಡುರಾತ್ರಿ ಎದ್ದ ರಾಜನು ಬ್ರಾಹ್ಮಣನಿಗೆ ಕೊಟ್ಟ ಮಾತನ್ನು ನೆನಪಿಸಿಕೊಂಡು ಅಡಿಗೆಯವನನ್ನು ಕಂಡು ಇಂತಹ ಕಡೆ ಒಬ್ಬ ಬ್ರಾಹ್ಮಣನಿರುವನು. ಅವನಿಗಾಗಿ ಮಾಂಸಾಶನ ಮಾಡಿಸು ಎಂದು ಆಜ್ಞಾಪಿಸಿದನು. ಅಡಿಗೆಯವನು ಆ ರಾತ್ರಿ ಹುಡುಕಿದಾಗ ಎಲ್ಲೂ ಮಾಂಸ ದೊರೆಯದೇ ದೊರೆಯ ಬಳಿ ಹಾಗೆಯೇ ನಿವೇದಿಸಿದನು. ಆಗ ರಾಜ ದುಃಖಿಸದೇ ನರಮಾಂಸದಿಂದಾದರೂ ಅವನನ್ನು ಭೋಜಿಸು ಎಂದನು. ಮತ್ತೆ ಮತ್ತೆ ಹೀಗೆ ಹೇಳಿದಾಗ ವಧಾರ್ಹರನ್ನು ಕಡಿಯುವ ಪ್ರದೇಶಕ್ಕೆ ಹೋದ ಆ ಪಾಚಕನು ನರಮಾಂಸವನ್ನು ತಂದು ಬ್ರಾಹ್ಮಣನನ್ನು ಉಣಬಡಿಸಿದನು. ಸಂಸ್ಕರಿಸಿ ಅನ್ನದೊಡನೆ ಸೇರಿಸಿ ಹಸಿದ ಆ ವಿಪ್ರನಿಗೆ ನೀಡಿದಾಗ ಯೋಗದೃಷ್ಟಿಯಿಂದ ಇದನ್ನು ತಿಳಿದು ಕೋಪಗೊಂಡ ಆ ದ್ವಿಜನು ರಾಜನಿಗೆ ಹೀಗೆ ಶಪಿಸಿದನು. " ಆ ರಾಜನು ನನಗೆ ಭೋಜನಕ್ಕೆ ಅಯೋಗ್ಯವಾದ ಅನ್ನ ಕೊಡಿಸಿದ್ದರಿಂದ ಯಾವ ಅನ್ನ ಕೊಡಿಸಿದನೋ ಅದರಲ್ಲೇ ಲೋಲುಪನಾಗಲಿ, ಹಿಂದೆ ಪಡೆದ ಶಾಪದಂತೆ ನರಮಾಂಸದಲ್ಲಿ ಆಸಕ್ತಿಯುಂಟಾಗಿ ಜೀವಿಗಳಿಗೆ ಭಯಂಕರನಾಗಿ ಭೂಮಿಯಲ್ಲಿ ಸಂಚರಿಸಲಿ" . ಹೀಗೆ ಎರಡು ಬಾರಿ ಶಪಿಸಿದಾಗ ರಾಜನು ಶಾಪದ ಪ್ರಭಾವ ಹಾಗೂ ಒಳಗಿದ್ದ ರಾಕ್ಷಸನ ಆವೇಶಕ್ಕೊಳಗಾಗಿ ವಿವೇಕರಹಿತನಾಗಿ ತಿರುಗಲಾರಂಭಿಸಿದನು. ಅನಂತರ ಒಂದು ದಿನ ಶಕ್ತಿಯನ್ನು ಕಂಡು ಹೀಗೆಂದನು. " ನೀನು ನನ್ನ ಮೇಲೆ ಅನುಚಿತವಾದ ಶಾಪ ಪ್ರಯೋಗಿಸಿರುವುದರಿಂದ ಮನುಷ್ಯರನ್ನು ತಿನ್ನಲು ನಿನ್ನಿಂದಲೇ ಆರಂಭಿಸುವೆನು ಎನ್ನುತ್ತಾ ಅವನನ್ನೇ ಭಕ್ಷಿಸಿದನು. ಶಕ್ತಿಯ ನಂತರ ಉಳಿದವರನ್ನೂ ಭಕ್ಷಿಸುವಂತೆ ವಿಶ್ವಾಮಿತ್ರರು ಪ್ರಚೋದಿಸಲು ವಸಿಷ್ಟರ ನೂರು ಮಂದಿ ಮಕ್ಕಳನ್ನೂ ಆ ರಾಜನು ತಿಂದು ತೇಗಿದನು. ಈ ಕಥೆ ಮುಂದೆ ಇನ್ನೊಂದು ತಿರುವು ಪಡೆಯಿತು._

_ಇಲ್ಲಿ ಒಬ್ಬರಿಗಿಂತ ಒಬ್ಬರು ಜ್ಞಾನಿಗಳಾಗಿದ್ದರೂ ಮೂರ್ಖತನ ಪ್ರದರ್ಶಿಸಿದ್ದು ನೋಡಿದರೆ ಯಾರದ್ದು ತಪ್ಪು ಯಾರದ್ದು ಸರಿಯೆಂಬ ಸಂಶಯ ಕಾಡುವುದು. ರಾಜನಾಗಲಿ ಋಷಿಯಾಗಲಿ ದಾರಿ ಬಿಡದೇ ಪರಸ್ಪರ ಕೋಪಗೊಂಡಿದ್ದು, ಅನಂತರ ದೇಶದ ರಾಜನೆಂದೂ ವಿಚಾರಿಸದೇ ಶಾಪ ಕೊಟ್ಟದ್ದು, ಆ ರಾಜನೂ ಋಷಿಯ ಮಹಿಮೆ ವಿಚಾರಿಸದೇ ಹೊಡೆದದ್ದು ಹೀಗೆ ಕೋಪದ ಕಾರಣ ಅನರ್ಥ ಪರಂಪರೆ ಬೆಳೆಯುತ್ತಾ ಹೋಯಿತು. ವಿಶ್ವಾಮಿತ್ರರಂತೂ ವಸಿಷ್ಠರ ಮೇಲಿನ ಕೋಪವನ್ನು ರಾಜನ ಮೇಲೆ ಪ್ರಯೋಗಿಸಿ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಮಾಡಿದರು. ಮಹಾತ್ಮರ ಇಂತಹ ನಡವಳಿಕೆಗಳು ನಮ್ಮನ್ನು ಪ್ರತಿಕ್ಷಣವೂ ಜಾಗೃತರಾಗಿರುವಂತೆ ಮಾಡಲಿ. ಕೋಪದ ಕೈಗೆ ಬುದ್ಧಿ ನೀಡದೇ ಬುದ್ಧಿಯ ಕೈಗೆ ಕೋಪ ನೀಡೋಣ. ಮುಂದುವರೆಯುವುದು..._

📗 ಆಕರ - ಉದ್ಯೋಗಪರ್ವ ೧೬೬ಅಧ್ಯಾಯ. ಸಂಗ್ರಹ ✍
ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩