ಪ್ರತಿಮಾನಾಟಕ

🌺 ಪ್ರತಿಮಾನಾಟಕದ ಒಂದು ಸುಮ 🌺

*नियतमनियतात्मा रूपमेतद् गृहीत्वा खरवधकृतवैरं राघवं वञ्चयित्वा | स्वरपदपरिहीणां हव्यधारामिवाहं जनकनृपसुतां तां हर्तुकाम: प्रयामि ||*

_ರಾವಣ ಸೀತೆಯ ಹರಣಕ್ಕೆಂದು ಪಂಚವಟಿಗೆ ಬಂದಿದ್ದಾನೆ. ಅವನಾಡುವ ಮಾತು. ಭಾಸ ಅರ್ಥದ ಜೊತೆಗೆ ಪದಗಳಲ್ಲೂ ಲಾಲಿತ್ಯ ಮೂಡಿಸಿದ್ದಾನೆ ಇಲ್ಲಿ. ನಾನು ಅಜಿತೇಂದ್ರಿಯ. ಇಂದ್ರಿಯಗಳ ಬಯಕೆಗಳಿಗೆ ತಕ್ಕಂತೆ ಕಾರ್ಯ ಮಾಡುವ ಲಂಪಟ. ಆದರೆ ಈ ರಾಮ ಜಿತೇಂದ್ರಿಯನು. ಎಂತಹ ಸಂದರ್ಭದಲ್ಲೂ ಇಂದ್ರಿಯಗಳ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳದ ಆದರ್ಶ ಪುರುಷ. ಇಲ್ಲಿ  ನಿಯತಮ್ ಅನಿಯತಾತ್ಮಾ ಎಂಬ ಪ್ರಯೋಗ ಸಹಜವಾಗಿ ಮೂಡಿಬಂದಿದೆ. ಈಗ ನಾನು ನನ್ನ ಮಿತ್ರನಾದ ಖರನ ಸಾವಿನ ಸೇಡಿಗಾಗಿ ಈ ರೂಪವನ್ನು ಧರಿಸಿ ರಾಮನನ್ನು ವಂಚಿಸುತ್ತೇನೆ. ನನ್ನ ಸಹಜ ರೂಪವು ಅವನನ್ನು ವಂಚಿಸಲಾರದು. ಸಹಜತೆ ಎಂದೂ ನಂಬಿಕೆಗೆ ಅರ್ಹ. ಅಸಹಜವಾದ ರೂಪವನ್ನು ಧರಿಸುವೆನು. ಈ ಸೀತೆಯನ್ನು ಅಪಹರಿಸಲು ಇಚ್ಛಿಸುತ್ತೇನೆ. ಇಲ್ಲಿ ಭಾಸನ ದೃಷ್ಟಾಂತ ತುಂಬಾ ಚೆನ್ನಾಗಿದೆ. ಸ್ವರ ಪದ ಮುಂತಾದ ವಿಶೇಷಣಗಳಿಂದ ರಹಿತವಾದ ಮಂತ್ರಗಳಿಂದ ಕೊಟ್ಟ ಆಹುತಿ ರಾಕ್ಷಸರನ್ನು ಸೇರುವಂತೆ ರಾಮನಿಲ್ಲದ ಇವಳನ್ನು ನಾನು ಅಪಹರಿಸುವೆನು. ಹೋಮ ಮಾಡುವ ಸಂದರ್ಭದಲ್ಲಿ ಮಂತ್ರಗಳಿಗೆ ಸ್ವರಗಳನ್ನು ಪದ ವಿಭಾಗವನ್ನು ಸರಿಯಾಗಿ ಮಾಡಬೇಕು. ಇಲ್ಲದಿದ್ದರೆ ಅಂತಹ ಆಹುತಿಯನ್ನು ರಾಕ್ಷಸರು ಭಕ್ಷಿಸುವರು. ಅವರ ಸಹಜಧರ್ಮವದು. ಹಾಗಾಗಿ ಉಚ್ಚಾರಣೆಯ ಸಮಯದಲ್ಲಿ ಮಂತ್ರಗಳನ್ನು ಹುಲಿ ತನ್ನ ಬಾಯಲ್ಲಿ ಮರಿಯನ್ನು ಕಾಳಜಿಯಿಂದ ಹೊತ್ತೊಯ್ಯುವಂತೆ ಜಾಗರೂಕತೆಯಿಂದ ಉಚ್ಚರಿಸಬೇಕು. ಅನೇಕ ಪುರೋಹಿಯರಿಗೆ ಈ ವಿಷಯದಲ್ಲಿ ಶ್ರದ್ಧೆ ಇಲ್ಲದೆ ರಾಕ್ಷಸ ಹೋಮ ಮಾಡುತ್ತಾರೆ.  ಪ್ರಕೃತ ಸೀತೆ ಮಂತ್ರದಂತೆ ಶ್ರೇಷ್ಠಳು. ರಾಮ ಪದ ಸ್ವರ ನಿರ್ದೇಶನದಂತೆ ಅವಳ ಬಾಳಿಗೊಂದು ರೂಪ ಕೊಟ್ಟು ಸಾರ್ಥಕ ಮಾಡಿದವನು. ಅಂತಹ ರಾಮನಿಲ್ಲದಿರೆ ಸೀತೆ ಯಾರು ಯಾರೋ ಭಕ್ಷಿಸುವ ಆಹುತಿಯಂದದಿ ದಿಕ್ಕು ತಪ್ಪುವಳು. ಆಗ ಅಪಹರಣ ಸಾಧ್ಯವಾಗುವುದು. ರಾಮನನ್ನು ವಂಚಿಸಲು ಮಾಯಾರೂಪ ಧರಿಸುತ್ತೇನೆ.ಈ ಶ್ಲೋಕದಲ್ಲಿ ಪರಿಹೀಣಾಂ ಹವ್ಯಧಾರಾಂ ನೃಪಸುತಾಂ ತಾಂ ಎಂಬ ಪ್ರಯೋಗ ಸಹಜವಾಗಿ ಶ್ಲೋಕದ ಅಂದ ಹೆಚ್ಚಿಸಿದೆ. ಸೀತೆಯನ್ನು ಪಡೆಯಲು ತಾನು ಅನರ್ಹ, ವೇದೋಕ್ತ ಆಹುತಿ ಪಡೆಯಲು ರಾಕ್ಷಸರು ಅನರ್ಹರಾದಂತೆ. ಆದರೆ ತಪ್ಪಿದಾಗ ಹೇಗೆ ಸಾಧ್ಯವಾಗುವುದೋ ಅಂತಹ ತಪ್ಪನ್ನು ಮಾಡಿಸುವೆನು ಎಂಬ ಭಾವ ರಾವಣನದು._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩