ರಾಮಾಯಣ ೩೨

📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙
ಭಾಗ-32

*ದೂಷಯೇಯುರ್ದುರಾತ್ಮಾನಃ ಪಥಿ ಮೂಲಫಲೋದಕಮ್ ರಾಕ್ಷಸಾಃ ಪಥಿ ರಕ್ಷೇಥಾಸ್ತೇಭ್ಯಸ್ತ್ವಂ ನಿತ್ಯಮುದ್ಯಶಃ*

_ರಾಮನ ಜಾಗರೂಕತೆಯ ಮಾತು. ಸೇನಾಪತಿ ನೀಲನಿಗೆ ಫಲ ಮೂಲ ಮಧುಗಳು ಹೆಚ್ಚು ಸಿಗುವ ದಾರಿಯಲ್ಲಿ ತೆರಳೋಣ. ಆಗ ಹಸಿವಿನ ಬಾಧೆ ಇರದು ಎಂದು ಹೇಳಿ ಈ ಮುಂದಿನ ಮಾತನ್ನು ಹೇಳುತ್ತಾನೆ. ದುರಾತ್ಮರಾದ ಅಸುರರು ಮಾರ್ಗದಲ್ಲಿರುವ ಫಲ ಮೂಲಾದಿಗಳಿಗೂ ನೀರಿಗೂ ವಿಷ ಬೆರೆಸುವ ಸಂಭವವಿದೆ. ಅದುದರಿಂದ ನೀನು ಜಾಗರೂಕನಾಗಿದ್ದು ಈ ಮೂರನ್ನೂ ಫಲ ಮೂಲ ಜಲ ಗಳನ್ನು ರಾಕ್ಷಸರಿಂದ ರಕ್ಷಿಸಿಕೊಳ್ಳುತ್ತಾ ಸಾಗಬೇಕು. ನಾಯಕನ ಜಾಗರೂಕತೆ ಹೇಗಿರಬೇಕು, ಶತ್ರುಗಳ ವಿಷಯದಲ್ಲಿ ಹೇಗೆ ಎಚ್ಚರಿಕೆ ವಹಿಸಬೇಕೆಂಬ ಪಾಠ ಇಲ್ಲಿದೆ. ಹಿಂದೆಯೂ ವಿಷಾಹಾರ ವಿಷಮಿಶ್ರಿತ ಜಲಪಾನವು ಸಾವಿರಾರು ಜನರನ್ನು ಬಲಿ ತೆಗೆದುಕೊಳ್ಳುತ್ತಿತ್ತು. ರಾಕ್ಷಸರು ನಮ್ಮ ಅರಿಗಳು. ಹಾಗಾಗಿ ಇಂತಹ ಮಾರ್ಗ ಅನುಸರಿಸಿ ಕೊಲ್ಲಲು ಪ್ರಯತ್ನಿಸಬಹುದು. ಮೊದಲೇ ವಿಷಾದಿಗಳನ್ನು ಬೆರೆಸಿ ಹೊರಟುಹೋಗಿರಬಹುದು. ಹಾಗಾಗಿ ಅನ್ನಾದಿಗಳ ಸೇವನೆಯ ಕಾಲದಲ್ಲಿ ತುಂಬಾ  ಜಾಗ್ರತೆ ಕಾಪಾಡಬೇಕು. ನಾವು ಹೋದಲ್ಲೆಲ್ಲ ಇಂತಹ ಜಾಗರೂಕತೆ ಹೊಂದಿರಬೇಕು. ಅಪರಿಚಿತರ ಮೋಸದ ಬಲೆಗೆ ಬೀಳುವ ಮುನ್ನ ರಾಮನ ಈ ಮಾತು ನೆನೆಸಿಕೊಳ್ಳಬೇಕು. ರೈಲು ಬಸ್ಸು ಪ್ರಯಾಣದಲ್ಲಿ ಅನೇಕರು ಆಹಾರಾದಿಗಳ ಮೂಲಕವೇ ವಂಚಿಸಿ ಸರ್ವಸ್ವವನ್ನೂ ಸೂರೆಗೈಯ್ಯುವರು. ಅದಕ್ಕಾಗಿಯೇ ರಾಮನ  ಎಚ್ಚರಿಕೆಯ ಮಾತು. ಯುದ್ಧಕ್ಕೆ ಸುಮ್ಮನೆ ಹುಂಬಂನಂತೆ ಹೊರಡದೇ ಸಾಕಷ್ಟು ವಿಚಾರ ಮಾಡಿ ಉಪಾಯ ಯೋಚಿಸಿ ಹೊರಟ ರಾಮನ ಸಿದ್ದತೆ ಅದೂ ವನವಾಸದಲ್ಲಿ ನಿಜಕ್ಕೂ ರಾಜರಿಗೆಲ್ಲ ಮಾದರಿ._

*ನೈರ್ಋತಂ ನೈರ್ಋತಾನಾಂ ಚ ನಕ್ಷತ್ರಮಭಿಪೀಡ್ಯತೇ ಮೂಲೋ ಮೂಲವತಾಂ ಸ್ಪೃಷ್ಟೋ ಧೂಪ್ಯತೇ ಧೂಮಕೇತುನಾ*

_ಲಕ್ಷ್ಮಣನಿಗೆ ಹಾದಿಯುದ್ದಕ್ಕೂ ಶುಭಶಕುನಗಳು ಕಂಡುಬಂದಿವೆ. ಆಕಾಶದಲ್ಲಿ ಇಕ್ಷ್ವಾಕು ವಂಶಜರ ನಕ್ಷತ್ರವಾದ ವಿಶಾಖಾ ನಿರ್ಮಲವಾಗಿ ಪ್ರಕಾಶಿಸುತ್ತಿದೆ. ಅದೇ ರಾಕ್ಷಸರ ನಕ್ಷತ್ರವಾದ ನಿರ್ಋತಿಯನ್ನು ದೇವತೆಯಾಗುಳ್ಳ ಮೂಲಾವು ಧೂಮಕೇತುವಿನಿಂದ ಆಕ್ರಮಿಸಲ್ಪಟ್ಟು ಪರಿತಪಿಸುತ್ತಿದೆ. ಬರಿಗಣ್ಣಿನಲ್ಲಿ ಇಷ್ಟೆಲ್ಲವನ್ನೂ ಗುರುತಿಸಬೇಕಾದರೆ ನಮ್ಮ ಹಿಂದಿನವರ ಖಗೋಳಶಾಸ್ತ್ರ ಪರಿಣತಿ ಅಚ್ಚರಿ ಮೂಡಿಸುತ್ತದೆ. ಈಗಿನ ತಜ್ಞರಿಗೂ ಕೆಲವೊಮ್ಮೆ ನಕ್ಷತ್ರಗಳ ವಿಷಯದಲ್ಲಿ ಸಂಶಯ ಭ್ರಮೆ ಕಂಡುಬರುತ್ತದೆ. ಈಗಿನಂತೆ ಉಪಗ್ರಹಗಳು ಅಥವಾ ತಂತ್ರಜ್ಞಾನ ಆಧಾರಿತ ಸಲಕರಣೆಗಳಿಲ್ಲದಿದ್ದರೂ ಇದು ವಿಶಾಖಾ ಇದು ಮೂಲಾ ಇದಕ್ಕೆ ಇಂತಹದು ಬಾಧಿಸುತ್ತಿದೆ ಎಂದು ಗುರುತಿಸುವ ಅದ್ಭುತ ಜ್ಞಾನ ನಾವು ಕಳೆದುಕೊಂಡಿರುವೆವೋ ಏನೋ! ಲಕ್ಷ್ಮಣನ ಮಾತಿದು. ರಾಮನೂ ಪೂರ್ವದಲ್ಲಿ ನಕ್ಷತ್ರಗಳ ಗ್ರಹಗಳ ಸ್ಥಿತಿಯನ್ನು ನೊಡಿಯೇ ಪ್ರಯಾಣ ಮುಂದುವರೆಸುತ್ತಾನೆ. ಹಿಂದಿನವರ ವಿಜ್ಞಾನದ ಅಗಾಧ ಜ್ಞಾನ ಇಂದು ನಮಗೆ ನೆನಪು ಮಾತ್ರ._

*ಕಾಲೇ ಕಾಲಗೃಹೀತಾನಾಂ ನಕ್ಷತ್ರಂ ಗ್ರಹಪೀಡಿತಮ್*

_ಇದಂತೂ ಭವಿಷ್ಯದ ಮಾಹಿತಿ. ಕಾಲಪಾಶದಿಂದ ಯಾರು ಬಂಧಿಸಲ್ಪಡುವರೋ ಅಂತಹವರ ನಕ್ಷತ್ರಗಳು ಸಮಯಾನುಸಾರವಾಗಿ ಗ್ರಹಗಳಿಂದ ಪೀಡಿಸಲ್ಪಡುತ್ತವೆ. ಲಕ್ಷ್ಮಣನ ಮಾತು. ಸಾವು ಸಮೀಪಿಸಿದ ವ್ಯಕ್ತಿ ಗ್ರಹ ನಕ್ಷತ್ರ ನೋಡಿದರೆ ತಿಳಿಯುವನು, ತನ್ನ ಆಯುಸ್ಸು ಮುಗಿಯಿತೆಂದು. ಹೀಗೆ ನಿಖರವಾಗಿ ಆಕಾಶಕಾಯಗಳ ಗ್ರಹಗಳ ಮಾಹಿತಿ ಲಕ್ಷ್ಮಣನ ಅಗಾಧ ಜ್ಞಾನಕ್ಕೊಂದು ನಿದರ್ಶನ._

📙 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩