ಪ್ರತಿಮಾನಾಟಕ
🌺 ಪ್ರತಿಮಾನಾಟಕದ ಒಂದು ಸುಮ 🌺
*श्रद्धेय: स्वजनस्यपौररुचितो लोकस्य दृष्टिक्षम: स्वर्गस्थस्य नराधिपस्य दयित: शीलान्वितोहं सुत: | भ्रातृणां गुणशालिनां बहुमत: कीर्तेर्महद् भाजनम् संवादेषु कथाश्रयो गुणवतां लब्धप्रियाणां प्रिय: ||*
_ಭರತನು ಕೃತಾರ್ಥನಾಗಿ ಈ ಮಾತನ್ನು ನುಡಿಯುತ್ತಿದ್ದಾನೆ. ಅಬ್ಬಾ ಈಗ ಒಂದಿಷ್ಟು ಸಮಾಧಾನವಾಯಿತು. ನನ್ನ ಮನವು ಶಾಂತತೆಯನ್ನು ಈಗ ಅನುಭವಿಸುತ್ತಿದೆ. ಬಂಧುಗಳ ವಿಶ್ವಾಸಕ್ಕೆ ಈಗ ಪಾತ್ರನಾದೆ. ರಾಮ ಸೀತಾ ಲಕ್ಷ್ಮಣರು ನನ್ನ ಮೇಲೆ ನಂಬಿಕೆ ತಾಳಿದರು. ರಾಜ್ಯವಾಳುವವ ಒಬ್ಬ ದೊರಕಿದನು ಅದೂ ಗುಣಶೀಲನೆಂದು ತಿಳಿದ ಪ್ರಜೆಗಳೂ ಮುದಗೊಂಡರು. ಲೋಕದ ದೃಷ್ಟಿಯಲ್ಲಿ ನಾನು ಕೆಟ್ಟವನಾಗಲಿಲ್ಲ. ಇಷ್ಟು ಕಾಲ ಅಧಿಕಾರದಾಹಿ ಎನ್ನುವ ಬಿರುದಿತ್ತು. ಅದೀಗ ತೊಡೆದುಹೋಯಿತು. ಸ್ವರ್ಗಸ್ಥನಾದ ತಂದೆಯ ಗುಣಗಳಿಗೆ ಸರಿಹೊಂದುವ ಕಾರ್ಯ ಈಗ ಮಾಡಿದೆ. ಅಪ್ಪನ ಬಯಕೆಯಂತೆ ಅಣ್ಣನ ಮೊರೆಹೊಕ್ಕೆ. ನಾವೆಲ್ಲರೂ ಒಂದಾಗಿರಬೇಕೆಂಬ ಅವನ ಆಸೆ ಕೈಗೂಡಿತು. ಸದ್ಗುಣಪೂರ್ಣರಾದ ರಾಮ ಲಕ್ಷ್ಮಣರೆಂಬ ಸಹೋದರರಿಂದ ಮಾನಿಸಲ್ಪಟ್ಟೆ. ಅವರಿಂದಲೇ ಕೀರ್ತಿಯನ್ನೂ ಪಡೆದೆ. ಸಜ್ಜನರ ಸಂಭಾಷಣೆಗಳಲ್ಲಿ ಪ್ರಸ್ತಾವದ ವಿಷಯವಾದೆ. ಆಹಾ ಭರತನಂತಹ ತಮ್ಮನಿರಬೇಕು ಇತ್ಯಾದಿಯಾಗಿ. ತಮ್ಮ ಮನೋರಥ ಈಡೇರಿದವರಿಗೆ ಪ್ರಿಯನಾದೆ. ಅಣ್ಣ ತಮ್ಮಂದಿರು ಒಂದಾಗಿರಲೆಂಬ ಅವರ ಆಸೆ ಪೂರ್ಣಗೊಂಡ ಕಾರಣ ಅವರಿಗೆ ಪ್ರೀತಿಪಾತ್ರನಾದೆ. ನನಗಿನ್ನೇನು ಬೇಕು ಈ ಬದುಕಲ್ಲಿ! ರಾಮನ ಅನುಗ್ರಹದಿಂದ ಆರಾಮವಾದೆ. ಇಲ್ಲದಿದ್ದರೆ ನನ್ನಬ್ಬೆ ಮಾಡಿದ ಅಪರಾಧದಿಂದ ನನ್ನನ್ನು ಲೋಕ ನಿಂದಿಸುತ್ತಿತ್ತು, ತಿರಸ್ಕರಿಸುತ್ತಿತ್ತು, ಬಗೆಬಗೆಯಾಗಿ ಆಡಿಕೊಳ್ಳುತ್ತಿತ್ತು, ಕಲಹ ಇಚ್ಛಿಸುವ ವ್ಯಕ್ತಿಗಳ ಬಾಯಿಗೆ ಆಹಾರವಾಗುತ್ತಿದ್ದೆ, ಅಣ್ಣಂದಿರ ವಾತ್ಸಲ್ಯದಿಂದ ವಂಚಿತನಾಗುತ್ತಿದ್ದೆ, ಹಾಗೆಯೇ ರಾಜ್ಯವಾಳುತ್ತಿದ್ದರೆ ಅಪ್ಪನೂ ಆನಂದಿಸುತ್ತಿರಲಿಲ್ಲ. ಆದರೆ ರಾಮಾನುಗ್ರಹವೆಂಬ ಒಂದು ಮಾಧ್ಯಮವು ಇವೆಲ್ಲವನ್ನೂ ಸಾಧಿಸಿತು. ಇಂದಿಗೆ ಕೃತಕೃತ್ಯನಾದೆ. ಭರತನ ಮನದ ತುಮುಲವನ್ನು ನಿವಾರಿಸಿದ ಈ ಸಂದರ್ಭದ ಕವಿಯ ಮಾತು ಅತುಲವಾಗಿದೆ._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ