ರಾಮಾಯಣ ೨೯

📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙
ಭಾಗ-30

*ಮತಿಮಾನ್ ಶಾಸ್ತ್ರವಿತ್ಪ್ರಾಜ್ಞಃ ಪಂಡಿತಶ್ಚಾಸಿ ರಾಘವ*

_ಸುಗ್ರೀವ ರಾಮನನ್ನು ಸಮಾಧಾನಿಸುತ್ತಿದ್ದಾನೆ. ಸೀತೆ ಕಷ್ಟದಲ್ಲಿರುವಳೆಂಬ ವಾರ್ತೆ ಕೇಳಿ ಕನಿಕರ ಹುಟ್ಟುವಂತೆ ಅಳುವ ರಾಮನನ್ನು ಸಂತೈಸುತ್ತಾ ಈ ಮಾತನ್ನು ಹೇಳುತ್ತಿರುವನು. ಈ ಶ್ಲೋಕದ ಪದಗಳೆಲ್ಲ ಒಂದೇ ಅರ್ಥ ಬರುವಂತಿವೆ. ಆದರೆ ಅರ್ಥ ಭೇದವಿದೆ. ರಾಮ, ನೀನು ಅಳುವುದು ಸರಿಯೇ! ಮುಂದಾಗುವುದನ್ನು ತಿಳಿಯುವ ಜ್ಞಾನಿ ನೀನು, ನೀತಿಶಾಸ್ತ್ರ ರಾಜ್ಯಶಾಸ್ತ್ರ ಅರ್ಥಶಾಸ್ತ್ರಗಳನ್ನೆಲ್ಲ ಸರಿಯಾಗಿ ಅರ್ಥೈಸಿಕೊಂಡವನು, ಯಥಾರ್ಥವನ್ನು ಅರಿಯುವವನು ಹಾಗೂ ಊಹಾಪೋಹಗಳಲ್ಲಿ ವಿಶೇಷ ಸಾಮರ್ಥ್ಯ ಇರುವವನು, *ನಿರ್ಣಯಾತ್ಮಕಂ ಜ್ಞಾನಂ ಪಂಡಾ ಸಾ ಯಸ್ಯ ಸಃ ಪಂಡಿತಃ* ಎಂಬ ಮಾತಿನಂತೆ ನೀನು ಹೀಗೆ ಎಂದು ನಿರ್ಣಯಿಸಿ ಅದರಂತೆ ನಡೆಸುವ ಸಮರ್ಥ, ದೃಢ ನಿರ್ಧಾರ ಹೊಂದಿದವನಾಗಿ ಏಕೆ ರೋದಿಸುವೆ. ಯುಕ್ತಾಯುಕ್ತತೆಗಳು ನಿನಗೆ ಗೊತ್ತಿರುವವೇ. ಹಾಗಿದ್ದೂ ಅಜ್ಞನಂತೆ ಏಕೆ ಕೂಗುವೆ? ಆತ್ಮನಿಂದೆ ಎಂದೂ ತರವಲ್ಲ. *ನಾತ್ಮಾನಮವಮನ್ಯೇತ* ಎಂಬ ಮಾತಿನಂತೆ ತನ್ನನ್ನು ತಾನು ದೂಷಿಸಿಕೊಳ್ಳುವವನು ಏನು ಸಾಧಿಸಿಯಾನು. ನೀನು ಆತ್ಮವಿಶ್ವಾಸ ಹೊಂದು. ಅರಿಮರ್ದನದಲ್ಲಿ ಮನವಿಡು. ಸುಗ್ರೀವನ ಈ ಮಾತು ನಮಗೂ ಅನ್ವಯಿಸುವಂತಹದು. ಕಷ್ಟ ಬಂದಾಗ ನಮ್ಮನ್ನೂ ಪರರನ್ನು ದೂಷಿಸುವ ನಾವು ನಮ್ಮ ಸಾಮರ್ಥ್ಯವೇನೆಂಬುದನ್ನು ಮರೆತು ವ್ಯವಹರಿಸುತ್ತೇವೆ. ಹಾಗೆ ಧೃತಿಗೆಡದೆ ವ್ಯವಹರಿಸಿದರೆ ಜಯ ನಮ್ಮೆಡೆಗೆ ನಡೆದು ಬರುತ್ತದೆ._

*ನಿರುತ್ಸಾಹಸ್ಯ ದೀನಸ್ಯ ಶೋಕಪರ್ಯಾಕುಲಾತ್ಮನಃ ಸರ್ವಾರ್ಥಾ ವ್ಯವಸೀದಂತಿ ವ್ಯಸನಂ ಚಾಧಿಗಚ್ಛತಿ*

_ಶತ್ರುಗಳ ನಾಶದಲ್ಲಿ ಉತ್ಸಾಹ ತಾಳು. ನಿರುತ್ಸಾಹಿಗೆ ಯಾವುದೂ ಸಿದ್ಧಿಸುವುದಿಲ್ಲ. ನಿರುತ್ಸಾಹಿಯಾಗಿ, ದೀನನಾಗಿ ( ಸಾಮರ್ಥ್ಯ ಇಲ್ಲವೆಂಬಂತೆ) ಯಾವಾಗಲೂ ಶೋಕವೆಂಬ ಬಲೆಯಲ್ಲಿ ಬಿದ್ದು ಒದ್ದಾಡುವ ಮನುಜನ ಸರ್ವಕಾರ್ಯಗಳೂ ನಷ್ಟವಾಗುತ್ತವೆ, ಹಾಗೂ ಅವನು ಇನ್ನಷ್ಟು ಆಪತ್ತನ್ನು ಪಡೆಯುವನು. ಹಾಗಾಗಿ ಉತ್ಸಾಹಿಯಾಗು. ಇದೇ ಅರ್ಥದ ಶ್ಲೋಕವೊಂದನ್ನು ವಾಲ್ಮೀಕಿಗಳು ಹನುಮನ ಕೈಯಲ್ಲಿ ಅವನಿಗೇ ಹೇಳಿಸಿದ್ದಾರೆ. ಇಲ್ಲಿ ಸ್ವಲ್ಪ ಬದಲಾವಣೆಯಿಂದ ಸುಗ್ರೀವನಿಂದ ಹೇಳಿಸಿದ್ದಾರೆ. ನಮಗೆಲ್ಲ ಮತ್ತೆ ಮತ್ತೆ ತಿಳಿಹೇಳುವ ವಾಲ್ಮೀಕಿಗಳಿಗೆ ಕೃತಜ್ಞತೆ ಅರ್ಪಿಸೋಣ._

*ಪುರುಷಸ್ಯ ಹಿ ಲೋಕೇಸ್ಮಿನ್ ಶೋಕಃ ಶೌರ್ಯಾಪಕರ್ಷಣಃ*

_ಈ ಲೋಕದಲ್ಲಿ ಶೋಕವೆಂಬ ಭೂತವು ಮನುಷ್ಯನ ವೀರ್ಯ ಶೌರ್ಯಗಳನ್ನು ಹಾಳುಮಾಡಿಬಿಡುತ್ತದೆ. ವಿಧಿಯ ನಿರ್ಣಯ ಹೀಗೆ ಇರುವುದೆಂದು ಭಾವಿಸಿ ಮುಂದಡಿ ಇಡಬೇಕೇ ಹೊರತು  ಶೋಕ ಪಡುವುದಲ್ಲ._

📙 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩