ರಾಮಾಯಣ
📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙
ಭಾಗ-26
*ನೈಷಾಮಕೃತಕಾರ್ಯಾಣಾಮೀದೃಶಃ ಸ್ಯಾದ್ವ್ಯತಿಕ್ರಮಃ*
_ಸುಗ್ರೀವನ ಮಾತಿದು. ದಧಿಮುಖನು ಕಪಿಗಳು ನಿನ್ನ ಪ್ರೀತಿಯ ಮಧುವನವನ್ನು ಹಾಳುಗೆಡವುತ್ತಿದ್ದಾರೆ ಎಂದಾಗ ಹೇಳುವ ನುಡಿ. ಕಾರ್ಯವನ್ನು ಸಾಧಿಸದಿದ್ದರೆ ಅವರು ಹೀಗೆ ಅತಿಕ್ರಮಣ ಮಾಡುತ್ತಿರಲಿಲ್ಲ. ನನ್ನ ಅನುಮತಿ ಇಲ್ಲದೇ ಪ್ರವೃತ್ತಿ ಮಾಡಿದ್ದಾರೆಂದರೆ ನಾನು ಹೇಳಿದ ಕಾರ್ಯ ಸಾಧಿಸಿದ್ದಾರೆಂದೇ ಅರ್ಥ. ಹಾಗಾಗಿ ಅವರನ್ನು ಶಿಕ್ಷಿಸದಿರು. ಇಲ್ಲಿ ಒಬ್ಬ ರಾಜನಾಗಿ ಸುಗ್ರೀವನ ಯೋಚನೆ ಸರಿಯಾದ ರೀತಿಯಲ್ಲಿ ಸಾಗಿದೆ. ಹನುಮಂತ ಅಂಗದ ಜಾಂಬವಂತ ಮೊದಲಾದವರು ಜ್ಞಾನಿಗಳು. ಅರಿಯದೇ ಉರಿಯುವವರಲ್ಲ. ಹಾಗಾಗಿ ಅವರ ಪ್ರವೃತ್ತಿ ತಮ್ಮ ಕಾರ್ಯ ಯಶಸ್ವಿಯಾಗಿರುವುದರ ಸಂಕೇತ._
*ಕಾರ್ಯಸಿದ್ಧಿರ್ಹನುಮತಿ ಮತಿಶ್ಚ ಹರಿಪುಂಗವೇ ವ್ಯವಸಾಯಶ್ಚ ವೀರ್ಯಂ ಚ ಶ್ರುತಂ ಚಾಪಿ ಪ್ರತಿಷ್ಠಿತಮ್*
_ಸುಗ್ರಿವ ಮತ್ತೆ ಸಮರ್ಥಿಸುತ್ತಿದ್ದಾನೆ. ಹನುಮನಲ್ಲಿ ವಿಜಯವನ್ನು ಸಾಧಿಸುವ ಛಲವಿದೆ. ಅದಕ್ಕೆ ಸಮನಾದ ಬುದ್ಧಿಯೂ ಇದೆ. ಪ್ರಯತ್ನ, ಪರಾಕ್ರಮ, ವಿದ್ಯೆ ಈ ಮೂರು ಅವನೊಬ್ಬನಲ್ಲಿಯೇ ಪ್ರತಿಷ್ಠಿತವಾಗಿವೆ. ಯಾವ ಕಾರ್ಯವಾದರೂ ಯಶ ಪಡೆಯಲು ಪ್ರಯತ್ನ ಮುಖ್ಯ. ಜೊತೆಗೆ ಬುದ್ಧಿವಂತಿಕೆ ಇದ್ದರೆ ಸುಲಭ ಸಾಧ್ಯ. ಅದರ ಜೊತೆಗೆ ಸಾಹಸ ಅಥವಾ ಪರಾಕ್ರಮವೂ ಇದ್ದರೆ ಎಷ್ಟೇ ಅಡೆತಡೆಗಳಿದ್ದರೂ ಯಶಸ್ಸು ತಾನಾಗಿ ಒಲಿದುಬರುತ್ತದೆ. ಉಳಿದವರಲ್ಲಿ ಒಬ್ಬೊಬ್ಬರಲ್ಲಿ ಇರುವ ಒಂದೊಂದು ಗುಣಗಳು ಹನುಮನ ಮಟ್ಟಿಗೆ ಒಂದೇ ಕಡೆ ಮನೆಮಾಡಿವೆ. ಹಾಗಾಗಿ ಅವನು ಹೊರಟನೆಂದರೆ ಕಾರ್ಯ ಯಶಸ್ವಿಯಾಯಿತೆಂದೇ ಅರ್ಥ. ನಮಗೂ ಈ ಮೂರು ಗುಣಗಳು ಮಾದರಿ. ಕಾರ್ಯದಲ್ಲಿ ತೊಡಗಲು ಬೇಕಾದ ವಿದ್ಯೆಯನ್ನು ಮೊದಲು ಸಂಪಾದಿಸಬೇಕು. ಅದಕ್ಕೆ ತಕ್ಕುದಾದ ಪ್ರಯತ್ನವೂ ಇದ್ದು ಸಾಧಿಸುವ ಛಲವಿದ್ದರೆ ಮೇರು ಪರ್ವತವೂ ಕೂಡ ತಮ್ಮೆದುರು ತಲೆಬಾಗೀತು. ಯಾವ ಕಾರ್ಯವೂ ಅಸಾಧ್ಯವಾಗದು._
*ಜಾಂಬವಾನ್ಯತ್ರ ನೇತಾ ಸ್ಯಾದಂಗದಶ್ಚ ಮಹಾಬಲಃ ಹನುಮಾಂಶ್ಚಾಪ್ಯಧಿಷ್ಠಾತಾ ನ ತಸ್ಯ ಗತಿರನ್ಯಥಾ*
_ಜಾಂಬವಂತನು ಯಾವ ಕಾರ್ಯದಲ್ಲಿ ನಾಯಕನಾಗಿರುವನೋ, ಮಹಾಬಲನಾದ ಅಂಗದನು ಯಾವ ಕಾರ್ಯದಲ್ಲಿ ಪಾಲ್ಗೊಂಡಿರುವನೋ, ಹನುಮಂತನು ಕಾರ್ಯನಿರ್ವಾಹಕನಾಗಿರುವನೋ ಅಂತಹ ಕಾರ್ಯಗಳು ನಡೆಯುವುದರಲ್ಲಿ ಯಾವ ಸಂಶಯವೂ ಇಲ್ಲ. ಸುಗ್ರೀವ ಇಲ್ಲಿ ಇವರಾರೂ ಎದುರಿಲ್ಲದಿದ್ದರೂ ಹೊಗಳುತ್ತಿದ್ದಾನೆ. ಇದು ರಾಜನಿಗಿರಬೇಕಾದ ಮೊದಲ ಗುಣ. ಪರಗುಣಗಳನ್ನು ಗುರುತಿಸಿ ಶ್ಲಾಘಿಸುವುದು. ತನ್ನ ಶತ್ರುವಿನ ಮಗನನ್ನೂ ಹೊಗಳುತ್ತಾನೆ. ಹನುಮನು ಹಾರುವುದರಲ್ಲಿ ಉತ್ಸಾಹ ತೋರದಿದ್ದಾಗ ಜಾಂಬವಂತನು ಅವನಲ್ಲಿ ಉತ್ಸಾಹ ತುಂಬುತ್ತಾನೆ. ಇದು ನಾಯಕನ ಕೆಲಸ. ತಮ್ಮ ಸಹಚರರಲ್ಲಿ ಧೈರ್ಯ ತುಂಬಿ ಈ ಕೆಲಸ ಅವರಿಂದ ಸಾಧ್ಯ ಎಂಬ ನಂಬಿಕೆ ಹುಟ್ಟಿಸುವುದು. ಹಾಗಾಗಿ ಜಾಂಬವಂತನ ಬಲಿಷ್ಠ ನಾಯಕತ್ವ. ಅನುಭವಿಯೂ ಹೌದು ಅವನು. ಇನ್ನು ಕಪಿಗಳಿಗೆ ಮಾರ್ಗ ಮಧ್ಯೆ ಬಂದ ಅಡೆತಡೆಗಳನ್ನು ಪರಿಹರಿಸಿದವನು ಅಂಗದ. ಹಾಗಾಗಿ ಅವನ ಬಲವೂ ಇಲ್ಲಿ ಪ್ರಯೋಜನ ಹೊಂದಿದೆ. ಇನ್ನು ಕಡೆಯದಾಗಿ ಹನುಮಂತನ ಕಾರ್ಯನಿರ್ವಹಣೆ. ಇದು ತುಂಬಾ ಮಹತ್ವದ ಕೆಲಸ. ಕೆಲವೊಮ್ಮೆ ನಾಯಕರಿಗಿಂತ ಅಥವಾ ಬಕಿಷ್ಠರಿಗಿಂತ ಹೆಚ್ಚು ಕಾರ್ಯ ಉಳಿದವರೇ ಮಾಡುವರು. ಇಲ್ಲಿ ಇವರೀರ್ವರ ಜೊತೆಗೆ ಹನುಮಂತನ ಶ್ರೇಷ್ಠತೆ ಜೊತಗೂಡಿದ ಕಾರಣ ದಾರಿ ಸುಗಮವಾಗಿ ಗುರಿ ತಲುಪಿದೆ. ನಾವೂ ಈ ಮೂರನ್ನೂ ಪಡೆಯೋಣ._
📙 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ