ರಾಮಾಯಣ ೨೯

📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙
ಭಾಗ-29

*ಭೃತ್ಯಸ್ತು ಯಃ ಪರಂ ಕಾರ್ಯಂ ನ ಕುರ್ಯಾನ್ನೃಪತೇಃ ಪ್ರಿಯಮ್ ಭೃತ್ಯೋ ಯುಕ್ತಃ ಸಮರ್ಥಶ್ಚ ತಮಾಹುರ್ಮಧ್ಯಮಂ ನರಮ್*

_ರಾಮನು ಸೇವಕನ ಲಕ್ಷಣ ಮುಂದುವರೆಸುತ್ತಿರುವನು. ಒಂದು ಕಾರ್ಯಕ್ಕೆ ನಿಯುಕ್ತನಾದ ಸೇವಕನು ಯೋಗ್ಯನಾಗಿಯೂ ಮತ್ತು ಸಮರ್ಥನಾಗಿಯೂ ಹೇಳಿದ ಕಾರ್ಯ ಮಾತ್ರ ನಿರ್ವಹಿಸಿ ರಾಜನಿಗೆ ಪ್ರಿಯವಾಗುವ ಬೇರೆ ಕಾರ್ಯಗಳನ್ನು ಮಾಡದಿದ್ದರೆ ಅಂತಹ ಸೇವಕನು ಮಧ್ಯಮನು. ನಮಗೆ ಗೊತ್ತಿದ್ದಾಗ ಸರಿಯೆಂದೆನಿಸಿದಾಗ  ಯಾರ ಅಪ್ಪಣೆಯೂ ಬೇಡ. ನಾವೇ ತೊಡಗಿ ಮಾಡುವುದು ಉತ್ತಮತೆ. ಗೊತ್ತಿದ್ದೂ ಸುಮ್ಮನಿದ್ದೆವೆಂಬ ಅಪವಾದ ಯಾಕೆ!_

*ನಿಯುಕ್ತೋ ನೃಪತೇಃ ಕಾರ್ಯಂ ನ ಕುರ್ಯಾದ್ಯಃ ಸಮಾಹಿತಃ ಭೃತ್ಯೋ ಯುಕ್ತಃ ಸಮರ್ಥಶ್ಚ ತಮಾಹುಃ ಪುರುಷಾಧಮಮ್*

_ರಾಜನಿಂದ ಒಂದು ಕಾರ್ಯದಲ್ಲಿ ನಿಯುಕ್ತನಾಗಿಯೂ ಆ ಕಾರ್ಯ ಸಾಧಿಸುವ ಸಾಮರ್ಥ್ಯ ಯೋಗ್ಯತೆಗಳಿದ್ದರೂ ಏಕಾಗ್ರತೆಯಿಂದ ಸ್ವಾಮಿ ಕಾರ್ಯವನ್ನು ಮಾಡದೇ ಉಳಿಯುವವನು ಪುರುಷಾಧಮನು. ಇದನ್ನೇ ಹಿರಿಯರು ಹೇಳಿದ್ದು. ಹೇಳದೆ ಮಾಡುವುದು ಉತ್ತಮ, ಹೇಳಿ ಮಾಡುವುದು ( ಹೇಳಿದ್ದನ್ನಷ್ಟೇ) ಮಧ್ಯಮ, ಹೇಳಿಯೂ ಮಾಡದಿರುವುದು ಅಧಮ. ನಾವು ಮೂವರಲ್ಲಿ ಯಾರೆಂದು ನಮ್ಮ ಕರ್ಮಗಳಿಂದ ನಿರ್ಧರಿಸಬೇಕು._

*ಏಷ ಸರ್ವಸ್ವಭೂತಸ್ತು ಪರಿಷ್ವಂಗೋ ಹನೂಮತಃ ಮಯಾ ಕಾಲಮಿಮಂ ಪ್ರಾಪ್ಯ ದತ್ತಶ್ಚಾಸ್ತು ಮಹಾತ್ಮನಃ*

_ರಾಮನ ಮಾತು. ಹನುಮನು ಇಷ್ಟು ಪ್ರಿಯವಾದ ಕಾರ್ಯ ಮಾಡಿದ್ದರೂ ನನಗೆ ಈ ಸಮಯದಲ್ಲಿ ಏನನ್ನೂ ಕೊಡಲಾಗುತ್ತಿಲ್ಲ. ಇಲ್ಲಿ ಯಾವುದೂ ನನ್ನ ಅಧೀನದಲ್ಲಿ ಇಲ್ಲ. ಆದರೆ ಕೊಡಬೇಕೆಂಬ ಮನವು ಸುಮ್ಮನಿರಲು ಬಿಡುತ್ತಿಲ್ಲ. ಈ ಸಮಯದಲ್ಲಿ ಕಾರ್ಯದಿಂದಲೇ ಮಹಾತ್ಮನೆನಿಸಿದ ಈ ಹನುಮನಿಗೆ ಗಾಢವಾದ ಆಲಿಂಗನಸುಖವನ್ನು ಕೊಡುವೆನು. ವನವಾಸಿಯಾದ ನನ್ನ ಬಳಿ ಕೊಡಲಿರುವುದು ಅದೊಂದೇ ಆಗಿದೆ. ಇದೇ ನನ್ನ ಸರ್ವಸ್ವ. ಪ್ರೀತಿಯ ಅಭಿವ್ಯಕ್ತಿಯಲ್ಲಿ ಉತ್ತಮ ಮಾಧ್ಯಮ ಆಲಿಂಗನ. ನಮ್ಮ ಪ್ರಧಾನಿಗಳಿಗೆ ರಾಮನೇ ಸ್ಫೂರ್ತಿ. ಹೋದಲ್ಲೆಲ್ಲ ಹಿರಿ- ಕಿರಿಯರನ್ನು ಅಪ್ಪಿ ಆತ್ಮೀಯತೆಯನ್ನು ಸಾರುತ್ತಾರೆ. ರಾಮನಂತೆ ನೀಡುವ ಬುದ್ಧಿ ನಮಗೂ ಬರಲಿ. ಎಷ್ಟೋ ಬಾರಿ ಪರರಿಂದ ಉಪಕೃತರಾಗಿಯೂ ಒಂದು ಮಾತನ್ನೂ ಆಡದೇ ಬಿಗುಮಾನ ಅಹಂಕಾರ ತೋರುತ್ತೇವೆ.  ಸಂತೋಷದ ಮಾತನ್ನಾದರೂ ಕೊಡಬಹುದಲ್ಲವೇ. ಅಂತಹ ಆರೋಗ್ಯಕರ ವರ್ತನೆ ನಮ್ಮದಾಗಲಿ._

📙 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩