ವೇದ-ಧರ್ಮ
📗🌾📙 ವೇದ-ಧರ್ಮ 📗🌾📙 ಭಾಗ-22
*ವೇದಾಂಗಗಳು*
*ನಿರುಕ್ತ*
_ವೇದ ಮಂತ್ರಗಳ ಪದವಿಭಾಗ, ಮಂತ್ರಾರ್ಥ, ಮಂತ್ರವಾಚ್ಯವಾದ ದೇವತೆ ಇವುಗಳನ್ನೆಲ್ಲ ತಿಳಿಸಿಕೊಡುವ ಗ್ರಂಥವೇ ನಿರುಕ್ತ. *ನಿ= ನಿಶ್ಚಯೇನ ಅಧಿಕಂವಾ ನಿಗೂಢಾರ್ಥಾನ್ ವಾ ಮಂತ್ರಾರ್ಥಾನ್ ಗಮಯಂತಿ ಇತಿ ನಿಗಮ:* ಎಂಬಂತೆ ಮಂತ್ರದ ಒಳಾರ್ಥವನ್ನು ಅಥವಾ ಸರಿಯಾದ ಅರ್ಥವನ್ನು ತಿಳಿಸಿಕೊಡುವುದು ನಿರುಕ್ತ. ಅದರ ಇನ್ನೊಂದು ಹೆಸರು ನಿಗಮ ಅಥವಾ ನಿಘಂಟು. *ನಿಗಮನಾನ್ನಿಘಂಟವಃ* ಎಂಬಂತೆ ಅರ್ಥ ಆಗುವ ದಾರಿಯಲ್ಲಿ ತೊಡಗುವ ಕಾರಣ ಅಂದರೆ ಅರ್ಥ ಮಾಡಿಸುವ ಕಾರಣ ಅವುಗಳು ನಿಘಂಟುಗಳು._
_ಕನ್ನಡ ಭಾಷೆಗೆ ಶಬ್ದಮಣಿದರ್ಪಣ, ಆಂಗ್ಲಕ್ಕೆ ಆಕ್ಸ್ಫರ್ಡ್ ನಿಘಂಟು ಇದ್ದಂತೆ ವೇದ ಕಾಲೀನ ಭಾಷೆಯ ನಿಘಂಟು ಈ ನಿರುಕ್ತ._
_ಯಾಸ್ಕರು ಈ ನಿರುಕ್ತವನ್ನು ಬರೆದ ಮಹನೀಯರು. ಅವರ ಈ ಗ್ರಂಥದಲ್ಲಿ ಮುಖ್ಯವಾಗಿ ಮೂರು ಕಾಂಡಗಳಿವೆ. ಒಂದನೇ ಕಾಂಡದಲ್ಲಿ ಒಂದೇ ಅರ್ಥವಿರುವ ನಾನಾ ಶಬ್ದಗಳು, ಪರ್ಯಾಯ ಶಬ್ದಗಳ ವಿವರಣೆಯಿದೆ. ಇಲ್ಲಿ ಮತ್ತೆ ಮೂರು ಅಧ್ಯಾಯಗಳಿವೆ. ಮೊದಲ ಅಧ್ಯಾಯದಲ್ಲಿ ಭೂಮಿಯೇ ಮೊದಲಾದ ಲೋಕಗಳ ವೇದೋಕ್ತ ಹೆಸರುಗಳು, ಕಾಲದ ಬೇರೆ ಬೇರೆ ಮಾಪಕದ ಹೆಸರುಗಳು, ದ್ರವ್ಯಗಳ ಹೆಸರು ಹೇಳಲ್ಪಟ್ಟಿದೆ. ಎರಡನೆಯ ಅಧ್ಯಾಯದಲ್ಲಿ ಮನುಷ್ಯರ ಹಾಗೂ ಅವರ ಅವಯವಗಳ ಹೆಸರುಗಳೂ, ಮೂರನೆಯದರಲ್ಲಿ ವೇದೋಕ್ತ ದ್ರವ್ಯಗಳ ತನುತ್ವ, ( ಆಕಾರ) ಗಾತ್ರ , ಮುಂತಾದ ಗುಣಗಳನ್ನು ಹೇಳುವ ಶಬ್ದಗಳಿವೆ._
_ಇನ್ನು ಎರಡನೆಯ ಕಾಂಡದಲ್ಲಿ ಒಂದು ಅರ್ಥಕ್ಕೆ ಉಪಯುಕ್ತವಾಗುವ ವೇದದೊಳಗಿನ ಎಲ್ಲಾ ಶಬ್ದಗಳನ್ನು ಹೇಳಿದ್ದಾರೆ. ಇದಕ್ಕೆ ನೈಗಮ ಕಾಂಡವೆಂಬ ಹೆಸರೂ ಇದೆ. ಮೂರನೆಯ ಕಾಂಡವೂ ದೇವತೆಗಳ ಬಗೆಗೆ ಹೇಳುವ ಕಾರಣ ಇದನ್ನು ದೈವತಕಾಂಡವೆಂದೂ ಕರೆಯುವರು. ಒಟ್ಟು ಮೂರು ಕಾಂಡಗಳಲ್ಲಿ ಐದು ಅಧ್ಯಾಯಗಳಲ್ಲಿ ಈ ನಿರುಕ್ತವಿದೆ._
_ಯಾಸ್ಕರು ಮತ್ತೆ ಹಿಂದೆ ಹೇಳಿದ ವಿಷಯಗಳ ಬಗ್ಗೆ ಮುಂದುವರೆಸುತ್ತಾ ಮತ್ತಷ್ಟು ಮಾಹಿತಿ ಪರಿಶಿಷ್ಟದಲ್ಲಿ ಕೊಡುತ್ತಾರೆ. ವೇದಭಾಷ್ಯಕಾರರಾದ ಸಾಯಣರ ಮತದಂತೆ ಇದು ವೇದಾಂಗ ಮಾತ್ರವಲ್ಲ ಒಂದು ರೀತಿಯ ವೇದವೂ ಹೌದು. ವೇದ ಶಬ್ದಗಳಿಂದಲೇ ರಚಿತವಾದ ನಿರುಕ್ತವು ವೇದದ ಅವಯವ ಆಗಿರುವ ಕಾರಣ ವೇದವೇ ಎನ್ನುವುದು ಸೂಕ್ತವಾಗುತ್ತದೆ. ಹಾಗಾಗಿಯೇ ನಿರುಕ್ತದ ಪಠನಕ್ಕೆ ವೇದಪಠನದ ಫಲವನ್ನೇ ಹೇಳುತ್ತಾರೆ._
_ನಿರುಕ್ತವು ಯಾಸ್ಕರಿಗಿಂತ ಮೊದಲು ಶಾಕಪೂಣಿಯಿಂದ ಬರೆಯಲ್ಪಟ್ಟಿತ್ತು. ಆದುದರಿಂದಲೇ ಯಾಸ್ಕರು *ನೈರುಕ್ತ ಸಮಯಃ ನೈರುಕ್ತಾಃ* ಎಂದು ಅಲ್ಲಲ್ಲಿ ನಿರುಕ್ತ ಸಂಪ್ರದಾಯವನ್ನು ಹೇಳುತ್ತಾರೆ. ಅದರೆ ಪೂರ್ವಿಕರ ಗ್ರಂಥಗಳು ನಷ್ಟವಾಗಿ ಯಾಸ್ಕರ ಗ್ರಂಥವೊಂದೇ ಪ್ರಚಲಿತದಲ್ಲಿದೆ._
_*ವರ್ಣಾಗಮೋ ವರ್ಣವಿಪರ್ಯಯಶ್ಚ ದ್ವೌ ಚಾಪರೌ ವರ್ಣವಿಕಾರನಾಶೌ ಧಾತೋಸ್ತದರ್ಥಾತಿಶಯೇನ ಯೋಗಃ ತದುಚ್ಯತೇ ಪಂಚವಿಧಂ ನಿರುಕ್ತಮ್* ಎಂಬ ಶಬ್ದಕಲ್ಪದ್ರುಮದ ಲಕ್ಷಣದಂತೆ ವರ್ಣಗಳ ಸೇರಿಸುವಿಕೆ, ಸ್ಥಳಾಂತರ, ವಿಕಾರ ಮಾಡುವುದು, ಲೋಪ ಮಾಡುವುದು, ಧಾತುವಿನ ವಿಶಿಷ್ಟಾರ್ಥದ ಬಳಕೆ ಎಂಬ ಐದು ವಿಧ ನಿರೂಪಣೆ ಇಲ್ಲಿದೆ._
_ನಿರುಕ್ತದಲ್ಲಿ ಬರುವ ಒಂದು ಪ್ರಮುಖ ತಾತ್ವಿಕ ವಿಚಾರ- ಎಲ್ಲಾ ನಾಮಪದಗಳೂ ಧಾತು ನಿಷ್ಪನ್ನವೇ ಅಲ್ಲವೇ ಎಂಬುದು. ಗಾರ್ಗ್ಯರನ್ನು ಬಿಟ್ಟು ಉಳಿದವರೆಲ್ಲಾ ನಾಮಪದಗಳನ್ನು ಧಾತುಜನ್ಯ ಎಂದೇ ಗುರುತಿಸಿದ್ದಾರೆ. ಈ ನಿರುಕ್ತದಲ್ಲಿ ಕೆಲವೊಂದು ವಿಶೇಷ ಸನ್ನಿವೇಶದ ಅಥವಾ ಶಬ್ದಗಳ ಪರಿಚಯದ ಸಂದರ್ಭ ನಾನಾ ಪುರಾಣ ಕಥೆಗಳೂ ಕಂಡುಬರುತ್ತವೆ. ಹಾಗಾಗಿ ಓದುಗರಿಗೆ ಬೇಸರ ತರಿಸದೇ ಮುಂದುವರೆಯುವುದು. ವೇದಾರ್ಥ ಅರಿಯಲು ಬಹುಮುಖ್ಯ ಸಾಧನ ಈ ನಿರುಕ್ತ. ವೇದದ ಭಾಷೆಯ ಸೊಗಸು, ಅಲಂಕಾರ ಪ್ರಯೋಗ ಮುಂತಾದ ಜ್ಞಾನಕ್ಕೂ ಇದರ ಅಧ್ಯಯನ ಅವಶ್ಯಕ._
📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ