ವೇದ ಧರ್ಮ ೨೫
📗🌾📙 ವೇದ-ಧರ್ಮ 📗🌾📙 ಭಾಗ-25
*ಋಷಿ ಛಂದಸ್ಸು ದೇವತೆ*
_ಋಷೀಕರು ಮತ್ತು ಶ್ರುತರ್ಷಿಗಳು ಹಿಂದೆ ಹೇಳಿದ ಋಷಿಪುತ್ರರಿಗಿಂತ ಸ್ವಲ್ಪ ಕಡಿಮೆ ಸಾಧಕರು. ಋಷಿಗಳಿಂದ ನೇರವಾಗಿ ವಿಷಯಗಳನ್ನು ಕೇಳಿ ತಿಳಿದವರು. ವಾಲ್ಮೀಕಿ, ಮತಂಗ ಮುಂತಾದವರು ಈ ಗುಂಪಿಗೆ ಸೇರುವರೇನೋ! *ಇತ್ಯೇತಾ ಋಷಿಜಾತಿಸ್ತಾ ನಾಮಭಿಃ ಪಂಚ ವೈ ಶೃಣು* ಎಂದು ಐದು ಬಗೆಯ ಋಷಿಗಣವನ್ನು ಹೆಸರಿಸಿದ್ದಾರೆ. ಇವರು ಮೇಲು- ಕೀಳು ಎನ್ನುವುದಕ್ಕಿಂತ ಹೆಚ್ಚಿನ ಸಾಧನೆ ಸ್ವಲ್ಪ ಕಡಿಮೆ ಸಾಧನೆ ಎಂದು ಹೇಳುವುದೇ ಸಮಂಜಸ._
*ಋಷಿರ್ವೇದಃ* _ಎಂಬಂತೆ ವೇದಗಳನ್ನು ರಚಿಸಿ ಪ್ರಚಾರ ಮಾಡಿದವರು ಪುರಾತನ ಮಹರ್ಷಿಗಳು ಎಂದು ಬುದ್ಧನ ವಚನವೆಂದು ಅವನ ಶಿಷ್ಯನಾದ ಶಾಂತರಕ್ಷಿತನ ಮಾತು. ಒಟ್ಟಾರೆಯಾಗಿ ರಚಿಸಿದರು ಎನ್ನುವುದಕ್ಕಿಂತ ಕಂಡುಕೊಂಡರು ಎನ್ನುವುದು ಹೆಚ್ಚು ಸೂಕ್ತವಾಗುತ್ತದೆ. ಇಲ್ಲದಿದ್ದರೆ ರಾಮಾಯಣ ಭಾರತ ಕಾವ್ಯಾದಿಗಳು ವೇದವೆನಿಸುತ್ತಿದ್ದವು. ಪುರಾಣ ಮುಂತಾದ ವರ್ಗೀಕರಣ ಅಪ್ರಸ್ತುತ ಆಗುತ್ತಿತ್ತೇನೋ!_
*ದೇವತೆ*
_ಮಂತ್ರಗಳು ಯಾರನ್ನು ಉದ್ದೇಶಿಸಿ ಇವೆಯೋ, ಮಂತ್ರಗಳ ಪ್ರತಿಪಾದ್ಯ ಯಾರಿರುವರೋ ಅವರೇ ಆ ಮಂತ್ರದ ದೇವತೆ ಎನಿಸುತ್ತಾರೆ. ಉದಾಹರಣೆಗೆ- *ಗಣಾನಾಂ ತ್ವಾ ಗಣಪತಿಂ* ಎಂಬ ಮಂತ್ರವು ಗಣಪತಿಯ ಮಹಿಮೆಯನ್ನು ಸ್ತುತಿಸುತ್ತಿದೆ. ಹಾಗಾಗಿ ಆ ಮಂತ್ರಕ್ಕೆ ಅವನೇ ದೇವತೆ. ಎಲ್ಲಾ ಮಂತ್ರಗಳು ಶಿವನನ್ನೋ ವಿಷ್ಣುವನ್ನೋ ಪ್ರತಿಪಾದಿಸುವಂತಿದ್ದರೆ ಇಂತಹ ವ್ಯತ್ಯಾಸ ಸುಮ್ಮನೆನಿಸುವುದು. ಹಾಗಾಗಿ ಋಷಿಗಳು ಕಂಡ ಆಯಾ ರೂಪದ ದೇವತೆಗಳೇ ಆಯಾ ಮಂತ್ರದ ಅಭಿಮಾನಿಗಳು ಎಂದು ಹೇಳಿದರೆ ಸರಿಯಾಗುವುದು. ಅನೇಕ ಋಕ್ಕುಗಳ ಸಮುದಾಯವನ್ನು ಸೂಕ್ತ ಎನ್ನುವರು. ಇಂತಹ ಸೂಕ್ತಗಳು ಒಂದೊಂದು ದೇವತೆಯನ್ನು ಉದ್ದೇಶಿಸಿ ಹೆಚ್ಚಾಗಿ ಇರುತ್ತವೆ. ಆದರೆ ಕೆಲವೊಮ್ಮೆ ಒಂದೇ ಸೂಕ್ತದಲ್ಲಿ ಬೇರೆ ಬೇರೆ ಋಕ್ಕುಗಳಿಗೆ( ಮಂತ್ರಗಳಿಗೆ) ಬೇರೆ ಬೇರೆ ದೇವತೆಗಳಿರಬಹುದು. ಒಂದೇ ಋಕ್ಕಿನಲ್ಲಿ ಪೂರ್ವಾರ್ಧಕ್ಕೆ ಒಂದು ದೇವತೆ, ಉಳಿದ ಭಾಗಕ್ಕೆ ಇನ್ನೊಂದು ದೇವತೆ ಹೀಗೂ ಇರುತ್ತದೆ. ಒಂದೇ ಮಂತ್ರವು ಏಕಕಾಲದಲ್ಲಿ ಅನೇಕ ದೇವತೆಗಳನ್ನೂ ಸ್ತುತಿಸಿರಬಹುದು. ಆದರೆ ಸಾಮಾನ್ಯವಾಗಿ ಒಂದು ಮಂತ್ರಕ್ಕೆ ಒಂದೇ ದೇವತೆ ಇರುವುದು._
_ಮಂತ್ರಗಳಿಗೆ ದೇವತೆ ನಿರ್ಣಯಿಸುವಾಗ ಮಂತ್ರಾರ್ಥ ಗಮನಿಸಬೇಕು. ಮಂತ್ರವು ದೇವತೆಯನ್ನು ಸಂಬೋಧಿಸುವಂತೆ, ಸ್ತುತಿಸುವಂತೆ, ವರ್ಣಿಸುವಂತೆ ಇರಬಹುದು,ಅಥವಾ ಆಶೀರ್ವಾದ ರೂಪದಲ್ಲೂ ಇರಬಹುದು. ಬರಿಯ ದೇವತೆಗಳಲ್ಲದೆ ಕೆಲವೊಮ್ಮೆ ನದಿ ಸಮುದ್ರ ಬಾಣ ಬತ್ತಳಿಕೆ ಒನಕೆ ಒರಳು ಹಸ್ತ ಪಾದ ಮುಂತಾದವುಗಳನ್ನೂ ದೇವತೆಗಳೆಂದು ಕರೆದು ಸ್ತುತಿಸುತ್ತದೆ. ಹೀಗಾಗಿ ಪ್ರಕೃತಿ ಪೂಜೆ ಜನಪದದ ಕೊಡುಗೆಯಲ್ಲ. ವೇದದ ಉಲ್ಲೇಖವನ್ನೇ ಜನಪದವು ಆಡುಮಾತಿನಲ್ಲಿ ಹೇಳಿತಷ್ಟೇ. ಈ ಜಡವಸ್ತುಗಳಲ್ಲೂ ದೇವರನ್ನು ಕಾಣುವ ನಮ್ಮ ಋಷಿಗಳ ಮನಸ್ಥಿತಿ ನಿಜಕ್ಕೂ ಅತ್ಯುತ್ತಮ. ಇದನ್ನೇ ವ್ಯಾಸರು ತಮ್ಮ ಬ್ರಹ್ಮಸೂತ್ರದಲ್ಲಿ ನುಡಿದಿದ್ದಾರೆ- *ಅಭಿಮಾನಿ ವ್ಯಪದೇಶಸ್ತು ವಿಶೇಷಾನುಗತಿಭ್ಯಾಮ್* ಎಂಬುದಾಗಿ. ಇಂತಹ ಜಡವಸ್ತುಗಳಲ್ಲೂ ಅಭಿಮಾನಿ ದೇವರನ್ನು ಕಂಡು ಪೂಜಿಸುವ ರೀತಿ ಮೊದಲಿಗೆ ಯಜ್ಞಗಳಲ್ಲಿ ಕಂಡುಬಂದಿರಬಹುದೆಂಬುದು ವಿದ್ವಾಂಸರ ಮತ._
ಮುಂದುವರಿಯುತ್ತದೆ....
📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ