ರಾಮಾಯಣ ೩೮
📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙
ಭಾಗ-38
*ಮಂತ್ರಿಭಿರ್ಹಿತಸಂಯುಕ್ತೈಃ ಸಮರ್ಥೈರ್ಮಂತ್ರನಿರ್ಣಯೇ ಮಿತ್ರೈರ್ವಾಪಿ ಸಮಾನಾರ್ಥೈರ್ಬಾಂಧವೈರ್ವಾ ಸಮಾಹಿತೈಃ ಸಹಿತೋ ಮಂತ್ರಯಿತ್ವಾ ಯಃ ಕರ್ಮಾರಂಭಾನ್ಪ್ರವರ್ತಯೇತ್ ದೈವೇ ಚ ಕುರುತೇ ಯತ್ನಂ ತಮಾಹುಃ ಪುರುಷೋತ್ತಮಮ್*
_ರಾವಣ ಮಂತ್ರಾಲೋಚನೆಯ ಮಹತ್ವ ಹೇಳುತ್ತಿದ್ದಾನೆ. ಯಾವ ನರನು ಮಂತ್ರನಿರ್ಣಯದಲ್ಲಿ ಸಮರ್ಥರಾದ ಮಿತ್ರರಿಂದಲೂ, ಸುಖ ದುಃಖಗಳಲ್ಲಿ ಸಮಾನರಾಗಿರುವ ಬಂಧುಗಳಿಂದಲೂ ಮತ್ತು ಅವರಿಗಿಂತ ಅಧಿಕರಾದ ಆಪ್ತಜನರಿಂದಲೂ ಕೂಡಿ ಸಮಾಲೋಚಿಸಿ ಕಾರ್ಯವನ್ನು ಆರಂಭಿಸುವರೋ, ಅಷ್ಟಲ್ಲದೇ ದೈವದ ಸಹಾಯವನ್ನು ಪಡೆಯಲು ಪ್ರಯತ್ನಿಸುವರೋ ಅವರನ್ನೇ ಪುರುಷಶ್ರೇಷ್ಠರೆನ್ನುವರು. ಇಲ್ಲಿ ಎಂತಹ ವ್ಯಕ್ತಿಗಳೊಡನೆ ಮಂತ್ರ ಮಾಡಬೇಕು ಎನ್ನುವ ಬಗೆಗಿನ ವಿವರಣೆ ಚೆನ್ನಾಗಿದೆ. ಮಿತ್ರರು= ಆಪತ್ತಿನಲ್ಲಿ ಕೈ ಬಿಡದಿರುವವರೇ ನಿಜವಾದ ಮಿತ್ರರು. ಅಂತಹವರೊಡನೆ ಸಮಾಲೋಚಿಸಬೇಕು. ಸುಖ ಇದ್ದಾಗ ದುಃಖ ಬಂದಾಗಲೂ ಯಾರು ನಮ್ಮನ್ನು ಸಮಾನವಾಗಿ ನೋಡುವರೋ ಅಂತಹ ಬಂಧುಗಳೊಡನೆ ಸಮಾಲೋಚಿಸಬೇಕು. ಕೆಲವು ಬಂಧುಗಳು ಸಂಪತ್ತಿದ್ದಾಗ ತುಂಬಾ ಆತ್ಮೀಯತೆಯಿಂದಲೂ ಆಪತ್ತು ಬಂದಾಗ ಅಪರಿಚಿತರಂತೆಯೂ ವ್ಯವಹರಿಸುತ್ತಾರೆ. ಅಂತಹ ವ್ಯಕ್ತಿಗಳೊಡನೆ ಸಮಾಲೋಚನೆ ಒಳ್ಳೆಯದಲ್ಲ. ಕೆಲವೊಮ್ಮೆ ಬಂಧುಗಳಿಗಿಂತಲೂ ಮಿಗಿಲಾಗಿ ಕೆಲವು ಜನರು ನಮ್ಮ ಕಷ್ಟಸುಖಗಳಲ್ಲಿ ಸ್ಪಂದಿಸುತ್ತಾರೆ. ಅವರೊಡನೆ ಆರಂಭದಲ್ಲಿ ಸಮಾಲೋಚಿಸಬೇಕು. ಕೇವಲ ಚರ್ಚೆ ಸಭೆ ಮಾಡಿ ಕಾರ್ಯದಲ್ಲಿ ತೊಡಗಿದರೆ ದೈವವು ಪ್ರತಿಕೂಲವಾದೀತು. ಹಾಗಾಗಿ ದೈವದ ಸಹಾಯವನ್ನು ಪಡೆಯಲು ಪ್ರಯತ್ನಿಸುವುದು ಅವಶ್ಯಕ. ನಮ್ಮ ಪ್ರಯತ್ನ ಜೊತೆಗೆ ದೈವದ ಸಹಕಾರವಿದ್ದಾಗ ಅತ್ಯಂತ ಕಷ್ಟ ಕೆಲಸವೂ ಸುಲಲಿತವಾಗಿ ನಡೆಯುತ್ತದೆ. ಹೀಗೆ ಮಾಡುವವರೇ ನಿಜವಾದ ಕರ್ಮಠರು ಅಥವಾ ಕರ್ಮಿಗಳು ಅಥವಾ ಉತ್ತಮಜನರು._
*ಏಕೋರ್ಥಂ ವಿಮೃಶೇದೇಕೋ ಧರ್ಮೇ ಪ್ರಕುರುತೇ ಮನಃ ಏಕಃ ಕಾರ್ಯಾಣಿ ಕುರುತೇ ತಮಾಹುರ್ಮಧ್ಯಮಂ ನರಮ್*
_ಇಲ್ಲಿ ಮಧ್ಯಮರ ಲಕ್ಷಣ ಹೇಳಿದ್ದಾರೆ. ಯಾವ ನರನು ತಾನೊಬ್ಬನೇ ತನ್ನ ಕರ್ತವ್ಯದ ವಿಷಯದಲ್ಲಿ ಚಿಂತಿಸುವನೋ, ದೈವದ ಸಹಾಯವನ್ನು ಪಡೆಯಲು ಒಬ್ಬನೇ ಪ್ರಯತ್ನಿಸುವನೋ ಮತ್ತು ಒಬ್ಬನೇ ಎಲ್ಲಾ ಕಾರ್ಯಗಳನ್ನು ಮಾಡುವನೋ ಅಂತಹ ವ್ಯಕ್ತಿ ಮಧ್ಯಮನೆನಿಸುತ್ತಾನೆ. ಹತ್ತು ಜನ ಕೂಡಿ ಯಾವುದೇ ಕಾರ್ಯ ಮಾಡಿದಾಗ ಕಾರ್ಯಾಂತ್ಯದ ಸಂತೋಷ ಹತ್ತೂ ಜನರಿಗಿರುತ್ತದೆ. ಫಲವು ಯಶಸ್ಸು ಅಷ್ಟೂ ಜನರನ್ನೂ ಆಶ್ರಯಿಸುತ್ತದೆ. ಸಮಷ್ಟಿ ಕಾರ್ಯ ಸಾಧನೆ ಉತ್ತಮ ಮಾರ್ಗ. ಇದು ನಮ್ಮ ಅಹಂನ್ನು ಕೂಡ ಕಡಿಮೆ ಮಾಡುತ್ತದೆ. ಒಬ್ಬನೇ ಮಾಡಿದಾಗ ವಿಫಲವಾದರೆ ಸಂತೈಸಲು ಯಾರೊಬ್ಬರೂ ಬರಲಾರರು. ಹಾಗಾಗಿ ಅನೇಕರೊಡಗೂಡಿ ಸಾಧಿಸಬೇಕು ಕಾರ್ಯ._
*ಗುಣದೋಷಾವನಿಶ್ಚಿತ್ಯ ತ್ಯಕ್ತ್ವಾ ಧರ್ಮವ್ಯಪಾಶ್ರಯಮ್ ಕರಿಷ್ಯಾಮೀತಿ ಯಃ ಕಾರ್ಯಮುಪೇಕ್ಷೇತ್ಸ ನರಾಧಮಃ*
_ಯಾರು ತಾನು ಮಾಡಲಿರುವ ಕಾರ್ಯದ ಗುಣದೋಷಗಳನ್ನು ವಿಮರ್ಶಿಸದೇ, ದೈವದ ಸಹಾಯವನ್ನೂ ಅಪೇಕ್ಷಿಸದೇ ' ನಾನು ಈ ಕಾರ್ಯ ಮಾಡಿಯೇ ತೀರುತ್ತೇನೆ' ಎಂಬ ಭಾವದಿಂದ ಕಾರ್ಯವನ್ನು ಪ್ರಾರಂಭಿಸಿ ಹಾಗೆ ಆರಂಭಿಸಿದ ಕಾರ್ಯವನ್ನು ನಂತರ ಉಪೇಕ್ಷಿಸುವನೋ ಅಂತಹವನನ್ನು ಅಧಮ ಎನ್ನುವರು. ತಾನೊಬ್ಬನೇ ಎಲ್ಲವನ್ನೂ ಮಾಡುತ್ತೇನೆಂಬ ಅಹಂಕಾರವು ಯಾರಿಗೂ ಒಳ್ಳೆಯದಲ್ಲ. ಇನ್ನು ದೈವದ ಸಹಾಯ ಧಿಕ್ಕರಿಸಿ ಮಾಡುವುದು ಕೆಲವೊಮ್ಮೆ ಯಶಸ್ವಿ ಎನಿಸಿದರೂ ಮತ್ತೊಮ್ಮೆ ಮುಖಭಂಗವನ್ನು ಉಂಟುಮಾಡುತ್ತದೆ. ಹಾಗಾಗಿ ಎರಡೂ ಒಳ್ಳೆಯದಲ್ಲ._
📙 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ