ಪ್ರತಿಮಾನಾಟಕ
🌺 ಪ್ರತಿಮಾನಾಟಕದ ಒಂದು ಸುಮ 🌺
*गच्छन्ति तुष्टिं खलु येन केन त एव जानन्ति हि तां दशां मे | इच्छामि पूजां च तथापि कर्तुं तातस्य रामस्य च सानुरूपाम् ||*
_ತಂದೆಯ ಶ್ರಾದ್ಧದ ದಿನ ಸಮೀಪಿಸಿದೆ. ರಾಮ ಆಲೋಚಿಸುತ್ತಿದ್ದಾನೆ ಈ ವನವಾಸಕಾಲದಲ್ಲಿ ಯಾವೊಂದು ಅಗತ್ಯಗಳಿಲ್ಲದೇ ಹೇಗೆ ತಾನೇ ಶ್ರಾದ್ಧ ಮಾಡಲಿ? ಸೀತೆಯ ಬಳಿ ಅದನ್ನೇ ಹೇಳುತ್ತಿದ್ದಾನೆ. ಮಗನು ಕೊಟ್ಟ ಯಾವ ಬಗೆಯ ಶ್ರಾದ್ಧದಿಂದಲಾದರೂ ಪಿತೃಗಳು ತೃಪ್ತಿ ಹೊಂದುವರಲ್ಲವೇ! ತಂದೆ ತಾಯಿ ಗತಿಸಿದ ನಂತರ ಮಕ್ಕಳು ಯಾವ ಬಗೆಯ ಶ್ರಾದ್ಧ ಮಾಡಿದರೂ ತೃಪ್ತಿಗೊಳ್ಳುವರು. ಈಗಂತೂ ನನ್ನ ಅವಸ್ಥೆ ಅವರಿಗೆ ತಿಳಿದೇ ಇದೆ. ಅರಮನೆಯಲ್ಲಾದರೆ ಬೆಳ್ಳಿಯ ಪಾತ್ರೆಗಳಲ್ಲಿ ಊಟ ಬಡಿಸಬಹುದಾಗಿತ್ತು. ನಾನಾ ಭಕ್ಷ್ಯ ಭೋಜ್ಯಗಳನ್ನು ಲೇಹ್ಯ ಚೋಷ್ಯಗಳನ್ನು ಪೇಯಗಳನ್ನು ಯಥೇಚ್ಛವಾಗಿ ಸಮರ್ಪಿಸಬಹುದಿತ್ತು. ಆದರೆ ಈ ಕಾಡಿನಲ್ಲಿ ಅದು ಸಾಧ್ಯವಿಲ್ಲದ ಮಾತು. ಹಾಗಾಗಿ ನನ್ನ ಪರಿಸ್ಥಿತಿಯನ್ನು ಅಪ್ಪ ಅರಿತಾನು. ಆದರೂ ನನ್ನ ಶಕ್ತ್ಯಾನುಸಾರ ಯೋಗ್ಯತೆಗನುಗುಣವಾಗಿ ಶ್ರಾದ್ಧ ಮಾಡುವೆನು. ಅದು ಅಂತಹ ಶ್ರೇಷ್ಠನಾದ ದಶರಥನಿಗೂ ಅನುರೂಪವಾಗಬೇಕು. ಇಂತಹ ಕಾಡುವಾಸಿಯಾದ ರಾಮನಿಗೂ ಸಾಧ್ಯವಾಗಬೇಕು ಅಥವಾ ರಾಮನಿಗೂ ( ಪಿತೃಭಕ್ತಿ ಪರಾಯಣನಾದ) ಅನುರೂಪವಾಗಬೇಕು. ಕೆಲವರಿಗೆ ಒಂದು ಭ್ರಮೆ ಇದೆ. ಶ್ರಾದ್ಧಾದಿಗಳು ಬ್ರಾಹ್ಮಣರ ಕರ್ಮ. ನಮಗಲ್ಲವೆಂದು. ಆದರೆ ರಾಮ ಕ್ಷತ್ರಿಯನಾಗಿ ಆಚರಿಸಿ ತೋರಿದ ರೀತಿ. ಎಷ್ಟು ಕಷ್ಟವಿದ್ದರೂ ಯಥಾಶಕ್ತಿ ಶ್ರಾದ್ಧ ಮಾಡಲೇಬೇಕು ಎಂದು ತನ್ನ ಆಚರಣೆಯಲ್ಲಿ ತೋರಿಸಿದ ಮಹಿಮ. ರಾಮನಷ್ಟು ದುಸ್ಥಿತಿ ಯಾರೂ ಹೊಂದುವುದು ಅಪರೂಪ. ಹಾಗಿರುವಾಗ ಪಿತೃತೃಪ್ತಿಗಾಗಿ ವರ್ಷಕ್ಕೊಮ್ಮೆ ಶ್ರದ್ಧೆಯಿಂದ ಆಚರಿಸಿ ಅವರು ಹೆತ್ತು ಹೊತ್ತು ಸಲಹಿದ್ದಕ್ಕೆ ಕೃತಜ್ಞತೆ ಸಲ್ಲಿಸಬಹುದಲ್ಲವೇ! *ನ ಕುರ್ಯಾತ್ ಶ್ರಾದ್ಧ ವಿಸ್ತರಮ್* ಎಂಬಂತೆ ವಿಸ್ತಾರದ ಅಗತ್ಯವಿಲ್ಲ. ಆದರೆ ಮಾಡುವ ಅಗತ್ಯ ಎಲ್ಲರಿಗೂ ಇದೆ. ಏಕೆಂದರೆ ನಾವು ಯಾರೂ ಅಯೋನಿಜರಲ್ಲ. ರಾಮ ಅಷ್ಟು ಕಷ್ಟದಲ್ಲಿದ್ದರೂ ಅಗತ್ಯ ಸಾಮಗ್ರಿ ದೊರಕದಿದ್ದರೂ ಅಪ್ಪನಿಗೆ ತೃಪ್ತಿ ಆಗುವಂತೆ ಮಾಡುವೆನೆನ್ನುವುದು ಅವನ ಶ್ರದ್ಧೆಯ ಸಂಕೇತ. ಬದುಕಿದ್ದಾಗ ನಿಂದಿಸದೇ ಅಳು ಬರಲು ಕಾರಣವಾಗದಂತೆ ಸಲಹಿ ಸತ್ತ ಮೇಲೆ ಶಕ್ತಿಯಿದ್ದಷ್ಟು ಶ್ರಾದ್ಧ ತರ್ಪಣ ಮುಂತಾದವನ್ನು ಮಾಡಿದರಲ್ಲವೇ ನಾವು ಪಿತೃ ಋಣ ಮುಕ್ತರಾಗುವುದು!_
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ