ರಾಮಾಯಣ ೩೬

📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙
ಭಾಗ-36

*ಕೇದಾರಸ್ಯೇವ ಕೇದಾರಃ ಸೋದಕಸ್ಯ ನಿರೂದಕಃ ಉಪಸ್ನೇಹೆನ ಜೀವಾಮಿ ಜೀವಂತೀಂ ಯಚ್ಛೃಣೋಮಿ ತಾಮ್*

_ರಾಮನ ದುಃಖ ಮಡುಗಟ್ಟಿದೆ. ಪ್ರಿಯೆ, ನೀರಿರುವ ಗದ್ದೆಯ ಸಂಪರ್ಕದಿಂದ ನೀರಿಲ್ಲದಿರುವ ಅಥವಾ ಒಣಗಿರುವ ಗದ್ದೆಯೂ ಜೀವಂತವಾಗಿರುವಂತೆ ನನ್ನ ಪ್ರಿಯೆಯಾದ ನೀನು ಬದುಕಿ ಉಳಿದಿರುವಿ ಎಂಬ ವಾರ್ತೆಯೊಂದೇ ನನ್ನ ಜೀವ ಉಳಿಸಿದೆ. ಅಕ್ಕಪಕ್ಕದ ಗದ್ದೆಗಳಲ್ಲಿ ಒಂದರಲ್ಲಿ ನೀರಿದ್ದರೂ ಪಕ್ಕದ ಗದ್ದೆಯೂ ಇದರಷ್ಟು ಫಲವತ್ತಾಗದಿದ್ದರೂ ಅಲ್ಲಿನ ಗಿಡಗಳು ಸಾಯದಂತೆ ಉಳಿಯಲು ಪಕ್ಕದ ತೇವಾಂಶ ಸಹಕರಿಸುತ್ತದೆ. ಅಥವಾ ಕೇದಾರವೆಂದರೆ ಬದು ಎಂಬ ಅರ್ಥ ಹೇಳಿದಾಗ ಗದ್ದೆಯ ಒಳಗಿರುವ ನೀರು ಬದುವಿನಲ್ಲಿರುವ ಕಳೆಗಳನ್ನೂ ಹೇಗೆ ಜೀವಿಸುವಂತೆ ಮಾಡುವುದೋ ಹಾಗೇ ಪ್ರಕೃತ ಸೀತೆ ಬದುಕಿರುವಳೆಂಬ ವಾರ್ತೆಯೇ ನೀರು. ಆ ವಾರ್ತೆ ಪಕ್ಕದಲ್ಲಿದ್ದರೂ
ಲಂಕೆಯಲ್ಲಿ ಇದ್ದರೂ ಅದು ನನ್ನ ಪ್ರಾಣಗಳನ್ನು ಹೊರಹೋಗದಂತೆ  ತಡೆಹಿಡಿದಿದೆ._

*ಕದಾ ನು ಖಲು ಸುಶ್ರೋಣೀಂ ಶತಪತ್ರಾಯತೇಕ್ಷಣಾಮ್ ವಿಜಿತ್ಯ ಶತ್ರೂನ್ದ್ರಕ್ಷ್ಯಾಮಿ ಸೀತಾಂ ಸ್ಫೀತಾಮಿವ ಶ್ರಿಯಮ್ ಕದಾ ಚಾರುಸುದಂತೋಷ್ಠಂ ತಸ್ಯಾಃ ಪದ್ಮಮಿವಾನನಮ್ ಈಷದುನ್ನಾಮ್ಯ ಪಾಸ್ಯಾಮಿ ರಸಾಯನಮಿವಾತುರಃ*

_ಶತ್ರುಗಳನ್ನು ಗೆದ್ದು ಸಮೃದ್ಧಶಾಲಿನಿಯಾಗಿರುವ ಕಮಲದಂತೆ ಕಣ್ಣುಳ್ಳ ರಾಜಲಕ್ಷ್ಮಿಗೆ ಸಮಾನಳಾಗಿರುವ ಸುಮಧ್ಯಮೆಯಾದ ( ನಡು ಸುಂದರವಾಗಿರುವ) ಆ ಚೆಲುವೆಯನ್ನು ಎಂದು ಕಾಣುವೆನೋ? ಸುಂದರವಾದ ದಂತಪಂಕ್ತಿಗಳಿಂದ ಕೂಡಿರುವ ಆಕರ್ಷಕವಾದ ತುಟಿಗಳಿಂದ ಕೂಡಿರುವ ಆಕೆಯ ಕಮಲಸದೃಶ ಮುಖವೆತ್ತಿ ರೋಗಿಯು ಔಷಧಿ ಕುಡಿಯುವಂತೆ ಎಂದು ನಾನು ಅಧರಾಮೃತ ಸವಿಯುವೆನು? ವಾಲ್ಮೀಕಿಗಳು ಎಲ್ಲಾ ರಸಗಳಿಗೂ ಮಹತ್ವ ಕೊಟ್ಟಿರುವುದು ಅಲ್ಲಲ್ಲಿ ಕಂಡುಬರುತ್ತದೆ. ಪ್ರಧಾನ ರಸ ವೀರವಾದರೂ ಅಂಗರಸಗಳು ಎಲ್ಲವೂ ಆಗಿವೆ. ಈ ಸಂದರ್ಭದಲ್ಲಿ ವಿಪ್ರಲಂಭ ಶೃಂಗಾರ ಸರಳವಾಗಿ ಸುಂದರವಾಗಿ ಅಭಿವ್ಯಕ್ತವಾಗಿದೆ._

*ಸ್ವಭಾವತನುಕಾ ನೂನಂ ಶೋಕೇನಾನಶನೇನ ಚ ಭೂಯಸ್ತನುತರಾ ಸೀತಾ ದೇಶಕಾಲವಿಪರ್ಯಯಾತ್*

_ಸಹಜವಾಗಿ ತೆಳು ಶರೀರದ ಆ ಪ್ರಿಯೆ ಈಗಂತೂ ವಿದೇಶ ಹಾಗೂ ಉಚಿತವಲ್ಲದ ಕಾಲದ ಕಾರಣ ಶೋಕದಿಂದಲೂ ಉಪವಾಸದಿಂದಳೂ ಅತ್ಯಂತ ಕೃಶಳಾಗಿರಬಹುದು. ಹಿಂದೆಯೂ ಕೃಶತೆ ಸೌಂದರ್ಯದ ಸಂಕೇತವಾಗಿತ್ತು ಸ್ತ್ರೀಯರಿಗೆ. ಆದರೆ ಕೆಲವು ಅಂಗಾಂಗಗಳ ವಿಷಯದಲ್ಲಿ ಮಾತ್ರ ಕೃಶತೆ ಇರಬೇಕು. ಸೀತೆ ಮೊದಲೇ ಸಪೂರದವಳು. ಈಗ ಅಲ್ಲಿ ಯಾವ ಆಹಾರ ನೀಡುವರೋ, ತಿನ್ನಲು ಮನವಾದರೂ ಹೇಗೆ ಒಪ್ಪಬೇಕು? ಪ್ರಾಣ ಧಾರಣೆಗಾಗಿ ಮಾತ್ರ ತಿನ್ನಬಹುದು. ಹಾಗಾಗಿ ಅತ್ಯಂತ ಕೃಶಳಾಗಿರಬಹುದು ಎಂದು ರಾಮನ ಊಹೆ. ಅಷ್ಟು ಕಷ್ಟದಲ್ಲಿರುವಳಲ್ಲ ಎಂಬ ಕೊರಗು._

📙 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩