📗🌾📙 ವೇದ-ಧರ್ಮ 📗🌾📙 ಭಾಗ-21

*ವೇದಾಂಗಗಳು*

*ವ್ಯಾಕರಣ*

_*ವ್ಯಾಕ್ರಿಯಂತೇ ಅನೇನ ಇತಿ ವ್ಯಾಕರಣಂ* ಎಂಬ ವ್ಯುತ್ಪತ್ತಿಯಂತೆ ಶಬ್ದದ ಹುಟ್ಟು ಬೆಳವಣಿಗೆ ಅರ್ಥ ತಿಳಿಯಲು ಸಾಧನ ಈ ವ್ಯಾಕರಣ. ಹಿಂದೆ ಎಲ್ಲಾ ಮಂತ್ರಗಳೂ ಅಕ್ಷರಾಭಿವ್ಯಕ್ತಿಗಳಿಲ್ಲದೆ ಸಮುದ್ರದ ನೀರಿನ ‌ಘೋಷದಂತೆ ಕೇವಲ ನಾದಾತ್ಮಕವಾಗಿದ್ದವು. ಪ್ರಕೃತಿ, ಪ್ರತ್ಯಯ, ಪದ, ವಾಕ್ಯ ಮುಂತಾದ ವಿಭಜನೆಗಳಿಲ್ಲದೆ ಅವ್ಯಾಕೃತವಾಗಿದ್ದವು. ವಾಯುವಿಗೂ ತನಗೂ ಒಂದೇ ಪಾತ್ರೆಯಿಂದ ಸೋಮಪಾನ ಮಾಡುವ ವರ ಸಿಕ್ಕು ಹರುಷಗೊಂಡ ಇಂದ್ರನು ದೇವತೆಗಳ ಪ್ರಾರ್ಥನೆಯಂತೆ ವೇದಕ್ಕೆ ಪ್ರಕೃತಿ ಪ್ರತ್ಯಯ ವಿಭಾಗ ಮಾಡಿದನು. ಅದಕ್ಕೊಂದು ಕ್ರಮಬದ್ಧವಾದ ವಿಧಿಯನ್ನೂ ಮಾಡಿದನು. ಅದೇ *ಐಂದ್ರ* ವ್ಯಾಕರಣವೆಂದು ಪ್ರಸಿದ್ಧವಾಯಿತು. ಈ ಕಥೆ ತೈತ್ತಿರೀಯ ಸಂಹಿತೆಯಲ್ಲಿ ಕಂಡುಬರುವುದು._

_ಹಾಗೆ ಕೆಲ ಸಮಯದ ತರುವಾಯ ಚಾಂದ್ರ ವ್ಯಾಕರಣವು, ಮತ್ತೆ ಕೌಮಾರ ವ್ಯಾಕರಣವೂ, ಶಾಕಟಾಯನ ವ್ಯಾಕರಣವೇ ಮೊದಲಾಗಿ ಹುಟ್ಟಿಕೊಂಡವು. ವೇದಮಂತ್ರಗಳ ಅರ್ಥಜ್ಞಾನಕ್ಕೆ ಪ್ರಮುಖವಾಗಿ ಬೇಕಾದ ಕಾರಣ ಇದು ವೇದಾಂಗವಾಗಿದೆ._

_ವ್ಯಾಕರಣ ಅರಿಯದಿದ್ದರೆ ಏನು ಅನರ್ಥವಾದೀತು ಎನ್ನುವುದನ್ನು ಈ ಶ್ಲೋಕ ತಿಳಿಸುತ್ತದೆ. *ಯದ್ಯಪಿ ಬಹು ನಾಧೀಷೇ ತಥಾಪಿ ಪಠ ಪುತ್ರ ವ್ಯಾಕರಣಮ್ ಸ್ವಜನಃ ಶ್ವಜನೋ ಮಾಭೂತ್ಸಮಲಂ ಶಮಲಂ ಸಕೃಚ್ಛಕೃತ್* ವ್ಯಾಕರಣ ಓದದಿದ್ದರೆ ಸ್ವಜನ ಅಂದರೆ ನಮ್ಮ ಜನರು, ಶ್ವಜನರೆಂದರೆ ನಾಯಿಗಳು ಇವೆರಡರ ಅರ್ಥ ವ್ಯತ್ಯಾಸ ತಿಳಿಯದೇ ಹೋದೀತು. ಸಂಸ್ಕೃತ ದಲ್ಲಿ ಇಂತಹ ಸಾವಿರಾರು ಪದಗಳು ಇವೆ. ಅವೆಲ್ಲದರ ನಿಜಾರ್ಥ ತಿಳಿಯದೇ ನಗೆಪಾಟಲಿಗೆ ಈಡಾಗಬೇಕಾದೀತು. *ದಧಿಮಾನಯ* ಎಂಬ ವಾಕ್ಯವನ್ನು ದಧಿಮ್ ಆನಯ ಅಂದರೆ ಮೊಸರು ತಾ ಎಂದೂ, ದಧಿ ಮಾ ನಯ ಎಂದರೆ ಮೊಸರು ತರದಿರು ಎಂದೂ ಅರ್ಥೈಸಿದ ಪ್ರಸಿದ್ಧ ಕಥೆಯಿದೆ. ವೇದದ ಭಾಷೆ ಬಹು ಗಂಭೀರವಾದ್ದರಿಂದ ವ್ಯಾಕರಣದ ಸಹಾಯವಿಲ್ಲದೆ ನಾವು ವೇದಾರ್ಥವೆಂಬ ಸಮುದ್ರವನ್ನು ಪ್ರವೇಶಿಸಲು ಸಾಧ್ಯವಿಲ್ಲ._

_ಈಗ ಪ್ರಸಿದ್ಧವಾದ ವ್ಯಾಕರಣ *ಪಾಣಿನಿ* ಕೃತ. ಇವನು ತನ್ನ ಪೂರ್ವದಲ್ಲಿ ಎಂಟು ವ್ಯಾಕರಣಗಳಿದ್ದವೆಂದೂ ಅವುಗಳಲ್ಲಿನ ವಿಷಯಗಳನ್ನೇ ತಾನು ಸಂಕ್ಷಿಪ್ತವಾಗಿ ಹೇಳಿರುವನೆಂದೂ ಹೇಳುವನು. ಸಂಸ್ಕೃತ ವ್ಯಾಕರಣಕ್ಕೆ ಒಂದು ವ್ಯವಸ್ಥೆ ಕಲ್ಪಿಸಿದ ಕೀರ್ತಿ ಇವನಿಗೇ ಸಲ್ಲುವುದು. ಕೆಲವು ವಿದ್ವಾಂಸರು ಇವನ ಪ್ರಯೋಗಗಳನ್ನು ತಪ್ಪೆಂದು ವಿಮರ್ಶಿಸಿದರೂ ಇವನ ವ್ಯಾಕರಣ ಓದಿಯೇ ಅವರು ವಿದ್ವಾಂಸರಾಗಿದ್ದೆಂಬುದು ಸತ್ಯ. ಮಹೇಶ್ವರನ ಕೃಪೆಯಿಂದ ಮೊದಲಿಗೆ ಹದಿನಾಲ್ಕು ಸೂತ್ರಗಳು, ಅವುಗಳ ಆಧಾರದ ಮೇಲೆ ಎಂಟು ಅಧ್ಯಾಯಗಳಲ್ಲಿ ವ್ಯಾಕರಣ ನಿಯಮಗಳನ್ನು ಇದಮಿತ್ಥಂ ಎಂಬಂತೆ ನಿರ್ದೇಶಿಸಿದ ಖ್ಯಾತಿ ಇವನದ್ದು. ಆ ಮಟ್ಟಿಗೆ ನಾವೆಲ್ಲರೂ ಅವನ ಋಣದಲ್ಲಿಯೇ ಇದ್ದೇವೆ._

_ಪಾಣಿನಿಯ ನಂತರ ಬಂದ ವರರುಚಿಯು ಈ ಸೂತ್ರಗಳಿಗೆ ವಾರ್ತಿಕಗಳನ್ನೂ, ಪತಂಜಲಿಯು ಭಾಷ್ಯವನ್ನೂ ರಚಿಸಿದರು. ಈ ಮೂವರನ್ನು ವ್ಯಾಕರಣ ಕಲಿಯುವವರೆಲ್ಲರೂ ದಿನವೂ ಸ್ಮರಿಸುತ್ತಾರೆ. ಪಾತಂಜಲ ಭಾಷ್ಯಕ್ಕೆ ಕೈಯಟನೆಂಬ ಪಂಡಿತನು ಪ್ರದೀಪೋದ್ಯೋತವೆಂಬ ಗ್ರಂಥವನ್ನೂ, ಆ ವ್ಯಾಖ್ಯಾನಕ್ಕೆ ಮತ್ತೆ ವಿವರಣೆಯೆಂಬಂತೆ ನಾಗೋಜಿಭಟ್ಟನು ಪ್ರದೀಪವೆಂಬ ಪುಸ್ತಕ ಬರೆದನು. ಪಾತಂಜಲ ಭಾಷ್ಯದ ಮೇಲೆ ಶತಕತ್ರಯ ಬರೆದ ಭರ್ತೃಹರಿಯು ವ್ಯಾಖ್ಯಾನ ಬರೆದನೆಂದು ಹೇಳುವರು. ಇದೇ ಭರ್ತೃಹರಿಯ ವಾಕ್ಯಪದೀಯವೆಂಬ ಗ್ರಂಥವು ವೇದಾಂಗವಾದ ವ್ಯಾಕರಣಕ್ಕೂ ಒಂದು ದರ್ಶನದ ಸ್ಥಾನ ಕಲ್ಪಿಸಿದೆ._

_ಈ ದರ್ಶನದಲ್ಲಿ ಶಬ್ದವೇ ಬ್ರಹ್ಮ. ಮಹಾಸ್ಫೋಟವುಂಟಾಗಿ ಈ ಶಬ್ದಜಾಲ ಸೃಷ್ಟಿಯಾಯಿತೆಂದು ಅಭಿಪ್ರಾಯಪಡುತ್ತಾರೆ. ಇವೆಲ್ಲವುಗಳ ಹೊರತಾಗಿ ವಾಮನನು ಕಾಶಿಕಾ ಎಂಬ ವ್ಯಾಖ್ಯಾನವನ್ನು ಪಾಣಿನಿಯ ಸೂತ್ರಗಳಿಗೆ ಬರೆದಿದ್ದಾನೆ. ಪಾಣಿನಿಯು ಮುಖ್ಯವಾಗಿ ಎಂಟು ಜನರನ್ನೂ ಉಳಿದಂತೆ ಅರವತ್ನಾಲ್ಕು ವೈಯಾಕರಣರನ್ನು ಹೆಸರಿಸಿದ್ದಾನೆ. ಇವರಲ್ಲಿ ಆಪಿಶಲಿ ಹಾಗೂ ಕಾಶಕೃತ್ಸ್ನರ ಅಭಿಪ್ರಾಯಗಳನ್ನು ವಿಕಲ್ಪರೂಪದಲ್ಲಿ ಹೇಳಿ ಅವರಿಗೆ ಗೌರವ ಸಲ್ಲಿಸಿದ್ದಾನೆ. ಭಟ್ಟೋಜಿದೀಕ್ಷಿತನು ಬರೆದ ವ್ಯಾಖ್ಯಾನ ರೂಪವಾದ ಸಿದ್ಧಾಂತ ಕೌಮುದಿಯು ಈಗಿನ ಅಧ್ಯಯನಕ್ಕೆ ತುಂಬಾ ಸಹಕಾರಿಯಾಗಿದೆ. ಇವನು ಪಾಣಿನಿಯ ಅಭಿಪ್ರಾಯ ಮಂಡಿಸುವಲ್ಲಿ ಸಾಕಷ್ಟು ಯಶಸ್ವಿಯಾಗಿರುವನೆಂದು ಹೇಳಬಹುದು._

_ಪಾಣಿನಿ ವ್ಯಾಕರಣ ಬಿಟ್ಟಂತೆ ಇನ್ನೂ ಕೆಲವನ್ನು ಹೆಸರಿಸಬಹುದು. ಅಲ್ಲಲ್ಲಿ ಅಲ್ಪ ಸ್ವಲ್ಪ ಉಪಲಬ್ಧಿ ಇರುವುದೇನೋ! ಚಾಂದ್ರ, ಜೈನೇಂದ್ರ ಶಾಕಟಾಯನ ಹೇಮಚಂದ್ರ ಕಾತಂತ್ರ ಮುಗ್ಧಬೋಧ ಎಂಬುದಾಗಿ. ವೇದದ ಮಂತ್ರಗಳ ಗೂಢಾರ್ಥವನ್ನು ಅರಿಯಲು ವಿಶಿಷ್ಟಸಂಗತಿಗಳನ್ನು ತರ್ಕಿಸಲು ಉಚ್ಚಾರಣೆಯ ವಿಧಾನ ಸರಿಯಾಗಿ ತಿಳಿಯಲು ತಪ್ಪನ್ನು ತಿದ್ದಲು ಅಥವಾ ನಾವೇ ತಿದ್ದಿಕೊಳ್ಳಲು ಈ ವ್ಯಾಕರಣ ಗ್ರಂಥಗಳ ಆಳವಾದ ಅಧ್ಯಯನ ತುಂಬಾ ಅವಶ್ಯಕವಾಗಿದೆ. ಇದಲ್ಲದೆ ಶಾಂತವನನಿಂದ ರಚಿತವಾದ *ಫಿಟ್* ಸೂತ್ರಗಳು ಉಪಲಬ್ಧವಾಗಿವೆ. ಮುಂದುವರಿಯುತ್ತದೆ_.....


📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩