ಮಹಾಭಾರತ

📙🌾📗ಮಹಾಭಾರತದ ಅಪ್ರಸಿದ್ಧ ಕಥೆಗಳು📗🌾📙

_ಅದೃಶ್ಯಂತೀ ಎಂಬ ಶಕ್ತಿಯ ಗರ್ಭದಲ್ಲಿ ತನ್ನ ಮೊಮ್ಮಗನಿರುವುದನ್ನು ಅರಿತ ವಸಿಷ್ಠರು ಸಾಯುವ ಯೋಚನೆಯಿಂದ ಹಿಂದೆ ಸರಿದರು. ಈ ಕಥೆ ಮತ್ತಷ್ಟು ತಿರುವು ಪಡೆಯುತ್ತದೆ. ತನ್ನ ಸೊಸೆಯೊಡನೆ ಹಾಗೆ ಹಿಂತಿರುಗುತ್ತಿದ್ದಾಗ ಅರಣ್ಯದ ನಿರ್ಜನ ಪ್ರದೇಶದಲ್ಲಿ ಕಲ್ಮಾಷಪಾದನು ರಾಕ್ಷಸ ರೂಪದಲ್ಲಿ ಇರುವುದನ್ನು ಕಂಡನು. ಅವನಾದರೋ ಇವರನ್ನು ನೋಡಿ ಕೂಡಲೇ ತಿನ್ನಲೆಂದು ದಂಡ ಹಿಡಿದು ಧಾವಿಸಿದನು. ಆಗ ಅದೃಶ್ಯಂತಿಯು ಕಾಪಾಡು ಎಂದು ವಸಿಷ್ಠರ ಮೊರೆ ಹೋಗುವಳು. ವಸಿಷ್ಠನಾದರೋ ಮೈಮೇಲೆ ಎರಗುತ್ತಿರುವ ಆ ದಾನವರೂಪೀ ರಾಜನನ್ನು ಹುಂಕಾರದಿಂದಲೇ ತಡೆದರು. ಮತ್ತೆ ಮಂತ್ರಜಲದಿಂದ ಪ್ರೋಕ್ಷಿಸಿ ವಿಶ್ವಾಮಿತ್ರರಿಂದ ಅವನೊಳಗೆ ಹೊಕ್ಕಿದ್ದ ಆ ರಾಕ್ಷಸನನ್ನು ದೂರವಾಗಿಸಿದನು. ಹೀಗೆ ಸೂರ್ಯನು ರಾಹುವಿನಿಂದ ಮೋಕ್ಷ ಹೊಂದುವಂತೆ ಆ ರಾಜನು ಆ ರಾಕ್ಷಸನಿಂದ ಬಿಡುಗಡೆ ಹೊಂದಿದನು. ಹೀಗೆ ವಸಿಷ್ಠರು ತನ್ನ ಮಕ್ಕಳನ್ನೇ ನಾಶಗೈದವವನನ್ನು ಉದ್ಧರಿಸಿದರು. ಇಂತಹ ಕರುಣೆ ನಮಗೆ ಸಾಧ್ಯವೇ! ಇದನ್ನೇ ದಾಸರು ನುಡಿದದ್ದು ವಿಷವಿಕ್ಕಿದವಗೆ ಷಡ್ರಸಗಳುಣಿಸಲುಬೇಕು ಎಂದು. ರಾಕ್ಷಸನಿಂದ ಬಿಡುಗಡೆ ಹೊಂದಿದ ರಾಜನು ವಸಿಷ್ಠರಿಗೆ ನಮಸ್ಕರಿಸಿ ನಾನು ಸುದಾಸನ ಮಗನು. ನಿಮ್ಮಿಂದ ಯಾಗ ಮಾಡಿಸಿಕೊಳ್ಳಲು ಬಯಸಿದ್ದೇನೆ. ಈಗ ನಿಮಗೆ ಯಾವ ಉಪಕಾರ ಮಾಡಲೆಂದು ಕೇಳಿಕೊಳ್ಳುತ್ತಾನೆ. ಆಗ ವಸಿಷ್ಠರು ರಾಜ್ಯವನ್ನು ಧರ್ಮಮಾರ್ಗದಲ್ಲಿ ನಡೆಸು. ಬ್ರಹ್ಮ ಚಿಂತನೆಯ ಅಂದರೆ ಸಜ್ಜನರಿಗೆ ಎಂದಿಗೂ ಅಪಮಾನ ಮಾಡದಿರು ಎಂದು ಹೇಳಿದನು. ರಾಜ ಕೇಳಿದರೂ ಯಾವೊಂದು ಫಲವನ್ನು ಅಪೇಕ್ಷಿಸದ ವಸಿಷ್ಠರ ನಿರ್ಲಿಪ್ತತೆ ಒಂದು ಪಾಠ. ಕೊಡಲು ಸಿದ್ಧವಾಗಿದ್ದಾಗ ಸಾಕಷ್ಟು ಪಡೆಯಬೇಕೆಂದು ಯೋಚಿಸುವ ಪ್ರವೃತ್ತಿ ನಮ್ಮದು. ವಸಿಷ್ಠರು ತಾನಾಗಿ ಒದಗಿ ಬಂದ ಸಂಪತ್ತನ್ನೂ ತಿರಸ್ಕರಿಸಿದ ಮಹಿಮರು. ನಮಗೆ ಅವರ ಒಂದೊಂದು ವರ್ತನೆ ಒಂದೊಂದು ಪಾಠ._




📗 ಆಕರ - ಉದ್ಯೋಗಪರ್ವ ೧೬೮ ಅಧ್ಯಾಯ. ಸಂಗ್ರಹ ✍
ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩