ಮೇಘದೂತ
🌹 ಮೇಘದೂತದ ಒಂದು ಬಿಂದು 🌹
*तन्वी श्यामा शिखरिदशना पक्वबिम्बाधरोष्ठी मध्ये क्षामा चकितहरिणीप्रेक्षणा निम्ननाभि: | श्रोणीभारादलसगमना स्तोकनम्रा स्तनाभ्यां या तत्र स्याद् युवतिविषये सृष्टिराद्येव धातु: ||*
_ಎಲೈ ಜಲದನೇ, ನೀನು ಅಲಕೆಯ ಮನೆಗಳಲ್ಲಿ ನನ್ನ ಮನೆಯನ್ನು ಗುರುತಿಸಿದ ಮೇಲೆ ನನ್ನ ಕಾಂತೆಯನ್ನು ಗುರುತುಹಿಡಿಯಲು ನಿನಗೊಂದಿಷ್ಟು ಗುರುತು ಹೇಳುವೆ. ಸಖಿಯರೊಡಗೂಡಿ ನಡೆದಾಡುವ ಅವಳ ಸೌಂದರ್ಯ ಬರೀ ಬಾಯಿಮಾತಿನಲ್ಲಿ ಹೇಳುವಂತಹದಲ್ಲ , ಅದು ನೋಡಿ ಆಸ್ವಾದಿಸುವಂತಹದು. ನೀನು ನನ್ನ ಆತ್ಮೀಯನು ಉನ್ನತ ಸ್ವಭಾವದವನೂ ನನ್ನ ಕಾಂತೆಯ ಬಗೆಗೆ ಪೂಜ್ಯ ಭಾವನೆ ಇರುವವನೂ ಆದ್ದರಿಂದ ಅವಳ ಲಕ್ಷಣ ಹೇಳುವೆನು. ಅವಳು ಪದ್ಮಿನಿ ಜಾತಿಯ ಹೆಣ್ಣು. ಹೆಣ್ಣಿನ ಅಂಗಾಗಗಳ ಸೌಂದರ್ಯದ ಭೇದದಿಂದ ಇಂತಹ ವಿಭಾಗ ಸಾಮುದ್ರಿಕಾ ಶಾಸ್ತ್ರದಲ್ಲಿ ಕಂಡುಬರುವುದು. ಆಕೆಯ ತನು ಕೃಶವಾಗಿದೆ. ಸ್ವಭಾವದಿಂದ ಕೃಶವಾದ ಅವಶ ಕಾಯ ಈಗ ಪತಿಚಿಂತೆಯಲ್ಲಿ ಮತ್ತಷ್ಟು ಕೃಶವಾಗಿದೆ. ಅದು ದೇಹದ ಕೆಲವೆಡೆ ತೆಳ್ಳಗಿರುವುದು ಸೌಂದರ್ಯದ ಸಂಕೇತವೂ ಹೌದು. ಆಕೆ ಇನ್ನೂ ಯುವತಿ. ಯೌವ್ವನದಿಂದ ಆಕರ್ಷಕಳಾಗಿದ್ದಾಳೆ. ಅವಳ ದಂತಪಂಕ್ತಿ ಚೂಪಾಗಿಯೂ, ಶುಭ್ರವಾಗಿಯೂ ಓರೆಕೋರಿಗಳಿಲ್ಲದೆ ವಜ್ರದ ಮಾಲೆಯಂತೆ ಶೋಭಿಸುತ್ತದೆ. ಇಂತಹ ಹಲ್ಲುಗಳಿರುವುದು ಪತಿಯ ಅಯುಷ್ಯವರ್ಧಕ ಹಾಗೂ ಭಾಗ್ಯದ ಸೂಚಕ. ಇದನ್ನೆ ಸಾಮುದ್ರಿಕರು ಅಂಗೀಕರಿಸುವರು. ಇನ್ನು ಚೆಂದುಟಿಗಳು ತೊಂಡೆಹಣ್ಣಿನಂದದಿ ಮಿಂಚುತ್ತವೆ. ( ಕವಿಗಳಿಗೆ ಸಹಜವಾಗಿ ಸಿಗುವ ಹಣ್ಣು ತೊಂಡೆ. ಅದರ ಆಕಾರವೂ ತುಟಿಯಂತೆಯೇ ಸ್ವಲ್ಪ. ಅದು ಹಣ್ಣಾದಾಗ ಕೆಂಪಾಗಿ ಕಾಣುವುದು ತುಟಿಯಂದದಿ) ಇನ್ನು ನಡು ಸಣ್ಣ. ( ಮಲೆನಾಡ ಹೆಣ್ಣ ಮೈ ಬಣ್ಣ ಆ ನಡು ಸಣ್ಣ) ಕೃಶವಾದ ನಡುವುಳ್ಳ ಅವಳ ಕಾಯ ಆಕರ್ಷಕ. ಝೀರೋ ಸೈಜ್ ಕಲ್ಪನೆಗೆ ಹತ್ತಿರ. ಅವಳ ಕಣ್ಣುಗಳು ಜಿಂಕೆಯ ಕಣ್ಣುಗಳಂತೆ ಚಂಚಲ ಹಾಗೂ ಸುಂದರ. ಹರಿಣಾಕ್ಷಿ ಎನ್ನುವ ಹೆಸರು ಅದಕ್ಕೇ ತಾನೇ. ಅತ್ತಿತ್ತ ಸುತ್ತಾಡುತ್ತ ಒಂದೆಡೆ ನೆಲೆನಿಲ್ಲದ ಸುಂದರ ನಯನಗಳು. ಆಳವಾದ ಹೊಕ್ಕುಳು. ಇದೂ ಸೌಂದರ್ಯಸೂಚಕ. ನಾಭಿಯ ಆಳವಾಗಿರುವಿಕೆಯು ಕಾಮಪ್ರಚೋದಕವೆಂದು ಕಾಮಸೂತ್ರ ಹೇಳುತ್ತದೆ. ಚಲನಚಿತ್ರಗಳಲ್ಲಿ ಬಗೆಬಗೆಯ ಹಣ್ಣು ತರಕಾರಿಗಳ ಆಶ್ರಯತಾಣವೂ ಹೌದು. ಇಷ್ಟಲ್ಲದೇ ನಿತಂಬದ ಭಾರವು ಅವಳ ಗಮನವನ್ನು ನಿಧಾನಿಸಿದೆ. ಯಾವ ವಿಧವಾದ ಅಂಗ ನ್ಯೂನತೆಯಿಲ್ಲದಿದ್ದರೂ ನಿತಂಬ ಅಥವಾ ಪೃಷ್ಠ ಮಹತ್ತಾಗಿ ಭಾರವಾಗಿರುವ ಕಾರಣ ಗಜಗಮನೆಯಾಗಿರುವಳು. ಸ್ತನಗಳ ವಿಶಾಲತೆಯು ಸ್ವಲ್ಪ ಅವಳ ದೇಹವನ್ನು ಬಾಗಿಸಿದೆ. ಬೆನ್ನಿನ ಅಥವಾ ಬೇರಾವುದೋ ಭಾಗದ ದೋಷದಿಂದಲ್ಲ. ತುಂಬಿತುಳುಕುವ ಸ್ತನಗಳ ಭಾರವು ನೇರವಾದ ಗಮನಕ್ಕೆ ತಡೆಯೊಡ್ಡುತ್ತಿದೆ. ಸ್ತ್ರೀಯರ ವಿಷಯದಲ್ಲಿ ಬ್ರಹ್ಮನ ಮೊದಲ ಸೃಷ್ಟಿಯಂತಿರುವ ಅಷ್ಟು ಮನೋಹರಳಾದ ಆ ನನ್ನ ಮನದನ್ನೆಯನ್ನು ನೀನು ಈ ಲಕ್ಷಣಗಳಿಂದ ಸುಲಭದಲ್ಲಿ ನೋಡಿ ಗುರುತು ಹಿಡಿಯುವಿ. ಬ್ರಹ್ಮ ತನ್ನ ಮೊದಲ ಸೃಷ್ಟಿಯಲ್ಲಿ ಯಾವ ನ್ಯೂನತೆಯನ್ನು ಮಾಡಲಿಲ್ಲ. ಅಂತಹ ಸರ್ವಾಂಗಸುಂದರಿ ಇನ್ನೊಬ್ನಳು ರತಿಯಂತಿರುವಳು ಆ ನನ್ನ ಸತಿ. ಅವಳನ್ನು ನೋಡಿ ಬಾಗಿ ನನ್ನ ಸಂದೇಶವನ್ನು ನೀವೇದಿಸು. ಕವಿ ಇಲ್ಲಿ ಸ್ತ್ರೀಯರ ಸೌಂದರ್ಯದ ಲಕ್ಷಣವನ್ನು ಸರಳವಾಗಿ ವರ್ಣಿಸಿದ್ದಾನೆ._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ