ಮೇಘದೂತ

🌹 ಮೇಘದೂತದ ಒಂದು ಬಿಂದು 🌹

*नत्वात्मानं बहु विगणयन्नात्मनैवावलम्बे तत्कल्याणि त्वमपि नितरां मागम: कातरत्वम् | कस्यात्यन्तं सुखमुपनतं दु:खमेकान्ततो वा नीचैर्गच्छत्युपरि च दशा चक्कनेमिक्रमेण ||*

_ಪ್ರಿಯೆಗೆ ಮೇಘದ ಮೂಲಕ ಕೊಡುತ್ತಿರುವ ಸಂದೇಶ. ಪ್ರಿಯಳೇ, ಶಾಪಕಳೆದ ಮೇಲೆ ಅಥವಾ ಆ ಸಮಯ ಮುಗಿದ ಮೇಲೆ ನಿನ್ನೊಡಗೂಡಿ ಏನೆಲ್ಲಾ ಕಾರ್ಯಗಳನ್ನು ಮಾಡಬಹುದೆಂದು ಯೋಚಿಸುತ್ತಾ ನನ್ನನ್ನು ನಾನು ಸಮಾಧಾನಮಾಡಿಕೊಳ್ಳುತ್ತಾ ಇನ್ನೂ ಬದುಕಿದ್ದೇನೆ.  ಶಾಪಮುಕ್ತನಾದ ಮೇಲೆ ಎಲ್ಲಾ ತರಹದ ಭೋಗ ಭಾಗ್ಯಗಳನ್ನು ಸವಿಯಬಹುದಲ್ಲ ಎಂಬ ಆಶಾವಾದವೇ ನನ್ನನ್ನು ಬದುಕಿಸಿದೆ. ನಿರಾಶೆಗೆ ತೆರೆದುಕೊಂಡಿದ್ದರೆ ಎಂದೋ ಜೀವ ತೊರೆದುಬಿಡುತ್ತಿದ್ದೆ. ಅದರಂತೆ ನೀನೂ ಸಹ ಹೆದರದಿರು. ಪ್ರಿಯನ ಸಮಾಗಮ ಆಗುವುದೋ ಇಲ್ಲವೋ ಎಂಬ ಚಿಂತೆ ಮರೆತುಬಿಡು. ಈಗಾಗಲೇ ಶಾಪದ ಸಾಕಷ್ಟು ದಿನಗಳು ಕಳೆದುಹೋಗಿವೆ. ಅಂತೆಯೇ ಉಳಿದ ದಿನಗಳು ಕಳೆದು ಸಮಾಗಮ ಉಂಟಾಗುವುದೆಂಬ ವಿಶ್ವಾಸದಲ್ಲಿ ಬದುಕನ್ನು ನಡೆಸು. ಏಕೆ ಹೀಗೆ ನುಡಿಯುತ್ತಿರುವೆನೆಂದರೆ ಲೋಕದಲ್ಲಿ ಯಾವ ಜೀವಿಗೂ ನಿಯತವಾದ ಸುಖ ಅಥವಾ ನಿಯತವಾದ ದುಃಖ ಕಂಡುಬರುವುದೇ? ಸುಖ ದುಃಖಗಳು ಕ್ಷಣ ಕಾಲ ಇರುವಂತಹ ಭಾವಗಳು. ಶಾಶ್ವತವಾದ ಸುಖ ಅಥವಾ ಸದಾ ದುಃಖ ಎಂಬ ಅನುಭವ ಯಾರಿಗೂ ಇಲ್ಲವೇನೋ. ಸದಾ ದುಃಖಿಸುವ ವ್ಯಕ್ತಿಯನ್ನೂ ದೇವರು ಯಾವುದೋ ಒಂದು ಸಂದರ್ಭದಲ್ಲಿಯಾದರೂ ಸಂತೋಷ ಪಡಿಸುವನು. ಚಕ್ರದ ಮೇಲ್ಭಾಗದಂತೆ ಈ ನಮ್ಮ ಸುಖದುಃಖಗಳು ಇರುತ್ತವೆ. ಚಕ್ರದ ಸುತ್ತಲಿನ ವಲಯ ಒಮ್ಮೆ ಭೂಮಿಯಲ್ಲಿ ಒಮ್ಮೆ ಆಕಾಶದಲ್ಲಿ ಹೀಗೆ ನಿರಂತರವಾದ ಚಲನೆಯನ್ನು ಪಡೆದಿರುತ್ತದೆ. ಅದರಂತೆ ನಮ್ಮ ಬದುಕೂ ಕೂಡ ಒಮ್ಮೆ ಅತಿಯಾಗಿ ದುಃಖಿಸಿದರೆ ಒಮ್ಮೆ ಅತಿಯಾಗಿ ಸುಖಿಸುವುದು. ಚಕ್ರದ ನೇಮಿಗಳಿಗೆ ಹೇಗೆ ಒಂದೇ ಅವಸ್ಥೆ ಇಲ್ಲವೋ ಅದರಂತೆ ನಮಗೆ  ಕೇವಲ ಸುಖಮಾತ್ರ ಬೇಕು, ದುಃಖವೆಂದಿಗೂ ಬೇಡ ಎಂದರೆ ಅದು ಸಾಧ್ಯವೇ! ಎಷ್ಟು ಸುಖಿಯಾದ ಜೀವಿಯನ್ನೂ ಕೆಲವು ಸಂದರ್ಭಗಳು ವಿಚಲಿತನನ್ನಾಗಿಸುತ್ತವೆ. ಹಾಗಾಗಿ ಅವುಗಳ ಬಗ್ಗೆ ಹೆಚ್ಚು ಯೋಚಿಸದೇ ಸಮನಾಗಿ ಕಾಣುವ ಮನಸ್ಥಿತಿ ನಮ್ಮದಾಗಬೇಕು. ಹಾಗಾಗಿ ಪ್ರಿಯೆ ಕಳವಳಪಡದಿರು, ಕವಳ ಸಿಗುವ ಕಾಲ ಕಳೆದುಕೊಳ್ಳದಿರು. ಇದು ಕಳಕಳಿಯ ವಿನಂತಿ. ಕವಿಯ ಮಾತು ಎಷ್ಟು ಸತ್ಯವಲ್ಲವೇ! ನಾವು ಆಶಾವಾದಿಗಳಾಗಿ ಜೀವನವನ್ನು ನಡೆಸಬೇಕೇ ಹೊರತು ನಿರಾಸೆಯ ಮಡುವಿನಲ್ಲಿ ಬಿದ್ದು ಒದ್ದಾಡುವುದಲ್ಲ. ಎಂತಹ ಸನ್ನಿವೇಶದಲ್ಲೂ ಚಕ್ರದಂತೆ ಎದೆಗುಂದದೆ ಮುನ್ನಡೆಯೋಣ. ಕೆಸರಿರಲಿ ಕಲ್ಲಿರಲಿ ತಗ್ಗಿರಲಿ ನೀರೇ ನಿಂತಿರಲಿ ಕೊಳೆಯಿರಲಿ ಕಳೆಯಿರಲಿ ಕೊಲೆಯಾಗಲಿ ನಾವು ಚಕ್ರದ ಮಾದರಿಯಲ್ಲಿ ಜೀವನ ಚಕ್ರವನ್ನು ನಡೆಸುತ್ತಲೇ ಇರಬೇಕೆಂಬುದು ಯಕ್ಷನ ಮಾತಿನ ಭಾವ._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩