ಮಹಾಭಾರತ
📙🌾📗ಮಹಾಭಾರತದ ಅಪ್ರಸಿದ್ಧ ಕಥೆಗಳು📗🌾📙
_ಹಿಂದಿನ ಕಥೆಯಲ್ಲಿ ಕಲ್ಮಾಷಪಾದನು ವಸಿಷ್ಠನ ನೂರು ಮಕ್ಕಳನ್ನೂ ತಿಂದ ಕಥೆ ಕೇಳಿದ್ದೆವು. *ಪುತ್ರಶೋಕಂ ನಿರಂತರಂ* ಎಂಬಂತೆ ವಸಿಷ್ಠರಂತಹ ಬ್ರಹ್ಮರ್ಷಿಗಳಿಗೂ ಈ ಶೋಕ ತಡೆಯದಾಯಿತು. ಮಹಾತ್ಮನಾದ ವಸಿಷ್ಠನು ಆ ಸಮಯದಲ್ಲಿ ವಿಶ್ವಾಮಿತ್ರನ ಬಗೆಗೆ ಯಾವ ಕೆಡುಕನ್ನೂ ಬಗೆಯದೆ ತನ್ನ ಅದೃಷ್ಟವನ್ನು ನಿಂದಿಸುತ್ತಾ ಆತ್ಮಹತ್ಯೆಗೆ ಮನಸ್ಸು ಮಾಡಿದನು. ಆ ಋಷಿಯು ಮೇರು ಪರ್ವತದಿಂದ ಬಿದ್ದಾಗ ಕಲ್ಲಮೇಲೆ ತಲೆ ಬಡಿದರೂ ಹತ್ತಿ ಬಡಿದಂತೆ ಅನುಭವವಾಯಿತು. ತಾನಾಗಿ ಬಿದ್ದರೂ ಸಾಯದಿದ್ದಾಗ ಒಂದು ಅರಣ್ಯದಲ್ಲಿ ಬೆಂಕಿ ಹಚ್ಚಿ ತಾನು ಅದರೊಳಗೆ ಪ್ರವೇಶಿಸಿದನು. ಉರಿಯುತ್ತಿದ್ದ ಆ ಅಗ್ನಿ ತಣ್ಣಗಾಯಿತು. ಹನುಮನ ಬಾಲಕ್ಕೆ ಬಿದ್ದ ವಹ್ನಿಯಂತೆ. ಮತ್ತೂ ಬೇಸರಗೊಂಡ ಆ ಮುನಿ ಸಮುದ್ರಕ್ಕೆ ತೆರಳಿ ಕುತ್ತಿಗೆಗೆ ಕಲ್ಲು ಕಟ್ಟಿಕೊಂಡು ಬಿದ್ದರೂ ಸಮುದ್ರವು ತೀರಕ್ಕೆ ತಂದುಹಾಕಿತು. ಅನಂತರ ಆಶ್ರಮಕ್ಕೆ ಹಿಂತಿರುಗಿದನು. ಆದರೆ ಪುತ್ರಹೀನವಾಗಿದ್ದ ಆ ಆಶ್ರಮ ಕಂಡು ಮತ್ತೆ ದುಃಖ ಉಮ್ಮಳಿಸಲಾಗಿ ಮಳೆಗಾಲದಲ್ಲಿ ಬಿರುಸಾಗಿ ಹರಿಯುವ ಒಂದು ನದಿಯಲ್ಲಿ ಹಗ್ಗಗಳಿಂದ ಬಿಗಿದುಕೊಂಡು ಬಿದ್ದನು. ಆದರೆ ಆ ನದಿಯು ಈ ಮಹಾತ್ಮನನ್ನು ನಾನೇಕೆ ಬಲಿ ಪಡೆಯಲೆಂದು ಯೋಚಿಸಿ ಕಟ್ಟುಗಳನ್ನು ಛಿದ್ರಗೊಳಿಸಿ ತಾನು ವಸಿಷ್ಠನನ್ನು ತೀರಕ್ಕೆ ತಂದು ಹಾಕಿತು. ವಸಿಷ್ಠನು ಪಾಶ ಬಿಡಿಸಿದ ಈ ನದಿಗೆ ವಿಪಾಶಾ ಎಂಬ ಹೆಸರಿಟ್ಟನು. ಉತ್ತರದಲ್ಲಿ ಅದೇ ಬಿಪಾಶಾ ಎನ್ನುವರು. ಅಷ್ಟಕ್ಕೆ ಸುಮ್ಮನಾಗದ ವಸಿಷ್ಠನು ಎಲ್ಲೆಡೆ ಸಂಚರಿಸುತ್ತಾ ಪ್ರಚಂಡವಾದ ಮೊಸಳೆಗಳುಳ್ಳ ಹೈಮವತೀ ಎಂಬ ನದಿಗೆ ಹಾರಿದನು. ಆ ಶ್ರೇಷ್ಠ ನದಿಯು ಅಗ್ನಿಸಮಾನನಾದ ಈ ವಿಪ್ರನ ಅಂತ್ಯ ಹಾಡಲು ನಾನಾರೆಂದು ಯೋಚಿಸಿ ನೂರು ಕವಲುಗಳಾಗಿ ಹರಿಯಿತು. ಅಂದಿನಿಂದ ಆ ನದಿ ಶತದ್ರು ಎಂಬ ಹೆಸರನ್ನು ಪಡೆಯಿತು. ಇದೇ ಈಗಿನ ಸಟ್ಲೇಜ್ ನದಿ._
_ಕೊನೆಗೆ ತಾನು ಸಾಯಲಾರೆನೆಂದು ದುಃಖದಿಂದ ಆಶ್ರಮಕ್ಕೆ ಹಿಂತಿರುಗುತ್ತಿದ್ದಾಗ ಅದೃಶ್ಯಂತೀ ಎಂಬ ಕಣ್ಣಿಗೆ ಕಾಣಿಸದಿರುವ ಶಕ್ತಿಯ ಪತ್ನಿಯು ಇವನನ್ನು ಹಿಂಬಾಲಿಸಿದಳು. ಋಷಿಯು ( ತಪಸ್ಸಿನ ಬಲದಿಂದ ಹಿಂಬಾಲಿಸುತ್ತಿರುವುದನ್ನು ತಿಳಿದು)ಯಾರೆಂದು ಪ್ರಶ್ನಿಸಿದಾಗ ಅವಳು ನಿನ್ನ ಸೊಸೆ ಎನ್ನುತ್ತಾಳೆ. ಜೊತೆಗೆ ಕೇಳುತ್ತಿರುವ ವೇದದ ಧ್ವನಿ ಎಲ್ಲಿಂದ ಎಂದಾಗ ಶಕ್ತಿಯ ಮಗು ನನ್ನ ಗರ್ಭದಲ್ಲಿದೆ. ಅದು ಹನ್ನೆರಡು ವರ್ಷಗಳಿಂದ ನನ್ನ ಉದರದಲ್ಲಿ ವೇದಗಳನ್ನು ಅಧ್ಯಯನ ಮಾಡುತ್ತಿದೆ ಎಂದಳು. ಅಗ ವಸಿಷ್ಠನು ತನ್ನ ಸಂತಾನ ಮಗನ ಸಂತತಿಯಾದರೂ ಬೆಳೆಯುತ್ತಿದೆಯೆಂಬ ಸಂತೋಷದಿಂದ ಸಾಯುವ ಯೋಚನೆ ಬಿಟ್ಟನು._
_ಈ ಕಥೆ ಸಾಕಷ್ಟು ಗೂಢಾರ್ಥಗಳನ್ನು ಒಳಗೊಂಡಿದೆ. ಪರ್ವತದಿಂದ ಬೀಳುವುದು ಅಹಂಕಾರವೆಂಬ ಪರ್ವತದಿಂದ ದೂರವಾಗುವುದು. ಆಗ ಸಹಜವಾಗಿ ವಿನಯವೆಂಬ ಹತ್ತಿ ನಮ್ಮನ್ನು ಸಲಹುವುದು. ಇನ್ನು ಅರಣ್ಯದ ಬೆಂಕಿ ನಮ್ಮ ಕಾಮ ಕ್ರೋಧಾದಿಗಳು. ಅವುಗಳು ಸುಟ್ಟುಹೋದಾಗ ತಂಪಾದ ಮನವು ಸಮಾಧಾನವನ್ನು ಹೊಂದುತ್ತದೆ. ಕುತ್ತಿಗೆಗೆ ಕಲ್ಲು ಕಟ್ಟಿಕೊಂಡು ಸಮುದ್ರಕ್ಕೆ ಬೀಳುವುದು ಕಷ್ಟಗಳೆಂಬ ಸಮುದ್ರವನ್ನು ಕಲ್ಲು ಕಟ್ಟಿ ಎದುರಿಸುವ ಬಗೆ. ಆಗ ಕಷ್ಟಗಳೆಷ್ಟಿದ್ದರೂ ಆ ಸಮುದ್ರವು ನಮ್ಮನ್ನು ಇಷ್ಟದೆಡೆಗೆ ಕೊಂಡೊಯ್ಯುತ್ತದೆ. ಇನ್ನು ಹಗ್ಗ ಬಿಗಿದುಕೊಂಡು ನದಿಗೆ ಹಾರುವುದು ಸಮಸ್ಯೆಗಳೆಂಬ ಹಗ್ಗವನ್ನು ಹರಿದು ಚಿತ್ತವನ್ನು ದೇವನಲ್ಲಿ ಹುತ್ತಗಟ್ಟಿಸುವುದರ ಸಂಕೇತ. ಹೈಮವತೀ ನದಿ ಚಿನ್ನ ವಜ್ರ ಹಣ ಮುಂತಾದ ಆಮಿಷಗಳ ಸಂಕೇತ. ಅಂತಹ ನದಿಯಲ್ಲಿ ಮೊಸಳೆಗಳೆಂಬ ಶತ್ರುಗಳು ಸಾಕಷ್ಟಿರುತ್ತವೆ. ಅದನ್ನು ನೂರು ಜನರಿಗೆ ಹಂಚಿದಾಗ ನಮ್ಮನ್ನು ಅವು ಏನೂ ಮಾಡಲಾರವು. ಸಂಪತ್ತನ್ನು ದಾನ ಮಾಡಬೇಕೆಂಬ ಸೂಚನೆ ಇಲ್ಲಿದೆ. ಹೀಗೆ ವಸಿಷ್ಠರ ಆತ್ಮಹತ್ಯೆಯ ಪ್ರಯತ್ನಗಳು ನಮ್ಮ ಆತ್ಮೋದ್ಧಾರಕ್ಕೆ ಪಾಠವಾಗಿವೆ. ಆ ಮಹಾಮಹಿಮರನ್ನು ನೆನೆಯುತ್ತಾ ದುಃಖಪಡದೆ ಜೀವದ ನಿಜ ಸ್ವರೂಪವಾದ ಆನಂದ ಅನುಭವಿಸೋಣ._
📗 ಆಕರ - ಉದ್ಯೋಗಪರ್ವ ೧೬೭ ಅಧ್ಯಾಯ. ಸಂಗ್ರಹ ✍
ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ