ರಾಮಾಯಣ
📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙
ಭಾಗ-27
*ಕ್ವ ಸೀತಾ ವರ್ತತೇ ದೇವಿ ಕಥಂ ಚ ಮಯಿ ವರ್ತತೇ*
_ಹನುಮಂತ ಎಲ್ಲವನ್ನೂ ರಾಮನಿಗೆ ಅರುಹಿದ್ದಾನೆ. ಆಗ ರಾಮ ಹೇಳುವ ಮಾತು. ಆ ನನ್ನ ಸೀತೆ ಲಂಕೆಯಲ್ಲಿ ಎಲ್ಲಿದ್ದಾಳೆ? ನನ್ನ ವಿಷಯದಲ್ಲಿ ಅವಳ ಭಾವನೆ ಹೇಗಿದೆ? ರಾಮನ ಸೂಕ್ಷ್ಮ ವರ್ತನೆ ಇಲ್ಲಿ ತಿಳಿಯುತ್ತದೆ. ಮೊದಲಿಗೆ ಸಹಜವಾಗಿ ಪ್ರಿಯೆ ಎಲ್ಲಿರುವಳು, ಅರಮನೆಯಲ್ಲೋ ಸೆರೆಮನೆಯಲ್ಲೋ ಸುಖವಾಗಿಯೋ ಅಥವಾ ದುಃಖದಿಂದಲೋ ಎಂಬ ಭಾವದಲ್ಲಿ ಕೇಳುವನು. ನಂತರ ನಾನೇನೊ ಅವಳಲ್ಲಿ ಪ್ರೇಮಭಾವ ತಾಳಿದ್ದೇನೆ, ಆದರೆ ಲಂಕೆಯ ವೈಭವವೆಲ್ಲ ಕಂಡಮೇಲೂ ಅಥವಾ ರಾವಣನಂತಹ ವೀರನನ್ನು ಕಂಡ ಮೇಲೂ ನನ್ನ ಮೇಲೆ ಪ್ರೀತಿ ಇರುವುದೇ ಎಂಬರ್ಥದಲ್ಲಿ ಕೇಳುತ್ತಾನೆ. ತಾನು ಪ್ರೀತಿ ಹೊಂದಿರುವಂತೆ ಅವಳೂ ಹೊಂದಿರುವಳೋ? ಅಥವಾ ನನ್ನ ಮೇಲೆ ನಂಬಿಕೆ ಕಳೆದುಕೊಂಡಿದ್ದಾಳೋ ಅಥವಾ ಪ್ರೀತಿ ತೋರುತ್ತಲ್ಲವೇ ಇತ್ಯಾದಿ. ನಾವು ಹೆಚ್ಚಾಗಿ ನಮ್ಮ ಮೂಗಿನ ನೇರಕ್ಕೆ ಆಲೋಚಿಸುತ್ತೇವೆ. ಉಳಿದವರ ಭಾವನೆಗಳನ್ನು ಗೌರವಿಸುವುದಿಲ್ಲ. ರಾಮನ ವರ್ತನೆ ನೋಡಿ ಈ ವಿಷಯ ನಾವು ಕಲಿಯಬೇಕು. ಪ್ರೀತಿ ವಿಶ್ವಾಸಗಳು ಏಕಮುಖವಾಗಿದ್ದಾಗ ಹೆಚ್ಚೇನೂ ಪ್ರಯೋಜನವಾಗದು. ಎರಡೂ ಕಡೆಯಲ್ಲಿದ್ದಾಗ ಅದಕ್ಕೊಂದು ಮಾಧುರ್ಯ ಉಂಟಾಗುವುದು. ರಾಮ ಮುಂದೆ ರಾವಣನ ವಧೆಯ ನಂತರವೂ ಸೀತೆಯ ಮಾತುಗಳಲ್ಲಿ ಅವಳ ಭಾವ ತಿಳಿದು ನನ್ನೆಡೆಗೆ ಕರೆ ತಾ ಎನ್ನುತ್ತಾನೆ. ಇನ್ನೊಬ್ಬರ ಮನದ ಮಾತು ಅರಿಯುವ ರಾಮನ ಇಂತಹ ವರ್ತನೆ ನಮಗೆ ಮಾದರಿ._
*ಏವಮಸ್ತ್ರವಿದಾಂ ಶ್ರೇಷ್ಠಃ ಸತ್ವವಾನ್ ಶೀಲವಾನಪಿ ಕಿಮರ್ಥಮಸ್ತ್ರಂ ರಕ್ಷಃಸು ನ ಯೋಜಯತಿ ರಾಘವಃ*
_ಸೀತೆ ಹನುಮನ ಮೂಲಕ ರಾಮನಿಗೆ ಹೇಳಿದ ಮಾತು. ಹಿಂದೆ ಕಾಕಾಸುರನು ಸ್ತನಗಳಲ್ಲಿ ಗಾಯ ಮಾಡಿದಾಗ ಸಿಟ್ಟಿಗೆದ್ದು ದರ್ಭವನ್ನೇ ಬ್ರಹ್ಮಾಸ್ತ್ರವಾಗಿಸಿ ಪ್ರಯೋಗಿಸಿದ ವೀರ ನೀನು. ಲೋಕದಲ್ಲಿ ಪ್ರಸ್ತುತ ಅಸ್ತ್ರವಿದ್ಯೆ ತಿಳಿದವರಲ್ಲಿ ಅತ್ಯಂತ ನಿಪುಣ ನೀನು. ಸತ್ಯವಂತನೂ, ಸತ್ವವಿರುವವನೂ, ಗುಣವಂತನೂ ಆಗಿದ್ದಿ. ಅಂತಹ ಮಹಾಮಹಿಮನಾದ ನೀನು ನಿನ್ನ ಪತ್ನಿಯ ವಿಷಯದಲ್ಲಿ ಅಪರಾಧ ಎಸಗಿದ ರಾಕ್ಷಸರ ಬಗ್ಗೆ ಯಾವ ಕಾರಣದಿಂದ ಕೋಪಗೊಂಡಿಲ್ಲ? ದಾನವರಾಗಲಿ ಗಂಧರ್ವರಾಗಲಿ ಯಾರೂ ನಿನ್ನೆದುರು ನಿಲ್ಲಲಾರರು. ಹಾಗಿರುವಾಗ ಈ ರಾಕ್ಷಸರ ಬಗೆಗೆ ನೀನೇಕೆ ಇನ್ನೂ ಸುಮ್ಮನಿರುವೆ? ರಾಮನಿಗೆ ಶತ್ರುಗಳ ಬಗೆಗೆ ಕೋಪ ತರಿಸುವುದು ಸೀತೆಯ ಉದ್ದೇಶ. ಒಂದು ವೇಳೆ ಶತ್ರುವಿನ ಬಗ್ಗೆ ಮೃದು ಭಾವನೆ ಇದ್ದರೆ ಅದನ್ನು ಹೋಗಲಾಡಿಸಲು ಹಿಂದಿನ ಅವನ ಪರಾಕ್ರಮವನ್ನು ನೆನಪಿಸುತ್ತಿದ್ದಾಳೆ. ಕೇವಲ ಗಾಯ ಮಾಡಿದಾಗಲೇ ಕೊಲ್ಲ ಹೊರಟ ನೀನು ಇಂದು ಅಪಹರಿಸಿದರೂ ಪ್ರಾಣಹರಣ ಮಾಡಲು ಮನಸ್ಸು ಮಾಡುತ್ತಿಲ್ಲ. ನನ್ನ ಮೇಲೆ ನಿನಗೆ ಪ್ರೀತಿಯಿಲ್ಲವೇ? ಅಥವಾ ಮಹಾಪರಾಕ್ರಮಿಯಾದ ನಿನಗೇ ಅಧೈರ್ಯವೇ? ಸೀತೆಯ ಈ ಮಾತು ರಾಮನ ಕೋಪವನ್ನು ಹೆಚ್ಚಿಸಿ ಬೇಗ ಕಾರ್ಯೋನ್ಮುಖನಾಗುವನು. ಕೆಲವೊಮ್ಮೆ ಆತ್ಮೀಯರಾದರೂ ನಾವು ಅವರ ಸತ್ವವನ್ನು ತಿಳಿಹೇಳಿ ಅವರ ಸಾಮರ್ಥ್ಯ ನೆನಪಿಸಿ ಶೀಘ್ರ ಕಾರ್ಯದಲ್ಲಿ ತೊಡಗುವಂತೆ ಮಾಡಬೇಕು. ಸೀತೆ ಅದನ್ನೇ ಇಲ್ಲಿ ಮಾಡಿದ್ದಾಳೆ. ಅಂದು ಆ ಸಣ್ಣ ಘಟನೆಗೆ ಕೊಪಗೊಂಡ ನೀನು ಇಂದೇಕೆ ಮೃದುವಾಗಿರುವೆ ರಾವಣನ ಬಗೆಗೆ? ಕೂಡಲೇ ಶತ್ರುನಾಶಕ್ಕಾಗಿ ಹೊರಡು._
*ಮಮೈವ ದುಷ್ಕೃತಂ ಕಿಂಚಿನ್ಮಹದಸ್ತಿ ನ ಸಂಶಯಃ ಸಮರ್ಥಾವಪಿ ತೌ ಯನ್ಮಾಂ ನಾವೇಕ್ಷೇತೇ ಪರಂತಪೌ*
_ನಾವು ಏನಾದರೂ ಕಷ್ಟ ಅನುಭವಿಸಿದರೆ ಸಿಕ್ಕಸಿಕ್ಕವರನ್ನೆಲ್ಲ ಹಳಿಯುತ್ತೇವೆ. ಕೆಲವೊಮ್ಮೆ ದೇವರನ್ನು ಗುರುಹಿರಿಯರನ್ನು ನಿಂದಿಸುತ್ತೇವೆ. ಆದರೆ ಸೀತೆಯ ಮಾತು ನೋಡಿ. ನನ್ನ ಪಾಪದ ಫಲವೇ ನನ್ನನ್ನು ಇಂದು ಹೀಗೆ ಪೀಡಿಸುತ್ತಿದೆ. ಇದು ಬೇರೆಯವರ ತಪ್ಪಲ್ಲ. ಅಪಾರವಾದ ನನ್ನ ದುಷ್ಕೃತಿಯು ಈ ದುರವಸ್ಥೆ ತಂದೊಡ್ಡಿದೆ. ಇದರಲ್ಲಿ ಯಾವ ಸಂಶಯವೂ ಇಲ್ಲ. ಆದುದರಿಂದಲೇ ರಾಮ- ಲಕ್ಷ್ಮಣರಂತಹ ಪರಾಕ್ರಮಿಗಳೂ ನನ್ನನ್ನು ರಕ್ಷಿಸಲು ಸಮರ್ಥರಾಗಿದ್ದರೂ ಉದಾಸೀನತೆ ತಾಳಿದ್ದಾರೆ. ಹಾಗಾಗಿ ಇದು ನನ್ನ ಪಾಪದ ಪರಿಣಾಮವೇ ಸರಿ. ನಾವೆಂದಾದರೂ ಹೀಗೆ ನಮ್ಮ ದುಸ್ಥಿತಿಯಲ್ಲಿ ಆಲೋಚಿಸುತ್ತೇವೆಯೋ? ನಮ್ಮ ತಪ್ಪಿದ್ದರೂ ಒಪ್ಪಲು ಹಿಂಜರಿಯುತ್ತೇವೆ. ಅಂತಹುದರಲ್ಲಿ ಮಾತೆಯ ಈ ಮಾತು ನಮಗೆ ಮನನಯೋಗ್ಯ._
📙 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ