ರಾಮಾಯಣ ೩೫

📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙
ಭಾಗ-35

*ತದ್ವಿಯೋಗೇಂಧನವತಾ ತಚ್ಚಿಂತಾವಿಪುಲಾರ್ಚಿಷಾ ರಾತ್ರಿಂದಿವಂ ಶರೀರಂ ಮೇ ದಹ್ಯತೇ ಮದನಾಗ್ನಿನಾ*

_ವಾಲ್ಮೀಕಿಗಳ ಕವಿತ್ವ ಮತ್ತೆ ಮತ್ತೆ ಪ್ರಕಟಗೊಳ್ಳುತ್ತಿದೆ. ರಾಮ ಸೀತೆಯನ್ನು ನೆನೆದು ಶೋಕಪಡುತ್ತಿರುವನು.  ಮದನಾಗ್ನಿಗೆ  ನನ್ನ ಪ್ರಿಯೆಯ ವಿಯೋಗವೇ ಕಟ್ಟಿಗೆಯಾಗಿದೆ. ಅವಳ ಸಲುವಾಗಿ ಮಾಡುತ್ತಿರುವ ಚಿಂತೆಯೇ ವಿಪುಲವಾದ ಜ್ವಾಲೆಯಾಗಿದೆ. ಅಂತಹ ಸೀತೆಯ ವಿರಹವೆಂಬ ಬೆಂಕಿ ನನ್ನನ್ನು ಹಗಲೂ ರಾತ್ರಿ ಸುಡುತ್ತಲೇ ಇದೆ. *ಚಿಂತಾ ದಹತಿ ನಿರ್ಜೀವಂ* ಎಂಬಂತೆ ಸೀತೆಯ ವಿಯೋಗದ ಚಿಂತೆಯೆಂಬ ಜ್ವಾಲೆಯು ಅನವರತ ದಹಿಸುತ್ತಿದೆ. ನಮ್ಮಿಬ್ಬರ ನಡುವಿನ ನಿಷ್ಕಲ್ಮಶ ಪ್ರೇಮವೇ ಅಗ್ನಿ. ಅಗ್ನಿ ಎಂದೂ ನಿಷ್ಕಲ್ಮಶ. ಆ ಅಗ್ನಿ ಈಗ ಶಾಂತವಾಗಿರದೇ ಪ್ರೇಯಸಿಯ ವಿಯೋಗವೆಂಬ ಕಟ್ಟಿಗೆ ದೊರೆತು ಸುಡಲು ಸಿದ್ಧವಾಗಿದೆ._

*ಅವಗಾಹ್ಯಾರ್ಣವಂ ಸ್ವಪ್ಸ್ಯೇ ಸೌಮಿತ್ರೇ ಭವತಾ ವಿನಾ ಕಥಂಚಿತ್ಪ್ರಜ್ವಲನ್ಕಾಮಃ ನ ಮಾಂ ಸುಪ್ತಂ ಜಲೇ ದಹೇತ್*

_ಹಿಂದಿನ ಶ್ಲೋಕದಲ್ಲಿ ದಹಿಸುತ್ತಿರುವ ದೇಹಕ್ಕೆ ಇಲ್ಲಿ ಶಾಂತಿ ಹೇಳುತ್ತಿದ್ದಾನೆ. ಲಕ್ಷ್ಮಣ ನೀನಿಲ್ಲೇ ಇರು. ನಾನು ನಿನ್ನನ್ನು ಇಲ್ಲಿಯೇ ಬಿಟ್ಟು ಸಮುದ್ರದಲ್ಲಿ ಮುಳುಗಿ ಮಲಗಿಬಿಡುವೆನು. ಆಗಲಾದರೂ ನನ್ನನ್ನು ಮದನಾಗ್ನಿಯು ಸುಡದಿರಬಹುದು. ವಿಶಾಲವಾದ ಸಮುದ್ರದಲ್ಲಿ ದೇಹ ತೊಯ್ದಾಗ ಬೆಂಕಿ ಉರಿಯದೇ ಆರಿ ಹೋದೀತು. ಸಮುದ್ರದ ಸಂಪರ್ಕದಿಂದ ಚಿಂತೆ ಶಾಂತವಾದೀತು ಎಂಬ ಭಾವ._

*ಬಹ್ವೇತತ್ಕಾಮಯಾನಸ್ಯ ಶಕ್ಯಮೇತೇನ ಜೀವಿತುಮ್ ಯದಹಂ ಸಾಚ ವಾಮೋರೂರೇಕಾಂ ಧರಣೀಮಾಶ್ರಿತೌ*

_ನಾನು ಮತ್ತು  ಸುಂದರಾಂಗಿಯಾದ ಸೀತೆ ಒಂದೇ ಭೂಮಿಯನ್ನು ಆಶ್ರಯಿಸಿದ್ದೇವೆ. ನಾನೂ ಈ ಧರಣಿಯ ಮೇಲೆ ವಾಸಿಸಿರುವೆ. ಅವಳೂ ಇದೇ ಧರಣಿಯ ಬೇರೊಂದೆಡೆ ಅವಳು ವಾಸಿಸುತ್ತಿದ್ದಾಳೆ. ಪ್ರಿಯತಮೆಯನ್ನು ಸೇರಲು ನನಗಿರುವ ದಾರಿ ಇದೊಂದೇ ಆಗಿದೆ. ಅವಳೂ ಪ್ರಾಣೋತ್ಕ್ರಮಣ ಮಾಡದೇ ನನ್ನಂತೆ ಜೀವಿಸಿರುವಳೆಂಬ ಒಂದು ಆಶಾಭಾವನೆ ನನ್ನನ್ನು ಇಂದಿಗೂ ಬದುಕಿಸಿದೆ.ರಾಮನ ಶೋಕದ ಅವಸ್ಥೆಯ ಚಿತ್ರಣ ಸೊಗಸಾಗಿ ಮೂಡಿಬಂದಿದೆ._

📙 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩