ರಾಮಾಯಣ೩೩

📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙
ಭಾಗ-33

*ಶೋಕಶ್ಚ ಕಿಲ ಕಾಲೇನ ಗಚ್ಛತಾ ಹ್ಯಪಗಚ್ಛತಿ ಮಮ ಚಾಪಶ್ಯತಃ ಕಾಂತಾಮಹನ್ಯಹನಿ ವರ್ಧತೇ*

_ರಾಮ ಲಕ್ಷ್ಮಣನಿಗೆ ಹೇಳುವ ಮಾತು. ರಾಮ-ಸೀತೆಯರ ಅನುರಾಗಕ್ಕೊಂದು ನಿದರ್ಶನ ಈ ಮಾತು. ಲಕ್ಷ್ಮಣ, ಸಾಮಾನ್ಯವಾಗಿ ಶೋಕವು ಕಾಲ ಕಳೆದಂತೆ ದೂರವಾಗುತ್ತದೆ. ಆದರೆ ಕಾಂತೆಯನ್ನು ಕಾಣದಿರುವ ನನ್ನ ಶೋಕ ದಿನದಿಂದ ದಿನಕ್ಕೆ ವರ್ಧಿಸುತ್ತಲೇ ಇದೆ. ಇದು ಇಷ್ಟು ಕಾಲವಾದರೂ ಕಡಿಮೆಯಾಗಿಲ್ಲ ಅಥವಾ ಮರೆಯಲು ಆಗುತ್ತಲೇ ಇಲ್ಲ. ರಾಮನಿಗೆ ಸೀತೆಯ ನೆನಪು ಎಳ್ಳಷ್ಟೂ ಕಡಿಮೆಯಾಗದಿರುವುದು ಇಲ್ಲಿ ಕಾಣುವುದು._

*ನ ಮೇ ದುಃಖಂ ಪ್ರಿಯಾ ದೂರೇ ನ ಮೇ ದುಃಖಂ ಹೃತೇತಿ ವಾ ಏತದೇವಾನುಶೋಚಾಮಿ ವಯೋಸ್ಯಾ ಹ್ಯತಿವರ್ತತೇ*

_ಅನುಜ, ನನ್ನ ಪ್ರಿಯೆ ದೂರದಲ್ಲಿರುವಳೆಂದು ನಾನು ಶೋಕಿಸುತ್ತಿಲ್ಲ. ಅಥವಾ ಅವಳು ಅಪಹರಣಗೊಂಡಳೆಂದೂ ಅಳುತ್ತಿಲ್ಲ. ಆದರೆ ಅವಳ ವಯಸ್ಸು ಬೇಗನೇ ಕಳೆದುಹೋಗುತ್ತಿದೆಯಲ್ಲ ಎಂದು  ದುಃಖಪಡುತ್ತಿರುವೆ. ರಾಮನಿಗೆ ತನ್ನ ಸುಖಕ್ಕಿಂತ ಪರರ ದುಃಖವೇ ಕಾಣುವುದು. ತಾನು ಸೀತೆ ಜೊತೆಗಿರಬೇಕಿತ್ತು. ಈಗ ಇಲ್ಲ ಎಂಬ ಕೊರಗು ರಾಮನಿಗಿಲ್ಲ. ಅವಳು ಅಪಹೃತಳಾಗಿ ಬಹಳ ದಿನ ಅವಳ ಸಾಂಗತ್ಯ ಸಿಗದೆ ಏಕಾಂಗಿಯಾಗಿರಬೇಕಾಯಿತು ಎಂಬ ದುಃಖವೂ ಇಲ್ಲ. ಆದರೆ ಸೀತೆ ಇನ್ನೂ ತರುಣಿ. ಈ ತಾರುಣ್ಯದಲ್ಲಾದರೂ ಸಂತೋಷದಿಂದಿರುವ ಅವಳ ಆಸೆ ರಾವಣನಿಂದಾಗಿ ನಾಶವಾಯಿತಲ್ಲ ಎಂಬುದೇ ಶೋಕಕಾರಣ. ಪತಿ ರಾಜನಾಗಿರುವುದನ್ನು ನೋಡಬೇಕಾದ ಕಂಗಳು ಜಟಾಧಾರಿಯಾಗಿ ನೋಡಬೇಕಾಯಿತು. ಹಾಗಿದ್ದರೂ ಜೊತೆಗಿರುವನೆಂಬ ಖುಷಿಯಿತ್ತು. ಈಗ ಅದೂ ಅವಳಿಂದ ದೂರ ಹೋಗಿದೆ ಎಂದು ಬೇಸರ. ಇಲ್ಲಿ ಇನ್ನೊಂದು ಅರ್ಥವನ್ನು ವ್ಯಾಖ್ಯಾನಕಾರರು ಹೇಳುತ್ತಾರೆ. ಸೀತೆ ತಾನು ಇನ್ನು ಎರಡು ಮಾಸ ಮಾತ್ರ ಬದುಕುವೆನೆಂದಿರುವಳು. ಅದರಲ್ಲಿ ಸುಮಾರು ದಿನಗಳು ಈಗಲೇ ಕಳೆದುಹೋಗಿವೆ. ದಿನಗಳ ಒಟ್ಟಿಗೆ ಸೀತೆಯ ಆಯುಸ್ಸೂ ಅಥವಾ ವಯಸ್ಸೂ ಕಳೆದುಹೋಗುವುದಲ್ಲ ಎಂದು ರಾಮ ಚಿಂತಿಸುತ್ತಿದ್ದಾನೆ._

📙 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩