ರಾಮಾಯಣ ೩೭

📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙
ಭಾಗ-37

*ಮಂತ್ರಮೂಲಂ ಹಿ ವಿಜಯಂ ಪ್ರಾಹುರಾರ್ಯಾ ಮನಸ್ವಿನಃ ತಸ್ಮಾದ್ವೈ ರೋಚಯೇ ಮಂತ್ರಂ ರಾಮಂ ಪ್ರತಿ ಮಹಾಬಲಾಃ*

_ರಾವಣನ ಮಾತು. ಹನುಮನು ಲಂಕೆಯನ್ನು ಬೆಂಕಿಯಿಂದ ಗುಡಿಸಿ ಗಂಡಾಂತರ ಮಾಡಿ ಹೋಗಿದ್ದಾನೆ. ಇದರ ನಂತರ ರಾವಣ ಸಭೆ ಸೇರಿ ರಾಕ್ಷಸರನ್ನೆಲ್ಲ ಕರೆದು ಸಮಾಲೋಚಿಸುತ್ತಿದ್ದಾನೆ.   ಮಹಾಬಲರೇ, ಮಹಾತ್ಮರು ವಿಜಯಕ್ಕೆ ಮಂತ್ರವೇ ಕಾರಣವೆಂದು ನುಡಿಯುತ್ತಾರೆ. ಹಾಗಾಗಿ ರಾಮನ ವಿಷಯದಲ್ಲಿ ನಿಮ್ಮ ಸಲಹೆ ಪಡೆದು ಪ್ರವೃತ್ತಿ ನಡೆಯಲೆಂದು ಈ ಸಭೆ ಕರೆದಿದ್ದೇನೆ. ಇಲ್ಲಿ ನಾಯಕನ ಕರ್ತವ್ಯವನ್ನು ರಾವಣ ನೆನಪಿಸಿದ್ದಾನೆ. ಯಾವುದೇ ಕಾರ್ಯ ಯಶಸ್ವಿಯಾಗಲು ಮಂತ್ರಾಲೋಚನೆಯು ಮುಖ್ಯ ಕಾರಣ. ಅನೇಕ ಸಜ್ಜನರ ಬುದ್ಧಿವಂತರ ಸಲಹೆ ಪಡೆದು ಕಾರ್ಯದಲ್ಲಿ ತೊಡಗಿದಾಗ ಅವರ ಅಮೂಲ್ಯ ಸಲಹೆಗಳು ಮಾರ್ಗದರ್ಶನ ಮಾಡುತ್ತವೆ. ನಾವು ಮಾತ್ರ ಬುದ್ಧಿವಂತರೆಂಬ ಭಾವನೆಯಿಲ್ಲದೆ ಉಳಿದವರ ಮಾತನ್ನು ಕೇಳುವ ಮನಸ್ಥಿತಿ ಇರಬೇಕು. ಉತ್ತಮನಾಗಬೇಕೆಂದರೆ ಮೊದಲು ಉತ್ತಮ ಕೇಳುಗನಾಗಬೇಕೆಂಬ ಮಾತು ಇದೇ ಆಶಯದ್ದು. ಯಾವುದೇ ಕಾರ್ಯದಲ್ಲಿ ತೊಡಗುವ ಮುನ್ನ ಆತ್ಮೀಯರೊಂದಿಗೆ ಸಮಾಲೋಚನೆ ಮಾಡುವ ಕ್ರಮ ನಡೆಸೋಣ._

*ತ್ರಿವಿಧಾಃ ಪುರುಷಾ ಲೋಕೇ ಉತ್ತಮಾಧಮಮಧ್ಯಮಾಃ ತೇಷಾಂ ತು ಸಮವೇತಾನಾಂ ಗುಣದೋಷೌ ವದಾಮ್ಯಹಮ್*

_ಇದೂ ರಾವಣನ ಮಾತು. ಲೋಕದಲ್ಲಿ ಮೂರು ತರಹದ ಜನರಿದ್ದಾರೆ. ಉತ್ತಮ ಮಧ್ಯಮ ಅಧಮರೆಂದು. ಅವರ ಲಕ್ಷಣಗಳನ್ನು ಕ್ರಮವಾಗಿ ಹೇಳುವೆನು. ರಾವಣನ ಮಾತು ಏನೇ ಇರಲಿ. ನಮ್ಮ ನಮ್ಮಲ್ಲೇ ಮೂರು ತರಹದ ವ್ಯಕ್ತಿತ್ವವಿದೆ. ಪರೋಪಕಾರವೇ ಮುಖ್ಯ ಉದ್ದೇಶವಾದಾಗ ಅಥವಾ ಸಮಾಜಕ್ಕೆ ಉಪಕಾರ ಆಗುವ ಕಾರ್ಯ ಕೈಗೊಂಡಾಗ ಸಾತ್ವಿಕರೂ, ಪ್ರತಿಷ್ಠೆಗೆ ಬಿದ್ದೋ, ಅಧಿಕಾರ ಲಾಲಸೆಯಿಂದಲೋ, ಕೀರ್ತಿಯ ಬೆನ್ನು ಹತ್ತಿಯೋ, ಅಥವಾ ಸ್ತುತಿ ಮಾಡಲೆಂದೋ ಮಾಡುವ ಕಾರ್ಯಗಳು ರಾಜಸ ವ್ಯಕ್ತಿತ್ವದವು. ಕೇವಲ ತನ್ನ ಸ್ವಾರ್ಥ ಬಯಸಿ ಲೋಕಕ್ಕೆ ಅಪಕಾರವಾದರೂ ತೊಂದರೆಯಿಲ್ಲವೆಂದು ಮಾಡುವ ಕಾರ್ಯಗಳು ತಾಮಸ ಪ್ರಕಾರದವು. ನಾವೆಲ್ಲರೂ ಎರಡನ್ನು ಒಪ್ಪಿಕೊಂಡರೂ ಮೂರನೆಯ ರೀತಿಯನ್ನು ನಿರಾಕರಿಸುತ್ತೇವೆ. ಅನವಶ್ಯಕ ನೀರು ಪೋಲು ಮಾಡುವುದು, ಕಂಡ ಕಂಡಲ್ಲಿ ಪ್ಲಾಸ್ಟಿಕ್ ಇತ್ಯಾದಿ ಬಿಸುಟುವುದು, ಕೆಕ್ಕರಿಸಿ ನೋಡುವುದು, ಸಣ್ಣ ಸಣ್ಣ ವಿಷಯಗಳ ಕೋಪ, ತನ್ನದೇ ಸರಿಯೆಂಬ ಭಾವ ಇವೆಲ್ಲ ಮೂರನೆಯ ಗುಂಪಿಗೆ ಸೇರುವವು. ನಾವು ರಾವಣನಂತೆ ಈ ಗುಂಪಿಗೆ ಸೇರದಿರೋಣ._

📙 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩